Saturday, February 1, 2014

ಸುಮ್ನಿರೋಕೆ ಏನು ನಿನಗೆ?

ಬಹಳ ವಿಚಿತ್ರ ಅಂದ್ರೆ, ಕೆಲವೊಮ್ಮೆ ನಾನು ಮಾಡೋ ಕೆಲ್ಸ ನನ್ನನ್ನೇ ಪೇಚಿಗೀಡುಮಾಡಿಬಿಡುತ್ತೆ. ಮೊನ್ನೆ ಸಂಜೆ ಕೂಡ ಇಂಥದ್ದೊಂದು ಘಟನೆ ನಡೀತು. ಜಯದೇವ ಇಂದ ಬನಶಂಕರಿ ಗೆ ಹೊರಟ BMTC ಬಸ್ ಏರಿದೆ. ಬಸ್ಸಿನ ತುಂಬಾ ಜನ. ಭಾರತದ ಜನಸಂಖ್ಯಾ ಸ್ಫೋಟದ ನಿತ್ಯದರ್ಶನ ಇರುವಂತಿತ್ತು. ಹಾಗೂ ಹೀಗೂ ತಳ್ಳಿಕೊಂಡು ಬಸ್ಸಿನ ಕೊನೆಯ ಮೂಲೆಯಲ್ಲಿ ಬಂದು ನಿಂತೆ. ಅಷ್ಟು ಜನರ ಮಧ್ಯ ನನ್ನ ಕಣ್ಣಿಗೆ ಅದ್ಭುತವಾಗಿ ಕಂಡಿದ್ದು ಒಂದು ೬ ವರ್ಷದ ಮಗು ಅದರ ಪಕ್ಕದಲ್ಲಿ ನಿದ್ದೆ ಮಾಡುತ್ತ ಕುಳಿತಿದ್ದ ಒಬ್ಬ ಇಳಿವಯಸ್ಸಿನ ಯುವಕ ಅಥವಾ ಮುದಿವಯಸ್ಸಿನ ಯುವಕ ಅನ್ನಬಹುದು. ಯಾಕೆಂದ್ರೆ  ವ್ಯಕ್ತಿಯನ್ನ ಗಮನಿಸಿದರೆ ಅವನು ಆ ಮಗುವಿಗೆ ತಂದೆ ಅನ್ನೋವಷ್ಟು ಯುವಕ ಅಲ್ಲ, ಹಾಗೆ ತಾತ ಅನ್ನೋವಷ್ಟು ಮುದುಕ ಕೂಡ ಅಲ್ಲ. ಕುಂಭಕರ್ಣನ ಅಪರಾವತಾರನಂತೆ ನಿದ್ದ್ರಿಸುತ್ತಿದ ಆ ವ್ಯಕ್ತಿ. ನಾನು ಆ ವ್ಯಕ್ತಿಯನ್ನು ದಿಟ್ಟಿಸಿ ನೋಡಿದ್ದನ್ನ ಅರಿತ ಮಗು ಸಣ್ಣದೊಂದು ಕಿರುನಗೆಬೀರಿತು. ಮಕ್ಕಳ ನಗುವೇ ಹಾಗೆ ಎಂಥವರನ್ನೂ ಮೂಕವಿಸ್ಮಿತರನ್ನಾಗಿ ಮಾಡಿಬಿಡುತ್ತದೆ. ಆ ಮಗುವಿನ ನಗುವಿಗೆ ನನ್ನ ನಗು ಪ್ರತ್ರಿಕ್ರಿಯ ಆಗಿತ್ತು. ಜನಜಂಗುಳಿ, ವಾಹನಗಳ ಆಕ್ರಂದನ, ಅಂಗಡಿ ಮುಂಗಟ್ಟುಗಳು, ವ್ಯಾಪಾರ ವಹಿವಾಟುಗಳು ಎಷ್ಟೆಷ್ಟೋ ವಿಷಯಗಳನ್ನು  ಒಟ್ಟಾರೆ ಅನುಭವಿಸುತ್ತಿದ್ದವು ಆ ಮಗುವಿನ ಕಣ್ಣುಗಳು. ತಾನೇನೆಲ್ಲ ನೋಡ್ತಾ ಇದ್ದೇನೆ ಅನ್ನೋ ಮಹದಾನಂದ ಆ ಮಗುವಿನ ಮುಖದಲ್ಲಿ. ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿತ್ತು ಆ ಸನ್ನಿವೇಷ. ಯಾಕೆಂದ್ರೆ ಅದೇ ತರಹದ ಅನುಭವಗಳನ್ನು ನಾನು ೬ ವಯಸ್ಸಿನವನಿದ್ದಾಗ ಬೆಳಗಾವಿಯಿಂದ ಬಾದಾಮಿಗೆ ಹೋಗುವ ಮಾರ್ಗದಲ್ಲಿ ಸವಿದಿದ್ದೆ. ಆಗ ನಾನೊಬ್ಬನೇ ಒಂಟಿಯಾಗಿ ಪ್ರಯಾಣಿಸುವ ಅನಿವಾರ್ಯತೆ ಇತ್ತು. ಇವತ್ತು ಈ ಮಗುವಿನ ಹತ್ತಿರ ಹೇಳಿಕೊಳ್ಳೋಕೆ ಅಂತ ಪಕ್ಕದಲ್ಲಿ ಒಬ್ಬ ವ್ಯಕ್ತಿ ಇದ್ದರೂ ಇಲ್ಲದ ಹಾಗೆ ಇದ್ದ.

ಕಣ್ಣಿನ ಭಾಷೆ ಅತ್ಯಂತ ಪ್ರಭಾವಿಯಾಗಿರುತ್ತದೆ. ಮಗು ನೋಡಿದ ಒಂದೊಂದು ವಿಷಯವನ್ನು ನನ್ನ ಹತ್ತಿರ ಹಂಚಿಕೊಳ್ಳುತ್ತಿದ್ದುದು ಆ ಕಣ್ಣಿನ ಮುಖೇನವೇ. ಮತ್ತೊಂದು ನಗು, ಇನ್ನೊಂದು ವಿಷಯ, ಮತ್ತೊಂದು ನಗು, ಹೊಸದೊಂದು ಕಥೆ, ಹೀಗೆ  ಸರಣಿ ಮುಂದುವರಿಯಿತು. ಕಿಟಕಿಯಲ್ಲಿ ಏನೋ ನೋಡುತ್ತಾ, ಒಮ್ಮೆಲೇ ಕತ್ತನ್ನು ಆಚೆ ಹಾಕಿದ ಮಗುವನ್ನು ನೋಡಿ ನಾನು ಗಾಬರಿಯಾದೆ. "ಏಯ್" ಅನ್ನೋ ನನ್ನ ಉದ್ಗಾರಕ್ಕೆ ಗೊರಕೆ ಹೊಡೆಯುತ್ತ ಮಗು ಪಕ್ಕ ಕೂತಿದ್ದ ಕುಂಭಕರ್ಣ ಎದ್ದುಬಿಟ್ಟ. ದಯೆ ದಾಕ್ಷಿಣ್ಯ ಇಲ್ಲದೆ ಮಗುವನ್ನ ಬಾಯಿಗೆ ಬಂದ ಹಾಗೆ ಬೈದ. ಅವನ ಬೈಗುಳಗಳ ಕೋಟಾ ಮುಗಿದ ನಂತರ ಮತ್ತೆ ನಿದ್ದೆ ಹೋದ. ಮಗು ಮುಖದಲ್ಲಿ ಬಂದ ಭಾವನೆ ಕೋಪವೋ, ದುಃಖವೋ ನನಗೆ ಗೊತ್ತಾಗಲಿಲ್ಲ. ಸುಮಾರು ಅರ್ಧಗಂಟೆಗಳ ಕಾಲ ನಡೆಸಿದ ಆ ಕಣ್ಣಿನ ಮಾತುಗಳು ನಿಂತು ಹೋಗಿದ್ದವು. ಮನಸ್ಸಿನೊಳಗೆ ನನಗೆ ನಾನೇ ಬೈದುಕೊಂಡೆ "ಸುಮ್ನಿರೋಕೆ ಏನು ನಿನಗೆ?'

ಮತ್ತೆ ಸಿಗ್ತೇನಿ...