Tuesday, October 25, 2011

ಸ್ವಪ್ನ ಮತ್ತು ಮನು

ಸ್ವಪ್ನ ನಮ್ಮ ಕಾಲೇಜ್'ನಲ್ಲೇ ಅತಿ ಸುಂದರ ಹುಡುಗಿ. ಇವಳ ಒಂದು ನೋಟಕ್ಕೆ, ನೂರು ಜನ ಹುಡುಗರು ಗುಲಾಬಿ ಹೂ, ಕಾರ್ಡು ಹಿಡಿದುಕೊಂಡ ಓಡಾಡಿದ ಪ್ರಸಂಗಗಳು ಅನೇಕ. ಆದ್ರೆ ಮನು ಅನ್ನೋ ನನ್ನ ಗೆಳೆಯನದು ಮಾತ್ರ ಅದೃಷ್ಟವೇ ಅದೃಷ್ಟ. ಹಾಗೋ ಹೀಗೋ ಮಾಡಿ ಸ್ವಪ್ನಳ  ಗೆಳೆತನ ಸಂಪಾದಿಸಿಬಿಟ್ಟ. ನೋಡೋಕೆ ಹೀರೋ ಥರ ಇಲ್ಲದೆ ಇದ್ರೂ ಒಂದು ಲೆವೆಲ್ಗೆ ಓಕೆ. ಮನು'ನ ಕಂಡ್ರೆ ಎಲ್ಲ ಹುಡುಗರಿಗೂ ಹೊಟ್ಟೆ ಉರಿ. ಕೆಲವರಿಗೆ ಸ್ವಪ್ನ ಅವರನ್ನು ತಿರಸ್ಕರಿಸ್ದಳು ಅನ್ನೋ ನೋವಿದ್ರೆ, ಇನ್ನು ಕೆಲವರಿಗೆ ನಾವು ಮನುಗಿಂತ ಮುಂಚೆ ಟ್ರೈ ಮಾಡಬೇಕಿತ್ತು ಅನ್ನೋ ನಿರಾಸೆ. ಅದೇನೇ ಇರಲಿ ಇವತ್ತು ಮನು ಮತ್ತು ಸ್ವಪ್ನ ಒಟ್ಟಿಗೆ ಸಿನಿಮಾ ನೋಡಲು ಹೊರಟಿದ್ದಾರೆ. ಎಲ್ಲ ಹುಡುಗರು ಥಿಯೇಟರನಲ್ಲಿ 
ಏನೇನು ನಡಿಯುತ್ತೋ ಅನ್ನೋ ವಿಷಯಾನ ನೆನಿಸಿಕೊಂಡು ನೋವಿನಲ್ಲಿದ್ದಾರೆ. ಮನು ಮತ್ತು ಸ್ವಪ್ನ ಅಕ್ಕಪಕ್ಕದ ಸೀಟ್ನಲ್ಲಿ ಕೈ ಮೇಲೆ ಕೈ ಹಾಕಿಕೊಂಡು ಕೂತಿದ್ದಾರೆ. ಮನುವಿನ ಮನಸ್ಸಲ್ಲಿ ಏನೇನೋ ಯೋಚನೆ, ಸ್ವಪ್ನ ಕೂಡ ಸ್ವಲ್ಪ ಭಯದಲ್ಲಿ ಇದ್ದಾಳೆ. ಇನ್ನೇನು ಅವಳನ್ನು ಕೇಳೇ ಬಿಡೋಣ ಅಂತ ಮನು ಕಣ್ಮುಚ್ಚಿ "ನೀನು ನನ್ನ ಮದುವೆ  ಆಗ್ತೀಯ?" ಅಂತ ಕೇಳೋದೇ ತಡ, ಕೈ ಬಿಡಿಸಿಕೊಂಡ ಸ್ವಪ್ನ ಮನು ಕೆನ್ನೆ ಮೇಲೆ ಬಾರಿಸಿದಳು. ಮನು ಕಣ್ಬಿಟ್ಟು ನೋಡಿದಾಗ ಪ್ರೊಫೆಸರ್ ಲಕ್ಷ್ಮೀಪತಿ ಮುಂದೆ ನಿಂತಿದ್ದಾರೆ. "ಕ್ಲಾಸ್ ರೂಂನಲ್ಲಿ  ನಿದ್ದೆ ಮಾಡ್ತೀಯ ಭಡವ". !!!!!!

ಬರೋಬರಿ ೩೦ ನಿಮಿಷದ ಕನಸಿಗೆ ತೆರೆ ಬಿದ್ದಿತ್ತು. ಕನಸಲ್ಲಾದರೂ ಅವಳನ್ನ ಪ್ರೊಪೋಸ್ ಮಾಡಿದ ತೃಪ್ತಿ ಸಿಕ್ತಲ್ಲ ಅಂತ ನಕ್ಕು ಮನು ಸುಮ್ಮನಾದ.

No comments:

Post a Comment