Tuesday, November 13, 2012

ವೀಕೆಂಡ್ ವರೈಟಿ

            ದೇವರು ಎಲ್ಲ ಕಡೆ ಇರೋಕೆ ಸಾಧ್ಯವಾಗಲ್ಲ ಅನ್ನೋ ಕಾರಣಕ್ಕೆ ತಾಯಿಯನ್ನ ಸೃಷ್ಟಿಸಿದ ಅನ್ನೋದು ನಮಗೆಲ್ಲ ಗೊತ್ತಿರೋ ಮಾತು. ಆದ್ರೆ ನನ್ನ ಪಾಲಿಗೆ ಆ ಅದೃಷ್ಟ ಡಬಲ್.  ತಂದೆ-ತಾಯಿ ಇಬ್ಬರೂ ನನ್ನ ಮೇಲಿಟ್ಟಿರೋ ಪ್ರೀತಿ ಅಂತಹದ್ದು. ಬರೀ ಕಣ್ಣು ನೋಡಿ ನನ್ನ ಮನಸ್ಥಿತಿ ಅರಿಯೋವಷ್ಟು ಮೇಧಾವಿಗಳು ಅವರು. ಕೆಲವೊಮ್ಮೆ ಬೇಜಾರು ಪಡುವಂತಹ ಸಂಗತಿಗಳು ನಡೆದರೂ ಅದ್ಯಾವುದು ಬಹಳ ಕಾಲ ನೆಲೆಯೂರಲ್ಲ. ನಾನೋ ಅಥವಾ ಅವರೋ, ಯಾರೋ ಒಬ್ಬರು ಆ ಬೇಜಾರಿಗೆ ಮರಣ ಬರೀತೀವಿ.
           ಇಡೀ ವಾರ ನನ್ನ ಮನೆಯಲ್ಲಿ ಏನು ನಡೆಯುತ್ತೆ ಅನ್ನೋದು ಬಹುಶಃ ನನಗೆ ಗೊತ್ತಿರೋದಿಲ್ಲ. ಮನೆ ಬೇಕಾಗೋ ಸಾಮಾನುಗಳಿಂದ ಹಿಡಿದು ನನ್ನ ಊಟ, ಬಟ್ಟೆ ಹೀಗೆ ಎಲ್ಲಾ ಭಾಗಗಳಲ್ಲೂ ಅವರು ತಮ್ಮ ಸಹಾಯ ತೋರುತ್ತಾರೆ. ಕೆಲವೊಮ್ಮೆ, ನಾನೆಲ್ಲಿ ತುಂಬಾ ಪರಾಧೀನನಾಗಿ ಬಿಡ್ತೇನೋ ಅನ್ನೋವಷ್ಟು ಅವರನ್ನು ಅವಲಂಬಿಸಿದ್ದೇನೆ. ಇನ್ನೂ ಕೆಲವೊಮ್ಮೆ ಕೋಪದಿಂದ 'ಇದೆಲ್ಲ ಮಾಡಬೇಡಿ ನೀವು, ನಾನೆಲ್ಲ ಮಾಡ್ಕೊತೀನಿ' ಅನ್ನೋ ಮಾತುಗಳೂ ಆಡಿದ್ದುಂಟು. ಅವರು ಮಾಡೋದು ಬಿಡೋಲ್ಲ, ನಾನು ಹೇಳೋದು ಬಿಡೋಲ್ಲ.
ಈ ವೀಕೆಂಡ್ ಬಂದ್ರೆ, ನನಗೆ ಮೂಡ ಇದ್ರೆ, ಅಡುಗೆ ಮನೆ ನಂದು. ಹೊಸರುಚಿ, ಅಭಿರುಚಿ ಅನ್ನೋ ಹೆಸರಲ್ಲಿ ಏನೇನೋ ಅಡುಗೆ ಮಾಡಿ ಅವರಿಗೆ ಊಟಕ್ಕೆ ಹಾಕೋದು ನನ್ನ ರೂಢಿ. ಬೆಳಿಗ್ಗೆ ತಿಂಡಿಯಿಂದ  ಹಿಡಿದು ರಾತ್ರಿ ಊಟದವರೆಗೂ ಏನಾದ್ರೂ ಹೊಸ ಪ್ರಾಯೋಗಿಕ ಅಡುಗೆ ಮಾಡಿ ಅವರನ್ನ ಕೂಡಿಸಿ ಊಟಕ್ಕೆ ಹಾಕೋದ್ರಲ್ಲಿ ಇರೋ ಸುಖ ಬೇರೆ ಯಾವುದರಲ್ಲಿ ಇಲ್ಲ. ನಾನು ಹುಟ್ಟಿದಾಗಿನಿಂದ ಇಲ್ಲಿವರೆಗೂ ನನ್ನ ಊಟ, ಉಡುಗೆ, ತಿಂಡಿ ಎಲ್ಲದರ ಬಗ್ಗೆ ಅಷ್ಟು ಕಾಳಜಿವಹಿಸುವ ಅವರಿಗೆ, ಒಂದು ದಿನ ಮಾಡಿ ಹಾಕೋದ್ರಿಂದ ಅವರಿಗೂ ರೆಸ್ಟ್ ಸಿಗುತ್ತೆ. ಜೊತೆಗೆ ಮಗ ನಮ್ಮನ್ನ ಕೂಡಿಸಿ ಮಾಡಿ ಹಾಕಿದ ಅನ್ನೋ ಆ ತೃಪ್ತಿ ಇದೆಯಲ್ಲ ಅದು ಕೋಟಿ ಕೊಟ್ಟರು ಬಾರದು.
               ಮೊನ್ನೆ ಹೀಗೆ ಬಜ್ಜಿ ತಿನ್ನೋ ಆಸೆ ಆಯಿತು, ಒಳಗೆ ಹೋಗಿ ಹಿಟ್ಟು ಕಲಿಸಿ ಬಜ್ಜಿ ಮಾಡೇ ಬಿಟ್ಟೆ. ಜೊತೆಗೊಂದಿಷ್ಟು ಈರುಳ್ಳಿ, ಕೊತ್ತಂಬರಿ, ಕ್ಯಾರೆಟ್ ಹಾಗು ನಿಂಬೆ ಹಣ್ಣಿನ ಕೋಸಂಬರಿ ಮಾಡಿ, ಬಿಸಿ ಬಿಸಿ ಬಜ್ಜಿ ಜೊತೆ ಆ ಕೋಸಂಬರಿ ತಿಂದರೆ, ಏನ್ ಕೇಳ್ತೀರಾ ಆ ರುಚಿ. ಇಷ್ಟೆಲ್ಲಾ ಆಗಬೇಕಾದರೆ, ಅಮ್ಮ ಅಡುಗೆ ಮನೆಗೆ ಬಂದು, 'ಬೆಳಿಗ್ಗೆ ನನಗೆ ಮಿರ್ಚಿ ತಿನ್ನೋ ಆಸೆ ಆಗಿತ್ತು. ಸಂಜೆ ಅನ್ನೋವಷ್ಟರಲ್ಲಿ ಅದನ್ನ ಮಾಡಿದ್ದೀಯಲ್ಲ. ಇದು ವಿಚಿತ್ರ' ಅಂದ್ರು. ಅದಕ್ಕೆ ಹೇಳೋದು ಭಾವನೆಗಳನ್ನು ಹೇಳೋಕೆ ಪದಗಳು ಬೇಕಾಗಲ್ಲ. ನಾಲಿಗೆ ಮಾತನಾಡೋದನ್ನ ನಿಲ್ಲಿಸಬಹುದು ಆದ್ರೆ ಕರಳು?

           ಒಂದೇ ಒಂದು ದಿನ ನಿಮ್ಮ ತಂದೆ ತಾಯಿಗೆ ಅಡುಗೆ ಮಾಡಿ ತಿನ್ನಿಸಿ ನೋಡಿ. ನಾನು ಅನುಭವಿಸಿರೋ ಆ ಸ್ವರ್ಗ ಸುಖ ಏನು ಅನ್ನೋದು ನಿಮಗೆ ಅರಿವಾಗುತ್ತೆ.

ಸೂಚನೆ: ಚಿತ್ರದಲ್ಲಿರೋ ನಳಪಾಕ ನಾನು ಮಾಡಿದ್ದು. ಗೂಗಲ್ ನಿಂದ ಕದ್ದ ಚಿತ್ರಗಳಲ್ಲ ಇವು. :)

1 comment: