Thursday, March 8, 2012

ಗೊಂದಲದ ಗಾಳಿಪಟ

 ಈ ಗಾಳಿಪಟ ಹಾರಿಸೋದು ನನ್ನ ಅತೀ ಹೆಚ್ಚಿನ ಹವ್ಯಾಸಗಳಲ್ಲೊಂದಾದ ಕಾಲವದು. ಈಗ ನಾನೇ ಗಾಳಿಪಟ ಆಗಿದ್ದೀನಿ. ಸೂತ್ರ, ದಾರ ಎರಡೂ ಬೇರೆಯವರ ಕೈಗೆ ಕೊಟ್ಟು, ಅದಿರಲಿ. ನಾವು ಇದ್ದ ಬಾಡಿಗೆ ಮನೆಯ ಮಾಳಿಗೆಗೆ ಯಾವುದೇ ತಡೆಗೋಡೆಗಲಿರಲಿಲ್ಲ. ನಾನು ಪಟ ಹಾರಿಸಲು ಮೇಲೆ ಹತ್ತಿದ ಮರುಕ್ಷಣ ನನ್ನ ನಾಮದ ಜಪ ಮಾಡುತ್ತಿದ್ದುದ್ದು ಅಮ್ಮ ಮತ್ತು ಆಕ್ಕ. "ಬಿದ್ದುಗಿದ್ದೀಯ.. ಕೆಳಗ ಬಾರೋ.." ಈ ಮಾತು ಕೇಳಿ ಕೇಳಿ ಕಿವಿಗೆ ಅಭ್ಯಾಸ ಆಗಿ ಹೋಗಿತ್ತು. ಅದೇ ಪಕ್ಕದ ಊರಲ್ಲಿದ್ದ ನಮ್ಮಜ್ಜಿ ಮನೆ ಮಾಳಿಗೆ RCC, ಮತ್ತು ನಾಲ್ಕೂ ಕಡೆ ಗೋಡೆ ಹಾಕಿದ್ದ ನಮ್ಮಜ್ಜ. ಅಲ್ಲಿಗೆ ಹೋಗೋದಂದ್ರೆ ನನಗೆ ಎಲ್ಲಿಲ್ಲದ ಖುಷಿ. ಕಾರಣಗಳು ತುಂಬಾ ಇದ್ದವು. ಒಂದು, ನನ್ನ ಡಾರ್ಲಿಂಗ್ (ಅಜ್ಜಿ) ಜೊತೆ ತುಂಟಾಟ ಆಡಬಹುದಿತ್ತು. ಎರಡು, ನನಗೆ ಯಾವುದೇ ನಿರ್ಬಂಧಗಳು ಇರ್ತಾ ಇರಲಿಲ್ಲ. ಮೂರು, ಅಜ್ಜಿ ಕೈಯಿಂದ ಅವಲಕ್ಕಿ ತಿನ್ನೋದು ಸ್ವರ್ಗಸುಖ. ಹೀಗೆ ಅನೇಕ ಅನುಕೂಲಕರ ಕಾರಣಗಳಿದ್ದವು ನನಗೆ. ಈ ಕಾರಹುಣ್ಣಿಮೆ ಬಂತೆಂದರೆ, ನನ್ನ ಗಾಳಿಪಟ ಮಾಡೋ ಫ್ಯಾಕ್ಟರಿ ತೆರೆದುಕೊಳ್ಳುತ್ತಿತ್ತು. ಒಂದಾದಮೇಲೊಂದು ಪಟ ಮಾಡುವುದು. ಕಲರ್ ಪೇಪರ್, ನ್ಯೂಸ್ ಪೇಪರ್, ಕೊನೆಗೆ ಪ್ಲಾಸ್ಟಿಕ್ ಕೂಡ ಉಪಯೋಗಿಸಿ ಪಟ ಮಾಡ್ತಾ ಇದ್ದೆ. ಬಗೆ ಬಗೆಯ ಪ್ರಕಾರಗಳು, ವಿನ್ಯಾಸಗಳು, ಆಕಾರಗಳು ನನ್ನ ಕಲ್ಪನೆಗೆ ಕೊನೆಯೇ ಇರಲಿಲ್ಲ. ಇದೆಲ್ಲದರ ಜೊತೆಗೆ ನನಗೊಂದು ಹುಚ್ಚು ಆಸೆ, ಏನು ಅಂದ್ರೆ, ನನ್ನ ಗಾಳಿಪಟ ಆಕಾಶದಲ್ಲಿ ಹಾರೋವಾಗ ಬೇರೆ ಯಾರ ಪಟವು ಅಲ್ಲಿ ಇರಬಾರದು. ಅದು ಹೇಗೆ ಸಾಧ್ಯ? ಸಾಧ್ಯ ಮಾಡಿಸೋಕೆ ನನ್ನ ಹತ್ರ ಉಪಾಯಗಳಿದ್ದವು. ನನ್ನ ಪಟದ ಬಾಲಂಗೋಚಿಗೆ ೧೦-೧೨ shaving blade 'ಗಳನ್ನೂ ಕಟ್ತಾ ಇದ್ದೆ. ಬೇರೆ ಯಾರ ಪಟ ನನ್ನ ಮುಂದೆ ಬಂದರೂ, ಅವರ ದಾರದ ಮೇಲೆ ನನ್ನ ಪಟದ ಬಾಲಂಗೋಚಿಯನ್ನು ಕೆಡಹಿ, ಎಳೆದರೆ ಸಾಕು ಅವರ ಗಾಳಿಪಟ ನೆಲ ಕಚ್ಚುತ್ತಿತ್ತು. 
ನನ್ನ ಈ ಉದ್ಧಟತನಕ್ಕೆ ಎಲ್ಲರು ನನ್ನನು ಬೈದುಕೊಳ್ಳುತ್ತಿದ್ದರು, ನಾನು ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದ ಸುಖೀಪುರುಶ. ಆವತ್ತೊಂದು ದಿನ ನನ್ನ ಈ ಗಾಳಿಪಟದ ಪರಾಕ್ರಮ ನಡೆಸೋಕೆ ಅಣಿಯಾಗುತ್ತಿದ್ದೆ. ನನ್ನ ಸೋದರ ಮಾವನ ಮಗನೂ ನನ್ನ ಜೊತೆಗೆ ಇದ್ದ. ಏಕಾಏಕಿ ಗಾಳಿ ಬಂದು ನಾನು ನೆಲದ ಮೇಲೆ ಇಟ್ಟಿದ್ದ ನನ್ನ ಗಾಳಿಪಟ ಹಾರಿ ಪಕ್ಕದಲ್ಲೇ ಇದ್ದ ಹೈ ಟೆನ್ಶನ್ ಎಲೆಕ್ಟ್ರಿಕ್ ವೈರ್ ಮೇಲೆ ಬಿದ್ದಿತು. ನನ್ನ ಪಟದ ಬಾಲಂಗೋಚಿ ಆ ವೈರ್ ಗೆ ಸುತ್ತು ಹಾಕಿಕೊಂಡಿತು. ನಿಧಾನವಾಗಿ ಎಳೆಯಲು ನೋಡಿದೆ, ಬರಲಿಲ್ಲ. ನನ್ನ ಮನೆದೇವರನ್ನು ನೆನೆದು ಜೋರಾಗಿ ಜಗ್ಗಿದೆ. ಬಾಲಂಗೋಚಿ ಬರಲಿಲ್ಲ, ಬದಲಾಗಿ ಸೊಂಯ್ ಅನ್ನೋ ಸದ್ದು ಕೇಳೋಕೆ ಶುರು ಆಯಿತು. ಕೆಲಕ್ಷಣ ಆದ ಮೇಲೆ ದೂರದಲ್ಲೆಲ್ಲೋ ಢಮಾರ್ ಅನ್ನೋ ಶಬ್ದ ಕೇಳಿ ಬಂತು. ಏನೋ ಅಗಬರದ್ದು ಆಯಿತು ಅನ್ನೋ ಭಯ ನನ್ನನ್ನು ಆವರಿಸಿತು. ಮುಖದಲ್ಲಿ ದುಗುಡ ಮನೆ ಮಾಡಿತ್ತು. ಪಟ ಅಲ್ಲೇ ಬಿಟ್ಟು, ಕೆಳಗಿಳಿದು ಬಂದು ನಮ್ಮ ಅಜ್ಜಿ ಪಕ್ಕ ಕುಳಿತುಕೊಂಡೆ. ೧೦ ನಿಮಿಷ ಆಗಿರಬೇಕು, ಇಡೀ ಊರಿಗೆ ಊರೇ ನಮ್ಮ ಮನೆ ಮುಂದೆ ಬಂದು ನಿಂತಿದೆ. ಕಾರಣ ಏನು ಅನ್ನೋದು ನನಗೆ ಮಾತ್ರ ಗೊತ್ತಿತ್ತು. ನಾನು ಮಾಡಿದ ಮಹಾನ್ ಕೆಲಸಕ್ಕೆ, ಊರಿನ transformer ಸುಟ್ಟು ಕರಕಲಾಗಿತ್ತು. ಆ ಊರಿಗೆ ಇದ್ದದ್ದೇ ಅದೊಂದು ಮೇನ್ transformer , ಮೇಲಾಗಿ ಆ ಊರಿನ ಮುಖ್ಯ ಉದ್ಯೋಗ powerloom . ಎಲ್ಲರ ಹೊಟ್ಟೆ ಮೇಲೂ ನಾನೇ ತಣ್ಣೀರು ಬಟ್ಟೆ ಹಾಕಿದ್ದೆ. ಆಕಡೆಯಿಂದ ವಿಷಯ ಕೇಳಿಬಂದ ನನ್ನ ಸೋದರಮಾವ ನನ್ನ ಹೊಡೆಯೋಕೆ ಮುಂದಾದ, ಅಜ್ಜಿ ಮಾವನನ್ನು ತಡೆದು ನಿಲ್ಲಿಸಿದಳು. ನನ್ನನ್ನು ದೇವರ ಮುಂದೆ ನಿಲ್ಲಿಸಿ ಇನ್ನೊಮ್ಮೆ ಇಂಥ ಕೆಲಸ ಮಾಡೋಲ್ಲ ಅಂತ ಪ್ರಮಾಣ ಮಾಡಿಸಿದರು. ಪ್ರಮಾಣ ಮಾಡಿದೆ. ಬೆಳಿಗ್ಗೆವರೆಗೂ ಎಲ್ಲ ತಿಳಿಯಾಯಿತು. ಆದರೂ ಮನಸ್ಸು ಇನ್ನೂ ಭಯದಲ್ಲೇ ಇತ್ತು, ಸಂಜೆವರೆಗೂ ಯಾರ ಹತ್ರ ಮಾತಾಡಲಿಲ್ಲ. ನನ್ನ ಜೀವನದಲ್ಲೇ ಅಷ್ಟು ಶಾಂತವಾಗಿ ಕೂತು ಕಳೆದ ದಿನಗಳು ತುಂಬಾ ಕಮ್ಮಿ. ಯಾವುದಾದರು ಒಂದು ಕಿತಾಪತಿ ಕೆಲಸ ಮಾಡದೇ ಹೋದರೆ ಮನಸ್ಸಿಗೆ ಸಮಾಧಾನ ಸಿಗ್ತಾ ಇರಲಿಲ್ಲ. ಆವತ್ತು ಸಂಜೆವರೆಗೂ ಮೌನ ತಳೆದಿದ್ದೆ. ಸಂಜೆ ೫ ಆಗುತ್ತಿದ್ದಂತೆ ಇನ್ನು ತಡೆಯೋಕೆ ಆಗೋಲ್ಲ ಅಂದು, ಇನ್ನೊಂದು ಪಟ ತೊಗೊಂಡು ಮಾಳಿಗೆ ಏರಿದೆ. 

ಮತ್ತೆ ಮಾತಾಡೋಣ....  

ಚಪ್ಪಲಿ ಮೋಹ

ನನಗಾಗ ೧೦ ವರ್ಷ ಇರಬೇಕು. ಅಮ್ಮ-ಅಪ್ಪ ಇಬ್ಬರೂ ಕಷ್ಟ ಪಟ್ಟು ನಮ್ಮ ಸಂಸಾರ ರಥ ಎಳೆಯುತ್ತಿದ್ದ ಕಾಲವದು. ಆಗಿನ ಕಾಲಕ್ಕೆ ನನ್ನ ಆಸೆಗಳು ಆಕಾಶದಷ್ಟು ಎತ್ತರಕ್ಕೆ ಇರುತ್ತಿದ್ದವು. ಈಗಲೂ ಇವೆ, ಆ ಮಾತು ಬೇರೆ. ನನ್ನ ಆಸೆಗಳ ತೀವ್ರತೆಯನ್ನು ನೋಡಿ ಅಮ್ಮ ಯಾವಾಗಲೂ ಹೇಳೋರು "ನೀನು ರಾಜಾನ ಮಗ ಆಗಿ ಹುಟ್ಟಬೇಕಿತ್ತು, ತಪ್ಪಿ ಬಡ ಮಾಸ್ತರ್ ಮಗ ಆಗಿ ಹುಟ್ಟೀ". ಅದಕ್ಕೆ ನಾನು ಕೊಡ್ತಾ ಇದ್ದ ಉತ್ತರ ಈಗಲೂ ನನಗೆ ನಗು ತರಿಸುತ್ತದೆ. "ಅಮ್ಮ ಈಗರ ಏನಾತು, ಅಪ್ಪಗ ರಾಜ ಆಗು ಅನ್ನು, ನಾನು ರಾಜಾನ ಮಗ ಆಗ್ತೀನಿ". ನನ್ನ ಉತ್ತರ ಅವರಿಗೆ ನಗು ತರುತ್ತಿತ್ತೋ, ನೋವು ತರುತ್ತಿತ್ತೋ ನನಗಂತೂ ಗೊತ್ತಿಲ್ಲ. ಅವರ ಕೈಲಾದ ಕೆಲವೊಮ್ಮೆ ಕೈಲಾಗದ ಆಸೆಗಳನ್ನು ಕೂಡ ನೆರೆವೇರಿಸುತ್ತಿದ್ದರು. ನನಗೆ ಅದರ ಅರಿವು ಅಷ್ಟರಮಟ್ಟಿಗೆ ಆಗ ಇರಲಿಕ್ಕಿಲ್ಲ. ಅಂತಹದ್ದೇ ಒಂದು ಆಸೆ ಈಡೇರಿ, ಒಡೆದು ಹೋದ ಒಂದು ಘಟನೆ ಈ ಬರಹಕ್ಕೆ ನಾಂದಿ. 
ನನಗೆ ಮೊದಲಿನಿಂದಲೂ ಚಪ್ಪಲಿ, ಬೂಟು, ಬಟ್ಟೆ ಮತ್ತು ಆಟಿಕೆ (electronic) ಇವೆಲ್ಲದರ ಮೇಲೆ ಎಲ್ಲಿಲ್ಲದ ಮೋಹ. ನನ್ನ ಸ್ನೇಹಿತರು ತೂತು ಬಿದ್ದ ಚಡ್ಡಿ ಹಾಕ್ಕೊಂಡು ಶಾಲೆಗೆ ಬಂದ್ರೆ, ನಾನು ಮಾತ್ರ ಫುಲ್ ಪ್ಯಾಂಟ್ ಧರಿಸ್ತ ಇದ್ದೆ. ಇನ್ನೂ ಹೇಳಬೇಕು ಅಂದ್ರೆ, ಮನೆದೇವ್ರು (ರವಿಚಂದ್ರನ್ ಸಿನಿಮ) ನೋಡಿ ಅದರಲ್ಲಿ ಅಪ್ಪ-ಮಗ ಒಂದೇ ತರಹ ಬಟ್ಟೆ ಹಾಕಿದ್ರು ಅನ್ನೋ ಕಾರಣಕ್ಕೆ ನಮ್ಮಪ್ಪನಿಗೂ ಅದೇ ತರಹದ ಬಟ್ಟೆ ಡಿಸೈನ್ ಮಾಡಿಸಿದ ಭೂಪ ನಾನು. ಅವರಿಗೋ ಆ ಪ್ಯಾಂಟ್ ಹೊಲಿಸಿಕೊಲ್ಲೋಕೆ ಎಲ್ಲಿಲ್ಲದ ಮುಜುಗರ. ನನಗೋ ಎಲ್ಲಿಲ್ಲದ ಆಸೆ. ಕೊನೆಗೂ ನನ್ನ ಆಸೆ ಗೆದ್ದಿತ್ತು. ಪ್ಯಾಂಟ್ ಆದಮೇಲೆ ಅದು ಅಲ್ಲಿಗೆ ನಿಲ್ಲಲಿಲ್ಲ, ಚಪ್ಪಲಿ ಕೂಡ ಬೇಕು ಅಂದೇ. ಸರಿ, ನಮ್ಮ ಊರಿನಲ್ಲಿ ಇರುವ ಎಲ್ಲ ಚಪ್ಪಲಿ ಅಂಗಡಿಗಳಿಗೆ ಅಲೆದಾಡಿ ಇದ್ದ ಚಪ್ಪಲಿ ಸವೆಸಿದೆ. ಕೊನೆಗೆ ರವಿಚಂದ್ರನ್ ಹಾಕಿದಂತ ಚಪ್ಪಲಿಗಳು ಸಿಕ್ಕವು. ಬೆಲೆ ರೂ. ೨೫. ಸಾಮಾನ್ಯವಾಗಿ ನನ್ನ ಚಪ್ಪಲಿ ಬರ್ತಾ ಇದ್ದುದು ೫ ರೂಪಾಯಿಗೆ. ೫ ಪಟ್ಟು ದುಬಾರಿ ಇರೋ ಚಪ್ಪಲಿಗಳನ್ನ ನಮ್ಮಪ್ಪ ಕೊಡಿಸಿದರು. ನಾನು ಸ್ನಾನ ಮಾಡ್ತಾ ಇದ್ದುದು ಗಡಿಬಿಡಿಯಿಂದಾದ್ರು, ಆ ಚಪ್ಪಲಿಗಳಿಗೆ ಮಾತ್ರ ಸಮಯ ತೆಗೆದುಕೊಂಡು ಸ್ವಚ್ಚಗೊಳಿಸ್ತ ಇದ್ದೆ. ಅದೇಕೋ ಆ ಚಪ್ಪಲಿಗಳ ಮೇಲೆ ಅತಿಯಾದ ಪ್ರೀತಿ.
ಒಂದು ದಿನ ಪಕ್ಕದೂರಿಗೆ ಮದುವೆಗೆ ಹೋಗುವ ಸಂದರ್ಭ ಬಂತು. ನಾನು ಮನೆದೇವ್ರು ಗೆಟಪ್ಪಿನಲ್ಲಿದ್ದೆ. ಅಪ್ಪ, ಅಮ್ಮ, ಅಕ್ಕ ಮತ್ತು ನಾನು ಬಸ್ ಹತ್ತಿ ಮದುವೆ ಮನೆಗೆ ಹೋದ್ವಿ. ನನಗೋ ನನ್ನದೇ ಚಿಂತೆ. ಏನಂತೀರಾ? ಮದುವೆ ಮನೆಯಲ್ಲಿ ನನ್ನ ಚಪ್ಪಲಿಗಳನ್ನು ಯಾರಾದ್ರೂ ಕದ್ದುಬಿಟ್ಟರೆ? ಮೊದಲೇ ನನ್ನ ತಲೆ 300kms ಸ್ಪೀಡಲ್ಲಿ ಓಡತ ಇತ್ತು. ಆ ಸಮಸ್ಯೆಗೆ ಪರಿಹಾರ ಹುಡುಕೋದು ಕಷ್ಟ ಆಗಲಿಲ್ಲ. ಅಲ್ಲೇ ಇದ್ದ ಒಂದು ಚೀಲವನ್ನು ತೆಗೆದುಕೊಂಡು ಅದರಲ್ಲಿ ಚಪ್ಪಲಿ ಇಟ್ಟು, ಯಾರಿಗೂ ಕಾಣದ ಹಾಗೆ ಮೂಲೆಯಲ್ಲಿ ಅಡಗಿಸಿಟ್ಟೆ. ಮದುವೆ ಆಯಿತು, ಎಲ್ಲರು ತಮ್ಮ ತಮ್ಮ ಮನೆಗೆ ಹೋದರು. ನಾವೂ ಮರಳಬೇಕಾದ ಸಮಯ ಬಂತು. ಅಪ್ಪ, ಅಮ್ಮ, ಅಕ್ಕ ಎಲ್ಲರು ರೆಡಿಯಾಗಿದ್ದರು. ನಾನು ಮಾತ್ರ ನನ್ನ ಆಟದಲ್ಲಿ ಮಗ್ನನಾಗಿದ್ದೆ. ಕೂಗಿ ಕರೆದರು "ಲೇಟಾಗತದ ಬಾರೋ. ಬಸ್ ಹೋದ್ರ ಮತ್ತ ಸಿಗುದಿಲ್ಲ". ಒಲ್ಲದ ಮನಸ್ಸಿನಿಂದ ಆಟ ಬಿಟ್ಟು ಬಂದು, ಇರೋ ಬಾರೋ ದೊಡ್ದೊರಿಗೆಲ್ಲ ಕಾಲು ಮುಗಿದು, ಚಪ್ಪಲಿ ಹಾಕ್ಕೊಂಡು ಬರ್ತೀನಿ ಅಂತ ಚಪ್ಪಲಿ ಅಡಗಿಸಿಟ್ಟಿದ್ದ ಜಾಗೆಕ್ಕೆ ಹೋದೆ. ನೀವು ಅನ್ಕೊಂಡ ಹಾಗೆನೆ ಆಗಿತ್ತು. ನನ್ನ ಚಪ್ಪಲಿಗಳು ಚೀಲದ ಸಮೇತ ಮಾಯವಾಗಿದ್ದವು. ಶರಪಂಜರ ಕಲ್ಪನಾ ಥರ "ಇಲ್ಲೇ ಕಳಕೊಂಡೆ..."  ಅನ್ನೋವಷ್ಟು ಬೇಜಾರಾಯ್ತು. ಗೊತ್ತಿಲ್ಲದೇ, ಕಣ್ಣಲ್ಲಿ ಕಣ್ಣೀರು ಉಕ್ಕಿ ಬಂತು. ಅದೇನು ಚಪ್ಪಲಿ ಕಳೆದುಕೊಂಡ ದು:ಖವೋ ಅಥವಾ ಅಷ್ಟು ದುಬಾರಿ ಚಪ್ಪಲಿ ಕಳೆದುಕೊಂಡ ನನಗೆ ಮತ್ತೆ ಅಂತ ಚಪ್ಪಲಿ ಕೊಡಿಸದೇ ಇರಬಹುದು ಅನ್ನೋ ಕಾರಣಕ್ಕೋ ಗೊತ್ತಿಲ್ಲ. ಆದ್ರೆ ನೋವಾಗಿದ್ದಂತು ನಿಜ. ಬರೆಗಾಲಿನಿಂದ ರವಿಚಂದ್ರನ್ ನಡೆದರೆ ಹೇಗಿರುತ್ತೋ ಹಾಗಿತೂ ನನ್ನ ಪರಿಸ್ಥಿತಿ. 

ಮತ್ತೆ ಸಿಗ್ತೀನಿ...    

ನನ್ನ ಸಂಗಾತಿ

ನನಗಿ ಅವಳಿಗೂ ೪-೫ ವರ್ಷದ ಪರಿಚಯ ಇರಬೇಕು. ನಾನು ಮೊದಲ ಸಲ ಯು.ಎಸ್.ಎ ಗೆ ಹೋದಾಗ ಅವಳ ಪರಿಚಯ ಆಗಿತ್ತು. ಅದಾದ ಮೇಲೆ ಪ್ರತಿನಿತ್ಯ ಅವಳೊಂದಿಗೆ ಒಂದು ತರಹದ ನಂಟು ಬೆಳೆದುಕೊಂಡಿತು. ಅವಳನ್ನು ಮನೆಗೆ ಕರೆದುಕೊಂಡು ಹೋದಾಗ ಅಮ್ಮ ಕೂಡ ಅವಳನ್ನು ಸಂತೋಷದಿಂದ ಸ್ವಾಗತಿಸಿದರು. ಈಗಂತೂ ಅವಳು ನನ್ನ ಬಾಳಿನ ಒಂದು ಭಾಗವಾಗಿಬಿಟ್ಟಿದ್ದಾಳೆ. ಅವಳಲ್ಲಿ ಇಷ್ಟವಾಗುವ ಅನೇಕ ಗುಣಗಳಿವೆ. ಒಂದನ್ನು ಹೇಳಲೇ ಬೇಕು ಅಂದ್ರೆ ಅವಳ ಶಿಸ್ತು, ನಾನು ಯಾವ ವಸ್ತುವನ್ನು ಎಲ್ಲಿ ಇಡಬೇಕು ಅನ್ನೋದನ್ನ ಅವಳು ಬಲ್ಲಳು. ನಾನು ಆಫೀಸ್ ಗೆ ಹೊರಟ ತಕ್ಷಣ ಬೆನ್ನ ಹಿಂದೆ ಬಂದು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾಳೆ. ಅವಳು ಹಾಗೆ ಮಾಡಿದಾಗಲೆಲ್ಲ ಮನಸ್ಸಿಗೆ ಏನೋ ಒಂಥರಾ ಹೇಳಲಾಗದ ಸಂತೋಷ. ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಬೀಳಬಾರದು ಅನ್ನೋದು ಅವಳ ಅಂತರಾಳದ ಮಿಡಿತ. ಅವಳು ಕೊಟ್ಟ ಭಾಷೆಯಂತೆ ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಒತ್ತಡಗಳಿಗೆ, ನೋವುಗಳಿಗೆ ಅವಳು ನನ್ನನ್ನು ನೂಕಿಲ್ಲ. ಅವಳನ್ನು ನೋಡಿದಾಗಲೆಲ್ಲ ನನಗೆ ನೆನಪಾಗುವ ಹಾಡು "ಯಾವ ಜನ್ಮದ ಮೈತ್ರಿ, ಈ ಜನ್ಮದಲಿ ಬಂದು ನಮ್ಮಿಬ್ಬರನು ಮತ್ತೆ ಬಂದಿಸಿಹುದೋ ... ನಾ ಕಾಣೆ..". ನನ್ನ ಜೊತೆ ಇಷ್ಟು ಅನ್ನೋನ್ಯತೆಯಿಂದ ಇರುವ ಅವಳಿಗೆ ಧನ್ಯವಾದಗಳು. ಅವಳ ಜಾಗವನ್ನು ಬಹುತೇಕ ಯಾರೂ ತೆಗೆದುಕೊಳ್ಳಲಾರರು ಅನ್ಸುತ್ತೆ. ಅದರೂ ಸಂಸೋನೈಟ್ ಕಂಪನಿ ಅವರು ಹೊಸ ಲ್ಯಾಪ್ಟಾಪ್ ಬ್ಯಾಗ್ ಹೊರತಂದರೆ ಬಹುತೇಕ ನಾನು ಇವಳಿಗೆ ವಿದಾಯ ಹೇಳಬಹುದು.

ಮತ್ತೆ ಸಿಗ್ತೀನಿ... 

Tuesday, March 6, 2012

ಉತ್ತರ ನನಗೂ ಗೊತ್ತಿಲ್ಲ

ಇವತ್ತು ಮಧ್ಯಾನ್ನ ನನ್ನ ಕಂಪನಿಯ ದೂರವಾಣಿ ಬಳಕೆ ಮಾಡಿದ ಪಟ್ಟಿ ಬಂತು. ಇದು ಪ್ರತಿ ತಿಂಗಳು ನಾವು ಉಪಯೋಗಿಸುವ ದೂರವಾಣಿ ಕರೆಗಳ ವಿವರಣೆ ಹೊಂದಿರುತ್ತೆ. ಇದರಲ್ಲಿ ನಾವು ಯಾರ ಜೊತೆ, ಎಸ್ಟೊತ್ತಿಗೆ, ಎಷ್ಟು ನಿಮಿಷ ಮಾತಾಡಿದ್ದೀವಿ ಅನ್ನೋ ಎಲ್ಲ ಮಾಹಿತಿ ಅದರಲ್ಲಿ ಇರುತ್ತೆ. ಈ ಒಂದು ವಾರದ ಹಿಂದ ನನ್ನ ವೈಯಕ್ತಿಕ ದೂರವಾಣಿಯ ಕರೆಗಳ ವಿವರ ಕೂಡ ಬಂತು. ಎರಡನ್ನೂ ಒಂದು ದಿನ ಒಟ್ಟಿಗೆ ನೋಡಿದಾಗ ಒಂದು ಆಶ್ಚರ್ಯಕರ ಸಂಗತಿ ಗೋಚರಿಸಿತು. ನಾನು ವೈಯಕ್ತಿಕ ದೂರವಾಣಿಯಲ್ಲಿ ಒಂದು ತಿಂಗಳಲ್ಲಿ ಮಾತನಾಡಿದ್ದು ಕೇವಲ ೩ ಗಂಟೆ. ಅದೇ ಕಚೇರಿಯ ದೂರವಾಣಿಯಲ್ಲಿ ಮಾತನಾಡಿದ್ದು ೧೬ ಗಂಟೆ. ಅಂದ್ರೆ ೫ ಪಟ್ಟು. ಎಷ್ಟೋ ಜನ ಮಿತ್ರರಿಗೆ ನನ್ನ ಧ್ವನಿ ಮರೆತು ಹೋಗಿರಬಹುದೇನೋ? ಅಥವಾ ಅವ್ರು ಫೋನ್ ಮಾಡಿದರೆ ಅವರ ಧ್ವನಿ ನಾನು ಗುರುತಿಸಬಹುದ? ಗೊತ್ತಿಲ್ಲ. ಈ ಕೆಲವು ವರ್ಷಗಳಲ್ಲಿ ಅದೆಷ್ಟೋ ಸಿಹಿ-ಕಹಿ ಹಂಚಿಕೊಂಡು ಮಿತ್ರರು ಎಲ್ಲಿದ್ದರೋ ಏನಾಗಿದ್ದರೋ ಒಂದು ಗೊತ್ತಿಲ್ಲ. ಈ ಯಾಂತ್ರಿಕ ಬದುಕು ಮುಗಿಸಿ ನಿವೃತ್ತನಾಗಿ ಮನೆಗೆ ಹೋದಾಗ ಯಾರಾದ್ರೂ ಜೊತೆ ಮಾತಾಡಬೇಕು ಅಂದ್ರೆ ಅದಕ್ಕೆ ದಾರಿ ಇದೆಯಾ? ಗೊತ್ತಿಲ್ಲ. ಈ ಕಸ್ಟಮರ್ ಕಾಲ್ ಅನ್ನೋದು ನಿವೃತ್ತಿ ಹೊಂದಿದ ಮೇಲೆ ನಿಂತು ಹೋಗುತ್ತೆ. ಮುಂದೆ? ಗೊತ್ತಿಲ್ಲ. ನಮ್ಮ ತಾತ ಮುತ್ತತರು, ಊರ ಮೇಲಿನ ಕಟ್ಟೆ, ಕೆರೆ ತೋಟ ಅಂತ ಏನೇನೋ ಸ್ಥಳಗಳನ್ನು ಮಾಡಿಕೊಂಡಿದ್ರು. ಆದ್ರೆ ನಾವು ಮಾಡಿಕೊಂಡಿರೋದು ಕೆಲಸಕ್ಕೆ ಬರದೆ ಇರೋ facebook orkut ಗಳು. ಇವೆಲ್ಲ ಇರದೇ ಇದ್ದ ಪಕ್ಷ ಜೀವನ ಹೇಗೆ ಅಂತ ಈವತ್ತಿನ ಯುವಕರನ್ನು ಕೇಳಿದ್ರೆ, ಮತ್ತೆ ಉತ್ತರ ಗೊತ್ತಿಲ್ಲ. 

ಈ ಅನೇಕ ಗೊತ್ತಿಲ್ಲಗಳಿಗೆ ಉತ್ತರ ಸಿಗಬೇಕಾದರೆ ಇನ್ನು ೩೦ ವರ್ಷ ಕಾಯಬೇಕು ನಾನು. ಉತ್ತರ ಗೊತ್ತಾದ ಮೇಲೆ ಅದರ ಬಗ್ಗೆ ಮತ್ತೆ ಬರೀತೀನಿ.   

ನಾನು ಮಾಡಿದ ಒಳ್ಳೆ ಕೆಲಸ

ನನ್ನದು ೧ನೇ ತರಗತಿಯಿಂದ ಕನ್ನಡ ಮಾಧ್ಯಮ. 
ಓದಿದ್ದು ಕನ್ನಡ ಗಂಡು ಮಕ್ಕಳ ಶಾಲೆ ನಂ ೧. ನಮ್ಮ ಶಾಲೆಯಲ್ಲಿ ಒಂದು ಕಟ್ಟುನಿಟ್ಟಾದ ನಿಯಮ ಇತ್ತು. ಎಲ್ಲರೂ "ಒಳ್ಳೆ ಕೆಲಸ" ಪುಸ್ತಕ ಬರೀಲೇಬೇಕು. ಏನಿದು ಒಳ್ಳೆ ಕೆಲಸದ ಪುಸ್ತಕ ಅಂತೀರಾ, ಹೇಳ್ತೀನಿ. ಪ್ರತಿನಿತ್ಯ ಪ್ರತಿಯೊಬ್ರು ಕನಿಷ್ಠ ಪಕ್ಷ ಒಂದಾದ್ರೂ ಒಳ್ಳೆ ಕೆಲಸ ಮಾಡ್ಬೇಕು ಅನ್ನೋ ದೃಷ್ಟಿಯಿಂದ ಎಲ್ಲರೂ  ಕಾಡ್ದಾಯವಾಗಿ ಬರೀಲೆಬೇಕಿತ್ತು. ನಾವು ಚಿಕ್ಕವರು, ಒಳ್ಳೆ ಕೆಲಸ ಹುಡುಕಿಕೊಂಡು ಮಾಡಬೇಕು. ಇಂಥದ್ದರಲ್ಲಿ ದಿನ ದಿನ ಒಂದು ಒಳ್ಳೆ ಕೆಲಸ ಮಾಡಲೇಬೇಕು ಅನ್ನೋ ಭಾರ ತಲೆ ಮೇಲೆ ಇದ್ರೆ ಹೇಗೆ. ಅದರಲ್ಲೂ ಶಾಲೆ ತೆರೆದಿರೋ ೨೧೨ ದಿನಗಳಿಗೂ ಒಂದೊಂದು ಒಳ್ಳೆ ಕೆಲಸ ಬರೀಯೋದು ಯಾವ ಕರ್ಮ ಅನ್ನೊಂದು ನನ್ನ ಭಾವನೆ ಆಗಿನಕಾಲಕ್ಕೆ. ಆಗ ನಾನು ಬರೀತಾ ಇದ್ದ ಕೆಲವು ಒಳ್ಳೆ ಕೆಲಸದ ಪರಿ ಹೀಗಿರುತ್ತಿತ್ತು. "ನಾನು ಭಿಕ್ಷುಕನಿಗೆ ೧೦ ಪೈಸೆ ಕೊಟ್ಟೆನು". "ನಾನು ಒಬ್ಬ ಕುರುಡನಿಗೆ ರಸ್ತೆ ದಾಟಿಸಿದೆನು", "ರಸ್ತೆಯಲ್ಲಿ ಬಿದ್ದ ಕಲ್ಲನ್ನು ಎತ್ತಿ ಪಕ್ಕಕ್ಕೆ ಇತ್ತೇನು", "ನಾನು ನಾಯಿಗೆ ಬ್ರೆಡ್ಡು ತಿನ್ನಿಸಿದೆನು" ಇನ್ನೂ ಹಲವು ಹುಚ್ಚು ವಾಕ್ಯಗಳು ಇರುತ್ತಿದ್ದವು. ಒಂದೇ ವಾರದಲ್ಲಿ ಎರಡು ಸಲ ರಸ್ತೆಯಲ್ಲಿ ಬಿದ್ದ ಕಲ್ಲನ್ನು ಪಕ್ಕಕ್ಕೆ ಇಟ್ಟೆನು ಅಂತ ಬರೆದಾಗ ನಮ್ಮ ಮೇಷ್ಟ್ರು ಕೇಳೋರು "ಏನೋ ಇದು ಬರಿದದ್ದನ್ನೇ ಬರಿದಿದ್ದೀಯ?" ಆಗ ನನ್ನ ವಿನಮ್ರ ಉತ್ತರ "ಇದು ಮನೆ ಹತ್ರ ಇದ್ದ ಕಲ್ಲು ಸರ್ ಮೊನ್ನೆ ಬರೆದದ್ದು ಶಾಲೆ ಹತ್ರ ಇದ್ದ ಕಲ್ಲು". ಮೇಷ್ಟರಿಗೂ ಗೊತ್ತಿತ್ತು, ಈ ನನ್ಮಗ ರಸ್ತೆಯಲ್ಲಿ ಕಲ್ಲು ಇಲ್ಲದೆ ಇದ್ರೂ, ಎಲ್ಲಿನದೋ ಒಂದು ತಂದು ಹಾಕಿ ಪಕ್ಕಕ್ಕೆ ಇಡ್ತಾನೆ ಅಂತ.  
ಈಗ ಆ ದಿನಗಳನ್ನ ನೆನೆಸಿಕೊಂಡರೆ ನಗು ಬರುತ್ತೆ, ಜೊತೆಗೆ ಒಂದು ವಿಚಾರ ಕೂಡ ಹೊಳಿಯುತ್ತೆ. ಅಂತಹದ್ದೇ ಡೈರಿ ಈಗ ಬರೆಯೋ ಹಾಗೆ ಆದ್ರೆ? ವಾರಕ್ಕೆ ಒಂದು ವಾಕ್ಯ ಬರೆಯೋದು ಕಷ್ಟ ಅನ್ಸುತ್ತೆ. ಇವತ್ತಿನ ಪೈಪೋಟಿ ಜೀವನ ಶೈಲಿಯಲ್ಲಿ, ನಮ್ಮ ಕೆಲಸ ನಾವು ಮಾಡ್ಕೊಂಡು, ಸಂಜೆ ಮನೆಗೆ ಬಂದು ಹೆಣದ ಥರ ಬಿದ್ದುಕೊಳ್ಲೋ ನಮಗೆ ಒಳ್ಳೆ ಕೆಲಸ ಮಾಡಲೇಬೇಕು ಅನ್ನೋ ಅನಿವಾರ್ಯತೆ ಎಲ್ಲಿದೆ. ಆದ್ರೆ ಒಳ್ಳೆ ಕೆಲಸ ಅನ್ನೋದು ಅನಿವಾರ್ಯತೆ ಅಲ್ಲದೇ ಇದ್ದರು ಅದು ಮಾನವ ಧರ್ಮ. ನಾವು ಮಾಡೋ ಒಂದು ಸಣ್ಣ ಪ್ರಯತ್ನ ಯಾರದ್ದೋ ಜೀವನದಲ್ಲಿ ಯಶಸ್ಸು ತಂದು ಕೊಡುತ್ತೆ ಅನ್ನೋದಾದ್ರೆ ಯಾಕೆ ಮಾಡಬಾರದು? ಮೊನ್ನೆ ನನಗೊಂದು resume ಬಂತು, ನಾನು ಮಾಡಿದ್ದಿಷ್ಟೇ, ನನಗೆ ಗೊತ್ತಿರೋರಿಗೆಲ್ಲ ಆ ಹುಡುಗನಿಗೆ ಕೆಲಸ ಹುಡುಕೋಕೆ ನೆರವಾಗಿ ಅಂತ ಕೇಳಿಕೊಂಡೆ. ಕಳಿಸಿದ್ದು ೪೦-೫೦ ಜನಕ್ಕೆ. ಆದ್ರೆ ಎಷ್ಟು ಜನ ಆ ನೆರವಿನ ಕೋರಿಕೆಗೆ ಸ್ಪಂದಿಸಿದ್ರೋ ಗೊತ್ತಿಲ್ಲ. ಆದರೆ ಮಾರನೆ ದಿನ ಬಂದ ಒಂದು ಮಿಂಚಂಚೆ ನನಗೆ ಖುಷಿ ತಂದಿತ್ತು. ನನ್ನ ಮಿತ್ರರಲ್ಲೊಬ್ಬ, ಅವನ ಮಿತ್ರನಿಗೆ ಆ ಮಿಂಚಂಚೆ ರವಾನೆ ಮಾಡಿದ್ದ. ಆ ಮಿತ್ರನ ಸಹಾಯದಿಂದ, ಹುಡುಗನಿಗೆ ಸಂದರ್ಶನ ಏರ್ಪಾಡು ಮಾಡಲಾಗಿತ್ತು. ತಕ್ಷಣವೇ ನನ್ನ ಮಿತ್ರನಿಗೆ ಮೆಸೇಜ್ ಮಾಡಿದೆ "Thanks for your efforts kano" ಅಂತ. ಅವನು ಹೇಳಿದ ಉತ್ತರ ನನ್ನನು ಮೂಕನನ್ನಾಗಿಸಿತ್ತು. "ಅಣ್ಣ, ನೀನೇ ಹೇಳಿದ್ದೆ ಒಂದು ದಿನ, ಯಾರಿಗಾದ್ರು ಒಂದೇ ಒಂದು ಸಲ ಒಳ್ಳೇದು ಮಾಡಿ ನೋಡು, ಅದರಲ್ಲಿ ಇರೋ ಖುಷಿ ಬೇರೆ ಯಾವುದರಲ್ಲೂ ಇಲ್ಲ ಅಂತ. ಇವತ್ತು ನನಗೆ ತುಂಬಾ ಖುಷಿ ಆಯಿತು" ಅವನ ಮಾತುಗಳಲ್ಲಿ ಆ ಆನಂದ ಉಕ್ಕಿ ಹರೀತಾ ಇತ್ತು. ನಾನು ಅವನಿಗೆ ಆ ಮಾತು ಹೇಳಿ ೪ ವರ್ಷ ಕಳೆದಿರಬೇಕು. ಯಾವಾಗಾ ಹೇಳಿದೆ ಅನ್ನೋದೂ ನನ್ನ ನೆನಪಲ್ಲೂ ಇಲ್ಲ. ವೈಚಾರಿಕವಾಗಿ ಅವನು ತುಂಬಾ ಎತ್ತರಕ್ಕೆ ಬೆಳೆದಿದ್ದ.

ಅದಕ್ಕೆ ಹೇಳಿದ್ದು, "ನಾನು ಮಡಿದ ಒಳ್ಳೆ ಕೆಲಸ" ಪುಸ್ತಕದ ಅಗತ್ಯ ಈಗ ಇದೆ.  

ಮತ್ತೆ ಸಿಗ್ತೀನಿ...

Sunday, March 4, 2012

ಗಂಗಾಜಲ


ನಾನು ಚಿಕ್ಕವನಾಗಿದ್ದಾಗಿಂದ, ಯಾರದ್ರೂ ಹಾಸಿಗೆ ಹಿಡಿದು ಇನ್ನೇನು ಕೆಲವೇ ದಿನಗಳಲ್ಲಿ ಅವರಿಗೆ ಟಿಕೆಟ್ ಸಿಗುತ್ತೆ ಅಂತ ದಾರಿ ಕಾಯೋರು, ಹೇಳಿದ ಕೆಲವು ಮಾತುಗಳು ನೆನಪಾದವು. "ನಾನು ಸತ್ತ ಮೇಲೆ ನನ್ನ ಬಾಯಿಗೆ ಆ ಗಂಗಾಜಲ ಹಾಕೋದನ್ನ ಮರೀಬೇಡಿ". ಇಷ್ಟೇ ಅಲ್ಲ, ಇನ್ನು ಕೆಲವರು ಗಂಗಾಜಲವನ್ನು ತಮ್ಮ ಪಕ್ಕದಲ್ಲೇ ಇಟ್ಟುಕೊಂಡಿರುತ್ತಾರೆ. ಅನಾದಿಕಾಲದಿಂದಲೂ ಈ ಪದ್ಧತಿ ಜಾರಿಯಲ್ಲಿದ್ದು, ಇನ್ನೂ ಕೂಡ ಜನ ಇದನ್ನ ನಂಬುತ್ತಾರೆ. ಸಾಯೋ ಸಮಯದಲ್ಲಿ ಗಂಗಾಪಾನ ಮಾಡಿದರೆ ಸ್ವರ್ಗ ಪ್ರಾಪ್ತಿ ಆಗುತ್ತೆ ಅನ್ನೋದು ಅವರ ಖಯಾಲಿ. ಅದೇನೇ ಇರಲಿ, ನನಗೆ ಹೊಳೆದ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕೋ ಪ್ರಯತ್ನ ಮಾಡಿದೆ. ಈ ಸ್ವರ್ಗ ಅನ್ನೋದು ಇದೆಯಾ? ಅಕಸ್ಮಾತ್ ಇದೆ ಅನ್ನೋದೇ ಆದ್ರೆ ಪುಣ್ಯ ಮಾಡಿದವರಿಗೆ ಮಾತ್ರ ಅಲ್ಲಿ ಜಾಗ ಇದೆಯಾ? ಹಾಗೆನದ್ರೂ ಬರೀ ಪುಣ್ಯವಂತರಿಗೆ ಮಾತ್ರ ಅಲ್ಲಿ ಜಾಗ ಇದೆ ಅನ್ನೋ ಹಾಗಿದ್ರೆ, ದೇವರಾಣೆ ಹೇಳ್ತೀನಿ ಅದು ಖಾಲಿ ಗೋಡೌನ್ ಥರ ಇರುತ್ತೆ. ಯಾಕೆಂದ್ರೆ ಪಕ್ಕಾ ಪುಣ್ಯವಂತರು ಅಂತ ಯಾರೂ ಇಲ್ಲ. ಸರ್ವೇ ಜನಃ ಸುಖಿನೋ ಭವಂತು ಅನ್ನೋರು ಎಷ್ಟು ಜನ ಇದ್ದಾರೆ? ಎಲ್ಲರೂ ಒಂದಲ್ಲ ಒಂದು ರೀತಿ ತಪ್ಪು ಮಾಡಿರುತ್ತಾರೆ. ದೇವರಿಗೆ ದುಡ್ಡು ಕೊಟ್ಟು ಶಾಂತಿ ಮಾಡಿಸಿ, ಪಾಪ  ಕಳೆದುಹೋಯಿತು ಅನ್ನೋ ಸುಳ್ಳು ಭರವಸೆ ಕೊಡೋಪ್ರಯತ್ನ ಮಾಡುತ್ತಾರೆ. ಆದ್ರೆ ಪಾಪಪ್ರಜ್ಞ್ಯೇ ಅನೋದು ಯಾವ ಶಾಂತಿ ಮಾಡಿದರು ಹೋಗಲಾರದು. ಪಾಪ ಪ್ರಜ್ನ್ಯೆ ಇಲ್ಲದವನೇ ನನ್ನ ಲೆಕ್ಕದಲ್ಲಿ ಪರಮ ಪಾಪಿ. ಇರೋವರೆಗೂ ಎಲ್ಲರನ್ನ ಬೈಕೊಂಡು, ಸತಾಯಿಸಿಕೊಂಡು, ಸ್ವಾರ್ಥದ ಬದುಕು ನಡೆಸೋ ನಾವು, ಕೊನೆಗಾಲದಲ್ಲಿ ಮಾತ್ರ ಗಂಗಾಜಲ ನಮ್ಮ ಬಾಯಿಗೆ ಹಾಕ್ಕೊಂಡು ಸ್ವರ್ಗದ ಆಸೆ ಕಾಣ್ತೀವಿ. ಅಲ್ಲೂ ಕಾಣುವುದು ಸ್ವಾರ್ಥ ಮತ್ತು ಆಸೆ. ಸತ್ತ ಮೇಲು ಕೂಡ ನಾನು ಸಂತೋಷದಿಂದ ಇರಬೇಕು ಅನ್ನೋ ದುರಾಸೆ!!! ಮೇಲೆ ಹೇಳಿದ ಹಾಗೆ, ಸಾಯೋವಾಗ ಪಕ್ಕದಲ್ಲಿ ಗಂಗಾಜಲ ಏನೋ ಇಟ್ಟುಕೊತೀವಿ, ಆದ್ರೆ ಅದನ್ನ ಬಾಯಿಗೆ ಸುರಿಯೋಕೆ ಒಂದು ಕೈ ಕೂಡ ಇಲ್ಲದ ಹಾಗೆ ಬಾಳು ನಡೆಸಿರ್ತೀವಿ. ಹಾಗೆನದ್ರು ಕೈಗಳನ್ನ ಘಳಿಸಿದ್ದೇ ಆದ್ರೆ, ಗಂಗಾಜಲದ ಅಗತ್ಯ ಇಲ್ಲ ಅನ್ನಿಸುತ್ತೆ.

ಜೀವಿತಾವಧಿಯಲ್ಲಿ ಒಳ್ಳೆ ಕೆಲಸ ಮಾಡಿ, ಆ ಪರಮ ಸಂತೋಷವನ್ನು ಇಲ್ಲಿಯೇ ಕಾಣುವ ಬದಲು, ಸ್ವರ್ಗ ಸತ್ತ ಮೇಲೆ ಸಿಗುತ್ತದೆ ಅನ್ನೋದು ಭ್ರಮೆಯಲ್ಲದೇ ಇನ್ನೇನು?

ನೀವು ಸ್ವರ್ಗ ಸೃಷ್ಟಿಸಿ. ಸ್ವರ್ಗಕ್ಕೆ ಹಾತೊರೆಯದಿರಿ.

ಮತ್ತೆ ಸಿಗ್ತೀನಿ...... 

Saturday, March 3, 2012

ತಿರಸ್ಕಾರ?

ನಾವು ಯಾರನ್ನೋ ತುಂಬಾ ಪ್ರೀತಿ ಮಾಡ್ತೀವಿ ಆದ್ರೆ ಅದರ ಅರಿವು ಅವರಿಗೆ ಆಗುವುದಿಲ್ಲ. ಆ ಅರಿವು ಆಗಲೇಬೇಕು ಅನ್ನೋದು ನಮ್ಮ ಅಪೇಕ್ಷೆ ಆಗಿರುತ್ತೆ, ಆದ್ರೆ ಅಪೇಕ್ಷೆಗೆ ತಕ್ಕ ಪ್ರತಿಕ್ರಿಯೆ ಸಿಗದೇ ಇರಬಹುದು. ಆಗ ಸ್ವಲ್ಪ ಮನಸ್ಸಿಗೆ ಬೇಸರ ಆಗುತ್ತೆ. ಆದ್ರೆ ಈ ಮನಸ್ಸು ಅನ್ನೋದು ನಾಚಿಕೆಗೇಡಿ ಅದಕ್ಕೆ ಎಷ್ಟೇ ಉಗಿದು ಉಪ್ಪಿನಕಾಯಿ ಹಾಕಿದರು ಮಾಡಿದ ತಪ್ಪನ್ನೆ ಮತ್ತೆ ಮತ್ತೆ ಮತ್ತೆ ಮಾಡುತ್ತೆ. ಒಲವಿನ ಬೆಲೆ ಗೊತ್ತಿಲ್ಲದ ಕಲ್ಲು ಮನಸ್ಸಿನ ಜನರಿಂದ ಸಿಗುವ ತಿರಸ್ಕಾರಕ್ಕೆ ಮನಸ್ಸು ಪಾತ್ರವಾಗುತ್ತೆ. ಹಾಗಾದ್ರೆ ಪ್ರೀತ್ಸೋದೆ ತಪ್ಪ? ಖಂಡಿತ ಇಲ್ಲ, ಪ್ರೀತ್ಸೋದು ನಿಮ್ಮ ಇಷ್ಟ ಹೇಗೋ ಹಾಗೇನೆ ನಿಮಗೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡೋದು ಅವರ ಇಷ್ಟ. ನಿಜವಾದ ಪ್ರೀತಿ ಯಾವುದೇ ಷರತ್ತುಗಳನ್ನುಇಟ್ಟುಕೊಳ್ಳುವುದಿಲ್ಲ. ಪ್ರೀತಿಸೋ ಮನಸ್ಸಿಗೆ ತಿರಸ್ಕಾರಗಳು ಒದಗಿ ಬಂದಾಗ ಅದು ಕುಗ್ಗಿ ಹೋಗುತ್ತದೆ. ನಮಗೇ ಗೊತ್ತಿಲ್ಲದ ಯಾವುದೊ ಮೌನ ನಮ್ಮನ್ನ ಆವರಿಸುತ್ತದೆ. ಇಂಥ ಪರಿಸ್ಥಿಗಳಲ್ಲಿ, ನಮಗೆ ನಾವು ಸಮಾಧಾನ ಮಾಡಿಕೊಂಡಷ್ಟು, ಬೇರೆ ಯಾರು ಬಹುಶಃ ಮಾಡಲು ಆಗೋದಿಲ್ಲ.
ಮನಸ್ಸಿಗೆ ಬೇಸರವಾದಾಗ ನಾನು ಯಾರಿಗೂ ಬೇಡವಾದೆ ಅನ್ನೋ ವಿಚಿತ್ರ ಕಲ್ಪನೆ ಬರೋದು ಸಹಜ. ಇಂತಹ ಸಮಯದಲ್ಲಿ, ಮನಸ್ಸನ್ನು ಇನ್ನಷ್ಟು ಗಟ್ಟಿಗೊಳಿಸಿ, ಬೇರೆ ಕಡೆ ವಿಚಾರಗಳು ಹರಿಯುವಂತೆ ಮಾಡಿದ್ರೆ, ತಿರಸ್ಕ್ರತನಾದೆ ಅನ್ನೋ ಭಾವನೆಗೆ ಸ್ವಲ್ಪ ವಿಶ್ರಾಂತಿ ಸಿಗಬಹುದು. ಈ ತಿರಸ್ಕೃತ ಭಾವನೆ ನಿಮ್ಮ ಯಶಸ್ಸಿನ ಕತ್ತು ಹಿಸುಕುವ ಸಾಧ್ಯತೆಗಳೇ ಹೆಚ್ಚು. ಆದ್ರೆ ಅದೇ ಯಶಸ್ಸು, ತಿರಸ್ಕಾರವನ್ನು ಪುರಸ್ಕಾರವನ್ನಾಗಿಸುವ ಶಕ್ತಿ ಹೊಂದಿದೆ. ನಿಮ್ಮ ಬಗ್ಗೆ ನಿಮಗೆ ಒಲವು ಇದ್ದರೆ ಸಾಕು, ಬೇರೆಯವರ ತಿರಸ್ಕಾರ ಅವರ ಬಾಲಿಶತನ ಅಂತ ತಿಳಿದು ನಕ್ಕು ಸುಮ್ಮನಾಗಿ. ನೀವು ಪ್ರೀತಿಸ್ತಾನೆ ಇರಿ...

ಮತ್ತೆ ಸಿಗ್ತೇನೆ.... 

ಎಂಟು ಚಡ್ಡಿ ಹೊಸಾವ ಬರ್ತಿದ್ದು....

ಈ ಬ್ಯಾರೆ ದೇಶಕ್ಕ ಬಂದ್ರ ಒಂದು ದೊಡ್ಡ ಹಿಂಸಾ ಅಂದ್ರ ಒಳ ಉಡುಪು(ಚಡ್ಡಿ ಬನಿಯನ್)   ಒಕ್ಕೋಳ್ಳೋದು. ಹೆಸರಿಗೆ ೫ ಸ್ಟಾರ್ ಹೋಟೆಲು, ಅರಬಿ ಒಗದು ಒಣಾಕಲಿಕ್ಕೆ ಜಾಗ ಇರುದಿಲ್ಲ. 
ಪ್ಯಾಂಟು ಶರ್ಟು ಬಿಡ್ರಿ, ಒಮ್ಮೆ ಹಾಕೊಂಡಿದ್ದು 
ಇನ್ನೊಮ್ಮೆ ಹಾಕೊಬಹುದು, ಆದ್ರ ಒಳಂಗಿ, ಚಡ್ಡಿ ಕಥಿ ಹೇಳ್ರಿ. ಇಂಥ ಕಠಿಣ ಪ್ರಸಂಗಕ್ಕ ಆಗ್ಲಿ ಅನ್ನುದಕ್ಕ ನಾನು ೮ ಜೋಡಿ ಒಯ್ದಿರ್ತೀನಿ. ಆದ್ರು, ೯ ನೆ ದಿನಕ್ಕ ಮತ್ತ ಬೇಕಲ್ಲ. ಈ ಹಿಂದ ಯು. ಎಸ್. ಎ. ಕ್ಕ 
ಹೋದಾಗ ಅಲ್ಲೇ ನಾವ ಅರಬಿ ಒಗೀಲಿಕ್ಕೆ ವ್ಯವಸ್ಥಾ ಇತ್ತು. ೨ ಡಾಲರ್ ಒಗೀಲಿಕ್ಕೆ ೨ ಡಾಲರ್ ಒಣಗಸಲಿಕ್ಕೆ, ಒಟ್ಟ ೨೦೦ ರೂಪಾಯಿದಾಗ ನನ್ನ ಎಲ್ಲ ಅರಬಿ ಒಗದು, 
ಒಣಗಿ ಬರತಿದ್ದು. ಹಂಗ ಇಲ್ಲೂ ವ್ಯವಸ್ಥಾ ಇರಬೇಕು ಅಂತ ಚೀನಾದಾಗ ಬಂದು 
ನೋಡಿದ್ರ, ಇಲ್ಲೂ ವ್ಯವಸ್ಥಾ ಇತ್ತು ಆದ್ರ ಅವರ ಡ್ರೈ ಕ್ಲೀನ್ ಮಾಡ್ತಾರಂತ ಒಂದು 
ಶರ್ಟ್ ಗೆ ೬೦ RMB ಅಂದ್ರ ೪೮೦ ರೂಪಾಯಿ. ಹೋಗ್ಗೋ ಹು. ಸೂ. ಮಕ್ಳ 
ಅಂತ ಬೈದು ಹತ್ರದಾಗ ಎಲ್ಲೆರೆ ಸಣ್ಣ ಅಂಗಡಿ ಇರಬೇಕು ಅಂತ ಹುಡುಕ್ಕೊಂತ 
ಹೊಂಟೆ. ಎಲ್ಲೆ ನೋಡಿದ್ರು ಚೀನಾ ಭಾಷಾದಾಗ ಬೋರ್ಡ್ ಹಾಕಿದ್ರು. ಹಂಗ 
ಕಣ್ಣಾಡಿಸುಕೋತ ಮುಂದ, ಒಂದ್ ಅಂಗಡಿ ಕಂ ಡ್ತು. ಅವನೌನ್ ಬಿಸಲಾಗ 
ಬಂದಾವಗ ಶರಬತ್ತು ಸಿಕ್ಕಂಗ ಆಗಿತ್ತು. ಇಂಗ್ಲಿಷ್ನೊಳಗ laundry ಅಂತ
ಬೋರ್ಡ್ ಇತ್ತು. ನನ್ನ ನಶೀಬಕ್ಕ ಲಾಟರಿ ಹೊಡದಂಗ ಆಗಿತ್ತು. ಹೋಗಿ ನನ್ನು ೬ ಚಡ್ಡಿ ೬ ಬನಿಯನ್ ಕೊಟ್ಟೆ. ಅಕಿ ಒಂದೊಂದ ಎನಿಸಿದ್ಳು. ನನಗರ ದೊಡ್ಡ ನಾಚಿಕಿ. ಹತ್ತ ಸಲ ಎನಿಸಿದ್ಳು ಇರು ಆರು ಅರಬಿ. ಕೊನೀಗೆ, ಒಂದು ರಿಸೀಟ್ ಬರದ್ಳು ಅದು 
ಚೀನಾ ಭಾಷಾದಾಗ ಇತ್ತು. ಆಮೇಲೆ calculator ತೊಗೊಂಡು ಪಟ ಪಟ ಬಟ್ಟನ್ 
ಒತ್ತಿ. ಟೋಟಲ್ 100 RMB ಅಂತ ಬರದ್ಳು. ಭಾರತದ ರೂಪಾಯಿಗೆ 
ಹೋಲಿಸುದಾದ್ರ ೮೦೦ ರೂಪಾಯಿ. ಆಗಷ್ಟ ಶರಬತ್ತು ಕುಡಿದ ನನಗ ಹಸಿ ಮೆಣಸಿನಕಾಯಿ ತಿಂದಂಗ ಆಗಿತ್ತು. ಅಕಿ ನನ್ನ ನೋಡಿ, ಕೈಗೆ ಚೀಟಿ ಕೊಟ್ಟು ನಾಳೆ ಬರ್ರಿ ಅಂದ್ಳು. ಅಕಿ ಕೊಟ್ಟ ಬಿಲ್ಲು ನೋಡಿ, ಅವನೌನ ನಮ್ಮಲ್ಲೇ ಇಷ್ಟು ರೊಕ್ಕಕ್ಕ ೮ ಹೊಸ ಚಡ್ಡೀನ ಬರತಿದ್ದು ಅಂದೇ. 


ಅಪ್ಪನಕಿಂತ ಮಗನಿಗೆ ವಯಸ್ಸು ಜಾಸ್ತಿ ಅದಂಗ ಲೆಕ್ಕ ಆಗಿತ್ತು.. ಏನ್ ಮಾಡುದು ಮಜಬೂರಿ ಕಾ ನಾಮ್ ಗಾಂಧೀಜಿ.


ಮತ್ತ ಭೆಟ್ಟಿ ಅಗೂಣು. 

Thursday, March 1, 2012

ಒಲವಿನ ಓಲೆ?

ನನಗೆ ತುಂಬಾ ಜನ ಮಿಂಚಂಚೆ(email) ಬರೀತಾರೆ. ಕೆಲವರು ಸಂಬಂಧ ಇಲ್ಲದಿರೋ ವಿಷಯಗಳನ್ನ ಫಾರ್ವರ್ಡ್ ಮಾಡ್ತಾರೆ, ಇನ್ನು ಕೆಲವರು donation ಕೊಡಿ ಅಂತ ಪತ್ರ ಬರೀತಾರೆ, ಮನೆ, ಫ್ಲಾಟ್ ಮಾರೋದಿದೆ ಅಂತ ಪತ್ರ ಬರೀತಾರೆ, ಹೀಗೆ ಪಟ್ಟಿ ಅನಂತ. ಇದು ನನ್ನ ಪರ್ಸನಲ್ ಇಮೇಲ್ id ಕಥೆ. ಈ ಎಲ್ಲ ಜಂಜಾಟಗಳಿಂದ ದೂರ ಇರೋಣ ಅಂತ ನನ್ನ ಆಫೀಸ್ id ಬಹಳ ಜನಕ್ಕೆ ಕೊಡೋಲ್ಲ. ಆದರೂ ಆಗೊಂದು ಈಗೊಂದು ದಾರಿ ತಪ್ಪಿ ಪತ್ರಗಳು ಬರುತ್ತವೆ. ಸುಮ್ಮನಾಗ್ತೀನಿ. ಆದ್ರೆ ಒಬ್ಬಳು ಮಾತ್ರ ನಾನು ಉತ್ತರ ಕೊಡಲಿ ಕೊಡದೆ ಇರಲಿ ಪ್ರತಿನಿತ್ಯ ಒಂದು ಮೇಲ್ ಕಲಿಸೇ ಕಳಿಸ್ತಾಳೆ. ಹೆಸರು ಬೇಡ, ನನಗೆ ಬೇಜಾರಾಗಿ ಹೋಗಿದೆ ಅವಳ ಮೇಲ್ ನೋಡಿ ನೋಡಿ. ನನಗೆ ಅತೀ ಆಪ್ತರಾದವರು ಕೂಡ ಅಷ್ಟು mails ಕಳಿಸಿಲ್ಲ. ಈ ನಡುವೆ ಓದದೆ ಡಿಲೀಟ್ ಮಾಡ್ತಾ ಇದ್ದೀನಿ. ಒಂದು ದಿನ ಗೊತ್ತಾಯ್ತು, ಆ ಥರ ಮೇಲ್ ಬಹಳಷ್ಟು ಜನರಿಗೆ ಕಳಿಸ್ತಾಳೆ ಅಂತ. ನಾನೇನೋ ನನ್ನಲ್ಲಿ ವಿಶಿಷ್ಥತೆ ನೋಡಿ, ನನಗೆ ಮಾರುಹೋಗಿ ಬರೀತಾಳೆ ಅಂದ್ರೆ, ಅದೇ ತರಹದ ಸಂದೇಶ ಎಲ್ಲರಿಗೂನಾ? ಬಹಳ ಬೇಸರ ಆಯಿತು, ಹೋಗ್ಲಿ ಅಂತ ಸಮಾಧಾನ ಮಾಡ್ಕೊಂಡೆ. ಇನ್ನೊಂದು ವಿಷಯ ಕೇಳಿ ಮತ್ತೆ ಬೇಜಾರಾಯ್ತು. ಬರೀ ಹುಡುಗರಿಗೆ ಮಾತ್ರ ಅಲ್ಲ ಹುಡುಗಿಯರಿಗೂ ಮೇಲ್ ಕಳಿಸ್ಥಾಳಂತೆ. ಛೆ ಏನೊಂದು ಅರ್ಥ ಆಗಲಿಲ್ಲ. ಈ ನಡುವೆ ಅವಳ ಮೇಲ್ ಗಳನ್ನ ಇಗ್ನೋರ್ ಮಾಡೋಕೆ ಶುರು ಮಾಡಿದ್ದೀನಿ. ಆದರೂ, ದಿನಕ್ಕೆ ಒಂದು ಬಾರಿ ಬೆಳಿಗ್ಗೆ ೮ ಗಂಟೆಗೆ ಅವಳ ಮೇಲ್ ಹಾಜರ್ ಆಗುತ್ತೆ. ಕೊನೆಗೆ ಒಂದು ದಿನ ನನ್ನ ಫ್ರೆಂಡ್ ಜೊತೆ ಮಾತಾಡ್ತಾ ಈ ಮೇಲ್ ಬರದೆ ಇರೋ ಥರ ಏನಾದ್ರೂ ಮಾಡಬಹುದ ಅಂತ ಕೇಳ್ದೆ, ಅದಕ್ಕವನು "ಮಗನೆ ಮರೀದೆ ಟೈಮ್ ಶೀಟ್ fill ಮಾಡು, ರಿಮೈನ್ಡರ್ ಮೇಲ್ ಬರೋದು ನಿಲ್ಲುತ್ತೆ" ಅಂದ. ಛೇ ಅಸ್ತ್ಹೊತ್ತಿಗೆ ನನ್ನ ಕಲ್ಪನೆ ಕಣ್ಣಿಗೆ ತೆರೆ ಬಿದ್ದಿತ್ತು. ಮತ್ತೆ ನಿಮ್ಮದು ? 

ತಾಯಿ ಅನ್ನದೆ ಏನೆನ್ನಲಿ?

ಈ ತಾಯಿ ಅನ್ನೋ ಪದ ದೇವರಾಣೆಗೂ ಒಬ್ಬ ವಕ್ತಿಗೆ ಅಂತ ಅಲ್ಲವೇ ಅಲ್ಲ. ಹೆತ್ತವಳಿಗೆ ಮಾತ್ರ ತಾಯಿ ಅನ್ನೋ ಪದ ಅನ್ವಯ ಆಗುತ್ತೆ ಅಂದ್ರೆ ನಾನು ಅದನ್ನ ಒಪ್ಪೋದಿಲ್ಲ. ನನ್ನ ಅನಿಸಿಕೆ ಪ್ರಕಾರ ತಾಯಿ ಅನ್ನೋದು ಒಂದು ವ್ಯಕ್ತಿತ್ವ. ಬಹಳಷ್ಟು ಸಲ ನಾವು ನೋಡಿರ್ತೀವಿ, ಮಕ್ಕಳು ತಾಯಿಗಿಂದ ತಂದೆಯನ್ನ ಜಾಸ್ತಿ ಹಚ್ಚಿಕೊಂಡಿರುತ್ವೆ. 
ಅದನ್ನ ಗಮನಿಸಿದರೆ ಮಕ್ಕಳಿಗೆ ಬೇಕಾದ ಪ್ರೀತಿ, ಮಮತೆ ತಂದೆಯಿಂದ ಜಾಸ್ತಿ ಸಿಕ್ಕಿದೆ ಅಂತ. ಇಂಥ ಸಂದರ್ಭದಲ್ಲಿ ಆ ಮಗುವಿಗೆ ತಂದೆಯೇ ತಾಯಿ ಆಗ್ತಾನೆ. ಯಾರು ಮಮತೆ, ಪ್ರೀತಿ, ಅನುಕಂಪ, ದಯೆ ಈ ಎಲ್ಲ ಗುಣಗಳನ್ನು ಹೊಂದಿರ್ತಾರೋ ಅವರಿಗೆ ತಾಯಿ ಅಂತ ಸಂಬೋಧಿಸುವುದರಲ್ಲಿ ತಪ್ಪೇನಿಲ್ಲ. ಇದ್ದಕ್ಕಿದ್ದ ಹಾಗೆ ಹೀಗೆ ವಿಚಾರ ಮಾಡೋಕೆ ಅನುವು ಮಾಡಿಕೊಟ್ಟ ಕೆಲವು ಘಟನೆಗಳು, ವ್ಯಕ್ತಿಗಳನ್ನ ನಾನು ನೋಡಿದ್ದೇನೆ.  
ನಾನು ಚೀನಾಗೆ ಬಂದ ದಿನದಿಂದ ನನಗೆ ಸಸ್ಯಾಹಾರದ ಊಟವನ್ನು ತರಿಸಿರ್ತಾರೆ. ಮಧ್ಯನ್ನ ನಾನು ಕ್ಯಾಂಟೀನ್ ನಲ್ಲಿ ಕಾಲು ಇಡುವುದೇ ತಡ, ಒಬ್ಬ ಹಸನ್ಮುಖಿ ಸುಮಾರು ೪೦-೪೫ ವಯಸ್ಸು ಇರಬೇಕು ಆ ಹೆಣ್ಣುಮಗಳಿಗೆ ಓಡಿ ಹೋಗಿ ನನಗಾಗಿ ಪ್ರತ್ಯೇಕವಾಗಿ ಇಟ್ಟಿದ್ದ ಒಂದು ಹಾಟ್ ಕೇಸ್ ನಿಂದ ಊಟ ತೆಗೆದು ಕೊಡುತ್ತಾಳೆ. ನಾನು ಊಟ ತೆಗೆದುಕೊಂಡು "ಶಿಷಾ" ಚೀನಾ ಭಾಷೆಯಲ್ಲಿ "thank you" ಅಂತ ಹೇಳ್ತೀನಿ. ನನೆನಾದ್ರು, ಹಾಲಿನ ಗ್ಲಾಸ್ ತೊಗೊಲ್ಲದೆ ಬಂದ್ರೆ ಅವಳೇ ಬಂದು ಕುಡೀರಿ ಅಂತ ಹೇಳ್ತಾಳೆ. ಅವಳಿಗೂ ಇಂಗ್ಲಿಷಿಗೂ ತುಂಬಾ ದೂರ. ನಮ್ಮ ಮಾತುಗಲೇನೆ ಇದ್ದರು, ಬರೀ ನಗುವಿನಲ್ಲೇ. ಅದೇನೋ ಗೊತ್ತಿಲ್ಲ, ಅವಳ ಮುಖ ನೋಡಿದಾಗಲೆಲ್ಲ ಏನೋ ಒಂಥರಾ ಖುಷಿ ನನಗೆ. ಅವಳ ಮುಖದಲ್ಲಿನ ಆ ಸಂತೃಪ್ತ ಮನೋಭಾವ ನನ್ನಲ್ಲಿ ಬೆರಗು ಹುಟ್ಟಿಸುತ್ತದೆ. ಅದೇನು ಪರದೇಶದಿಂದ ಬಂದ ನನ್ನ ಮೇಲೆ ಅನುಕಂಪವೋ, ಅಥವಾ ಅತಿಥಿ ಸತ್ಕಾರದ ಪರಮಾವಧಿಯೋ ಒಂದು ಗೊತ್ತಿಲ್ಲ. ನನಗೆ ಗೊತ್ತಿಲ್ಲದೇ ಊಟ ಮಡಿ ಬರುವಾಗ ನನ್ನ ಕೈಗಳು ಅವಳನ್ನ ನಮಸ್ಕರಿಸುತ್ತವೆ. ನಮ್ಮಲ್ಲಿ ಅನ್ನದಾತ ಸುಖೀಭವ ಅನ್ನೋ ಮಾತು ಪ್ರತೀ ಬಾರಿ ಊಟ ಮಾಡಿದಾಗಲೂ ಹೇಳ್ತಾರೆ. ಆದ್ರೆ ಅದರ ನಿಜವಾದ ಅರ್ಥ ಗೋಚರಿಸಿದ್ದು ಈ ಕೆಲವು ದಿನಗಳಲ್ಲಿ. ಎಲ್ಲೋ ಹುಟ್ಟಿ, ಸಂಬಂಧವೇ ಇಲ್ಲದ ನನಗೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಈ ರೀತಿಯ ಮಮತೆಯನ್ನು ತೋರಿದ ಇವಳಿಗೆ ತಾಯಿ ಅನ್ನದೆ ಏನೆನ್ನಲಿ?

ಎಲ್ಲ ತಾಯಿ ಮನಸ್ಸಿನವರಿಗೂ ಕೋಟಿ ಕೋಟಿ ನಮನ.. 
ಮತ್ತೆ ಮಾತಾಡೋಣ...