Saturday, November 17, 2012

ಕಸ = ಕಸಿವಿಸಿ


ಅವತ್ತೊಂದು ದಿನ ಯಶವಂತಪುರ ರೇಲ್ವೆ ಸ್ಟೇಷನ್ ಗೆ ಯಾರೋ ನೆಂಟರನ್ನ ಕರೆದುಕೊಂಡು ಬರೋಕೆ ಹೋಗಿದ್ದೆ. ಸಿಕ್ಕಾಪಟ್ಟೆ ಚಳಿ, ಜೊತೆಗೆ ಒಂದಿಷ್ಟು ಜಿನುಗೋ ಮಳೆ ಹನಿ. ಅದ್ಭುತ ವಾತಾವರಣ. ಟ್ರೇನ್ ಬರೋಕೆ ಇನ್ನು 30 ನಿಮಿಷ ಇತ್ತು. ಒಂದು ಕಪ್ ಟೀ ಹೀರಿಬಿಡೋಣ ಅಂತ ಅಲ್ಲೇ ಪಕ್ಕದಲ್ಲಿದ್ದ ಟೀ ಸ್ಟಾಲ್ ಗೆ ಹೋದೆ. ಚಹಾ ಕುಡಿದ ಮೇಲೆ ಕಪ್ ಎಸೆಯೋಕೆ ಕಸದ ಬುಟ್ಟಿ  ಹುಡುಕಿದೆ. ಆದ್ರೆ ಬುಟ್ಟಿ ಅಲ್ಲಿರಲಿಲ್ಲ. ಅಂಗಡಿಯವನಿಗೆ ಕೇಳ್ದೆ 'ಕಸದ ಬುಟ್ಟಿ ಎಲ್ಲಪ್ಪ?'. ಅವನು ಕೊಟ್ಟ ಉತ್ತರ ಕೇಳಿ ಕೋಪ ನೆತ್ತಿಗೇರಿತು. 'ಅಲ್ಲೇ ಎಲ್ಲಾದರು ಹಾಕಿ, ಬೇರೆಯವರು ಅಲ್ಲೇ ಹಾಕಿದ್ದರೆ. ನಿಮಗೆ ಅಂತ ಕಸದ ಬುಟ್ಟಿ ತಂದು ಕೊಡಲೇನು?' ಈ ಬೇಜವಾಬ್ದಾರಿಯ ಮಾತಿಗೆ ಉತ್ತರಿಸೋ ತಾಳ್ಮೆ ನನಗಿರಲಿಲ್ಲ. 
30 ನಿಮಿಷದ ಹಿಂದೆ, ಅದೇ ಪ್ಲಾಟ್ಫಾರ್ಮ್ ಸ್ವಚ್ಛ ಮಾಡೋಕೆ ಅಂತ ಒಬ್ಬಳು ವೃದ್ಧೆ ಬಂದಿದ್ದಳು. ಮೈಮೇಲೆಲ್ಲ ನೆರಿಗೆಗಳು. ಆ ಚಳಿಯಲ್ಲಿ ಹರಿದು ಹೋದ ಒಂದು ಸ್ವೆಟರ್, ಕಿವಿಗೆ ಒಂದು ಬಟ್ಟೆ, ಕೈಯಲ್ಲಿ ಒಂದು ಪೊರಕೆ, ಕಾಲಲ್ಲಿ ಹಳೆ ಹವಾಯಿ ಸ್ಲಿಪ್ಪರ್ ಅದಕ್ಕೂ ದಾರದಿಂದ ಕಟ್ಟಿದ ಉಂಗುಷ್ಟ. ತೀರ ಚಿಂತಾಜನಕ ಸ್ಥಿತಿಯಲ್ಲಿ ಇದ್ದಳು ಆ ಅಜ್ಜಿ. ಟ್ರೇನ್ ಸ್ಟೇಶನ್ನಲ್ಲಿ ನಿಂತಾಗ ಶೌಚಾಲಯ ಉಪಯೋಗಿಸಬೇಡಿ ಅಂತ ಎಷ್ಟೇ ಬಡ್ಕೊಂಡ್ರು ನಮ್ಮ ಜನಕ್ಕೆ ಅರ್ಥ ಆಗೋಲ್ಲ. ಟ್ರೇನ್ ನಿಂತಾಗ ಮಾಡಿರೋ ಆ  ಪಾಪ ತೊಳೆಯೋಕೆ ಆ ಅಜ್ಜಿ ತನ್ನ ಕೈ ಉಪಯೋಗಿಸ್ತಾ ಇದ್ದಳು. ಅದೇನು ಅವಳ ಕರ್ಮವೋ ಅಥವಾ ಮಾಡಿದವನ ಪಾಪದ ಕೊಡ ತುಂಬೋಕೆ ಭಗವಂತ ಆಡಿಸಿದ ಆಟವೋ, ಒಂದೂ ಗೊತ್ತಿಲ್ಲ. ಆದರೂ ಮಾನವೀಯತೆ ದೃಷ್ಟಿಯಿಂದ ನೋಡಿದರೆ ಆಕೆ ಮೇಲೆ ಕನಿಕರ ಹುಟ್ಟೋದು ನಿಶ್ಚಿತ. ಅವಳು ಮಾಡೋ ಆ ಕೆಲಸಕ್ಕೆ ಅವಳಿಗೆ ಎಷ್ಟು ದುಡ್ಡು ಸಿಗುತ್ತೋ ಅದರ ನಾಲ್ಕು ಪಟ್ಟು ಪಾಪ ಅಲ್ಲಿ ಗಲೀಜು ಮಾಡಿದ ಪಾಪಿಗೆ ಸಿಗುತ್ತದೆ. ಈ ಪಾಪ ಪುಣ್ಯದ ಲೆಕ್ಕದಲ್ಲಿ ನಮ್ಮ ದೇಶದ ಸೌಂದರ್ಯ, ಅದರ ಪ್ರತಿಷ್ಠೆ ಎಲ್ಲ ಮೂಲೆಗುಂಪಾಗಿ, ಭಾರತೀಯರು ಅಂದ್ರೆ ಕೊಳಕರು, ಆ ದೇಶದ ಪರಿಸ್ತಿತಿ ಹೀಗೆ ಇರುತ್ತೆ ಅನ್ನೋದು ಹೊರದೇಶದವರ ವಾದವಾದರೆ. ಇನ್ನು ಭಾರತೆ ಮಾತೆಯ ಮೊಮ್ಮಕ್ಕಳಾದ ನಮ್ಮ ಯುವಕರು ಈ ದೇಶಕ್ಕೆ ಭವಿಷ್ಯ ಇಲ್ಲ ಅನ್ನೋದು ಇನ್ನೂ ನಾಚಿಕೆಗೇಡು ಪಡುವಂತಹ ವಿಷಯ.
ನಾನೊಬ್ಬನೇ ಏನು ತಾನೇ ಮಾಡೋಕೆ ಆಗುತ್ತೆ ಅನ್ನೋದು ಕೆಲವರ ಅಂಬೋಣ. ಇಲ್ಲಿ ಶಿವ್ ಖೇರಾ ಹೇಳಿರೋ ಒಂದು ಮಾತು ನೆನಪಾಗುತ್ತದೆ. 'if you are not part of the solution then you are part of the problem'. ದೇಶ ನನ್ನದು ಅದು ಶುದ್ಧವಾಗಿರಬೇಕು. ದಿನ ಬೆಳಿಗ್ಗೆ ಎದ್ದು ಪೊರಕೆ ಹಿಡಿದು ದೇಶ ಗುಡಿಸೋದು ಕಷ್ಟ, ಆದ್ರೆ ನಮ್ಮ ಕೈಲಾದಷ್ಟು ನಮ್ಮನ್ನು ನಾವು ತಿದ್ದಿಕೊಂದ್ರೆ ಅದೇ ದೊಡ್ಡ ಉಪಕಾರ.
ಮೊನ್ನೆ ದೀಪಾವಳಿ ಆಯಿತು. ಎಲ್ಲರೂ ತಂಡ ತಂಡವಾಗಿ ರೋಡಿಗಿಳಿದು ಪಟಾಕಿ ಹೊಡೆದರು. ಅದು ಸಂಭ್ರಮದ ಹಬ್ಬ. ರಾತ್ರಿ ಎಲ್ಲ ಪಟಾಕಿ ಹೊಡೆದ ಜನ ಎದ್ದಿದ್ದು ಬೆಳಿಗ್ಗೆ 7 ಗಂಟೆಗೆ. ಆದ್ರೆ ಅವರೆಲ್ಲ ಏಳೋ ಮೊದಲು, ಪೊರಕೆ ಹಿಡಿದ ಅದೆಷ್ಟೋ ಕೈಗಳು ಅವರನ್ನ ಬೈಕೊಂಡು ರೋಡು ಸ್ವಚ್ಛಗೊಳಿಸಿ ಮರೆಯಾದವು. ಪಟಾಕಿ ಹಾರಿಸೋ ಜನರಲ್ಲಿ ಒಬ್ಬರಾದರು ಆ ಅವಶೇಷಗಳ ಬಗ್ಗೆ ಯೋಚನೆ ಮಾಡಿದ್ರ? ಖಂಡಿತ ಇಲ್ಲ. ಗೋ ಗ್ರೀನ್ ಅಂತ ಬಟ್ಟೆ ಹಾಕಿಕೊಂಡು ಒಂದು ದಿನವಿಡೀ ಫೋಟೋ ತೆಗೆದು ಫೆಸಬುಕ್ ಗೆ ಹಾಕಿಕೊಳ್ಳೋ ಯುವಕರೇ ಜಾಸ್ತಿ. ಕ್ರಾಂತಿ ಅನ್ನೋದು ಒಂದು ದಿನ ಬಂದು ಹೊಗೊದಲ್ಲ, ಅದು ನಿರಂತರ. 
ಇದೆಲ್ಲ ನೋಡುತ್ತಿದ್ದರೆ, ಆ ಬ್ರಿಟಿಷರ ದಬ್ಬಾಳಿಕೆಯ ದಿನಗಳೇ ನಮ್ಮಲ್ಲಿ ದೇಶಭಕ್ತಿಯನ್ನು, ಒಗ್ಗಟ್ಟನ್ನು ಖಾಯಂಗೊಳಿಸಿದ್ದವು. ಜಲ, ವಾಯು, ಭೂಮಿ ಜೊತೆ ನಮ್ಮ ವೈಚಾರಿಕ ಪ್ರಜ್ಞೆ ಕೂಡ ಮಲಿನ ಆಗಿರೋದು ದುರದೃಷ್ಟಕರ. ಇನ್ನೊಮ್ಮೆ ಬೇಕಾಬಿಟ್ಟಿ ಕಸ ರೋಡಿನಲ್ಲಿ ಹಾಕೋವಾಗ ಮೇಲೆ ಹೇಳಿರೋ ಆ ಅಜ್ಜಿಯ ಮುಖ ಒಮ್ಮೆ ನೆನೆಪಿಸಿಕೊಳ್ಳಿ. 
ಚಿತ್ರಕೃಪೆ: ದಿ ಹಿಂದು ಪತ್ರಿಕೆ

3 comments:

 1. ಯುವಕರು ದೇಶದ ಆಸ್ತಿ, ಆದರೆ ಅವರೇ ದೇಶದ ನೈಸರ್ಗಿಕ ಆಸ್ತಿ ನಾಶ ಮಾಡುತ್ತಿರುವುದು ನಿಜಕ್ಕೂ ದುರಂತ. ಕನಿಷ್ಠ ಪಕ್ಷ ಬೇರೆಯವರ ಮೇಲಿನ ಕನಿಕರದಿಂದಲಾದರು ಸ್ವಲ್ಪ ಜವಾಬ್ದಾರಿ ಬೆಳೆಸಿಕೊಂಡರೆ ಎಲ್ಲರಿಗೂ ಒಳ್ಳೆಯದು.

  ReplyDelete
 2. ಅರವಿಂದ ಅವರೇ, ಅಜ್ಜಿಯ ಚಿತ್ರಣವು ಕಣ್ಣಿಗೆ ಕಟ್ಟುವ ಹಾಗೆ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ; ಆ ಎರಡು ಸಾಲುಗಳನ್ನು ಕನಿಷ್ಟ ಹತ್ತು ಬಾರಿಯಾದರೂ ಓದಿಕೊಂಡಿದ್ದೇನೆ.

  ಉತ್ತಮ ಸಂದೇಶ ಸಾರುವ ಬರವಣಿಗೆ :o)

  ReplyDelete
 3. Fantastic Post Arvind, very thought provoking I wish many get to read this and post reading this correct themselves!

  Keep inspiring

  ReplyDelete