Wednesday, October 9, 2013

ಲವ್ ಪ್ರಾಬ್ಲಂ

ತುಂಬಾ ದಿನಾ ಆಯ್ತು ಬ್ಲಾಗಿನ ಬಾಗಿಲು ತೆರೆದು. ಸಿಕ್ಕಾಪಟ್ಟೆ ಕೆಲಸ, ಜೊತೆಗೆ   ಹೊಸ ನಾಟಕಗಳನ್ನು ಬರೆಯೋದರಲ್ಲಿ ಬಿಜಿಯಾಗಿದ್ದೆ. ತೊಂದ್ರೆ ಇಲ್ಲ ಮುಂದುವರಿಸೋಣ.   

ಮೊನ್ನೆ ನನ್ನ ಮಿತ್ರನ ಮಿತ್ರನೊಬ್ಬ ತನ್ನ ಲವ್ ಪ್ರಾಬ್ಲ್ಂ ನನ್ನ ಹತ್ರ ಹೇಳ್ಕೊಂಡ. "ಲವ್ ಪ್ರಾಬ್ಲಂ" ನೋಡಿ ಜಂಟಿ ಪದದ ಥರ ಕಾಣುತ್ತೆ. ಲವ್ ಗೆ ಪ್ರಾಬ್ಲಂ ಇರಬೇಕಾ? ಅನ್ನೋ ಪ್ರಶ್ನೆಗೆ ಉತ್ತರ ಹುಡುಕಲು ಹೊರಟಾಗ, ನನ್ನ ಮನಸ್ಸಿಗೆ ಅನ್ನಿಸಿದ ಕೆಲವು ವಿಷಯಗಳನ್ನು ಹಂಚಿಕೊಳ್ತೀನಿ. 

ಒಂದು ಹುಡುಗ, ಒಂದು ಹುಡುಗಿ, ವರ್ಷಗಳ ಪರಿಚಯ, ಸ್ನೇಹ, ನಂಬಿಕೆ, ಇನ್ನೂ ಅನೇಕ ಹೇಳಲಾಗದ ಭಾವನೆಗಳ ಸುಂದರ ಹೂಗುಚ್ಛ ಈ ಲವ್. ದೇಶ, ಭಾಷೆ, ವಯಸ್ಸು, ಅಂತಸ್ತು ಈ ಎಲ್ಲವನ್ನೂ ಮೀರಿ ನಿಂತ ಸುಂದರ ಅನುಭವ ಈ ಲವ್. ಇಷ್ಟೆಲ್ಲ ಸುಂದರತೆ  ಜೊತೆಗೆ ಒಂದೇನಾದ್ರು ಕೊಂಕು ಇರಲೇಬೇಕಲ್ಲ. ಚಂದ್ರನಿಗೆ ಕಪ್ಪು ಕಲೆ, ಗುಲಾಬಿಯ ಹೂವಿಗೆ ಮುಳ್ಳು, ಹೀಗೆ ಲವ್ ಗೆ ಕೂಡ ಒಂದು ಕೊಂಕು ಇದ್ದೇ ಇದೆ. ತಮ್ಮ ಲವ್ ನ ಯಶಸ್ವಿಗೊಳಿಸಬೇಕು ಅನ್ನೋ ಆಸೆ ಹೊತ್ತ ಮನಸುಗಳಿಗೆ ತಣ್ಣೀರು ಎರಚೋ ಸಮಾಜ, ತಂದೆ-ತಾಯಿ, ಮತ್ತಿನ್ನ್ಯಾರೋ. ಇವರೆಲ್ಲ ಪ್ರೀತಿಗೆ ಬರುವ ಎಡರು ತೊಡರುಗಳು. ಯಾಕೆ ಈ ಪ್ರೀತಿಗೆ ಇಷ್ಟು ಅಡ್ದಿ ?

ಪಾಯಿಂಟ್ ೧ : ಹುಡುಗನ/ ಹುಡುಗಿಯ ಜಾತಿ, ಊರು-ಕೇರಿ, ಆಚಾರ-ವಿಚಾರ, ಇವೆಲ್ಲ ಇಬ್ಬರ ಮನೆಯ ಹಿರಿಯರಿಗೆ ಸರಿ ಹೋಗೋದಿಲ್ಲ. 

ನನ್ನ ನಿಲುವು : ಅಲ್ಲ ಸ್ವಾಮೀ... ಜಾತಿ ಅನ್ನೋದು ಮನುಷ್ಯ ಮಾಡಿಕೊಂಡಿದ್ದು ಅಲ್ಲವೇ? ಜಾತಿಯ ಮೂಲಕ ಮನುಷ್ಯನ ವ್ಯಕ್ತಿತ್ವ ಅಳೆಯಲು ಸಾಧ್ಯವೇ? ೨೧ನೇ ಶತಮಾನದಲ್ಲಿ ಬದುಕು ಸಾಗಿಸುತ್ತಿರೋ ನಾವು, ಜಾತಿ ಅನ್ನೋ ಬೇಲಿ ಹಾಕಿಕೊಳ್ಳಬೇಕ? "ಕುಲ ಕುಲ ಕುಲವೆಂದು ಹೊಡೆದಾಡದಿರಿ", "ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ?", "ಮನುಜ ಮತ ವಿಶ್ವ ಪಥ" ಈ ಎಲ್ಲ ಸಾಲುಗಳು ಕೇವಲ ಕೇಳಿ ಮರೆತು ಹೋಗೋದಕ್ಕ?

ಪಾಯಿಂಟ್ ೨ :  ಹುಡುಗನ/ಹುಡುಗಿಯ ಆರ್ಥಿಕ ಸ್ಥಿತಿಗತಿ. 
ನನ್ನ ನಿಲುವು:  ಅಲ್ಲ ಸ್ವಾಮೀ... ಹುಡುಗ, ಹುಡುಗಿ ಇಷ್ಟ ಪಟ್ಟ ಮೇಲೆ ದುಡ್ಡು ಕಾಸು ಯಾವ ಲೆಕ್ಕ? ದುಡ್ಡಿರೋ ಎಷ್ಟೋ ಜನ, ಕ್ಷಣ ಮಾತ್ರದಲ್ಲಿ ಬೀದಿಗೆ ಬಂದಿಲ್ಲವೇ? ಅದೇ ರೀತಿ ಕಡುಬಡವ ಶ್ರೀಮಂತನಾಗಿ ಬೆಳೆದಿಲ್ಲವೇ? ದುಡ್ಡು, ಅಂತಸ್ತು ಕ್ಷಣಿಕ, ಆದ್ರೆ ಪ್ರೀತಿ ಅನಂತ, ಅವಿರತ. 

ಪಾಯಿಂಟ್ ೩ : ತಂದೆ ತಾಯಿಯರ ಆಸೆ (ಹಠ) 
ನನ್ನ ನಿಲುವು :  ಹುಟ್ಟಿದ ಮರುಕ್ಷಣದಿಂದ ಹಾಕಿಕೊಳ್ಳುವ ಡೈಪರ್ ನಿಂದ ಹಿಡಿದು, ಓಡಿಸೋ ಗಾಡಿ, ಶರ್ಟು, ಪ್ಯಾ೦ಟ, ಹೇರ್ ಸ್ಟೈಲ್ ಎಲ್ಲವನ್ನೂ ತಮ್ಮ ಇಷ್ಟದಂತೆ ಕೊಡಿಸುತ್ತ ಬಂದವರಿಗೆ, ತಮ್ಮ ಅಳಿಯ/ ಸೊಸೆಯನ್ನೂ ತಾವೇ ಹುಡುಕಿ, ಆರಿಸಬೇಕು ಅನ್ನೋ ಆಸೆ. ಆಸೆ ಮಿತಿಯಲ್ಲಿ ಇದ್ದರೆ ಓಕೆ, ಆದ್ರೆ ಮಿತಿ ಮೀರಿದರೆ ಆ ಆಸೆ ಹಠ ಆಗಿಬಿಡುತ್ತದೆ. ಈ ಹಠ ತಮ್ಮ ಸ್ವಂತ ಮಕ್ಕಳ ಸಂತೋಷಕ್ಕೆ ಅಡ್ಡಿ ಆಗಲಿದೆ ಅನ್ನೋ ಚಿಕ್ಕ ವಿವೇಚನೆ ದೊಡ್ಡವರಿಗೆ ಬರೋದಿಲ್ಲ ಯಾಕೆ?

ಒಟ್ಟಾರೆ ಹೇಳ್ಬೇಕು ಅಂದ್ರೆ, ಮೇಲಿನ ಮೂರು ಅಂಶಗಳನ್ನು ಮೀರಿ ಯೋಚನೆ ಮಾಡಿದ್ದಲ್ಲಿ ಮಾತ್ರ ನಿಜವಾದ ಪ್ರೀತಿಗೆ ಯಶಸ್ಸು ಸಿಗೋದು ಸಾಧ್ಯ. ಹುಡುಗ, ಹುಡುಗಿ ಪ್ರೀತಿಸಿ ತಮ್ಮ ಬಾಳು ತಾವು ಕಟ್ಟಿಕೊಳ್ಳುತ್ತಾರೆ ಅನ್ನೋ ಭರವಸೆ ಇದ್ರೆ ಯಾಕೆ ಅಡ್ಡಿ ಪಡಿಸಬೇಕು? ತಾವು ಆಯ್ಕೆ ಮಾಡಿಕೊಂಡ ಜೀವನದ ಬಗ್ಗೆ ಅವರಿಗೆ ಒಲವು ಇರುತ್ತದೆ, ಅದನ್ನು ಸರಿಯಾದ ರೀತಿಯಲ್ಲಿ ಸಾಕಾರಗೊಳಿಸುವ ಬಗ್ಗೆ ಪ್ರಯತ್ನ ಇರುತ್ತದೆ. ಜೀವನ ಹೇಗೋ ನಡೆದು ಹೋಗುತ್ತದೆ ಅನ್ನೋದರ ಬದಲು, ಜೀವನ ಹೀಗೆ ಇರಬೇಕು ಅನ್ನೋ ಗುರಿ ಹುಟ್ಟುತ್ತದೆ. 

ಇವೆಲ್ಲವುಗಳನ್ನು ಮೀರಿ ಪ್ರೇಮಿಗಳನ್ನು ದೂರಮಾಡುವ ಪ್ರಯತ್ನಗಳು ನಡೆಯುತ್ತವೆ. ಸಮಾಜ, ತಂದೆ-ತಾಯಿಯರನ್ನ ಎದುರಿಸಿ/ ವಿರೋಧ ಕಟ್ಟಿಕೊಂಡು ಬಾಳು ನಡೆಸಬೇಕು ಅನ್ನೋರು ಮನೆ ಬಿಟ್ಟು ಹೋಗ್ತಾರೆ. ಧೈರ್ಯ ಇಲ್ಲದವರು ಪ್ರೀತಿಯನ್ನು ಸಾಯಿಸಿ, ಬೇರೆ ಬೇರೆ ಜೀವನ ನಡೆಸುತ್ತಾರೆ. ಆದ್ರೆ ಪ್ರೀತಿ ಸಾಯಿಸಿದ ಕೊರಗಿನಲ್ಲಿ, ಅವರೂ ದಿನನಿತ್ಯವೂ ಸಾಯುತ್ತಾರೆ. ಇವೆರೆಡು ಮಾಡಲು ಆಗದವರು ಕೆರೆ, ಬಾವಿ, ಮರ ಟ್ರೈನ್, ವಿಷ ಇನ್ನೂ ಏನೇನೊ ಮಾರ್ಗ ಹುಡುಕಿ ಸತ್ತು ಹೋಗ್ತಾರೆ. 

ಒಟ್ಟಿನಲ್ಲಿ ಸಂತೋಷವಾಗಿ ಇರಬೇಕಾದ  ಜೀವಗಳು ಕೊರಗುತ್ತವೆ ಇಲ್ಲ ಕೊನೆಯಾಗುತ್ತವೆ. ದಾರಿ ಯಾವುದೇ ಇರಲಿ, ಸಂತೋಷ ಅನ್ನೋದು ಮರೀಚಿಕೆಯಾಗಿಬಿಡುತ್ತದೆ. ಕ್ಷುಲ್ಲಕ ಕಾರಣಗಳಿಗೆ ಹೀಗೆಲ್ಲ ಆಗೋದು ಸರಿಯೇ? 

ಎಲ್ಲ ಮುಗಿದ ಮೇಲೆ, "ಮಕ್ಕಳು ಚೆನ್ನಾಗಿರಲಿ ಅಂತ ತಾನೇ ನಾವೆಲ್ಲಾ ಹೀಗೆ ಮಾಡಿದ್ದು" ಅನ್ನೋ ಎಷ್ಟೋ ಪಾಲಕರಿಗೆ ನನ್ನ ಈ ಪ್ರಶ್ನೆ ಅನ್ವಯಿಸುತ್ತದೆ. 

ಸೂಚನೆ  : ನಾನು ಹಿರಿಯರನ್ನು  ದ್ವೇಷಿಸೋನು ಅಲ್ಲ. ಆದ್ರೆ ಪ್ರೀತಿಯನ್ನು ಪ್ರೀತ್ಸೋನು