Sunday, January 22, 2012

ಅನುಕೂಲಕರ ವಲಯ (comfort zone)

ಈ comfort zone ಅನ್ನೋದು ಮನುಷ್ಯನ್ನ ವರ್ತಮಾನದಲ್ಲಿ ಎಷ್ಟು  ಆರಾಮವಾಗಿ ಇಡುತ್ತೋ, ಅಷ್ಟೇ ಅವನನ್ನ ಹೇಡಿಯನ್ನಾಗಿ, ಆತ್ಮವಿಶ್ವಾಸರಹಿತನನ್ನಾಗಿ ಮಾಡಿ ಬಿಡುತ್ತದೆ. ನಮಗಿರುವ ಸವಲತ್ತು, ಸೌಕರ್ಯಗಳಿಗೆ ಒಗ್ಗಿ ಹೋಗಿರುವ ನಮ್ಮ ಬದುಕು ಹೊಸದನ್ನು ಪ್ರಯತ್ನಿಸುವ ಮನೋಭಾವವನ್ನು ಕಳೆದುಕೊಳ್ಳುತ್ತದೆ. ಈ ಮನೋಭಾವದ ಅಂತ್ಯವೇ, ಮನುಷ್ಯನ ವಿಕಾಸದ ಹಾದಿಗೆ ಮುಳ್ಳಾಗಿ ಪರಿಣಮಿಸುತ್ತದೆ.

ಹಾಗಾದರೆ, ಇರುವುದರಲ್ಲಿ ಸುಖ ಕಾಣಿರಿ, ಹಾಸಿಗೆ ಇದ್ದಷ್ಟು ಕಾಲು ಚಾಚು, ಇವೆಲ್ಲ ಸರಿಯಾದ ಮಾತುಗಳಲ್ಲ ಅಂತಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನೋದು ಮನುಷ್ಯನ ಈಗಿನ ಸ್ಥಿತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಸರಿಯಾಗಿ ಖರ್ಚು ನಿರ್ವಹಿಸಿ ಅಂತ ಹೇಳುತ್ತದೆ ವಿನಃ ಹೊಸದನ್ನ ಪ್ರಯತ್ನಿಸಬೇಡ ಅಂತ ಹೇಳೋದಿಲ್ಲ.
ಹೀಗ್ಯಾಕೆ, ಆರಾಮಾಗಿರೋರು ಅನುಕೂಲಕರ ವಲಯ ಬಿಟ್ಟು ಹೊಸದಕ್ಕೆ ಕೈ ಹಾಕಬೇಕು ಅಂತ ಹೇಳ್ತಾ ಇದ್ದೀನಿ ಅನ್ಕೊಂಡ್ರ? ಈ ಅನುಕೂಲಕರ ವಲಯ ಅನ್ನೋದು ಕ್ಷಣಿಕ. ಯಾವುದೋ ಕಾರಣಕ್ಕೆ ಅದು ಸ್ವಲ್ಪ ಬದಲಾದಾಗ ಮನುಷ್ಯನಿಗೆ ದಿಗಿಲು ಬಡಿದಂತಾಗುತ್ತದೆ. ಎಲ್ಲ ದಾರಿಗಳು ಕೊನೆಯಾದವು ಅನ್ನೋ ಹತಾಶೆ ಕಾಡುತ್ತವೆ. ಮನಸ್ಸು ಆ ಪರಿಸ್ಥಿತಿಗೆ ಸ್ಪಂದಿಸುವ ಶಕ್ತಿ ಕಳೆದುಕೊಂಡು ಬಿಡುತ್ತದೆ. ಏನೋ ಗಾಬರಿ ಮನಸ್ಸನ್ನ ಆವರಿಸಿಕೊಳ್ಳುತ್ತದೆ. ಇಂಥ ಸಮಯದಲ್ಲೇ ಮಾಡಿದ ಎಲ್ಲ ನಿರ್ಧಾರಗಳು ಪ್ರಾಯಶ: ತಪ್ಪಾಗಿರುತ್ತವೆ.


ಹಾಗಾದರೆ ಈ ತರಹದ ಪರಿಸ್ಥಿತಿಗಳಿಗೆ ಪರಿಹಾರ? ಇದೆ. ಖಂಡಿತ ಇದೆ. ಅದಕ್ಕೆ ಸ್ವಲ್ಪ ಮನಸ್ಸಿನ ಹತೋಟಿ, ಧೃಡ ನಿರ್ಧಾರ, ಸಂಕಲ್ಪ ಎಲ್ಲವು ಬೇಕು. "life is an experiment". ಹೊಸ ವಿಷಯಗಳನ್ನ, ಜೀವನಕ್ಕೆ ಹೊಸ ಆಯಾಮಗಳನ್ನ ಹುಡುಕುವ ಪ್ರಯತ್ನ ಮಾಡಬೇಕು. ಕೆಲವೊಮ್ಮೆ ಹೊಸದನ್ನ ಮಾಡಬೇಕಾದರೆ ಸೋಲು ನಮ್ಮ ಹತ್ತಿರ ಸುಳಿಯೋದು ಸಹಜ. ಆದರೆ ಅದನ್ನ ಮೀರಿ ನಿಂತ ಗೆಲುವು ನಮ್ಮಲ್ಲಿ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸ ತುಂಬುತ್ತದೆ. ನಮಗೆ ನಾವು ನಿರ್ಮಿಸಿಕೊಂಡಿರುವ ಬೇಲಿಯನ್ನು ಕಿತ್ತೆಸೆದು, ಹೊಸ ದಿಗಂತದ ಕಡೆಗೆ ಹೆಜ್ಜೆ ಹಾಕುವುದೇ ಜೀವನ.

ಇಂತಹದೇ ಒಂದು ಸಂದೇಶವನ್ನು ಸಾರಿದ್ದು ತೋಮಸ್ ಅಲ್ವಾ ಎಡಿಸನ್ "I have not failed. I've just found 10,000 ways that won't work.".

ಮತ್ತೆ ಸಿಗೋಣ......
     

1 comment:

  1. This is something to think about,
    well written, Keep writing.

    ReplyDelete