ಇವತ್ತು ಸಂಜೆ ಆಫೀಸನಿಂದ ಬರುವಾಗ ಸಿಗ್ನಲ್ ನಲ್ಲಿ ಒಂದು ವಿಚಿತ್ರ ಸನ್ನಿವೇಶ ನಡೆಯಿತು. ಸಿಗ್ನಲ್ ಪಕ್ಕದಲ್ಲೇ ಇದ್ದ ಅತಿದೊಡ್ಡ ಜಾಹಿರಾತು ಫಲಕವೊಂದರ ಫೋಕಸ್ ಲೈಟ್'ನಿಂದ ಹೊಗೆ ಬರ್ತಾ ಇತ್ತು. ಎಲೆಕ್ಟ್ರಿಕ್ ಶಾರ್ಟ್ ಸರ್ಕಿಟ್ ಆಗಿರಬಹುದು ಅನ್ಕೊಂಡೆ. ಆದ್ರೆ ವಾಸ್ತವದಲ್ಲಿ ಅಲ್ಲಿ ನಡೆಯುತ್ತಿದ್ದುದು ಬೇರೆ. ಆ ಲೈಟ್ ತುಂಬಾ ಹೊತ್ತಿನಿಂದ ಉರಿಯುತ್ತಿದ್ದ ಕಾರಣ ತುಂಬಾ ಬಿಸಿಯಾಗಿದ್ದಿರಬೇಕು. ಅದರ ಮೇಲೆ ಹಾರಾಡುತ್ತ ಬಂದ ಚಿಟ್ಟೆಗಳು, ಆ ಗಾಜಿಗೆ ತಗುಲಿದ ಕೂಡಲೇ ಸುಟ್ಟು ಹೋಗಿ ಹೊಗೆಯಾಡುತ್ತಿದ್ದವು.
ಈ ಪ್ರಕ್ರಿಯೆಯನ್ನು ತುಂಬಾ ಹೊತ್ತು ಗಮನಿಸಿದ ನನ್ನ ಮನಸ್ಸಿನಲ್ಲಿ ಒಂದೆರಡು ಯೋಚನೆಗಳು ಮೂಡಿದವು. ಜೀವನ ಅನ್ನೋದು ಕೂಡ ಆ ಚಿಟ್ಟೆ ಥರ. ಅದಕ್ಕೆ ಬೇಕಾಗುವಷ್ಟು ಬೆಳಕು ಇದ್ದರೂ ಕೂಡ ದುರಾಸೆಯಿಂದಲೋ, ಮೂರ್ಖತನದಿಂದಲೋ ಅತೀ ಹೆಚ್ಚು ಕಾದಿರುವ ಆ ಗಾಜಿನ ಕಡೆಗೆ ಸಾಗುವುದು. ಆ ಭಗವಂತನ ಸೃಷ್ಟಿ ಕೂಡ ವಿಚಿತ್ರ. ಆಸೆಗೂ ಮತ್ತು ದುರಾಸೆಗೂ ಕೇವಲ ಕೂದಲಿನ ಎಳೆಯಷ್ಟು ಅಂತರ ಇಟ್ಟಿದ್ದಾನೆ. ನಾವು ಬೆಳೆಯಬೇಕು ಅನ್ನೋ ಆಸೆ ಜೊತೆಗೆ ಅದು ಧನತ್ಮಕವಾಗಿದೆಯೇ ಅನ್ನೋದರ ಬಗ್ಗೆ ಅರಿವೇ ಇರುವುದಿಲ್ಲ. ಯಾವಾಗ ಬೆಳವಣಿಗೆ ಹೀಗೆ ಧನಾತ್ಮಕತೆಯಿಂದ ದೂರ ಸರಿಯುವುದೋ ಆಗಲೇ ಅದು ದುರಾಸೆಯಾಗಿ ಬದಲಾಗುವುದು. ಇಂತಹ ಬೆಳವಣಿಗೆ ಬೆಂಕಿ ಹತ್ತಿರ ಹೋಗಲು ಪ್ರಚೋದಿಸುವುದು. ಕೊನೆಗೆ ಫಲಿತಾಂಶ ಕಂಡುಕೊಂಡಾಗ ಉಳಿದುಕೊಳ್ಳುವುದು ಮಾತ್ರ ಪಶ್ಚಾತ್ತಾಪದ ಹೊಗೆ.
ಅದಕ್ಕೆ ದುರಾಸೆ ಪಟ್ಟು ಬೆಂಕಿಯಲ್ಲಿ ಬೀಳೋ ಬದಲು ಆಸೆ ಪಟ್ಟು ಬೆಳಕಿನಲ್ಲಿ ಇರಬಹುದಲ್ಲ?
No comments:
Post a Comment