Saturday, October 22, 2011

ತಾಳಿಯ ಬೆಲೆ...

ಆವತ್ತು ಭೀಮನ ಅಮಾವಾಸ್ಯೆಯ ಹಿಂದಿನ ದಿನ. ಅಮ್ಮ ನನಗೆ ಫೋನ್ ಮಾಡಿ, ಮನೆಗೆ ವಾಪಸ್ ಬರೋವಾಗ ಪೂಜೆಗೆ ಹೂವು ಹಣ್ಣು ತರೋಕೆ ಹೇಳಿದ್ರು. ಆಫೀಸನಿಂದ ಹೊರಟಾಗ ಸುಮಾರು ೧೦ ಗಂಟೆ. ಇನ್ನೆಲ್ಲಿ ಹೂವು ಹಣ್ಣು ಸಿಗೋಕೆ ಸಾಧ್ಯ ಅಂದುಕೊಂಡು ಬನಶಂಕರಿ ದೇವಸ್ಥಾನದ ಹತ್ರ ಹೋದೆ. ಎಲ್ಲಿ ನೋಡಿದರು ಅಂಗಡಿ, ಮುಗ್ಗಟ್ಟುಗಳು ಮುಚ್ಚಿವೆ. ಕೊನೆಗೆ ಹಾಗೆ ಹೋದರಾಯಿತು ಅಂದುಕೊಂಡು ಸ್ವಲ್ಪ ಮುಂದೆ ಬಂದೆ. ನನ್ನ ಅದೃಷ್ಟಕ್ಕೆ ಒಬ್ಬ ಮಹಿಳೆ ತನ್ನ ಚಿಕ್ಕ ಕೈಗಾಡಿಯಲ್ಲಿ ಹೂವು, ಹಣ್ಣು ಮಾರಲು ಕುಳಿತಿದ್ದಳು. ಹೂವು, ಹಣ್ಣು ಅನ್ನೋದಕ್ಕಿಂತ ಅದು ನನ್ನ ಪಾಲಿಗೆ ಓಯಸಿಸ್ ನಂತೆ ಕಂಡು ಬಂತು. ಕೊನೆಗೂ ನನಗೆ ಬೇಕಾದ ಎಲ್ಲ ಪದಾರ್ಥಗಳನ್ನು ತೆಗೆದುಕೊಂಡು ದುಡ್ಡು ಕೊಟ್ಟೆ. ಆ ಹೆಣ್ಣುಮಗಳ ಕೈಯ್ಯಲ್ಲಿ ಹಸುಗೂಸೊಂದನ್ನು ನೋಡಿ, "ಏನಮ್ಮ, ಇಷ್ಟು ರಾತ್ರಿ ಒಬ್ಬಳೇ ಇಲ್ಲಿ ಕಷ್ಟ ಪಡುತ್ತ ಇದ್ದೀಯಲ್ಲ. ನಿನ್ನ ಗಂಡನನ್ನಾದರೂ ಸಹಾಯಕ್ಕೆ ಸೇರಿಸಿಕೊಲ್ಲಬಹುದಲ್ವ". ಅವಳ ಉತ್ತರ ಕೇಳಿದ ಮೇಲೆ ಕೊಂಚ ನೋವು ಮತ್ತು ಬೇಸರ ನನ್ನ ಕಾಡಿತು. ಅವಳು ಯಾವುದೇ ಮಾತುಗಳನ್ನು ಉಪಯೋಗಿಸಲಿಲ್ಲ, ಬದಲಿಗೆ ಕೈಮಾಡಿ ಪಕ್ಕದಲ್ಲೇ ಕುಡಿದು ಬಿದ್ದಿದ್ದ ಓರ್ವ ವ್ಯಕ್ತಿಯ ಕಡೆಗೆ ನೋಡಿದಳು. ನನ್ನ ಪ್ರಶ್ನೆಗೆ ಉತ್ತರ ಆಗಲೇ ಸಿಕ್ಕಿ ಆಗಿತ್ತು. ಅದು ಅವಳ ಗಂಡನೇ....

ಸಮಾಜದಲ್ಲಿ ಭೀಮನ ಅಮಾವಾಸ್ಯೆ ಮೂಲಕ ಗಂಡನು ಚೆನ್ನಾಗಿರಲಿ ಅಂತ ಹಾರೈಸಿ ಮಾಡುವ ಪೂಜೆ. ಆದ್ರೆ ಆ ತಾಯಿ ಯಾವುದೇ ಪೂಜೆ ಮಾಡದೇ, ಕೇವಲ ತನ್ನ ಕರ್ತವ್ಯದ ಮೂಲಕ ಭೀಮನ ಅಮಾವಾಸ್ಯೆಯನ್ನು ಆಚರಿಸಿದ್ದಳು. ಕೆಲವರಿಗೆ ಗಂಡನ ಮೇಲೆ ಕಿಂಚಿತ್ತು ಅಭಿಮಾನ ಇರುವುದಿಲ್ಲ, ಆದರೆ ಇಲ್ಲಿ ಕುಡುಕನಾದ್ರು, ಗಂಡನಿಗೆ ಆ ತಾಯಿ ತೋರಿಸಿದ ಗೌರವ ಕಂಡು, ಇಂತಹ 
ಎಷ್ಟೋ ಹೆಣ್ಣುಮಕ್ಕಳಿಗೆ ನಮಸ್ಕಾರ ಮಾಡುವ ಮನಸ್ಸಾಯಿತು. ನಾನು ಮನೆಯತ್ತ ಹೊರಟೆ...... 

No comments:

Post a Comment