Wednesday, February 29, 2012

ನಂಬಿಕೆ - ದೇವರು


ನನ್ನ ಬ್ಲಾಗ್ ಗಳನ್ನ ಓದಿದಾಗ ನೀವೆಲ್ಲ ಗಮನಿಸಿರಬೇಕು, ಬಹಳಷ್ಟು ಕಡೆ "ಆ ದೇವರು" ಅನ್ನೋ ಪದ ಉಪಯೋಗಿಸಿರ್ತೀನಿ. ಹಾಗಂತ ನಾನೊಬ್ಬ ಭಾರಿ ದೈವಭಕ್ತ ಅಂತೇನಲ್ಲ. ನಾನು ಸಂಧ್ಯಾವಂದನೆ ಮಾಡೋದೇ ವರ್ಷಕ್ಕೆ ೨ ಅಥವಾ ೩ ಸಲ. ಹಾಗಾದ್ರೆ ನಾನು ದೇವರು ಅಂತ ಯಾಕೆ ಬರೀತೀನಿ ? ದೇವರು ಅಂದ್ರೆ ಯಾರು?
ಮೊನ್ನೆ ಯಾರೋ ನನ್ನ ಬ್ಲಾಗ್ ಓದಿ "ದೇವರ ಮ್ಯಾಲೆ ಬಹಳ ನಂಬಿಕಿ ಅದ ಅನ್ನಸ್ತದ ನಿಮಗ" ಅಂದ್ರು. ಅದಕ್ಕ ನಾ ಹೇಳಿದ್ದು, "ಹಾಗೇನಿಲ್ಲ, ನಂಬಿಕಿನ ನನ್ನ ದೇವರು" ಅಂದಿದ್ದೆ. ಹಾಗಂತ ನಾನು ದೇವಸ್ಥಾನಕ್ಕೆ ಹೋಗೋಲ್ಲ ಅಂತ ಅಲ್ಲ. ದೇವಸ್ಥಾನಕ್ಕೆ ಹೋಗ್ತಿನಿ. ನನಗೆ ತಿಳುವಳಿಕೆ  ಬಂದಾಗಿಂದ ಇಲ್ಲಿವರೆಗೂ ನನ್ನ ಜೀವನದಲ್ಲಿ, ದೇವಸ್ಥಾನಕ್ಕೆ ಹೋಗಿ, "ದೇವರೇ ನನ್ನ ಪಾಸ್ ಮಾಡು, ಅಥವಾ ಒಳ್ಳೆ ಕೆಲಸ ಕೊಡಿಸು, ಅಂದ್ರ ನಾನು ನಿನಗ ತೆಂಗಿನಕಾಯಿ ಒಡಿತೀನಿ, ಸಹಸ್ರನಾಮ ಮಾಡಿಸ್ತೀನಿ ಇನ್ನು ಹೇಳ್ಬೇಕಂದ್ರ ಸರ್ವ ಸೇವಾ ಮಾಡಿಸ್ತೀನಿ"  ಅಂತ ಯಾವತ್ತು ಕೇಳಿಲ್ಲ. ನಾನು ದೇವರ ಹುಂಡಿಗೆ ಹಣ ಹಾಕೋದು ದೇವರಿಗೆ ಅಂತ ಅಲ್ಲ. ಅಲ್ಲಿ ಕೆಲಸ ಮಾಡೋ ಪೂಜಾರಿಗಳಿಗೆ ಒಂದು ಹೊತ್ತಿನ ಊಟ, ನಾನು ಹಾಕೋ ದಕ್ಷಿಣೆಯಿಂದ ಸಿಗಲಿ ಅಂತ. ನಮ್ಮ ಅಜ್ಜಿ ಯಾವಾಗ್ಲೂ ಹೇಳೋರು, ನಿನ್ನ ಮನೆಗೆ ಬಂದೋರಿಗೆ ಏನು ಕೊಡ್ತೀರೋ ಬಿಡ್ತೀರೋ, ಒಂದು ಒಳ್ಳೆ ಊಟ ಮಾತ್ರ ಹಾಕಿ ಕಳಿಸಿ" ಅಂತ. ಆಗಿನ ಕಾಲಕ್ಕೆ ನಮ್ಮ ತಾತ ಮುತ್ತಾತರಿಗೆ  ತಾಕತ್ತಿತ್ತು, ಅನ್ನದಾನ ಮಾಡೋಕೆ ಅಂತಾನೆ ಸತ್ಯನಾರಾಯಣ ಪೂಜಾ, ಅದು-ಇದು ಅಂತ ನೂರು ಕಾರ್ಯಕ್ರಮ ಮಾಡಿ ಊಟ ಹಾಕೋರು. ನಾನಿರೋ ಈ costly ಜಮಾನದಲ್ಲಿ, ಬೆಳಿಗ್ಗೆ ಮಾಡಿದ್ದನ್ನೇ microwave ಅಲ್ಲಿ ಇಟ್ಟುಕೊಂಡು ಸಂಜೆ ತಿನ್ನೋ ಪರಿಸ್ಥಿತಿ ಇರಬೇಕಾದ್ರೆ. ಸಾವಿರ ಮಂದಿ ಕರೆದು ಊಟಕ್ಕ ಹಾಕೋದು ಕನಸಿನ ಮಾತು. ಅದಕ್ಕೆ ದೇವಸ್ಥಾನಕ್ಕೆ ಹೋದಾಗ ಸ್ವಲ್ಪ ದಾನ ಮಾಡ್ತೀನಿ. ಕೆಲವರಂತೂ ಈ ದಾನ ಅನ್ನೋದಕ್ಕೆ ಶ್ರೀಮಂತಿಕೆ ಬಣ್ಣ ಕೊಟ್ಟು, ದೊಡ್ಡ ದೊಡ್ಡ ಕಾಣಿಕೆ ಕೊಡೋದನ್ನ ನೋಡಿದ್ದೀನಿ. ಪಾಪ ಅನಿಸ್ತದೆ ನೋಡಿ. ದೇವರು ಆದಿ ಅಂತ್ಯ, ಆಕರ ಇಲ್ಲದವನು, ನಿರ್ಗುಣ ಸ್ವರೂಪಿ ಅನ್ನೋ ಸತ್ಯ ಗೊತ್ತಿದ್ರು ಅವನಿಗೆ ಕಣ್ಣು, ಮೂಗು ಕೈ ಕಾಲು ಎಲ್ಲ ಬಂಗಾರದಿಂದ ಮಾಡಿಸಿ, ಸತೋಷ ಪಡ್ತಾರೆ. ಅದು ಬಿಡಿ ಅವರಿಗೆ ಬಿಟ್ಟಿದ್ದು. ನಾನು ಹೇಳೋದು ಇಷ್ಟೇ, ನನ್ನ ಕೈಯಲ್ಲಿ 10 ರೂಪಾಯಿ ಇದ್ದು, ಒಂದು ಪಕ್ಷ ಅದನ್ನು ದೇವರಿಗೆ ಹಾಕೋದಾ  ಅಥವಾ ಹಸಿದವರಿಗೆ ಕೊಡೊದಾ  ಅಂತ ತೀರ್ಮಾನಾ ಮಾಡೋ ಪ್ರಸಂಗ, ನಾನು ದುಡ್ಡು ಕೊಡೋದು ಹಸಿದವರಿಗೆ. ಹಾಗಂತ ದಷ್ಟಪುಷ್ಟ ಇರೋ, ಕೈ ಕಾಲು ನೆಟ್ಟಗಿರೋ ಭಿಕ್ಷುಕರಿಗೆಲ್ಲ ನಾನು ದುಡ್ಡು ಕೊಡೋಲ್ಲ. ಯಾಕೆ ಅಂದ್ರೆ ಅದು ಅವರ ಆಯ್ಕೆ, ಪರಿಸ್ಥಿತಿ ಅಲ್ಲ.
ಅದಕ್ಕೆ ನಾನು ಹೇಳಿದ್ದು ನಂಬಿಕೆ ನನ್ನ ದೇವರು ಅಂತ. ನಾನು ಮಾಡೋ ಕೆಲಸದಲ್ಲಿ ನನಗೆ ನಂಬಿಕೆ ಇದ್ದರೆ, ಫಲಿತಾಂಶ ಏನೇ ಇರಲಿ ಅದು ನನಗೆ ತೃಪ್ತಿ ಕೊಡುತ್ತೆ. ದೇವರ ಮುಂದೆ ನಿಂತಾಗ ಎಲ್ಲರು ಕಣ್ಣು ಮುಚ್ಚಿ ಬೇಡಿಕೊಳ್ಳುತ್ತಾರೆ. ನಾನೂ ಕಣ್ಣು ಮುಚ್ಚಿಕೊಳ್ಳುತೇನೆ, ಆದ್ರೆ ನನಗೆ ಮುಂದೆ ಕಾಣೋದು ನನ್ನ ಪ್ರತಿರೂಪವೇ. ಅದೇ ನನ್ನ ನಂಬಿಕೆ. ಎಷ್ಟೇ ಸಲ ಕನ್ನಡಿ ಮುಂದೆ ನಿಂತಾಗ್ಲು, "what an amazing person you are !!" ಅಂತೀನಿ. ಇದು ಸ್ವಪ್ರಶಂಸೆ ಅಲ್ಲ, ನನ್ನ ಮೇಲೆ ನನಗಿರುವ ಗೌರವ, ಪ್ರೀತಿ. ನನ್ನ ಮೇಲೆ ನನಗೆ ಗೌರವ ಇದ್ರೆ ಮಾತ್ರ  ಬೇರೆಯವರು ನನ್ನ ಗೌರವಿಸ್ತಾರೆ. 
ಇನ್ನೂ ಕೆಲವರು, ಆ ಪೂಜೆ ಈ ಪೂಜೆ ಮಾಡಿಸಿದರೆ ಆ ಯೋಗ ಈ ಯೋಗ ಪ್ರಾಪ್ತಿಯಾಗುತ್ತೆ ಅಂತ ಬುರುಡೆ ಶಾಸ್ತ್ರ ಬಿಡ್ತಾರೆ. ಅದು ಮಾಡಿಸದೆ ಇದ್ರೆ ಕಂಟಕ ಅಂತ ಕೂಡ ಹೇಳ್ತಾರೆ. ನನಗೆ ಅನ್ನಿಸೋದು, ಈ ಕಂಟಕ ಅನ್ನೋದು ದೇವರಿಂದ ಬರೋದ? ದೇವರು ಅಂದ್ರೆ ಕಾಯೋನು ತಾನೇ. ನನ್ನ ಕೆಲಸ ನಾನು ಸರಿಯಾಗಿ ಮಾಡಿದ್ರೆ ಕಂಟಕ ಯಾಕೆ ಬರುತ್ತೆ? ಅಕಸ್ಮಾತ್ ಬಂತು ಅಂತಾನೆ ಇಟ್ಟುಕೊಳ್ಳಿ, ಈ ತಾಯ್ತ, ದಾರ ತೋರಿಸಿದರೆ ಹೋಗಿ ಬಿಡುತ್ತ? ಅಲ್ಲೂ ಕೂಡ ಕೆಲಸ ಮಾಡ್ತಾ ಇರೋದು ನಂಬಿಕೇನೆ. ನನ್ನ ಜೀವನಕ್ಕೆ ನಾನೇ ಹೀರೋ, ಎಂಥದ್ದೇ ಪರಿಸ್ಥಿತಿ ಬಂದ್ರು, ಒಂದು ವೇಳೆ ನೆರಳು ಬಿಟ್ಟು ಹೋದರು ನಂಬಿಕೆ ಬಿಟ್ಟು ಹೋಗೋಲ್ಲ. ಇಂಥ ನಂಬಿಕೆ ಇದ್ದೋರಿಗೆ ಎಲ್ಲವನ್ನೂ ಎದುರಿಸೋ ಧೈರ್ಯ ಇರುತ್ತೆ. ಹಾಗಂತ ನನ್ನ ನಾಸ್ತಿಕ ಅಂತಲೂ ಕರೀಬೇಡಿ, ಯಾಕೆ ಅಂದ್ರೆ ನನ್ನ ಲೆಕ್ಕದಲ್ಲಿ ನಂಬಿಕೆ ಇಲ್ಲದವನು ನಾಸ್ತಿಕ.


ಮತ್ತೆ ಸಿಗ್ತೀನಿ....

ನಿಮಗೂ ಬೇಜಾರಾಯ್ತ?

ಮೊನ್ನೆ ಮಧ್ಯಾನ್ನ ಊಟ ಮಾಡಿ ಶಿವಾ ಅಂತ ಕೂತಿದ್ದೆ. ಇಲ್ಲಿ ಚೀನಾದಲ್ಲಿ ಅದೊಂದು ಥರ ಪದ್ಧತಿ, ನಮ್ಮಲ್ಲಿ ಊಟ ಅದ ಮೇಲೆ ಎಲೆ ಅಡಿಕೆ ಸುಣ್ಣದ ಡಬ್ಬಿ ಇಟ್ಟುಕೊಂಡು ಹರಟೆ ಹೊಡಿತ ಕೂಡೋ ಥರ, ಇವರು ಡೆಸ್ಕ್ ಮೇಲೆ ತಲೆ ಇತ್ತು ನಿದ್ದೆ ಮಾಡ್ತಾರೆ. ಪಾಪ ದಿನ ಇಡೀ ಲ್ಯಾಬಿನಲ್ಲಿ ಓಡಾಡೋಕೆ ತಾಕತ್ ಬೇಕಲ್ಲ. ಅದಿರಲಿ, ಏನೋ ಮೇಲ್ ಚೆಕ್ ಮಾಡ್ತಾ ಇದ್ದೆ. 
ಇದ್ದಕ್ಕಿದ ಹಾಗೆ ನನಗೆ ಪರಿಚಯದ, ಪರಿಚಯ ಏನು ತಮ್ಮ ಅಂತಲೇ ಅನಬಹುದು, 
ಒಂದು ಮೆಸೇಜ್ ಮಾಡಿದ. "ಅಣ್ಣ ಏನಾದ್ರೂ, inspirational  ಕಥೆ ಹೇಳೋ, 
ಯಾಕೋ ಬೇಜಾರಾಗಿದೆ" ಅಂದ. ನಾನು ಈ ಬೇಜಾರುಗಳಿಗೆಲ್ಲ ಔಷಧಿ ಕೊಡೊ 
ಡಾಕ್ಟರ್ ಇದ್ದ ಹಾಗೆ. ಸುಮ್ಮನೆ ಬಿಡ್ತೀನ, ಯಾವ ಕಾರಣಕ್ಕೆ ಬೇಜಾರಾಗಿದೆ ಹೇಳು 
ಅದಕ್ಕೆ ಹೊಂದುವ ಕಥೆ ನಾನು ಹೇಳ್ತಿನಿ ಅಂದೇ. ಈ ಬೇಜಾರುಪಟ್ಟುಕೊಳ್ಲೋದರಲ್ಲಿ  
ನಾನು phd ಮಾಡಿದ್ದೀನಿ ಅನ್ಸುತ್ತೆ. ನಾನೇ ಏನು ಎಲ್ಲ emotional fools  ಮಾಡೋ ಕೆಲ್ಸಾನೆ ಅದು. "ಪರ್ಸನಲ್ ವಿಷಯಕ್ಕೆ" ಅಂದ. ನಾನು ಸರಿ ಅಂತ ಹೇಳಿ, ನನ್ನ ಪರ್ಸನಲ್ ಲೈಫ್ ನಲ್ಲಿ ಬೇಜಾರುಗೊಳಿಸಿದ್ದ  ಘಟನೆಗಳನ್ನ 
ನೆನೆಸಿಕೊಂಡೆ. ಆದರು ಅವುಗಳು ಇವನಿಗೆ ಎಷ್ಟು ಸೂಕ್ತ ಆನೋದು 
ಗೊತ್ತಾಗಲಿಲ್ಲ. ತಡೀಡೆ ಕೇಳ್ದೆ, "ಏನಾಯ್ತೋ?". "ಏನಿಲ್ಲ ನನ್ನ ಫ್ರೆಂಡ್ ಬಂದು ಎಗ್ಗಮಗ್ಗ ಬೈದ. ಸಕತ್ ಬೇಜಾರ್ aytu, ನಾನು ಯಾರನ್ನ ಹಚ್ಹ್ಕೊತೀನೋ ಅವರಿಂದ ಹೀಗೆ ಆಗುತ್ತೆ. ದೇವರು ಮನೆಗೆ ಹೋಗಿ ಅತ್ತುಬಿಟ್ಟೆ" ಅಂದ. ಅವನ ಮನಸ್ಸಿಗೆ ಆದ ವೇದನೆ ಅರ್ಥ ಆಗೋಕ್ಕೆ ಬಹಳ ಹೊತ್ತು 
ಬೇಕಾಗಲಿಲ್ಲ ನನಗೆ, ಒಂದೊಮ್ಮೆ ನಾನೂ ಇದೆ ಮಾತು ಹೇಳಿದ್ದು ನೆನಪಾಯಿತು.
ಎಷ್ಟು ವಿಚಿತ್ರ ಅಲ್ಲ ಜೀವನ, ನಾವು ಇಷ್ಟ ಪಡೋ ವ್ಯಕ್ತಿಗಳು, ವಸ್ತುಗಳು ನಮ್ಮನ್ನ ಕಷ್ಟಕ್ಕೆ ಎದೆ ಮಾಡಿದಾಗ ಮನಸ್ಥಿತಿ ಯಾವ ಮಟ್ಟಕ್ಕೆ ಹಾಳಾಗುತ್ತೆ ಅಂದ್ರೆ, ಅದು ಅನುಭವಿಸಿದವರಿಗೆ ಗೊತ್ತು. ನನಗೆ ಅನ್ನಿಸಿದ ಮಟ್ಟಿಗೆ ಈ ಬೇಜಾರು ಅನ್ನೋದು ಅಪೇಕ್ಷೆಯ ಮೂಲದಿಂದ ಹುಟ್ಟುತ್ತೆ. ನಾವು ಯಾರಾದ್ರೂ ವ್ಯಕ್ತಿ ನನ್ನ ಜೊತೆಗೆ ಹೀಗಿದ್ರೆ ಚೆನ್ನಾಗಿರುತ್ತೆ ಅಂತ ಊಹಿಸಿಕೊಂಡು ಅದನ್ನೇ ಅಪೇಕ್ಷೆ ಪಡ್ತಾ ಇರ್ತೀವಿ. ಅದೇ ನಮ್ಮ ಆಸೆ ಒಂದಿಷ್ಟು ಹೇರಾಫೇರಿ 
ಆದಾಗ ಆಘಾತದ ಅನುಭವ ಕಟ್ಟಿಟ್ಟ ಬುತ್ತಿ. ಅದಕ್ಕೆ ಅಪೇಕ್ಷೆ ಪದೊದನ್ನ ನಿಲ್ಲಿಸಿದರೆ ನಿರಾಸೆಗಳು ಕಮ್ಮಿ ಆಗಬಹುದೇನೋ.
ಹಾಗಂತ ನನ್ನ ಭ್ರಾತೃನಿಗೆ ಹೇಳ್ದೆ, "ಅವರಿವರು ಅಂದ್ರು ಅಂತ ತಲೆ ಕೆಡಿಸಿಕೊಳ್ಳಬೇಡ. ನಿನಗೆ ಏನು ಬೇಕೋ ಅದನ್ನು ಮಾಡು. ಅವನು ನಿನಗೆ ಬೇಕಾ? ಹೋಗಿ ಮಾತಾಡಿ ಸರಿ ಮಾಡ್ಕೋ, ಬೇಡವ? ಬಿಟ್ಟಾಕು. ಒಂದು ಮಾತ್ರ ತಿಳಿದುಕೋ, ನಿನ್ನ ಜೀವನದಲ್ಲಿ ನಿನ್ನ ನೀ ಅರ್ಥ ಮದ್ಕೊಂಡಷ್ಟು  ಬೇರೆ ಯಾರು ಅರ್ಥ ಮಾಡ್ಕೊಳ್ಳೋದು ಸಾಧ್ಯ ಇಲ್ಲ. ನೀನು ಅತ್ತು ಬಿಟ್ಟೆ ಅಂತ ಹೇಳ್ದೆ ಅಲ್ಲ, ಒಳ್ಳೇದೆ. ಆದ್ರೆ ಅದನ್ನ ಒಂದು positive ಆಗಿ ಪರಿವರ್ತನೆ ಮಾಡು. ಎಲ್ಲ ಸರಿ ಹೋಗುತ್ತೆ ಅಂದೆ. ಹೀಗೆ ನನ್ನ ಭಾಷಣ ಮುಗಿಸಿದೆ. ಯಾರೋ ನನಗೆ ಹೇಳಿದ್ದು, ನಾನು ಕೇಳಿದ್ದು, ನನ್ನ ಅನುಭವಕ್ಕೆ ಬಂದೊದ್ದು ಅವನಿಗೆ ಸ್ವಲ್ಪ ಸಮಾಧಾನ ತಂದಿದ್ರೆ ಅಷ್ಟೇ ಸಾಕು.


ಕಥೆ ಓದಿ ನಿಮಗೂ ಬೇಜಾರಾಯ್ತ? ಮತ್ತೆ ಸಿಗ್ತ್ಹಿನಿ...

Monday, February 27, 2012

ಬರೀ ಚಿಕನ್ ಮಟನ್ ?

ಈ ದೇಶ ಬಿಟ್ಟು ವಿದೇಶಕ್ಕೆ ಹೋದ್ರೆ ಸಸ್ಯಹಾರಿಗಳಿಗೆ ಒಳ್ಳೆ ಫಜೀತಿ. ಬರೀ ಸೊಪ್ಪು ತರಕಾರಿ ತಿಂದೋರಿಗೆ, ಅಲ್ಲಿ ಮೂಲೆ, ಮಾಂಸ ಕೂಡಲೇ ವಾಕರಿಕೆ ಬರೋದು ಸಹಜ.
ಆದ್ರೆ ಅಲ್ಲಿಯ ಆಹಾರ ಪದ್ಧತಿಗೆ ತಕ್ಕದಾಗಿ ಅವರು ಅವಲಂಬಿಸಿರುವ ತಿನಿಸುಗಳು
ಅವರಿಗೆ ಸೂಕ್ತ. ಹೀಗೆ ವಿದೇಶಕ್ಕೆ ಹೋಗಿ ಮಾಂಸಾಹಾರದ ನೂರಾರು ತಿನಿಸುಗಳ
ಮಧ್ಯ ಒಂದಿಷ್ಟು ಸಸ್ಯಾಹಾರಿ ಆಹಾರ ಹೆಕ್ಕಿ ತಿಂದ ಅನುಭವದ ಬಗ್ಗೆ ಹೇಳ್ತಿನಿ ಕೇಳಿ.
ನಾನಿದ್ದ ಹೋಟೆಲ್ ಒಂದರಲ್ಲಿ, ಬೆಳಿಗ್ಗೆ ಬ್ರೇಕ್ ಫಾಸ್ಟ್ ಮತ್ತು ಸಂಜೆ ಸ್ನ್ಯಾಕ್ಸ್ ಬಿಟ್ಟಿ ಅಂದ್ರೆ
complementory. ಬೆಳಿಗ್ಗೆ ಎದ್ದ ತಕ್ಷಣ ಅಲ್ಲಿ ನಾನು ತಿನುತ್ತಿದ್ದುದು ೨ ಬಾಳೆಹಣ್ಣು, ೨ ಬ್ರೆಡ್ಡು ಜೊತೆಗೆ ಸ್ವಲ್ಪ ಜಾಮು, ಆಮೇಲೆ ಒಂದು ಗ್ಲಾಸ್ ಆರೆಂಜ್ ಜೂಸ್. ಅದೇನೋ ಗೊತ್ತಿಲ್ಲ, ಅಲ್ಲಿ ಓಡಾತಕ್ಕೋ, ವಾತಾವರಣದ ಪ್ರಭಾವಕ್ಕೋ, ಎಲ್ಲಿಲ್ಲದ ಹಸಿವು ಆಗ್ತಾ ಇತ್ತು. ಬೆಳಿಗ್ಗೆ ದಿನಚರಿ ತರಹ ಸಂಜೆ ಕೂಡ ಬಿಟ್ಟಿ ತಿಂಡಿ ಸಿಗ್ತಾ ಇತ್ತು ಅಂತ ಹೇಳಿದ್ನಲ್ಲ, ಅದರ ಕಥೆನು ಹೇಳ್ತಿನಿ ಕೇಳಿ. ನಾನು ಆಫೀಸಿಂದ ಹೋಟೆಲಿಗೆ ವಾಪಸಾಗ್ತಾ ಇದ್ದುದು ಸಂಜೆ ೫.೩೦ಕ್ಕೆ,  ಬಂದ ತಕ್ಷಣ ಅಲ್ಲೇ  ಇದ್ದ ಕಿಚನ್ ಗೆ ದಂಡೆತ್ತಿ ಹೋಗ್ತಾ ಇದ್ದೆ. ಹೋದ ತಕ್ಷಣ ಮೊದಲು ಮಾಡುತ್ತಿದ kelasa ಫುಡ್ ಕೌಂಟರ್ ಸುತ್ತಾಡಿ, ಏನೇನಿದೆ ಇವತ್ತು ಅಂತ ನೋಡೋದು.
ಬರೀ ನೋಡಿದ್ದು ಸಾಲದು ಅಂತ ಅಲ್ಲೇ ಇದ್ದ "ಚಂಪಾ" - ಅಡುಗೆಯವಳು.  ಅವಳಿಗೆ ಪ್ರೀತಿಯಿಂದ ನಾನು ಇಟ್ಟ ಹೆಸರು, ನಾನು ಅವಳನ್ನ ಕೇಳೋದು, ಇದರಲ್ಲಿ ಚಿಕನ್ ಇದೆಯಾ, ಮಟನ್ ಇದೆಯಾ ಅಂತ? ಅದಕ್ಕವಳು ಹೌದು ಅಥವಾ ಇಲ್ಲ ಅಂತ ಹೇಳ್ತಾ ಇದ್ದಳು. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು  ಅಂತ ನಮ್ಮ ಶಾಲೇಲಿ ಕಲಿಸಿದ್ದು ಇದಕ್ಕೆ ಅನಿಸ್ತ ಇತ್ತು. ಈ ಪ್ರಕಾರ ನಡೀತಾ ಇದ್ದ ನನ್ನ ದಿನಚರಿಗೆ ಒಂದು ದಿನ ಶಾಕ್  ಬಡೀತು. ಯಥಾಪ್ರಕಾರ ಆಫೀಸಿಂದ ಬಂದೆ, ನೋಡಿದ್ರೆ ದೊಡ್ಡ ದೊಡ್ಡ ದಪ್ಪ ಮೆಣಸಿನಕಾಯಿ ಒಳಗಡೆ ಏನೇನೋ ಮಸಾಲೆ
ತುಂಬಿ, ಮೇಲೆ ಒಂದು ಟೋಪಿ ಬೇರೆ ಹಾಕಿದ್ದಾರೆ. ನೋಡೋಕೆ "ತುಂಬುಗಾಯಿ ಪಲ್ಯ" ಥರ ಇತ್ತು. ಬಾಯಲ್ಲಿ ನೀರು ಬರ್ತಾ ಇದೆ, ಜೊತೆಗೆ ಹೊಟ್ಟೆ ಚುರುಚುರು ಅಂತ ಇದೆ. ಇವತ್ತು ನನಗೆ ಹಬ್ಬ ಅಂತ ಮನಸ್ಸಲ್ಲಿ ಅನ್ಕೊಂಡೆ. ಕೈ ತೊಳೆದುಕೊಂಡು ಒಂದು ತಟ್ಟೆ ಕೈಯಲ್ಲಿ ಹಿಡುಕೊಂಡು ಸವಟು ಬಾಣಲಿಗೆ ಹಾಕಿ ಇನ್ನೇನು ಎತ್ತಿಕೊಂಡೆ ಬಿಡೋಣ ಅನ್ನೋ ಅಷ್ಟರಲ್ಲಿ,
ಇನ್ನೊಮ್ಮೆ ಖಾತ್ರಿ ಮಾಡಿಕೊಳ್ಳೋ ಮನಸಾಯಿತು. ಚಂಪಾ ಅಲ್ಲೇ  ಇದ್ಲು, ಅವಳನ ಕೇಳ್ದೆ.  ಇದರಲ್ಲಿ ಚಿಕನ್, ಮಟನ್ ಏನಾದ್ರೂ  ಇದೆಯಾ ಅಂದೇ. ಅವಳು ನಗುನಗುತ್ತ ಇಲ್ಲ ಅಂದ್ಲು.
"ಅಯ್ಯೋ ನಿನ್ನ ಬಾಯಿಗೆ ಸಕ್ಕರೆ ಹಾಕ" ಅಂತ ಅಂದವನೇ ಬಾಣಲಿಗೆ ಮತ್ತಷ್ಟು ಹುರುಪಿನಿಂದ ಕೈ ಹಾಕಿದೆ. ಅದನ್ನೇ ದಿಟ್ಟಿಸುತ್ತ ನಿಂತಿದ್ದ ಚಂಪಾ "But, It has  pork  in  it" ಅಂದ್ಲು. ಈ ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ ಅನ್ನೋ ಗಾದೆ ಮಾತು ಅವತ್ತೇ ನನಗೆ ಅರಿವಾಗಿದ್ದು. "ನಿನ್ನ ಬಾಯಿಗೆ ಸಕ್ಕರೆ ಬದ್ಲು ಮಣ್ಣ ಹಾಕ" ಅಂತ ಮನಸ್ಸಲ್ಲಿ ಅನ್ಕೊಂಡು. ತಟ್ಟೆ ಅಲ್ಲೇ ಇಟ್ಟು ಪಕ್ಕದಲ್ಲಿ ಇಟ್ಟಿದ್ದ ನೀರು ಕುಡಿದು ನನ್ನ ರೂಮಿಗೆ ಬಂದೆ. 
ನನಗೆ ಅದು ತಿನ್ನೋಕೆ ಸಿಗಲಿಲ್ಲ ಅನ್ನೋದು ಬೇಜಾರಾಗಲಿಲ್ಲ. ಆದ್ರೆ ಕಳೆದ ೧೫ ದಿನಗಳಿಂದ, ಪ್ರತಿ ಬಾರಿ ಕೇಳಿದಾಗಲು ಅದರಲ್ಲಿ ಚಿಕನ್ ಇಲ್ಲ ಮಟನ್ ಇಲ್ಲ ಅಂತಾನೆ ಹೇಳಿದಳು ಅವಳು. ಇವತ್ತು ಹೇಳೋ ಹಾಗೆ ಇನ್ನ್ಯವತ್ತೋ pork ಇದೆ ಅಂತ  ಹೇಳೋದನ್ನ ಮರೆತಿದ್ದರೆ? ವರಾಹ ದೇವರು ನನ್ನ ಉದರದಲ್ಲಿ ಹೋಗಿ ಈಗಾಗಲೇ ನೆಲೆಸಿದ್ದಾರೆಯೇ ? ಬಹಳಷ್ಟು ಪ್ರಶ್ನೆಗಳು !!! ಕೊನೆಗೆ ಒಂದು ನಿರ್ಧಾರ ಮಾಡಿದೆ, ನಾಳೆಯಿಂದ ಅವಳನ್ನು ಕೇಳೋವಾಗ, ಇದು ಬರೀ vegitables ಇಂದ ಮಾಡಿದ್ದ? ಅಂತ :)

Saturday, February 25, 2012

ಕಣ್ಣ ಕಾಂತಿ

ಚೀನಾಗೆ ಬ೦ದು ಆಗತಾನೆ ಒಂದು ವಾರ ಆಗಿತ್ತು. ಬೆಳಿಗ್ಗೆ ಎದ್ದು ಆಫೀಸ್'ಗೆ ಹೋಗುವುದರಿಂದ ಹಿಡಿದು ಸಂಜೆ ವಾಪಸ್ ಹೋಟೆಲಿಗೆ ಬರೋವರೆಗೂ ಎಲ್ಲಿ ನೋಡಿದರು ಬರೀ ಚಿಕ್ಕ ಚಿಕ್ಕ ಚೀನೀ ಕಣ್ಣುಗಳೇ ಕಾಣುತ್ತಿದ್ದವು. ಆವತ್ತೊಂದು ದಿನ ಆಫೀಸ್'ಗೆ ಹೋಗಿ ಇನ್ನೂ ೧೦ ನಿಮಿಷ ಕೂಡ ಆಗಿರಲಿಲ್ಲ. ನನ್ನ ಕಣ್ಣ ಎದುರಿಗೆ ಆಶ್ಚರ್ಯವೊಂದು ನಡೆದಿತ್ತು. ಬೊಗಸೆ ಕಣ್ಣಿನ ಒಬ್ಬ ಸುಂದರಿ ನನ್ನ ಕಣ್ಣ ಎದುರಿಗೆ ಬ೦ದು ನಿಂತಿದ್ಳು. ಈ ಕಣ್ಣು ಒಂದು ತರಹ ವಿಚಿತ್ರ ಕಣ್ರೀ. ಮನುಷ್ಯನ ಮನಸ್ಸಿಗೂ ಕಣ್ಣಿಗೂ ಡೈರೆಕ್ಟ್ ಲಿಂಕ್ ಇಟ್ಟುಬಿಟ್ಟಿದ್ದಾನೆ   ಕಿಲಾಡಿ ದೇವರು. ಬಾಯಿಯಿಂದ ಹೇಳಲಾಗದ ಅನೇಕ ವಿಷಯಗಳು, ಭಾವನೆಗಳು ಎಷ್ಟೋ ಸಲ ಬರಿ ಕಣ್ಣಿನಿಂದ ಮಾತ್ರ ಹೇಳಬಹುದು. ಒಬ್ಬರ ಮೇಲಿನ ಪ್ರೀತಿ, ಅಸೂಯೆ, ಅನುಕಂಪ, ಅಸಡ್ಡೆ ಎಲ್ಲವನ್ನೂ ಪ್ರತಿಫಲಿಸುವ ಗುಣ ಕಣ್ಣಿಗೆ ಮಾತ್ರವೇ. ಇರಲಿ ನಾನು ನೋಡಿದ ಕಣ್ಣಿನ ವಿಷಯಕ್ಕೆ ಬರೋಣ. ಅಷ್ಟು ಜನರ ಚಿಕ್ಕ ಕಣ್ಣುಗಳ ಮಧ್ಯ ಈ ಥರ ಎದ್ದು ಕಾಣುವ ಬೊಗಸೆ ಕಣ್ಣುಗಳು ಯಾರನ್ನಾದರೂ ಸೆರೆಹಿಡಿಯುವುದು ಸಾಮಾನ್ಯ. ನನಗೆ ಗೊತ್ತಿಲ್ಲದೇ, ಆ ಕಣ್ಣುಗಳ ಜೊತೆ ಮಾತನದಲಾರ೦ಭಿಸಿದ್ದವು  ನನ್ನ ಕಣ್ಣುಗಳು. ಇಂಥ ಕಣ್ಣುಗಳನ್ನ ಯಾವಾಗ್ಲೂ ನೋಡ್ತಾನೆ ಇರ್ಬೇಕು ಅನ್ನೋ ಆಸೆ ಆಯಿತು. ನನ್ನ ಈ ಅಕ್ಷಿ ವೀಕ್ಷಣೆ ನಡೆಯುತ್ತಿದ್ದಾಗ ಪಕ್ಕದ ಕಾಬಿನಿನಿಂದ ಬಂದ ನನ್ನ ಸಹೋದ್ಯೋಗಿ ನಾನು ಎವೆ ಇಕ್ಕದೆ ನೋಡುತ್ತಿದ್ದ ಹುಡುಗಿಯನ್ನು ನೋಡಿ "she is beautiful" ಅಂದ. ಸ್ವಲ್ಪ ನಕ್ಕು "Yes. She is my wife" ಅಂದೇ. ಹೌದು ಮೊಬೈಲ್ ನಲ್ಲಿ ನನ್ನ ಹೆಂಡತಿಯ ಭಾವಚಿತ್ರ ನೋಡ್ತಾ ಇದ್ದೆ ನಾನು !!!!