Wednesday, October 9, 2013

ಲವ್ ಪ್ರಾಬ್ಲಂ

ತುಂಬಾ ದಿನಾ ಆಯ್ತು ಬ್ಲಾಗಿನ ಬಾಗಿಲು ತೆರೆದು. ಸಿಕ್ಕಾಪಟ್ಟೆ ಕೆಲಸ, ಜೊತೆಗೆ   ಹೊಸ ನಾಟಕಗಳನ್ನು ಬರೆಯೋದರಲ್ಲಿ ಬಿಜಿಯಾಗಿದ್ದೆ. ತೊಂದ್ರೆ ಇಲ್ಲ ಮುಂದುವರಿಸೋಣ.   

ಮೊನ್ನೆ ನನ್ನ ಮಿತ್ರನ ಮಿತ್ರನೊಬ್ಬ ತನ್ನ ಲವ್ ಪ್ರಾಬ್ಲ್ಂ ನನ್ನ ಹತ್ರ ಹೇಳ್ಕೊಂಡ. "ಲವ್ ಪ್ರಾಬ್ಲಂ" ನೋಡಿ ಜಂಟಿ ಪದದ ಥರ ಕಾಣುತ್ತೆ. ಲವ್ ಗೆ ಪ್ರಾಬ್ಲಂ ಇರಬೇಕಾ? ಅನ್ನೋ ಪ್ರಶ್ನೆಗೆ ಉತ್ತರ ಹುಡುಕಲು ಹೊರಟಾಗ, ನನ್ನ ಮನಸ್ಸಿಗೆ ಅನ್ನಿಸಿದ ಕೆಲವು ವಿಷಯಗಳನ್ನು ಹಂಚಿಕೊಳ್ತೀನಿ. 

ಒಂದು ಹುಡುಗ, ಒಂದು ಹುಡುಗಿ, ವರ್ಷಗಳ ಪರಿಚಯ, ಸ್ನೇಹ, ನಂಬಿಕೆ, ಇನ್ನೂ ಅನೇಕ ಹೇಳಲಾಗದ ಭಾವನೆಗಳ ಸುಂದರ ಹೂಗುಚ್ಛ ಈ ಲವ್. ದೇಶ, ಭಾಷೆ, ವಯಸ್ಸು, ಅಂತಸ್ತು ಈ ಎಲ್ಲವನ್ನೂ ಮೀರಿ ನಿಂತ ಸುಂದರ ಅನುಭವ ಈ ಲವ್. ಇಷ್ಟೆಲ್ಲ ಸುಂದರತೆ  ಜೊತೆಗೆ ಒಂದೇನಾದ್ರು ಕೊಂಕು ಇರಲೇಬೇಕಲ್ಲ. ಚಂದ್ರನಿಗೆ ಕಪ್ಪು ಕಲೆ, ಗುಲಾಬಿಯ ಹೂವಿಗೆ ಮುಳ್ಳು, ಹೀಗೆ ಲವ್ ಗೆ ಕೂಡ ಒಂದು ಕೊಂಕು ಇದ್ದೇ ಇದೆ. ತಮ್ಮ ಲವ್ ನ ಯಶಸ್ವಿಗೊಳಿಸಬೇಕು ಅನ್ನೋ ಆಸೆ ಹೊತ್ತ ಮನಸುಗಳಿಗೆ ತಣ್ಣೀರು ಎರಚೋ ಸಮಾಜ, ತಂದೆ-ತಾಯಿ, ಮತ್ತಿನ್ನ್ಯಾರೋ. ಇವರೆಲ್ಲ ಪ್ರೀತಿಗೆ ಬರುವ ಎಡರು ತೊಡರುಗಳು. ಯಾಕೆ ಈ ಪ್ರೀತಿಗೆ ಇಷ್ಟು ಅಡ್ದಿ ?

ಪಾಯಿಂಟ್ ೧ : ಹುಡುಗನ/ ಹುಡುಗಿಯ ಜಾತಿ, ಊರು-ಕೇರಿ, ಆಚಾರ-ವಿಚಾರ, ಇವೆಲ್ಲ ಇಬ್ಬರ ಮನೆಯ ಹಿರಿಯರಿಗೆ ಸರಿ ಹೋಗೋದಿಲ್ಲ. 

ನನ್ನ ನಿಲುವು : ಅಲ್ಲ ಸ್ವಾಮೀ... ಜಾತಿ ಅನ್ನೋದು ಮನುಷ್ಯ ಮಾಡಿಕೊಂಡಿದ್ದು ಅಲ್ಲವೇ? ಜಾತಿಯ ಮೂಲಕ ಮನುಷ್ಯನ ವ್ಯಕ್ತಿತ್ವ ಅಳೆಯಲು ಸಾಧ್ಯವೇ? ೨೧ನೇ ಶತಮಾನದಲ್ಲಿ ಬದುಕು ಸಾಗಿಸುತ್ತಿರೋ ನಾವು, ಜಾತಿ ಅನ್ನೋ ಬೇಲಿ ಹಾಕಿಕೊಳ್ಳಬೇಕ? "ಕುಲ ಕುಲ ಕುಲವೆಂದು ಹೊಡೆದಾಡದಿರಿ", "ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ?", "ಮನುಜ ಮತ ವಿಶ್ವ ಪಥ" ಈ ಎಲ್ಲ ಸಾಲುಗಳು ಕೇವಲ ಕೇಳಿ ಮರೆತು ಹೋಗೋದಕ್ಕ?

ಪಾಯಿಂಟ್ ೨ :  ಹುಡುಗನ/ಹುಡುಗಿಯ ಆರ್ಥಿಕ ಸ್ಥಿತಿಗತಿ. 
ನನ್ನ ನಿಲುವು:  ಅಲ್ಲ ಸ್ವಾಮೀ... ಹುಡುಗ, ಹುಡುಗಿ ಇಷ್ಟ ಪಟ್ಟ ಮೇಲೆ ದುಡ್ಡು ಕಾಸು ಯಾವ ಲೆಕ್ಕ? ದುಡ್ಡಿರೋ ಎಷ್ಟೋ ಜನ, ಕ್ಷಣ ಮಾತ್ರದಲ್ಲಿ ಬೀದಿಗೆ ಬಂದಿಲ್ಲವೇ? ಅದೇ ರೀತಿ ಕಡುಬಡವ ಶ್ರೀಮಂತನಾಗಿ ಬೆಳೆದಿಲ್ಲವೇ? ದುಡ್ಡು, ಅಂತಸ್ತು ಕ್ಷಣಿಕ, ಆದ್ರೆ ಪ್ರೀತಿ ಅನಂತ, ಅವಿರತ. 

ಪಾಯಿಂಟ್ ೩ : ತಂದೆ ತಾಯಿಯರ ಆಸೆ (ಹಠ) 
ನನ್ನ ನಿಲುವು :  ಹುಟ್ಟಿದ ಮರುಕ್ಷಣದಿಂದ ಹಾಕಿಕೊಳ್ಳುವ ಡೈಪರ್ ನಿಂದ ಹಿಡಿದು, ಓಡಿಸೋ ಗಾಡಿ, ಶರ್ಟು, ಪ್ಯಾ೦ಟ, ಹೇರ್ ಸ್ಟೈಲ್ ಎಲ್ಲವನ್ನೂ ತಮ್ಮ ಇಷ್ಟದಂತೆ ಕೊಡಿಸುತ್ತ ಬಂದವರಿಗೆ, ತಮ್ಮ ಅಳಿಯ/ ಸೊಸೆಯನ್ನೂ ತಾವೇ ಹುಡುಕಿ, ಆರಿಸಬೇಕು ಅನ್ನೋ ಆಸೆ. ಆಸೆ ಮಿತಿಯಲ್ಲಿ ಇದ್ದರೆ ಓಕೆ, ಆದ್ರೆ ಮಿತಿ ಮೀರಿದರೆ ಆ ಆಸೆ ಹಠ ಆಗಿಬಿಡುತ್ತದೆ. ಈ ಹಠ ತಮ್ಮ ಸ್ವಂತ ಮಕ್ಕಳ ಸಂತೋಷಕ್ಕೆ ಅಡ್ಡಿ ಆಗಲಿದೆ ಅನ್ನೋ ಚಿಕ್ಕ ವಿವೇಚನೆ ದೊಡ್ಡವರಿಗೆ ಬರೋದಿಲ್ಲ ಯಾಕೆ?

ಒಟ್ಟಾರೆ ಹೇಳ್ಬೇಕು ಅಂದ್ರೆ, ಮೇಲಿನ ಮೂರು ಅಂಶಗಳನ್ನು ಮೀರಿ ಯೋಚನೆ ಮಾಡಿದ್ದಲ್ಲಿ ಮಾತ್ರ ನಿಜವಾದ ಪ್ರೀತಿಗೆ ಯಶಸ್ಸು ಸಿಗೋದು ಸಾಧ್ಯ. ಹುಡುಗ, ಹುಡುಗಿ ಪ್ರೀತಿಸಿ ತಮ್ಮ ಬಾಳು ತಾವು ಕಟ್ಟಿಕೊಳ್ಳುತ್ತಾರೆ ಅನ್ನೋ ಭರವಸೆ ಇದ್ರೆ ಯಾಕೆ ಅಡ್ಡಿ ಪಡಿಸಬೇಕು? ತಾವು ಆಯ್ಕೆ ಮಾಡಿಕೊಂಡ ಜೀವನದ ಬಗ್ಗೆ ಅವರಿಗೆ ಒಲವು ಇರುತ್ತದೆ, ಅದನ್ನು ಸರಿಯಾದ ರೀತಿಯಲ್ಲಿ ಸಾಕಾರಗೊಳಿಸುವ ಬಗ್ಗೆ ಪ್ರಯತ್ನ ಇರುತ್ತದೆ. ಜೀವನ ಹೇಗೋ ನಡೆದು ಹೋಗುತ್ತದೆ ಅನ್ನೋದರ ಬದಲು, ಜೀವನ ಹೀಗೆ ಇರಬೇಕು ಅನ್ನೋ ಗುರಿ ಹುಟ್ಟುತ್ತದೆ. 

ಇವೆಲ್ಲವುಗಳನ್ನು ಮೀರಿ ಪ್ರೇಮಿಗಳನ್ನು ದೂರಮಾಡುವ ಪ್ರಯತ್ನಗಳು ನಡೆಯುತ್ತವೆ. ಸಮಾಜ, ತಂದೆ-ತಾಯಿಯರನ್ನ ಎದುರಿಸಿ/ ವಿರೋಧ ಕಟ್ಟಿಕೊಂಡು ಬಾಳು ನಡೆಸಬೇಕು ಅನ್ನೋರು ಮನೆ ಬಿಟ್ಟು ಹೋಗ್ತಾರೆ. ಧೈರ್ಯ ಇಲ್ಲದವರು ಪ್ರೀತಿಯನ್ನು ಸಾಯಿಸಿ, ಬೇರೆ ಬೇರೆ ಜೀವನ ನಡೆಸುತ್ತಾರೆ. ಆದ್ರೆ ಪ್ರೀತಿ ಸಾಯಿಸಿದ ಕೊರಗಿನಲ್ಲಿ, ಅವರೂ ದಿನನಿತ್ಯವೂ ಸಾಯುತ್ತಾರೆ. ಇವೆರೆಡು ಮಾಡಲು ಆಗದವರು ಕೆರೆ, ಬಾವಿ, ಮರ ಟ್ರೈನ್, ವಿಷ ಇನ್ನೂ ಏನೇನೊ ಮಾರ್ಗ ಹುಡುಕಿ ಸತ್ತು ಹೋಗ್ತಾರೆ. 

ಒಟ್ಟಿನಲ್ಲಿ ಸಂತೋಷವಾಗಿ ಇರಬೇಕಾದ  ಜೀವಗಳು ಕೊರಗುತ್ತವೆ ಇಲ್ಲ ಕೊನೆಯಾಗುತ್ತವೆ. ದಾರಿ ಯಾವುದೇ ಇರಲಿ, ಸಂತೋಷ ಅನ್ನೋದು ಮರೀಚಿಕೆಯಾಗಿಬಿಡುತ್ತದೆ. ಕ್ಷುಲ್ಲಕ ಕಾರಣಗಳಿಗೆ ಹೀಗೆಲ್ಲ ಆಗೋದು ಸರಿಯೇ? 

ಎಲ್ಲ ಮುಗಿದ ಮೇಲೆ, "ಮಕ್ಕಳು ಚೆನ್ನಾಗಿರಲಿ ಅಂತ ತಾನೇ ನಾವೆಲ್ಲಾ ಹೀಗೆ ಮಾಡಿದ್ದು" ಅನ್ನೋ ಎಷ್ಟೋ ಪಾಲಕರಿಗೆ ನನ್ನ ಈ ಪ್ರಶ್ನೆ ಅನ್ವಯಿಸುತ್ತದೆ. 

ಸೂಚನೆ  : ನಾನು ಹಿರಿಯರನ್ನು  ದ್ವೇಷಿಸೋನು ಅಲ್ಲ. ಆದ್ರೆ ಪ್ರೀತಿಯನ್ನು ಪ್ರೀತ್ಸೋನು


Sunday, March 3, 2013

ಹುಡುಕಾಟ

ನಾನು ಈಗ ಬರೀತಾ ಇರೋ ವಿಷಯ ಬಹಳ ಜನರ ಜೀವನದಲ್ಲಿ ನಡೆದಿರುತ್ತೆ. ಬೆಂಗಳೂರಿಗೆ ಬಂದು ಕೆಲಸ ಹುಡುಕೋ ಕ್ರಿಯೆಯಲ್ಲಿ ತೊಡಗಿದ್ದ ದಿನಗಳವು. ಬೆಳಿಗ್ಗೆ ೭ ಗಂಟೆಗೆ ಸರಿಯಾಗಿ, ಒಳ್ಳೆ ಬಟ್ಟೆ ಧರಿಸಿ, ಕೈಲೊಂದು ಫೈಲ್ ಹಿಡಿದು, ಬಸ್ ಪಾಸ್ ಒಂದನ್ನು ತೆಗೆದುಕೊಂಡು, ಮನಸಲ್ಲಿ ಸ್ವಲ್ಪ ಉತ್ಸಾಹ ಹಾಗು ತಳಮಳ ಹೊತ್ತು, ಕಂಪನಿಯಿಂದ ಕಂಪನಿಗೆ ತಿರುಗಾಡುತ್ತಿದ್ದೆ. ನನ್ನ ಜೊತೆ ಇದ್ದದ್ದು ನನ್ನ ಇನ್ನೊಬ್ಬ ಮಿತ್ರ ರವಿ. ನಮ್ಮಿಬ್ಬರಿಗೂ ಕಂಪನಿಗಳಿಂದ ಕೇಳಿಬರುತ್ತಿದ್ದ ಮಾತು ಒಂದಿತ್ತು. ಅದು "ನೋ". ಮಾರ್ಕ್ಸ್ ಕಾರ್ಡಿನ ತುಂಬಾ ಮಾರ್ಕ್ಸ್ ಇತ್ತೇ ವಿನಃ ಹಣೆಯಲ್ಲಿ ಅದೃಷ್ಥ ರೇಖೆ ಇರಲಿಲ್ಲ. ದುಡೀತಿನಿ ಅನ್ನೋರಿಗೆ ಒಂದು ಕೆಲಸ ಕೊಡೋಕೆ ಆಗೋಲ್ವ? ಅನ್ನೋ ಅನೇಕ ವಿಷಾದನೀಯ ಪ್ರಶ್ನೆಗಳು ಮನಸ್ಸಿನಲ್ಲಿದ್ದವು. ಜೀವನ ಅನ್ನೋದು ಅಂದುಕೊಂಡರೆ ಸಿರಿಯಸ್ ಇಲ್ಲ ಅಂದ್ರೆ ಜಾಲಿ. ಅಂತಹ ಜಾಲಿಯಾದ ಒಂದು ಸನ್ನಿವೇಶ ಅಂತಹ ಕಷ್ಟದ ದಿನದಲ್ಲಿ ನಡೆದಿತ್ತು. 


ಕೆಲಸ ಹುಡುಕಿ ನಾನು ಹೋಗುತ್ತಿದ್ದ ಜಾಗಗಳೆಲ್ಲ ಅಲ್ಟ್ರ ಮಾಡರ್ನ್.  ಬಹು ಮಹಡಿಯ ಕಟ್ಟಡಗಳು, ವಿವಿಧ ಅಲಂಕಾರಿಕ ಉದ್ಯನವನಗಳು. ಗಾಜಿನಿಂದ ಮಾಡಿದ ಕಲಾಕೃತಿಗಳು. ಅದೊಂದು ವಿಸ್ಮಯ ಲೋಕ ಬಿಡಿ. ಇಂತಹ ವಿಸ್ಮಯ ಲೋಕದಲ್ಲೂ ಒಂದು ಕೊರತೆಯಿತ್ತು ಅಂದ್ರೆ ನಂಬ್ತೀರಾ? ಹೌದು ಇತ್ತು. ಅದು ಸುಲಭ ಶೌಚಲಯ. ಸಾರ್ವಜನಿಕರಿಗೆ ನೆರವಾಗಬಲ್ಲ ಒಂದೇ ಒಂದು ಪಬ್ಲಿಕ್ ಟಾಯ್ಲೆಟ್ ಅಲ್ಲಿರಲಿಲ್ಲ ಅನ್ನೋದೇ ಅಶ್ಚರ್ಯ. ಅಲ್ಲೇ ಏನು, ಬೆಂಗಳೂರಿನ ಎಷ್ಟೊ ಪ್ರದೇಶಗಳಲ್ಲಿ ಅದರ ಕೊರತೆ ಇದೆ. ಇನ್ನೂ ಕೆಲವೆಡೆ ಇದ್ರೂ ಅವಕ್ಕೆ ಬೇಗ ಜಡಿದು ಉಪಯೋಗಕ್ಕೆ ಬಾರದ ಹಾಗೆ ಇಟ್ಟಿರ್ತಾರೆ. ನನ್ನ ಕರ್ಮಕ್ಕೋ ಏನೋ ಆವತ್ತು ನನ್ನ ವೈರಿಯ ರೂಪದಲ್ಲಿ ನನಗೆ ನಿಸರ್ಗದ ಕರೆ ಬಂದಿತ್ತು (ಮಕ್ಕಳ ಭಾಷೇಲಿ ಸೂಸು). ಎಲ್ಲಿ ನೋಡಿದರೂ ಜನಜಂಗುಳಿ. ಸುಮಾರು ೧ ಕಿ. ಮೀ ನಡೆದರೂ ಒಂದೇ ಒಂದು ಶೌಚಾಲಯ ಸಿಗಲಿಲ್ಲ. ನನ್ನ ಮಿತ್ರನದೂ ಅದೇ ಕಥೆ. ಓಯಾಸಿಸ್ ನಲ್ಲಿ ನೀರು ಹುಡುಕೋದು ಎಷ್ಟು ಕಷ್ಟವೋ ಅಷ್ಟೇ ಕಷ್ಟ ನಮ್ಮದಾಗಿತ್ತು. ಕೊನೆಗೂ ಒಂದು ಯೋಚನೆ ತಲೆಗೆ ಹೊಳೀತು. ಕಣ್ಣ ಮುಂದೆ ಲೀಲಾ ಪ್ಯಾಲೇಸ್ ಕಂಡಿತ್ತು. ಅದ್ಯಾವಾಗಲೋ ಒಮ್ಮೆ ಒಳಗೆ ಹೋಗಿದ್ದ ನೆನಪಿತ್ತು. ಕ್ಲಬ್ ಮಹಿಂದ್ರ ಮಳಿಗೆಗೆ ೨ ವರ್ಷದ ಹಿಂದೆ ನಾನು ನನ್ನ ಅಣ್ಣನ ಜೊತೆ ಅಲ್ಲಿ ಹೋಗಿದ್ದೆ. ಇವತ್ತು ಒಳಗೆ ಹೋಗೋಕೆ ಯಾವ ಕಾರಣವು ಇರಲಿಲ್ಲ. ಆದ್ರೆ ಸಮಸ್ಯೆ ಮಾತ್ರ ಇತ್ತು. ನನ್ನ ಮಿತ್ರ ಬೇರೆ ನನ್ನನ್ನ ಹೆದರಿಸುತ್ತಿದ್ದ. "ಲೇ ಸಿಕ್ಕು ಬಿದ್ರೆ ಒದೆ ಗ್ಯಾರಂಟಿ". 'ಒಂದೆರಡು ಒದೆ ತಿಂದರು ಚಿಂತೆಯಿಲ್ಲ ಒಳಗೆ ಹೋಗಿ ಕಾರ್ಯಕ್ರಮ ಕೊಡಲೇಬೇಕು'  ಅನ್ನೋದು ನನ್ನ ವಾದವಾಗಿತ್ತು. ಕೊನೆಗೂ ಬೇಟೆಗಾರರ ಹಾಗೆ ಒಳಗೆ ನುಗ್ಗಿದ್ವಿ. ರಿಸೆಪ್ಶನ್ ಹತ್ರ ಹೊಗಿ, "ಕ್ಲಬ್ ಮಹಿಂದ್ರ ಆಫೀಸ್ ಎಲ್ಲಿದೆ?" ಅಂದೆ. ಬಳುಕುತ್ತ ಕೌಂಟರಿನಲ್ಲಿ ನಿಂತಿದ್ದ ಆ ಹುಡುಗಿ "ಸೆಕೆಂಡ್ ಫ್ಲೋರ್ ರೈಟ್ ಸೈಡ್ ನಲ್ಲಿ ಇದೆ. ಅಷ್ಟು ಕೇಳಿದ್ದೆ ತಡ, ನಾಗಾಲೋಟದಿಂದ ೨ನೇ ಮಹಡಿ ಹತ್ತಿ, ಅಲ್ಲೇ ಇದ್ದ ಐಶಾರಾಮಿ ಶೌಚಾಲಯದಲ್ಲಿ ದೀರ್ಘ ಉಸಿರು ಬಿಟ್ಟೆ. ಎಲ್ಲ ಮುಗಿಸಿ ಆಚೆ ಬರೋವಾಗ ನನ್ನ ಫ್ರೆಂಡ್ ಮತ್ತು ನಾನು ಸೇರಿ, ನಾನು ಮಾಡಿದ ಪರಾಕ್ರಮ ನೆನೆಸಿಕೊಂಡು ನಕ್ಕು ಮುಂದೆ ಸಾಗಿದ್ವಿ.


ಇದಾದ ನಂತರ ಬೆಂಗಳೂರಿನಲ್ಲಿ ಸುಲಭ ಶೌಚಾಲಯ ಇಲ್ಲದಿದ್ರು, ವಿಪರೀತ ಪರಿಸ್ಥಿಯಲ್ಲಿ ಹೇಗೆ ನಿಭಾಯಿಸಬೇಕು ಅನ್ನೋದು ಅರಿವಾಗಿತ್ತು. ಈಗ್ಲೂ ಅಷ್ಟೇ, ವಿಧಿ ಏನಾದ್ರೂ ಈ ಥರ ಪರೀಕ್ಷೆ ಇಟ್ರೆ, ಟಾಯ್ಲೆಟ್ ಬದಲು ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ಹುಡುಕೋದು ಕಷ್ಟಾನಾ?


ಹಾಗಂತ ಬರೀ ಪುಕಸಟ್ಟೆ ಪುರಾಣ ಕೇಳೋದು ಅನ್ತಲ್ಲ. ಕೆಲವೊಮ್ಮೆ ೧ ರೂಪಾಯಿಗೆ ಆಗಬೇಕಿರೋ ಕೆಲಸಕ್ಕೆ ೨೦-೩೦ ರೂಪಾಯಿ ಕೊಟ್ಟಿದ್ದೂ ಇದೆ. ಅದರಲ್ಲಿ ಕಾಫಿ ಡೇ ಸಮೋಸ ೨೦ ರೋಪಯಿ. ಅಡೆಯಾರ್ ಭವನ್ ದ ಭೇಲ್ - ೪೦ ರೋಪಯಿ. ಕೊನೆಗೆ ಶಾಂತಿಸಾಗರದ ಚಹಾ ೧ ರೂಪಾಯಿ. ದೇವರಾಣೆ ಇವೆಲ್ಲ ತಿನ್ನಬೇಕು ಅಂತ ಹೋಗಿ ತಿಂದಿದ್ದಲ್ಲ ರೀ..Wednesday, February 13, 2013

ಪ್ರೀತಿ ಅನಂತ

                ಮೀಸೆ ಆಗತಾನೆ ಚಿಗುರಿದ್ದ ದಿನಗಳವು. ಕನಸು ಕಟ್ಟಿಕೊಂಡು ಅದರಲ್ಲಿ ಮೆರೆಯೋದೆ ಆಗಿದ್ದ ಮುಖ್ಯ ಕೆಲಸ. ಕಂಡ ಎಸ್ಟೋ ಕನಸುಗಳಲ್ಲಿ 'ಗರ್ಲ್ ಫ್ರೆಂಡ್ ' ಕೂಡ ಒಂದು. ಬಾಲ್ಯದಲ್ಲಿ ಓದಿದ್ದು ಕನ್ನಡ ಗಂಡು ಮಕ್ಕಳ ಮಾದರಿ ಶಾಲೆ ನಂ ೧. ಹೆಸರು ನೋಡೇ ನೀವು ಊಹೆ ಮಾಡಬಹುದು ಅಲ್ಲಿ ಬರೀ ಗಂಡು ಹುಡುಗರದ್ದೆ ದರ್ಬಾರು. ಚಿಕ್ಕ ನಾಟಕದಿಂದ ಹಿಡಿದು ಗ್ರೂಪ್ ಡಾನ್ಸ್ ವರೆಗೂ ಎಲ್ಲ ಐಟಂನಲ್ಲೂ ಕೂಡ ಹುಡುಗಿಯರ ರೂಪದಲ್ಲಿ ಹುಡುಗರು ಇರುತ್ತಿದ್ದರು. ಹೈಸ್ಕೂಲ್ ಬರೋ ವೇಳೆಗೆ ಕೋ-ಎಜುಕೇಶನ್ ಭಾಗ್ಯ ಸಿಕ್ಕಿತ್ತು. ನಾವೋ ಸಿಕ್ಕಾಪಟ್ಟೆ ಕ್ರಿಯೇಟಿವ್, ನಮ್ಮ ಕ್ರಿಯಾಶೀಲತೆಯಿಂದ ಕೆಲವು ಹುಡುಗಿಯರನ್ನ ಇಂಪ್ರೆಸ್ ಮಾಡಿದ್ವಿ. ಸುಂದರವಾಗಿರೊ ಹುಡುಗಿ ಜೊತೆ ೧೦ ನಿಮಿಷ ಮಾತಾಡಿದ್ರೂ ಸಾಕು ಅದೊಂದು ದೊಡ್ಡ ಸಾಧನೆ 'ಆ ಕಾಲಕ್ಕೆ'. small town mentality ಅನ್ನಿ. ಕಾಲೇಜ್ ಸೇರೋ ಹೊತ್ತಿಗೆ ಸ್ವಲ್ಪ ಮಾತು, ನಡೆ, ನುಡಿ ಎಲ್ಲ ಕಲಿತಾಗಿತ್ತು. ಮೀಸೆ ಸ್ವಲ್ಪ ಕಾಣೋ ಲೆವೆಲ್ಲಿಗೆ ಬೆಳೆದಾಗ ಇನ್ನಷ್ಟು ವಿಚಿತ್ರ ಅನುಭವಗಳು. ಸುಂದರವಾಗಿರೋ ಹುಡುಗಿ ನೋಡಿದ ತಕ್ಷಣ, ಮಾಡುವೆ ಎಲಿಜಿಬಿಲಿಟಿ ಗೆ ಇನ್ನೆಷ್ಟು ದಿನಗಳು ಬಾಕಿ ಇವೆ ಅನ್ನೋ ಲೆಕ್ಕಾಚಾರ.

          ಕೆಲವು ಫ್ರೆಂಡ್ಸ್ ಗೆ ಗರ್ಲ್ ಫ್ರೆಂಡ್ ಇದ್ರು. ಇನ್ನೂ ಕೆಲವರು ಹುಡುಕಾಟದಲ್ಲಿ ಇದ್ದರು. ಒಂದು ಜೀನ್ಸ್ ಪ್ಯಾಂಟ್, ಜೀನ್ಸ್ ಜಾಕೆಟ್, ಒಂದು ಬೈಕ್, ಹಾಗು ಒಂದಿಷ್ಟು ಲುಕ್ಸ್, ಇದೆಲ್ಲ ಇದ್ದವರಿಗೆ ಹುಡುಗಿ ಸಿಗೋದು ಕಷ್ಟಾನಾ? ಅನ್ನೋದು ಗರ್ಲ್ ಫ್ರೆಂಡ್ ಇಲ್ಲದವರ ಗೋಳು. ಇಷ್ಟೆಲ್ಲಾ ಇದ್ದು ಗರ್ಲ್ ಫ್ರೆಂಡ್ ಇಲ್ಲದೋರು ವೆಸ್ಟ್ ಬಾಡಿಗಳು ಅನ್ನೋದು ಕೂಡ ಅವರ ವೇದಾಂತ. ನನಗಿದ್ದದ್ದು ಒಂದು ಸೈಕಲ್, ಓವರ್ ಸೈಜ್ ಶರ್ಟ್, ಫಾರ್ಮಲ್ ಪ್ಯಾಂಟ್, ದೃಷ್ಟಿ ಬೋಟ್ಟಿನ ಥರ ಸ್ಪೋರ್ಟ್ ಶೂಸ್. ಸೈಕಲ್ ಮೇಲೆ ಬಂದು ಅಂಬರೀಷಣ್ಣ ಕರೆದರೆನೇ(ಯಾಕೆ ಬುಲ್ಬುಲ್ ಮಾತಡಕಿಲ್ವ ?) ಮಾತಾಡದೇ ಇರೋರು ನಮ್ ಜೊತೆ ಹೇಗೆ ಮಾತಾಡ್ಯಾರು?.

           ಒಂದು ಹುಡುಗೀನ ನೋಡಿದಾಗ love at first site ಆಗೋದು. ಆದ್ರೆ ಧೈರ್ಯ ಸಾಲದೇನೋ ಅಥವಾ ಅದು ಆಲ್ರೆಡಿ ರೆಸೆರ್ವಡ್ ಸೀಟ್ ಅಂತಲೋ ಹಿಂದೆ ಸರಿದು, ಅದು ಲವ್ವೇ ಅಲ್ಲ ಅನ್ನೋ ನಿರ್ಧಾರಕ್ಕೆ ಬರೋದು. ಆದ್ರೆ ನಿಜವಾದ ಪ್ರೀತಿ ಅನ್ನೋದು ಶುರು ಆಗೋದು ಗೊತ್ತೇ ಆಗೋಲ್ಲ. ಯೋಚನೆ ಮಾಡೋಕೂ ಸಮಯ ಕೊಡದೇ ಇರೋವಷ್ಟು ಫಾಸ್ಟ್ ಅದು. ಪ್ರೀತಿ ಮಾಡೋಕೆ ಕಾರಣ ಇರಲ್ಲ. ನನಗೂ ಒಂದು ಸಲ ಈ ತರಹದ true love ೨ ವರ್ಷದ ಹಿಂದೆ ಆಯಿತು. ಒಂದೇ ನೋಟಕ್ಕೆ ಕ್ಲೀನ್ ಬೋಲ್ಡ್ ಆಗಿ ಹೋಗಿದ್ದೆ ನಾನು. ಹೊಸ ಕಲ್ಪನೆ, ಹೊಸ ದಾರಿ, ಹೊಸ ದಿಗಂತಕ್ಕೆ ಮನಸು ಲಗ್ಗೆ ಹಾಕಿದ ಕ್ಷಣ ಅದು. "ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ, ನಿನ್ನೊಳಿದೆ ನನ್ನ ಮನಸು" ನನಗೆ ಗೊತ್ತಿಲ್ಲದೇ ನನ್ನ ಮನಸಿನ ಟೇಪ್ ರೆಕಾರ್ಡರ್ ನಲ್ಲಿ ಈ ಹಾಡು ಪುನ: ಪುನ: ಕೇಳಿ ಬಂತು. ಜೀವನ ಮುಗಿದು ಹೋಗೊವಷ್ಟರಲ್ಲಿ ಇನ್ನಷ್ಟು ಮಧುರ ನೆನಪುಗಳ ಮೂಟೆ ಕಟ್ಟಿಕೊಳ್ಳೋ ಮನಸಾಯಿತು. ಕಣ್ಣು ಮುಚ್ಚಿದರೂ, ಬಿಚ್ಚಿದರೂ ಕಾಣುವ ಅವಳ ನೆನಪೇ ನನ್ನ ಪ್ರೀತಿಗೆ ಸ್ಫೂರ್ತಿ. ನನ್ನ ನೆನಪಿನ ಬಾಂದಳದ ಬಿದಿಗೆ ಚಂದ್ರಮ, ನನ್ನ ಜೀವನದ ಖಾಲಿ ಹಾಳೆಯ ಮೇಲೆ ಬರೆದ ಸುಂದರ ಪದ್ಯ, ನನ್ನ ಯೋಚನೆಗಳ ಸೂತ್ರಧಾರಿ.. ನಿನಗೆ ನಾ ಅಭಾರಿ... ನನ್ನ ಪ್ರೀತಿ ಅನಂತ...

          ನನ್ನ ಪ್ರೀತಿಯ ಮಡದಿ - "ಪ್ರೇಮಿಗಳ ದಿನದ ಶುಭಾಶಯಗಳು"...