Monday, November 12, 2012

ನನ್ನ ದೇಶ ಹೀಗಿರಬೇಕಾ ?


 ಕೆಲವು ವರ್ಷಗಳ ಹಿಂದೆ ನಾನು ಅಮೇರಿಕಕ್ಕೆ ಹೋದಾಗ ವಿಮಾನದಲ್ಲಿ ನಡೆದ ಘಟನೆಯಿದು. ಲಂಡನ್ನಿಂದ ಚಿಕಾಗೋಗೆ ಹೋಗಬೇಕಿದ್ದ ವಿಮಾನ ಅದು. ಅದು ನನ್ನ ಮೊದಲ ಪ್ರವಾಸ ಆಗಿದ್ದರಿಂದ ನನಗೆ ಬಹಳಷ್ಟು ಕಾತುರತೆ ಜೊತೆಗೆ ಒಂದಿಷ್ಟು ಭಯ. ನಾನು ಕೂತಿದ್ದ ಆಸನದ ಪಕ್ಕದಲ್ಲಿ ಸುಮಾರು 70 ವರ್ಷದ ಸುಂದರ ಹೆಂಗಸು (ಮುದುಕಿ ಅಂದ್ರೆ ತಪ್ಪಾಗಬಹುದು) ಕುಳಿತಿದ್ದಳು. ನನಗೆ ಮಾತನಾಡೋದು ತುಂಬಾ ಇಷ್ಟ ಆದ್ರೆ ಜೊತೆಗೆ ಯಾರದ್ರೂ ಇರಬೇಕಲ್ಲ. ಅಲ್ಲಿ ಇದ್ದದ್ದೇ 2 ಕೆಂಚು ಕೂದಲಿನ ಯುವತಿಯರು. ಜೊತೆಗೆ ಈ 70 ವರ್ಷದ ಯುವತಿ. ಆ ಇಬ್ಬರು ಮಹಿಳಾಮನಿಗಳೋ ಕಿವಿಯಲ್ಲಿ ಐಪ್ಯಾಡ್  ಸಿಗಿಸಿಕೊಂಡು, ಪ್ಲೇನ್ ಬಿದ್ರು ಕಣ್ಣು ಬಿಡೋ ಮೂಡ್ನಲ್ಲಿ ಇರಲಿಲ್ಲ. ಈ ಬ್ರಿಟಿಶ್ ಏರ್ವೇಸ್ ದು ಇಂಡಿವಿಜುಯಲ್ ಸ್ಕ್ರೀನ್ ಇದ್ದದ್ದರಿಂದ ನಾನು ಬಚಾವಾದೆ. ನನ್ನ ಹಳ್ಳಿಯಿಂದ ತಾಲ್ಲೂಕಿಗೆ ಹೋಗೋವಾಗ ಬಳಸುತ್ತಿದ್ದ ಡಕೋಟಾ ಬಸ್ ಪ್ರಯಾಣ ಎಸ್ಟೋ ಸುಖವಾಗಿತ್ತು ಸಂಬಂಧ ಇರಲಿ ಇಲ್ಲದಿರಲಿ, ಒಬ್ಬರಿಲ್ಲ ಒಬ್ಬರು ಮಾತು ಪ್ರಾರಂಭಿಸ್ತಾರೆ. ಹೇಗೆ ಈ ಗಾಡಿಗಳು ಐಶರಾಮಿ ಆಗುತ್ತಾ ಹೋಗುತ್ತವೋ ಮನುಷ್ಯನ ನಡುವಿನ ಅಂತರ ಜಾಸ್ತಿ ಆಗುತ್ತದೆ ಅನ್ನೋದು ನನ್ನ ಭಾವನೆ. ಚಿಕ್ಕವನಿದ್ದಾಗ ಎಸ್ಟೋ ಸಲ ಬಸ್ ಗಳಲ್ಲಿ ನಮ್ಮ ತಂದೆ ತಾಯಿಗೆ ಸೀಟ್ ಸಿಗದೇ ಇದ್ದಾಗ ನಾನು ಬೇರೆಯವರ ತೊಡೆಯ ಮೇಲೆ ಕುಳಿತು  ಪ್ರಯಾನಿಸಿದ್ದುಂಟು. ಅದೆಲ್ಲ ಹಳೆ ಕಥೆ ಬಿಡಿ. ಈ ಪುಷ್ಪಕ್ ವಿಮಾನ ಕಥೆ ಥರ ನನ್ನ ಕಥೆ ಆಗಿತ್ತು. ನನ್ನ ಜೀವನದಲ್ಲೇ ನಾನು ವಹಿಸಿದ ದೀರ್ಘ ಮೌನ ಅಂದ್ರೆ ಅದೇ ಇರಬೇಕು.


ನನ್ನ ಸುಕರ್ಮವೋ ಏನೋ ಎಂಬಂತೆ ಆ 70 ರ ಹೆಂಗಸು, ಕಿವಿಯಿಂದ ಹೆಡ್'ಫೋನ್ ತೆಗೆದು ನನ್ನ ನೋಡಿದಳು. ಇನ್ನೇನು ಅವಳು ನನ್ನ ಜೊತೆ ಮಾತನಾಡ್ತಾಳೆ ಅನ್ನೋ ಚಿಕ್ಕ ಸುಳಿವು ನನಗೆ ಸಿಕ್ತು. ಪಕ್ಕನೆ ನನ್ನ ಹೆಡ್'ಫೋನ್ ತೆಗೆದು ರೆಡಿ ಆದೆ. 'ಆರ್ ಯು ಫ್ರಾಂ ಇಂಡಿಯಾ'. 'ಹೌದಮ್ಮ ಮಹಾತಾಯಿ(ಎಸ್)' ನೀನು ಮಾತಾಡ್ಲಿ ಅಂತಾನೆ ಬಕಪಕ್ಷಿ ತಾರಾ ಕಾಯ್ತಾ ಇದ್ದೆ. ಶಬರಿ ಗೆ ಆ ರಾಮನ ದರ್ಶನ ಆದಾಗ ಆದ ಆನಂದ ನನಗಾಗಿತ್ತು. 'ಫಸ್ಟ್ ಟೈಮ್ ಟ್ರಾವೆಲ್?'. 'ಭಾರಿ ಇದ್ದೀಯಲ್ಲ ಮುದುಕಿ, ನಾನು ಮೊದಲ್ನೇ ಸಲ ಬರ್ತಾ ಇರೋದು ಅದೆಷ್ಟು  ಬೇಗ  ಕಂಡುಹಿಡಿದೆ' ಮನಸ್ಸಲ್ಲೇ ಅಂದುಕೊಂಡೆ. ಇದಾದ ಮೇಲೆ ಶುರು  ಆಯಿತು ನೋಡಿ, ಎಲ್ಲಿತ್ತೋ ಎಲ್ಲಿಲ್ಲವೋ ಆ 'ಸ್ಲಂ ಡಾಗ್' ಸಿನಿಮ ಮಾತು. 'ನಿಮ್ಮ ದೇಶದ ವಾಸ್ತು ಶಿಲ್ಪಿ ತುಂಬಾ ಚೆನ್ನಾಗಿದೆ. ಆ ತಾಜ್ಮಹಲ್ ನೋಡೋಕೆ ನಾವು ಒಂದು ಸಲ ಬರಲೇ ಬೇಕು. ಆ ಚಹಾ ಮಾಡುವ ಹುಡುಗ ಕೋಟಿ ಗೆಲ್ಲೋದು ತುಂಬಾ ಅಭೂತಪೂರ್ವ ಸಂಗತಿ. ಜಾಣ್ಮೆ ಅನ್ನೋದು ಯಾರಪ್ಪನ ಮನೆ ಸ್ವತ್ತಲ್ಲ ಅನ್ನೋದು ಚೆನ್ನಾಗಿ ಸೆರೆಹಿಡಿದಿದ್ದಾರೆ'. ಇದೆಲ್ಲ ಕೇಳಿದ ಮೇಲೆ ನಾನು ಸುಮ್ಮನಿರ್ತೀನೆ, ಅಯ್ಯೋ ನೀವು ನೋಡಿರೋದು ಬರೀ 1 ಪರ್ಸೆಂಟ್. ಭಾರತಕ್ಕೆ ಬಂದು ಬರೀ ಟೂರ್ ಮಾಡೋಕೆ ನಿಮಗೆ ವರ್ಷಗಳು ಬೇಕು. ಪ್ರಕೃತಿ ಸೌಂದರ್ಯ, ಶಿಲ್ಪಕಲೆ, ಕೋಟೆ ಕೊತ್ತಲಗಳು ಒಂದೇ ಎರಡೇ. ನೂರು ಕಣ್ಣು ಸಾಲಲ್ಲ, ನನ್ನ ಎದೆ ಗರ್ವದಿಂದ ಉಬ್ಬಿಹೋಯಿತು. ಇದಾದ ಮೇಲೆ ಬಂತು ನೋಡಿ ಸಂಕಟದ ಸಮಯ. ಅದು ನಮ್ಮ ದೇಶದ ಬಡತನ, ಅನಕ್ಷರತೆ, ಅನಾಗರೀಕತೆ ಹಾಗೂ ಮೋಸ. ಎಲ್ಲದರ ಮೇಲೂ ಒಂದೊಂದು ಪುಸ್ತಕ ಬರೆಯುವಷ್ಟು ಪ್ರಶ್ನೆಗಳು. ನಾನೇ ಇಲ್ಲಿನ ಪರಿಸ್ಥಿತಿಗಳ ಬಗ್ಗೆ ಯೋಚನೆ ಮಾಡದಿರುವಷ್ಟು ಯೋಚನೆಗಳು ಆ ಮುದುಕಿಯಲ್ಲಿ. ಕೇವಲ 3 ಗಂಟೆ ಸಿನಿಮಾ ನೋಡಿ ನಮ್ಮ ದೇಶವನ್ನ ಅಳೆದು ಬಿಟ್ಟಳಲ್ಲ. ಮನಸ್ಸಿಗೆ ತುಂಬಾ ಬೇಜಾರಾಯ್ತು. ನಮ್ಮ ಮನೆ ವಿಷಯ ಬೇರೆಯವರು ಹೀನಾಯವಾಗಿ ಮಾತಾಡಿದ್ರೆ ಮನಸ್ಸಿಗೆ ಸರಿ ಅನ್ನಿಸೋದಿಲ್ಲ. ಅದು ಸತ್ಯ ಆಗಿದ್ರು ಕೂಡ. ನಾನು ಹಾಗೋ ಹೀಗೋ ಅವಳಿಗೆ ತಿಳಿಹೇಳಿದೆ. ಎಲ್ಲೋ ಒಂದೆರಡು ಕಡೆ ಭಿಕ್ಷೆ ಬೇಡ್ತಾರೆ ಅಂತ ಭಾರತದ ತುಂಬಾ ಭಿಕ್ಶುಕರೆ ಇದ್ದಾರೆ ಅಂತಲ್ಲ. ನಿಧಾನಕ್ಕೆ  ಎಲ್ಲ ಸರಿ ಹೋಗುತ್ತೆ ಅನ್ನೋದು ನನ್ನ ಸ್ಪಷ್ಟನೆ ಆಗಿತ್ತು. ನನಗೋ ಬೇರೆ ವಿಷಯದ ಬಗ್ಗೆ ಮಾತಾಡೋಣ ಅನ್ನೋ ಬಯಕೆ ಆದ್ರೆ ಅ ಮುದುಕಿ ಮತ್ತೆ ಮಾತು ಬದಲಿಸಿ ಅದೇ ಜಾಗಕ್ಕೆ ಬರೋಳು. ಕೊನೆಗೆ ತಲೆ ಕೆಟ್ಟು ಅವಳ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡೋಣ ಅಂತ ಸಿದ್ದನಾದೆ ಅಷ್ಟರಲ್ಲಿ ಊಟಕ್ಕೆ ತಯಾರಿ ಮಾಡುತ್ತಿದ್ದ ಆ ಏರ್ ಹೋಸ್ಟೇಸ್ ಬಂದು ಆ ಮುದುಕಿಗೆ ತಟ್ಟೆ ಕೊಟ್ಟಳು. ನನ್ನ ತಲೆ ತಿಂದು ಹೊಟ್ಟೆ ತುಂಬಿರಬೇಕು ಅವಳಿಗೆ, ಆದರೂ ಆ ಊಟ ತೆಗೆದುಕೊಂಡಳು.
ನನ್ನ ಊಟ ಇನ್ನೂ ಬರಲಿಲ್ಲ. ಕೊನೆಗೆ ಕ್ರಿಸ್ಟಿನ್ ಅನ್ನೋ ಏರ್ ಹೋಸ್ಟೇಸ್ ಬಂದು ನನಗೂ ಊಟ ಕೊಟ್ಟಳು. ನೋಡಿದ್ರೆ ಅದು ಚಿಕನ್. 'ನಾನು ಹೇಳಿದ್ದು ವೆಜ್ ಊಟ ಕಣ್ರೀ' ಅಂದೇ. ಅದಕ್ಕವಳು, ಹೌದಾ ಅಂತ ಹುಬ್ಬೆರಿಸಿದ್ಲು ಆಗ್ಲೇ ಗೊತ್ತಾಗಿದ್ದು ವೆಜ್ ಊಟ ಖಾಲಿಯಾಗಿತ್ತು  ಅಂತ. ಊಟ ವಾಪಸ್ ಕೊಟ್ಟೆ. ಎಲರೂ ಬಕಾಸುರನ ಹಾಗೆ ತಿಂತಾ ಇದ್ರೆ ನಾನು ಮಾತ್ರ, ಜ್ಯೂಸ್ ಹೀರುತ್ತಾ ಕುಳಿತೆ. ಪಕ್ಕದಲ್ಲಿ ಕುಳಿತಿದ್ದ ಮುದುಕಿಗೆ ನನ್ನ ಪರಿಸ್ಥಿನಿ ನೋಡಿ ಮರುಕ ಹುಟ್ಟಿತು ಅನ್ನಿಸುತ್ತೆ. ತನಗೆ ಕೊಟ್ಟಿದ್ದ ಬ್ರೆಡ್ ನನಗೆ ಕೊಟ್ಟಳು, ಜೊತೆಗಿಷ್ಟು ಜಾಮ್.
ಊಟ ಆದಮೇಲೆ ಮತ್ತೆ ಸ್ಲಂ ಡಾಗ್  ಕಥೆ ಮುಂದುವರೀತು. ಅಲ್ಲಿವರೆಗೂ ಆ ಸಿನಿಮ ನಾನು ನೋಡಿರಲಿಲ್ಲ. ಅದು ಹೇಗೆ ಚಿತ್ರಿಸಿದ್ದರೋ ನೋಡೇ ಬಿಡೋಣ ಅನ್ಕೊಂಡೆ. ಆ ಮುದುಕಿ ಹೇಳಿದಳು, ನಾನು ಆ ಸಿನಿಮಾನ 5 ಸಲ ನೋಡಿದ್ದೀನಿ ಅಂದ್ಲು. ಸರಿ ನಾನು ನೋಡ್ಬೇಕು ಅಂದುಕೊಂಡಿದ್ದೆ, ಆದ್ರೆ ಆಗಿಲ್ಲ  ಅನ್ನೋ ನನ್ನ ಮಾತಿಗೆ ಅವಳು ಹೇಳಿದಳು. 'ಈ ಪ್ಲೇನ್ ನಲ್ಲಿರೋ ವೀಡಿಯೊ ಸಿಸ್ಟಮ್ ನಲ್ಲಿ ಅದು ಇದೆ. ರೀಜನಲ್ ಚಾನೆಲ್ ನೋಡಿ' ಅಂದ್ಲು. ಆಗಲೇ ಗೊತ್ತಾಗಿದ್ದು, ಈ ಘಾಟಿ ಮುದುಕಿ ಯಾಕೆ ನನ್ನ ಪ್ರಾಣ ಹಿಂಡಿದ್ದು ಅಂತ.

ಸಿನಿಮಾ ನೋಡಿದೆ. ಗೊತ್ತಿರೋ ಅನೇಕ ಕುಂದುಗಳಿಗೆ ನನ್ನ ಮನಸ್ಸಲ್ಲೇ ಅಷ್ಟು ಪ್ರಶ್ನೆಗಳು ಉದ್ಭವಿಸಬೇಕಾದ್ರೆ, ಭಾರತದ ಬಗ್ಗೆ ಏನೂ ಗೊತ್ತಿರದ ಆ ಮುದುಕಿಗೆ ಅಷ್ಟು ಪ್ರಶ್ನೆಗಳು ಗೋಚರಿಸಿದ್ದು ಆಶ್ಚರ್ಯವಲ್ಲ.

ಭಿಕ್ಷಾಟನೆ ಅನ್ನೋ ರೋಗಕ್ಕೆ ನನಗೊಂದು ಉಪಾಯ ಹೊಳೆಯಿತು. ಇಲ್ಲಿವರೆಗೂ ಭಿಕ್ಷೆ ಹಾಕೋರು ಇರ್ತಾರೋ, ಭಿಕ್ಷೆ ಬೇಡೋದು ನಿಲ್ಲೋಲ್ಲ. ನನ್ನ ಮಿತ್ರನೊಬ್ಬ ಮೊನ್ನೇ ಹೀಗೆ ಟೀ ಅಂಗಡಿ ಹತ್ರ ನಿಂತಿದ್ದಾಗ, ಒಬ್ಳು 50 ವರ್ಷದ ಹೆಂಗಸು ಬಂದು ಕೈಚಾಚಿದಳು. 'ಒಂದು ರೂಪಾಯಿ ಕೊಡಿ' ಅನ್ನೋದು ಅವಳ ಬೇಡಿಕೆ. ನನ್ನ ಮಿತ್ರ ಪಟ್ಟನೆ ಕಿಸೆಯಿಂದ 2 ರೂಪಾಯಿ  ತೆಗೆದು, ಆ ಟೀ ಅಂಗಡಿಯವನಿಗೆ ಕೊಟ್ಟು 'ಅವಳಿಗೆ ಒಂದು ಬನ್ ಕೊಡಿ' ಅಂದ. ಮಾನವೀಯತೆ ಅನ್ನೋದು ಇಷ್ಟರ ಮಟ್ಟಿಗೆ ಇದ್ರೆ ಸಾಕು.

ಭಿಕ್ಷೆ ಬೇಡಿಸೋಕೆ ಕೆಲವರನ್ನು ದಾಳವಾಗಿ ಇರಿಸಿಕೊಂಡಿರುವ ಅನಾಮಧೇಯ ಕೈಗಳಿಗೆ ದುಡ್ಡಿನ ಬದಲು ಬನ್ ಸಿಕ್ಕರೆ? ಆ ಕೆಲಸ ಮುಂದುವರೆಯಿಸ್ತಾರ? ಯೋಚನೆ ಮಾಡಿ.  


ನನ್ನ ದೇಶ ಹೇಗಿರಬೇಕು?


1 comment: