Wednesday, October 26, 2011

ಮದುವೆ ನಂತರ ಮೊದಲ ದೀಪಾವಳಿ

ಮದುವೆ ಆದ ಮೇಲೆ ಪ್ರತಿ ದಿನ ಕೂಡ ವಿಶೇಷವೆ. ಅದರಲ್ಲೂ ಮೊದಲ ದೀಪಾವಳಿ. ನನ್ನ ಕನಸಿನಲ್ಲೂ ಎಣಿಸಿರದ ಅದ್ಭುತ ಅನುಭವ. ಈ ದೀಪಾವಳಿ ಹಬ್ಬದ ಮೂಲಕವೇ, ಒಬ್ಬ ಅಳಿಯನಿಗೆ ಹಿಂದೂ ಸಂಪ್ರದಾಯದ ಪ್ರಕಾರ ಎಷ್ಟು ದೊಡ್ಡ ಗೌರವ ಇದೆ ಅನ್ನೋದರ ಅರಿವು ನನಗಾಯಿತು. ನಾನು ಮತ್ತು ನನ್ನ ಹೆಂಡತಿ, ನನ್ನ ಅತ್ತೆ ಜನುಮದಿನದಂದು ಅವರಿಗೆ cake ತೆಗೆದುಕೊಂಡು ಹೋಗಿ surprise ಕೊಟ್ಟಿದ್ದೆವು. ಅದನ್ನು ಇವತ್ತು ನೆನೆಸಿಕೊಂಡು ನನ್ನ ಅತ್ತೆ ಸಂತೋಷಪಟ್ಟರು. ಚಿಕ್ಕ ಅಳಿಯ ಅನ್ನೋ ಅತಿಯಾದ ಒಲುಮೆಯಿಂದ ನನ್ನ ಅತ್ತೆ ಮನೆಯವರು ನೀಡಿದ ಈ ರಾಜೋಪಚಾರಗಳಿಗೆ ನಾನು ಅವರಿಗೆ ಚಿರಋಣಿ.

Tuesday, October 25, 2011

ಸ್ವಪ್ನ ಮತ್ತು ಮನು

ಸ್ವಪ್ನ ನಮ್ಮ ಕಾಲೇಜ್'ನಲ್ಲೇ ಅತಿ ಸುಂದರ ಹುಡುಗಿ. ಇವಳ ಒಂದು ನೋಟಕ್ಕೆ, ನೂರು ಜನ ಹುಡುಗರು ಗುಲಾಬಿ ಹೂ, ಕಾರ್ಡು ಹಿಡಿದುಕೊಂಡ ಓಡಾಡಿದ ಪ್ರಸಂಗಗಳು ಅನೇಕ. ಆದ್ರೆ ಮನು ಅನ್ನೋ ನನ್ನ ಗೆಳೆಯನದು ಮಾತ್ರ ಅದೃಷ್ಟವೇ ಅದೃಷ್ಟ. ಹಾಗೋ ಹೀಗೋ ಮಾಡಿ ಸ್ವಪ್ನಳ  ಗೆಳೆತನ ಸಂಪಾದಿಸಿಬಿಟ್ಟ. ನೋಡೋಕೆ ಹೀರೋ ಥರ ಇಲ್ಲದೆ ಇದ್ರೂ ಒಂದು ಲೆವೆಲ್ಗೆ ಓಕೆ. ಮನು'ನ ಕಂಡ್ರೆ ಎಲ್ಲ ಹುಡುಗರಿಗೂ ಹೊಟ್ಟೆ ಉರಿ. ಕೆಲವರಿಗೆ ಸ್ವಪ್ನ ಅವರನ್ನು ತಿರಸ್ಕರಿಸ್ದಳು ಅನ್ನೋ ನೋವಿದ್ರೆ, ಇನ್ನು ಕೆಲವರಿಗೆ ನಾವು ಮನುಗಿಂತ ಮುಂಚೆ ಟ್ರೈ ಮಾಡಬೇಕಿತ್ತು ಅನ್ನೋ ನಿರಾಸೆ. ಅದೇನೇ ಇರಲಿ ಇವತ್ತು ಮನು ಮತ್ತು ಸ್ವಪ್ನ ಒಟ್ಟಿಗೆ ಸಿನಿಮಾ ನೋಡಲು ಹೊರಟಿದ್ದಾರೆ. ಎಲ್ಲ ಹುಡುಗರು ಥಿಯೇಟರನಲ್ಲಿ 
ಏನೇನು ನಡಿಯುತ್ತೋ ಅನ್ನೋ ವಿಷಯಾನ ನೆನಿಸಿಕೊಂಡು ನೋವಿನಲ್ಲಿದ್ದಾರೆ. ಮನು ಮತ್ತು ಸ್ವಪ್ನ ಅಕ್ಕಪಕ್ಕದ ಸೀಟ್ನಲ್ಲಿ ಕೈ ಮೇಲೆ ಕೈ ಹಾಕಿಕೊಂಡು ಕೂತಿದ್ದಾರೆ. ಮನುವಿನ ಮನಸ್ಸಲ್ಲಿ ಏನೇನೋ ಯೋಚನೆ, ಸ್ವಪ್ನ ಕೂಡ ಸ್ವಲ್ಪ ಭಯದಲ್ಲಿ ಇದ್ದಾಳೆ. ಇನ್ನೇನು ಅವಳನ್ನು ಕೇಳೇ ಬಿಡೋಣ ಅಂತ ಮನು ಕಣ್ಮುಚ್ಚಿ "ನೀನು ನನ್ನ ಮದುವೆ  ಆಗ್ತೀಯ?" ಅಂತ ಕೇಳೋದೇ ತಡ, ಕೈ ಬಿಡಿಸಿಕೊಂಡ ಸ್ವಪ್ನ ಮನು ಕೆನ್ನೆ ಮೇಲೆ ಬಾರಿಸಿದಳು. ಮನು ಕಣ್ಬಿಟ್ಟು ನೋಡಿದಾಗ ಪ್ರೊಫೆಸರ್ ಲಕ್ಷ್ಮೀಪತಿ ಮುಂದೆ ನಿಂತಿದ್ದಾರೆ. "ಕ್ಲಾಸ್ ರೂಂನಲ್ಲಿ  ನಿದ್ದೆ ಮಾಡ್ತೀಯ ಭಡವ". !!!!!!

ಬರೋಬರಿ ೩೦ ನಿಮಿಷದ ಕನಸಿಗೆ ತೆರೆ ಬಿದ್ದಿತ್ತು. ಕನಸಲ್ಲಾದರೂ ಅವಳನ್ನ ಪ್ರೊಪೋಸ್ ಮಾಡಿದ ತೃಪ್ತಿ ಸಿಕ್ತಲ್ಲ ಅಂತ ನಕ್ಕು ಮನು ಸುಮ್ಮನಾದ.

Saturday, October 22, 2011

ತಾಳಿಯ ಬೆಲೆ...

ಆವತ್ತು ಭೀಮನ ಅಮಾವಾಸ್ಯೆಯ ಹಿಂದಿನ ದಿನ. ಅಮ್ಮ ನನಗೆ ಫೋನ್ ಮಾಡಿ, ಮನೆಗೆ ವಾಪಸ್ ಬರೋವಾಗ ಪೂಜೆಗೆ ಹೂವು ಹಣ್ಣು ತರೋಕೆ ಹೇಳಿದ್ರು. ಆಫೀಸನಿಂದ ಹೊರಟಾಗ ಸುಮಾರು ೧೦ ಗಂಟೆ. ಇನ್ನೆಲ್ಲಿ ಹೂವು ಹಣ್ಣು ಸಿಗೋಕೆ ಸಾಧ್ಯ ಅಂದುಕೊಂಡು ಬನಶಂಕರಿ ದೇವಸ್ಥಾನದ ಹತ್ರ ಹೋದೆ. ಎಲ್ಲಿ ನೋಡಿದರು ಅಂಗಡಿ, ಮುಗ್ಗಟ್ಟುಗಳು ಮುಚ್ಚಿವೆ. ಕೊನೆಗೆ ಹಾಗೆ ಹೋದರಾಯಿತು ಅಂದುಕೊಂಡು ಸ್ವಲ್ಪ ಮುಂದೆ ಬಂದೆ. ನನ್ನ ಅದೃಷ್ಟಕ್ಕೆ ಒಬ್ಬ ಮಹಿಳೆ ತನ್ನ ಚಿಕ್ಕ ಕೈಗಾಡಿಯಲ್ಲಿ ಹೂವು, ಹಣ್ಣು ಮಾರಲು ಕುಳಿತಿದ್ದಳು. ಹೂವು, ಹಣ್ಣು ಅನ್ನೋದಕ್ಕಿಂತ ಅದು ನನ್ನ ಪಾಲಿಗೆ ಓಯಸಿಸ್ ನಂತೆ ಕಂಡು ಬಂತು. ಕೊನೆಗೂ ನನಗೆ ಬೇಕಾದ ಎಲ್ಲ ಪದಾರ್ಥಗಳನ್ನು ತೆಗೆದುಕೊಂಡು ದುಡ್ಡು ಕೊಟ್ಟೆ. ಆ ಹೆಣ್ಣುಮಗಳ ಕೈಯ್ಯಲ್ಲಿ ಹಸುಗೂಸೊಂದನ್ನು ನೋಡಿ, "ಏನಮ್ಮ, ಇಷ್ಟು ರಾತ್ರಿ ಒಬ್ಬಳೇ ಇಲ್ಲಿ ಕಷ್ಟ ಪಡುತ್ತ ಇದ್ದೀಯಲ್ಲ. ನಿನ್ನ ಗಂಡನನ್ನಾದರೂ ಸಹಾಯಕ್ಕೆ ಸೇರಿಸಿಕೊಲ್ಲಬಹುದಲ್ವ". ಅವಳ ಉತ್ತರ ಕೇಳಿದ ಮೇಲೆ ಕೊಂಚ ನೋವು ಮತ್ತು ಬೇಸರ ನನ್ನ ಕಾಡಿತು. ಅವಳು ಯಾವುದೇ ಮಾತುಗಳನ್ನು ಉಪಯೋಗಿಸಲಿಲ್ಲ, ಬದಲಿಗೆ ಕೈಮಾಡಿ ಪಕ್ಕದಲ್ಲೇ ಕುಡಿದು ಬಿದ್ದಿದ್ದ ಓರ್ವ ವ್ಯಕ್ತಿಯ ಕಡೆಗೆ ನೋಡಿದಳು. ನನ್ನ ಪ್ರಶ್ನೆಗೆ ಉತ್ತರ ಆಗಲೇ ಸಿಕ್ಕಿ ಆಗಿತ್ತು. ಅದು ಅವಳ ಗಂಡನೇ....

ಸಮಾಜದಲ್ಲಿ ಭೀಮನ ಅಮಾವಾಸ್ಯೆ ಮೂಲಕ ಗಂಡನು ಚೆನ್ನಾಗಿರಲಿ ಅಂತ ಹಾರೈಸಿ ಮಾಡುವ ಪೂಜೆ. ಆದ್ರೆ ಆ ತಾಯಿ ಯಾವುದೇ ಪೂಜೆ ಮಾಡದೇ, ಕೇವಲ ತನ್ನ ಕರ್ತವ್ಯದ ಮೂಲಕ ಭೀಮನ ಅಮಾವಾಸ್ಯೆಯನ್ನು ಆಚರಿಸಿದ್ದಳು. ಕೆಲವರಿಗೆ ಗಂಡನ ಮೇಲೆ ಕಿಂಚಿತ್ತು ಅಭಿಮಾನ ಇರುವುದಿಲ್ಲ, ಆದರೆ ಇಲ್ಲಿ ಕುಡುಕನಾದ್ರು, ಗಂಡನಿಗೆ ಆ ತಾಯಿ ತೋರಿಸಿದ ಗೌರವ ಕಂಡು, ಇಂತಹ 
ಎಷ್ಟೋ ಹೆಣ್ಣುಮಕ್ಕಳಿಗೆ ನಮಸ್ಕಾರ ಮಾಡುವ ಮನಸ್ಸಾಯಿತು. ನಾನು ಮನೆಯತ್ತ ಹೊರಟೆ...... 

Saturday, October 8, 2011

ಔಟ್ ಆಫ್ ಕವರೇಜ್ ಏರಿಯ....

ರಘು ಮತ್ತು ಪ್ರಭು ಬಾಲ್ಯ ಸ್ನೇಹಿತರು. ಯಾವುದೋ ಒಂದು ಕಹಿ ಘಳಿಗೆಯಲ್ಲಿ ಇಬ್ಬರ ನಡುವೆ ಮನಸ್ತಾಪ ಆಗಿದೆ. ೩ ವರ್ಷದ ನಂತರ ಕೂಡ ಅದು ಬಗೆಹರಿದಿಲ್ಲ. ಪ್ರಭು ಆಗಾಗ ಫೋನ್ ಮಾಡಲು ಪ್ರಯತ್ನಿಸಿ ನೋಡಿದ್ದಾನೆ. ರಘು ಮಾತ್ರ ಅವನ ಯಾವ ಕರೆಗಳಿಗೂ ಉತ್ತರ ಕೊಟ್ಟಿಲ್ಲ. ಪ್ರಭು ಮತ್ತೆ ಫೋನ್ ಮಾಡಿದ್ದಾನೆ, ಎಂದಿನಂತೆ ರಘು ಉತ್ತರಿಸಿಲ್ಲ. ಕೊನೆಗೆ ಒಂದು ದಿನ ಪ್ರಭು ಫೋನ್ ಬರುವುದು ನಿಂತು ಹೋಗಿದೆ. ಕಾಶಿ ರಘು ಮತ್ತು ಪ್ರಭು ಇವರ ಗೆಳೆಯ, ಅಮೆರಿಕದಿಂದ ಬಂದು ರಘು ಮನೆಗೆ ಹೋಗುತ್ತಾನೆ. ಸ್ನೇಹಿತನನ್ನು ಅಚಾನಕ್ಕಾಗಿ ನೋಡಿದ ರಘು
ರಘು : "ಏನಪ್ಪಾ ಈ ಧಿಡೀರ್ ದರ್ಶನ ?".
ಕಾಶಿ : ಪ್ರಭು ವಿಷಯ ತಿಳೀತು ಅದಕ್ಕೆ ಬಂದೆ.
ರಘು : ಏನು ವಿಷಯ ?
ಕಾಶಿ : ಪ್ರಭು ನಮ್ಮನ್ನ ಅಗಲಿ ೩ ದಿನ ಆಯಿತು.

ರಘು ಮನಸ್ಸಿಗೆ ತುಂಬಾ ಬೇಸರ. ನನ್ನ ಜೊತೆ ಮಾತಾಡಲು ಹಾತೊರೆಯುತ್ತಿದ್ದ ನನ್ನ ಸ್ನೇಹಿತನಿಗೆ ಅವನ ಕೊನೆಗಾಲದಲ್ಲೂ ಮಾತಾಡಿಸುವ ಸೌಜನ್ಯ ನಾನು ತೋರಲಿಲ್ಲ. ಇದಾದ ನಂತರ ಪ್ರಭು ಮೊಬೈಲ್ ಗೆ ದಿನಾಲು ರಘು ಫೋನ್ ಮಾಡ್ತಾನೆ, ಆದ್ರೆ ಪ್ರಭು ಉತ್ತರ ಮಾತ್ರ "ಔಟ್ ಆಫ್ ಕವರೇಜ್ ಏರಿಯ....".

ನನ್ನ ಮಗನ ಮದುವೆ

ಬೆಳಿಗ್ಗೆ ಎದ್ದು ನನ್ನ ಮುಂದೆ ನಿಂತ ನನ್ನ ೯ ವರ್ಷದ ಮಗ, "ಅಪ್ಪ ನನಗೆ ಶ್ರೇಯಾ ತುಂಬಾ ಇಷ್ಟ, ನಾನು ಮದುವೆ ಆದ್ರೆ ಅವಳನ್ನೇ. ಅವಳಿಗೂ ನನ್ನ ಕಂಡ್ರೆ ಇಷ್ಟ" ಅಂದ. ಅವನ ಮಾತು ಕೇಳಿ ಒಂದು ನಿಮಿಷ ನಕ್ಕು, ಸರಿ ಮದುವೆ ಮಾಡಿಸ್ತೀನಿ ಬಿಡು ಅಂತ ಉತ್ತರ ಕೊಟ್ಟೆ. ಒಂದು ಕ್ಷಣ ಯೋಚಿಸಿದೆ ಇದು ಕೇವಲ ಆಕರ್ಷಣೆ ಇರಬಹುದು ಸ್ವಲ್ಪ ದಿನ ಕಳೆದ ಮೇಲೆ ತಿಳುವಳಿಕೆ ಮೂಡಿ ತಾನೇ ಎಲ್ಲ ಸರಿ ಹೋಗುತ್ತೆ ಅಂದುಕೊಂಡೆ. ನನ್ನ ಮಗ ಕೂಡ ನನ್ನಂತೇ ತುಂಬಾ ಹಟವಾದಿ. ಕೊನೆಗೂ ನಾನು ಅಂದುಕೊಂಡಿದ್ದು ತಪ್ಪು ಅಂತ ನಿರೂಪಿಸಿಬಿಟ್ಟ. ಇವತ್ತು ನನ್ನ ಮಗನ ಮದುವೆ, ಹುಡುಗಿ ಯಾರು ಗೊತ್ತಾ, "ಶ್ರೇಯಾ"ನೇ. ಏನಿದು ನಾನು ಬಾಲ್ಯ ವಿವಾಹ ಮಾಡ್ತಿದ್ದೀನಿ ಅನ್ಕೊಂಡ್ರ ? ರೀ ನನ್ನ ಮಗನಿಗೆ ಈಗ ೨೫ ವರ್ಷ, ೧೬ ವರ್ಷದಿಂದ ಪ್ರೀತಿಸುತ್ತಿರೋ ಹುಡುಗಿ ಜೊತೆ :)

Thursday, October 6, 2011

ಶ್ರೀಪಾದರಾಯರ ಪತ್ನಿ

ಪಕ್ಕದ ಮನೆ ಶ್ರೀಪದರಾಯರದು ಮತ್ತು ಅವರ ಹೆಂಡತಿ ಸರೋಜಮ್ಮನವರದು ಅನ್ಯೋನ್ಯ ಸಂಸಾರ. ಹೆಂಡತಿ ಗಂಡನಿಗೆ ಊಟ ಹಾಕದೇ ತಾವು ತಿನ್ನುವುದಿಲ್ಲ , ಹಾಗೇನೆ ಶ್ರೀಪಾದರಾಯರು ಕೂಡ. 
ಹೆಂಡತಿಗೆ ತುತ್ತು ಹಾಕದೆ ತಾವು ಊಟ ಮಾಡುವುದಿಲ್ಲ. ಎಲ್ಲ ಯುವ ಪೀಳಿಗೆಗೂ ಇವರ ದಾಂಪತ್ಯ 
ಉದಾಹರಣೆ. ಇವರೂ ಕೂಡ ಆಗಾಗ್ಗೆ ಜಗಳವಾಡುತ್ತಾರೆ. ಆದರೆ ರಾಯರೇ ಕೊನೆಗೆ ಸೋಲು 
ಒಪ್ಪಿಕೊಳ್ಳುವುದು. ಎಂದಿನಂತೆ ಇವತ್ತು ಕೂಡ ರಾಯರೇ ಹೆಂಡತಿಗೆ ಊಟ ಮಾಡಿಸುತ್ತಿದ್ದಾರೆ. ಹಿಂದೆ ಬಂದು ನಿಂತ ರಾಮಣ್ಣ (ರಾಯರ ಮನೆ ಆಳು),  ಅಪ್ಪೋರೆ ಮನೆಗೆ ಹೋಗೋಣ ನಡಿಯಿರಿ". ರಾಯರ  ಕಣ್ಣಲ್ಲಿ ಹೆಂಡತಿಯನ್ನು ಬಿಟ್ಟು ಹೋಗಬೇಕಲ್ಲ ಅನ್ನೋ ಬೇಸರದ ಕಣ್ಣೀರು. "ಸರಿ, ನಾಳೆ ಮತ್ತೆ ಬರುತ್ತೇನೆ" ಎನ್ನುತ್ತಾ ಸ್ಮಶಾನದಿಂದ ಹೊರನಡೆದರು. ಹೌದು ಸರೋಜಮ್ಮ ತೀರಿಕೊಂಡು ೨೦ ವರ್ಷಗಳಾಗಿವೆ !!!!!!.

ಸುಖದ ಸಂಪತ್ತು.





ಮನು ಮತ್ತು ಕೀರ್ತಿ ನಡುವೆ ವಾಗ್ವಾದ ನಡೀತಾ ಇದೆ. ಇದೇನು ಹೊಸ ವಿಷಯ ಅಲ್ಲ. ಕೀರ್ತಿಗೆ ಒಳ್ಳೆ ಹೆಸರು, ದುಡ್ಡು ಮತ್ತು ಅಂತಸ್ತು ಗಳಿಸಬೇಕು ಅನ್ನೋ ಆಸೆ, ಅದಕ್ಕೆ ಮನು ಪೂರ್ತಿ ಸಮ್ಮತಿ ಸೂಚಿಸಿ ಆದಷ್ಟು ಅವಳಿಗೆ ಸಹಾಯ ಮಾಡುತ್ತಾನೆ. ಆದರೆ ಇವತ್ತಿನ ಜಗಳದ ವಿಷಯ ಸ್ವಲ್ಪ ಗಂಭೀರ. ಅವಳಿಗೆ ಕೇವಲ ತನ್ನ ವೃತ್ತಿ ಬದುಕಿನ ಕನಸುಗಳು ಮತ್ತು ಐಶಾರಮಿ ಮಾತ್ರ ಮುಖ್ಯ, ಅದಕ್ಕೋಸ್ಕರ ಚಿಕ್ಕಚಿಕ್ಕ ಆಸೆಗಳ ಮತ್ತು ಭಾವನೆಗಳ ಬಲಿ ಕೊಡಲು ಅವಳು ಸಿದ್ಧ. ಅವಳ ಇಚ್ಚೆಯಂತೆ ಮನುವನ್ನು ಬಿಟ್ಟು ದೆಹಲಿಗೆ ಹೋಗುವುದಾಗಿ ನಿರ್ಧರಿಸಿದಳು. ಹೋಗುವ ಮುನ್ನ ಮನುವನ್ನು ಕರೆದು "ನಾನು ಬಂದ ಮೇಲೆ ಮತ್ತೆ ನಮ್ಮ ಸುಖೀ ಜೀವನವನ್ನು ಮುಂದುವರೆಸೋಣ" ಅಂತ ಹೇಳಿ ಹೊರಟೆ ಹೋದಳು. ಮನನೊಂದ ಮನು ವಿಧಿಯಿಲ್ಲದೇ ಒಪ್ಪಿಕೊಂಡನು.......
...........೨ ವರ್ಷದ ನಂತರ .....................................
ಇವತ್ತು ಕೀರ್ತಿ ಮರಳಿ ಬರುವ ದಿನ. ಮನು ಸಡಗರದಿಂದ ಮನೆಯನ್ನೆಲ್ಲ ಸಿಂಗರಿಸಿದ್ದಾನೆ. ಅವಳಿಗೆ ಇಷ್ಟ ಅಂತ ಜಾಮೂನು ತರಲು ಅಂಗಡಿಗೆ ಹೋಗಿದ್ದಾನೆ. ಅಷ್ಟರಲ್ಲಿ ಕೀರ್ತಿ ಫೋನ್ ಬರುತ್ತೆ. ನಾನು ಮನೆಗೆ ಬಂದು ತಲುಪಿದ್ದೀನಿ. ಖುಷಿಗೊಂಡ ಮನು ಜಾಮೂನು ಕಾರಿನಲ್ಲಿ ಇಟ್ಟುಕೊಂಡು ಅವಸರದಿಂದ ಹೊರಡುತ್ತಾನೆ. ೧೦ ನಿಮಿಷದ ನಂತರ ಮನು ಮನೆ ಸೇರಿದ್ದು ಹೆಣವಾಗಿ ಕಾರಣ ರಸ್ತೆ ಅಪಘಾತ. ಕೀರ್ತಿಗೆ ಆಘಾತ.
ಅತೀ ಪ್ರೀತಿಯಿಂದ ನೋಡಿಕೊಂಡಿದ್ದ ಪತಿಯನ್ನು ಕಳೆದುಕೊಂಡ ಕೀರ್ತಿಗೆ ಇವತ್ತು ಜೀವನದಲ್ಲಿ ಎಲ್ಲ ಸೌಕರ್ಯಗಳು ಸಿಕ್ಕಿವೆ. ಈಗ ಮನು ಹೇಳಿದ ಮಾತುಗಳು ಮಾತ್ರ ಅವಳೊಂದಿಗಿವೆ. "ಜೀವನದಲ್ಲಿ ಸುಖ ಎಂಬುದು ಕೇವಲ ದುಡ್ಡು ಕಾಸಿನಲ್ಲಿ ಇಲ್ಲ. ನಾಳೆ ನಾವು ಚೆನ್ನಾಗಿ ಇರ್ತೀವಿ ಅನ್ನೋ ಕನಸು ಕಾಣೋದು ಒಳ್ಳೇದು. ಆದರೆ ಆ ಕನಸಿನ ಕಾಲಿನಿಂದ ಇವತ್ತಿನ ಸಂತೋಷಗಳನ್ನು ಹೊಸಕುವುದು ಸರಿಯಲ್ಲ"

Wednesday, October 5, 2011

ಸಾಂತ್ವನ ಯಾರಿಂದ?





ನನ್ನ ಎಲ್ಲ ನೋವು, ದು:ಖ ಬೇಸರಿಕೆಯನ್ನು ಮರೆಸುತ್ತಿದವಳು ನೀನು,
ಈಗ ನಿನ್ನ ಅಗಲಿಕೆಯಿಂದ ಆಗಿರುವ ನೋವಿಗೆ ಸಾಂತ್ವನ ಹೇಳುವವರು ಯಾರು?

ಇದೆಂಥಾ ಉಡುಗೊರೆ ??

ಅಂದು ಪ್ರತೀಕ್'ನ ಹುಟ್ಟುಹಬ್ಬ. ಪ್ರತೀಕ್ ಮತ್ತು ಅವನ ಇಡೀ ಕುಟುಂಬ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದರು. ಒಬ್ಬ ಸದಸ್ಯ ಮಾತ್ರ ಕಾಣಿಸಲಿಲ್ಲ, ಅದು ಅವನ  ಹೆಂಡತಿ. ಪ್ರತಿಕ್  ಹೆಂಡತಿ ಅವನ ಮೇಲೆ ಮುನಿಸಿಕೊಂಡು ಮನೆ ಬಿಟ್ಟು ಹೋಗಿ ೬ ತಿಂಗಳಾಗಿದೆ. 
ಆದರೂ ಅವಳ ದಾರಿ ಕಾಯುವುದೇ ಇವನ ಕೆಲಸವಾಗಿ ಬಿಟ್ಟಿದೆ. ಸಂಜೆ ಆಫೀಸ್ ಮುಗಿಸಿಕೊಂಡು ಬಂದ ಅವನಿಗೆ ಸೆಕ್ಯೂರಿಟಿ "ಸಾರ್ ನಿಮಗೊಂದು ಲೆಟರ್ ಇದೆ" ಅಂದ. ಕೈಯಲ್ಲಿ ತೊಗೆದುಕೊಂಡು ನೋಡಿದರೆ ಹೆಂಡತಿಯಿಂದ ಬಂದ ಪತ್ರ. ಅತ್ಯಂತ ಖುಷಿಯಿಂದ ಲಕೋಟೆ ಹರಿದು ನೋಡಿದ ಪ್ರತೀಕನಿಗೆ ನೋವು, ವೇದನೆ ಮತ್ತು ಬೇಸರ. ಅದು ಹೆಂಡತಿ ಕಳಿಸಿದ ವಿಚ್ಚೇದನ ಪತ್ರ. ಯಾವ ಹೆಂಡತಿಯೂ ಕೊಡಲಾರದ ಇಂಥ ಹುಟ್ಟುಹಬ್ಬದ ಉಡುಗೊರೆಯನ್ನು ಸ್ವೀಕರಿಸಿದ ಪ್ರತಿಕ್ ದೀರ್ಘವಾದ ಉಸಿರನ್ನು ಬಿಟ್ಟು, ಮನೆಯೊಳಗೇ ಹೋದ. .............................. ಮುಂದುವರೆಯುವುದು.

Monday, October 3, 2011

ತಿರುಗಿ ನೋಡಬಾರದೇ...

ಮರಳಿ ನೀ ಬಾರದ ದಾರಿಯ ನೋಡುತ,
ನೀ ಬಂದೇ ಬರುವಿ ಎಂಬ ಹುಸಿ ಕನಸನ್ನು ಕಟ್ಟಿರುವೆ, ನನ್ನ ಈ ಹುಚ್ಚುತನ ನೋಡಿ ನಗಲೆಂದು ನೀ ಬರಬಾರದೇ ?