Tuesday, November 13, 2012

ಜೀವನ ಗೆದ್ದವರು

ಮೊನ್ನೆ ಗುರುವಾರ ಆಫೀಸನಲ್ಲಿ ಕುಳಿತಿದ್ದೆ. ನನಗೆ ಪರಿಚಯವಿಲ್ಲದ ಯಾರೋ ಒಬ್ಬ ಹುಡುಗ ಫೋನ್ ಮಡಿದ. "ವಿಷಯ ಏನು?" ಅಂದೆ. ಅವನ ಜೊತೆ ಮಾತಾಡಿದ ಮೇಲೆ ವಿಷಯ ತಿಳಿಯಿತು. ಭಾನುವಾರ ನಡೆಯಲಿರೋ ಒಂದು ಕಾರ್ಯಕ್ರಮಕ್ಕೆ ನನ್ನನ್ನು ನಿರ್ಣಾನಾಗಿ ಆಹ್ವಾನಿಸಿದರು. ಚಿಕ್ಕ ಮಕ್ಕಳು ಅಭಿನಯಿಸುವ ನಾಟಕದ ಸ್ಪರ್ಧೆ ಅದು. ಯಾರನ್ನೋ judge ಮಾಡುವ ಅರ್ಹತೆ ನಾನಿನ್ನು ಘಳಿಸಿಲ್ಲ. ಆದರೂ ನನಗೆ ತಿಳಿದ ಮಟ್ಟಿಗೆ ಒಬ್ಬ ನೋಡುಗನಾಗಿ ತೀರ್ಮಾನ ಮಾಡಲು ಹೊರಟೆ ಅಲ್ಲದೆ ಚಿಕ್ಕ ಮಕ್ಕಳ ಕಾರ್ಯಕ್ರಮ ಆಗಿದ್ದರಿಂದ ನನಗೆ ಅಲ್ಲಿಗೆ ಹೋಗೋ ತೀವ್ರ ಮನಸಾಯಿತು. ಕಾರಣವಿಷ್ಟೇ ಅವರು ಅನಾಥಾಶ್ರಮದ ಮಕ್ಕಳು.

ಭಾನುವಾರ ನನ್ನ ಇನ್ನೊಬ್ಬ ಮಿತ್ರನನ್ನ ಕರೆದುಕೊಂಡು ಆ ಕಾರ್ಯಕ್ರಮಕ್ಕೆ ಹೋದೆ. ಸುಮಾರು 500 ಹುಡುಗರು ನೆರೆದಿರೋ ಕಾರ್ಯಕ್ರಮ ಅದು. ನಾಟಕದ ಜೊತೆಗೆ ಇನ್ನೂ ಹಲವು ಸ್ಪರ್ಧೆಗಳು ಇದ್ದವು. ಫೇಸ್ ಪೇಂಟಿಂಗ್, ಸ್ಪೋರ್ಟ್ಸ್, ಪಾಟ್ ಮೇಕಿಂಗ್, ಡ್ರಾಯಿಂಗ್, ಪೇಂಟಿಂಗ್, ಒಂದೇ ಎರಡೇ. ನನಗೆ ಹೋದ ತಕ್ಷಣ ಒಂದು ರೂಮಿನಲ್ಲಿ ಕಾರ್ಯಕ್ರಮದ ಬಗ್ಗೆ ಒಬ್ಬ ಸ್ವಯಂ ಸೇವಕಿ ಹೇಳಿದಳು. ಹಾಗೆ ಅವರ ಹಿಂದಿನ ಹಾಗು ಅದರ ಹಿಂದಿನ ವರ್ಷದ ಫೋಟೋಗಳನ್ನು ತೋರಿಸಿದಳು. ನಾಟಕದ ಸ್ಪರ್ಧೆ ಶುರುವಾಗೋಕೆ ಇನ್ನು 1 ಗಂಟೆ ಇತ್ತು. ಆ ನಾಲ್ಕು ಗೋಡೆಗಳ ಮಧ್ಯ ಕೂಡೋ ಬದಲು ಅಕ್ಕ ಪಕ್ಕದಲಿ ನಡೆಯುತ್ತಿದ್ದ ಸ್ಪರ್ಧೆಗಳ ಮೇಲೆ ಕಣ್ಣು ಹಾಯಿಸೋ ಮನಸಾಯಿತು. ನಾನು ಮತ್ತು ನನ್ನ ಮಿತ್ರ ಎಲ್ಲ ಕೋಣೆಗಳಿಗೆ ಭೇಟಿ ಕೊಟ್ಟೆವು. ಒಂದೊಂದು ಕೋಣೆಯಲ್ಲೂ ನವ ಪ್ರತಿಭೆಗಳು, ನವ್ಯ ಯೋಚನೆಗಳು, ಅಭೂತಪೂರ್ವ ಕಲ್ಪನೆಗಳು. ಯಾವುದೋ ಸಾಗರದ ಮಧ್ಯ ನಿಂತ ಅನುಭವ. ಅವರಿಗೆಲ್ಲ ಇದ್ದ ಆ ಪ್ರತಿಭೆ ಅವರ ವಯಸ್ಸಿಗೆ ತಾಳೆಯಾಗುತ್ತಿರಲಿಲ್ಲ. ವಿಶ್ವ ಮಾನವ ಸಂದೇಶ ಸಾರುವ ಚಿತ್ರಗಳು. ಪಿಕ್ಸಾರ್ ಸಂಸ್ಥೆಯನ್ನೇ ಮೀರಿಸುವ ಕಲಾಕೃತಿಗಳು. ಕಣ್ಣು ಅನೇಕ ಬಣ್ಣಗಳಿಂದ ತುಂಬಿ ಹೋದವು.

ಇದೆಲ್ಲ ಮುಗಿಸುವಷ್ಟರಲ್ಲಿ ನಾಟಕದ ಸ್ಪರ್ಧೆ ಶುರುವಾಗಿದೆ ಅನ್ನೋ ಕರೆ ಬಂತು. ಸರಿ ಅಲ್ಲಿಗೆ ಹೊರಟೆ. ಒಟ್ಟು 8 ಚಿಕ್ಕ ನಾಟಕಗಳು. ಎಲ್ಲವೂ ಒಂದಕ್ಕಿಂತ ಒಂದು ಮೇಲು. ನನಗೆ ಅನುವು ಮಾಡಿದ್ದರೆ, ಎಲ್ಲರಿಗೂ ಮೊದಲ ಬಹುಮಾನ ಕೊಡುತ್ತಿದ್ದೆ. ಆದರೂ ಕೆಲವು ಸೂಕ್ಮಗಳನ್ನು ಗಮನಿಸಿ 1 ತಂಡಕ್ಕೆ ಮೊದಲ ಬಹುಮಾನ ಘೋಷಿಸಿದೆ. ಅನೇಕ ಯುತ್ ಫೆಸ್ಟ್ ಗಳಲ್ಲಿ, ಕಾಲೇಜ್ ಸ್ಪರ್ಧೆಗಳಲ್ಲಿ, ಗೆಲುವು ಸಿಗದೇ ಇದ್ದಾಗ ನಾನು ಕೂಡ ಮನಸ್ಸು ನೋಯಿಸಿಕೊಂಡಿದ್ದು ಇದೆ. ಆದ್ರೆ ಇವತ್ತಿನ ಆ ಮಕ್ಕಳನ್ನು ನೋಡಿದರೆ, ಗೆಲುವು ಸೋಲು ಎಲ್ಲವೂ ಒಂದೇ ತೆರನಾಗಿ ಸ್ವೀಕರಿಸುವ  ಮನೋಭಾವ.

ಯಾವುದಾದರು ಒಂದು ಮಗು ಮುಖ ಸಪ್ಪೆ ಮಾಡಿಕೊಂಡಿರುವ ದೃಶ್ಯ ಕಾಣಸಿಗಲಿಲ್ಲ. ನನ್ನ ಮಿತ್ರನಿಗೆ ಹೇಳಿದೆ 'ಈ ಮಕ್ಕಳನ್ನ ನೋಡ್ತಾ ಇದ್ರೆ, ಇವರು ಅನಾಥರು ಅಥವಾ ಇವರನ್ನು ಇವರ ಕಡೆಯವರು ದೂರಮಾಡಿರುವ ಬಗ್ಗೆ ಅಸಮಾಧಾನ ಯಾವುದು ಕಾಣುತ್ತಿಲ್ಲ. ಪರಿಸ್ಥಿತಿಯನ್ನು ಎದುರಿಸೋದು ಹೇಗೆ ಅನ್ನೋದು ಇವರನ್ನ ನೋಡಿ ಕಲೀಬೇಕು ಅನ್ನಿಸುತ್ತೆ' ಅಂದೆ.

'ನಿಜ' ಅಂದ ನನ್ನ ಮಿತ್ರ. ನೀವೇನಂತೀರಿ?

1 comment:

  1. ಮಕ್ಕಳಾಗೆ ಉಳ್ದ್ ಬಿಡ್ಬೇಕು ಕಣ್ರೀ. ದೊಡ್ದೋರಾದ್ರೆ ಈ ಪ್ರಪಂಚ ಹಾಳ್ ಮಾಡ್ಬಿಡುತ್ತೆ.. ಏನಂತಿರ? :o)

    ReplyDelete