Tuesday, November 29, 2011

ಆನ್'ಲೈನ್ ಯಾರಿದ್ದಾರೆ?


ರಾಹುಲ ೨೮ ರ ಹರೆಯದ ಯುವಕ.  ಒಳ್ಳೆ ಕೆಲಸ, 
ಸಂಬಳ ಮತ್ತು ಕಂಪನಿಯ ಸಹದ್ಯೋಗಿಗಳು. ಇವನಿಗೆ ಧೂಮ್ರಪನದ ಗಂಧ ಗಾಳಿ ಗೊತ್ತಿಲ್ಲ, 
ಬೀರು, ರಮ್ಮು ಇತ್ಯಾದಿ ಪಾನೀಯಗಳ ರುಚಿ ಗೊತ್ತಿಲ್ಲ. ಆಗಾಗ ಸಿನಿಮಾ ಹೋಗುವ ಹುಚ್ಚು. ಅದೂ ಅತಿ ವಿರಳ. ಮನದಲ್ಲೇನೋ ಯಾರಿಗೂ ಹೇಳಲಾರದ ಭಾವನೆಗಳು. ಆ ಭಾವನೆಗಳನ್ನು ಹಂಚಿಕೊಳ್ಳುವ ಒಂದು ಪುಟ್ಟ ಜೀವ ಕೂಡ ಇಲ್ಲದ ನತದೃಷ್ಟ. ದಿನವೆಲ್ಲ ಖುಷಿಯಿಂದ ಓಡಾಡುವ ಇವನಿಗೆ, ಸಂಜೆ ಕ್ಯಾಬ್ ಹತ್ತಿದ ಮರುಕ್ಷಣ ಯಾವುದೊ ಕಾಣದ ಮೌನ ಆವರಿಸುತ್ತದೆ. ನಿನ್ನೆ ಕೂಡ ಇವನಿಗೆ ಆ ಮೌನ ಕಾಡಿದ್ದಿರಬೇಕು. ಬಹಳ ದಿನಗಳ ನಂತರ ಯಾರ 
ಜೊತೆಯಾದರು ಮಾತಾಡೋಣ ಅನ್ನೋ ಯೋಚನೆಯಿಂದ facebook ತೆರೆದು ಕೂತಿದ್ದಾನೆ. ಬಹಳಷ್ಟು ಜನಕ್ಕೆ ಇವನ ಫೇಸ್ ಮರೆತುಹೋಗಿದೆ. ಇವನ ಅದೃಷ್ಟಕ್ಕೆ ಯಾರೊಬ್ಬರೂ ಆನ್ಲೈನ್ ಸಿಕ್ಕಿಲ್ಲ. ಬಹು ಬೇಸರಗೊಂಡ ಇವನಿಗೆ ಮರಭೂಮಿಯಲ್ಲಿ ಓಯಸಿಸ್ ಕಂಡಂತೆ ಒಬ್ಬ ಹಳೇ ಸ್ನೇಹಿತ ಹಸಿರು ಬತ್ತಿಯೊಂದಿಗೆ ಆನ್'ಲೈನ್ ಕಾಣಿಸ್ತಾನೆ. ಆದ್ರೆ ಇವನ hi ... hello ... ಗೆ ಉತ್ತರ ಮಾತ್ರ ಬರೋಲ್ಲ. 
ಛೇ... ಯಾರು ನನಗೆ ಬೇಕಾದಾಗ ಮಾತಾಡೋಲ್ಲ. ಅಷ್ಟರಲ್ಲಿ ಕುಕ್ಕರ್ ಸೀಟಿ ಹೊಡಿಯುತ್ತೆ, ಮತ್ತು ಇವನ ಯೋಚನೆಗೂ ಕೂಡ ತೆರೆ ಬೀಳುತ್ತೆ. ಕೈಯಲ್ಲಿ 
ಹಿಡಿದುಕೊಂಡು ಕೂತಿರುವ ಇಂಟರ್ನೆಟ್ ಬಿಲ್ ಕಟ್ಟಿ ನಾಳೆಯಿಂದ ಫ್ರೆಂಡ್ಸ್
ಜೊತೆ ಚಾಟ್ ಮಾಡೋಣ ಅಂತಾನೆ. !!!!



Sunday, November 20, 2011

Suryangu Chandrangu...

One of my Favorite song.

Saturday, November 19, 2011

ಗೆಲುವು ...

ನಾವು ಏನಾದ್ರೂ ಸಾಧಿಸಿದಾಗ, ನಮ್ಮ ಮನೆಯವರು, ನೆರೆಹೊರೆಯವರು, ಬಂಧುಗಳು ಮತ್ತು ಮಿತ್ರರು 
ಶಬ್ಬಾಶ್ "good  job" ಅನ್ನೋದು ಸಾಮಾನ್ಯ. 
ನಿನ್ನೆ ನನ್ನ ಆಫೀಸ್ ನಲ್ಲಿ ನಡೆದ ಒಂದು ಚಿಕ್ಕ ಘಟನೆ, 
ನನ್ನ ಈ ಬರಹಕ್ಕೆ ನಾಂದಿ. ಸರಿ ಸುಮಾರು ೧೧ ಘಂಟೆ. ನನ್ನ ಆಫೀಸ್'ನ ಹಳೇ ಮಿತ್ರನೊಬ್ಬ ಫೋನ್ ಮಾಡಿ, "ನಾಳೆ Mad Ads ಸ್ಪರ್ಧೆ ಇದೆ. ನೀನೆ ಅದರ ಸ್ಕ್ರಿಪ್ಟ್ ಬರೀಬೇಕು." ಅಂದ. ಈ ನಡುವೆ 
ನನಗೆ ಪ್ರಾಜೆಕ್ಟ್ ಕೆಲಸ ಜಾಸ್ತಿ ಆಗಿ, ಹಾಗೇನೆ ಮನೆಯಲ್ಲಿ ಜವಾಬ್ದಾರಿ ಕೂಡ 
ಹೆಚ್ಚಿದೆ. ಈ ಕಾರಣಗಳಿಂದ ಬಹಳಷ್ಟು ಸ್ಪರ್ಧೆಗಳಿಗೆ ನಾನು ಭಾಗವಹಿಸದೆ 
ಸುಮ್ಮನಿದ್ದೆನೆ. ನನ್ನ ಮಿತ್ರ ಹೇಳಿದ ಪ್ರಕಾರ ಈ ಸ್ಪರ್ಧೆಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಅದಕ್ಕೆ ನೀನೆ ಇದರ ಸ್ಕ್ರಿಪ್ಟ್ ಮತ್ತು ನರೆಶನ್ ಮಾಡಬೇಕು ಅಂದ. ಸರಿ ಅಂತ ಒಪ್ಪಿಕೊಂಡೆ. ಸಂಜೆ ೬.೩೦ ಸಮಯ, ಒಂದು ಕಾಂಫೆರೆನ್ಚೆ ರೂಂನಲ್ಲಿ ಕೂತು ಬರೋಬರಿ ೧೦ ಗಂಟೆವರೆಗೂ ೪ ಸೀನ್''ಗಳನ್ನ ಬರೆದೆ. ಅಂದುಕೊಂಡ ಹಾಗೆ ಚೆನ್ನಾಗೇ ಬರೆದೆ.
ಮಾರನೇ ದಿನ ಬೆಳಿಗ್ಗೆ ನನ್ನ ಸ್ನೇಹಿತೆಯೊಬ್ಬಳು, ಸ್ಕ್ರಿಪ್ಟ್ ಓದಿ "MeshTre, Hats off to your creative work" ಅಂದಳು. "ಏನೋ ಇಷ್ಟು ಮಾತ್ರ.. " ಅಂದೆ. ನಮ್ಮ ಹುಡುಗರೆಲ್ಲ ಸ್ವಲ್ಪ ತಲೆ ಕೆಡಿಸಿಕೊಂಡಿದ್ರು. ಅವರಲ್ಲೊಬ್ಬ "ಸರ್'ಜಿ, ಕ್ಯಾ ಹಂ ಜೀತ್ ಸಕತೆ ಹೈ?, ಅಗರ್ ಹಂ ಜೀತೆಂಗೆ ತೋ, ಹುಮ್ ಡಿನ್ನರ್ ಪೆ ಜಾಯೆಂಗೆ" 
ಅಂತ ಹೇಳಿದ. ಸ್ವಲ್ಪ ನಕ್ಕು, ಸರಿ ಹೋಟೆಲ್ ಮತ್ತು ಟೈಮ್ ಡಿಸೈಡ್ ಮಾಡು ಅಂದೆ.  ಆ ಹುಡುಗನಿಗೆ ಆಶ್ಚರ್ಯ, "ವಾಟ್ ಸರ್ ಜಿ" ಅಂದ. ನಾನು ಅವನಿಗೆ 
ಹೇಳಿದ್ದು, "ನನ್ನ ಕಣ್ಣು ಯಾವಾಗ್ಲೂ first prize ಮೇಲೆ ಇರುತ್ತೆ. ಅದು ಸಿಗದೇ ಹೋದರು ಚಿಂತೆಯಿಲ್ಲ, ನಾನು ಅದನ್ನು ಸಾಧಿಸೋ ನಿಟ್ಟಿನಲ್ಲೇ 
ಪ್ರಯತ್ನ ಮಾಡಿದೆ ಅನ್ನೋ ಆತ್ಮ ಸಂತೋಷ ನನ್ನದು" ಅಂದೆ. 

ಸಂಜೆ 7,  ಸ್ಪರ್ಧೆಯ ಫಲಿತಾಂಶಕ್ಕೆ ಕಾದು ಕುಳಿತಿದ್ದೆವು. ನಮ್ಮ ಹುಡುಗರು ಕುರ್ಚಿ 
ತುದಿಯಲ್ಲಿ ಕುಳಿತು, CET ರಿಸಲ್ಟ್'ಗೋಸ್ಕರ  ಕಾದು ಕುಳಿತವರ ಹಾಗೆ 
ಕೂತಿದ್ದರು. ೫ ಸೆಕೆಂಡುಗಳಲ್ಲಿ ಅವರ ಕಣ್ಣಲ್ಲಿ ಉತ್ಸಾಹ ಮತ್ತು ಗೆಲುವಿನ ಸಂತಸ. 
ಅಂದುಕೊಂಡು ಹಾಗೆ ನಾವು ಗೆದ್ದಿದ್ದೆವು. ನಮ್ಮ ಹುಡುಗರು ನನ್ನ ವೇದಿಕೆಗೆ  
ಎತ್ತಿಕೊಂಡು ಹೋದರು. ಅವರ ಮುಖಗಳಲ್ಲಿ ಕಂಡ ಸಂತೋಷ ಕೆಲವು ಕ್ಷಣ ನನ್ನ 
ಕಣ್ಣನ್ನು ಒದ್ದೆ ಮಾಡಿದವು. ಎಲ್ಲರೂ ನನ್ನ ಕೆಲಸವನ್ನು ಮತ್ತು ಆತ್ಮವಿಶ್ವಾಸವನ್ನು ಹೊಗಳಿದರು. ನನಗೆ ಮಾತ್ರ ಗೆದ್ದ ಖುಶಿಗಿಂತ, ನನ್ನ ಚಿಕ್ಕ ಪ್ರಯತ್ನದಿಂದ ಇಷ್ಟೊಂದು ಜನರ ಮುಖದಲ್ಲಿ ಮತ್ತು ಮನಸ್ಸಿನಲ್ಲಿ  ಮೂಡಿಸಿದ ನಗು ನನಗೆ ಸಂತೋಷ ಕೊಟ್ಟಿತ್ತು. ಇದಲ್ಲವೇ ನಿಜವಾದ ಗೆಲುವು !!!. 

ನನ್ನವಳು ...

ನನಗೂ ಅವಳಿಗೂ ೧೩ ವರ್ಷಗಳ ನಂಟು. ನಾನು ಪಿ.ಯು.ಸಿ ಓದುತ್ತಿದ್ದ ದಿನಗಳಲ್ಲಿ ಅವಳ ಪರಿಚಯವಾಯಿತು. ಅವಳ ಜೊತೆ ಸಮಯ ಕಳೆಯುವುದೇ ಒಂದು ಸಂತೋಷದ ವಿಷಯ ನನಗೆ. ದಿನಕ್ಕೆ ಒಂದು ಬಾರಿಯಾದರೂ ಸಂಜೆ ಅವಳೊಂದಿಗೆ ಸ್ವಲ್ಪ ಸಮಯ ಕಳೆಯುತ್ತಿದ್ದೆ ನಾನು. ನಿಜ ಹೇಳಬೇಕು ಅಂದ್ರೆ ಅವಳ ಬುದ್ಧಿವಂತಿಕೆಗೆ ನಾನು ಮಾರು ಹೋಗಿದ್ದೆ. ಯಾವತ್ತೋ ಒಂದು ದಿನ ಅವಳ ಭೇಟಿ ಇಲ್ಲ ಅಂದ್ರೆ ಮನಸ್ಸಿಗೆ ಏನೋ ಕಳವಳ. ಸಂಜೆ ೬ ಗಂಟೆಗೆ ನಾನು ಆಚೆ ಹೊರಟರೆ ಸಾಕು, ನನ್ನ ಮಿತ್ರರು ನನ್ನನ್ನು ಛೇಡಿಸುತ್ತಿದ್ದರು. ಕೆಲವರಂತೂ ಅವಳ ಜೊತೆ ಅತಿಯಾಗಿ ತಿರುಗಿ ನಿನ್ನ ಫ್ಯೂಚರ್ ಹಾಳು ಮಾಡ್ಕೋಬೇಡ ಅಂತ ಕೂಡ ಹೇಳಿದ್ರು. ನನಗೇನೋ ಹಾಗೆ ಅನ್ನಿಸುತ್ತಿರಲಿಲ್ಲ. ಇವತ್ತಿಗೂ ಅವಳು ನನ್ನ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದ್ದಾಳೆ. ಅವಳನ್ನು ನೋಡದೆ ಇರುವ ದಿನಗಳು ತೀರ ಕಮ್ಮಿ. ಮೊದಲು ಮನಸ್ಸಿಗೆ ಮುದ ಕೊಡುತ್ತಿದ್ದ ಅವಳು ಈಗ ನನ್ನ ಜೀವನೋಪಾಯ ಕೂಡ ಆಗಿ ಬಿಟ್ಟಿದ್ದಾಳೆ. ಹೌದು ನನ್ನ ಕಂಪ್ಯೂಟರ್ ನನ್ನ ಮೊದಲ ಗೆಳತಿ :).. ಪ್ಲೀಸ್ ನನ್ನ ಹೆಂಡತಿಗೆ ಮಾತ್ರ ಇದನ್ನ ಹೇಳ್ಬೇಡಿ. ಆಮೇಲೆ ಗೊತ್ತಲ್ಲ !!!!!!!

Monday, November 7, 2011

ಮರಣ (ತಪ್ಪಿಸಿ)ದ ಕರೆ !!

ಇದು ನಿಜವಾದ ಘಟನೆ. ಪ್ರತಿನಿತ್ಯದಂತೆ ಬೆಳಿಗ್ಗೆ ಎದ್ದು 
ಕಚೇರಿಗೆ ತೆರಳುವ ಸಮಯ. ಮನೆಯಿಂದ ಹೊರಟು
೧೦ ನಿಮಿಷ ಕೂಡ ಆಗಿಲ್ಲ, ಅಷ್ಟರಲ್ಲಿ ನನ್ನ ಮೊಬೈಲ್
ಗುನುಗಲಾರ೦ಭಿಸಿತು. ಸಾಮಾನ್ಯವಾಗಿ ವಾಹನ 
ಚಾಲನೆ ಮಾಡುವಾಗ ನಾನು ಯಾವುದೇ ಕರೆಗಳನ್ನು ಸ್ವೀಕರಿಸುವುದಿಲ್ಲ. 
ಇವತ್ತೇನಯಿತೋ ಗೊತ್ತಿಲ್ಲ ನನ್ನ ಬೈಕ್ ಪಕ್ಕದಲ್ಲಿ ನಿಲ್ಲಿಸಿ ಮೊಬೈಲ್ ತೆಗೆದು 
ನೋಡಿದೆ. ಅದು ಅಮ್ಮನ ಫೋನ್. ಏನಾಯಿತು ಅಂತ ಕೇಳಿದೆ. "ನೀನು ನಿನ್ನ 
ಊಟದ ಡಬ್ಬಿ ಮನೇಲಿ ಬಿಟ್ಟು ಹೋಗಿದ್ದೀಯ, ಅದಕ್ಕೆ ಫೋನ್ ಮಾಡಿದೆ" ಅಂದ್ರು ಅಮ್ಮ. ತೊಂದರೆ ಇಲ್ಲ ನಾನು ಅರ್ಧ ದಾರಿ ಕ್ರಮಿಸಿ ಆಗಿದೆ, ಇವತ್ತು ಆಫೀಸ್ನಲ್ಲೆ 
ಏನಾದ್ರೂ ತಿಂತೇನೆ ಅಂತ ಹೇಳಿ ಫೋನ್ ಇಟ್ಟೆ. ಅಮ್ಮನ ಜೊತೆ ಮಾತಾಡಿದ್ದು 
ಕೇವಲ ೧೦ ಸೆಕೆಂಡ್. ನಾನು ಗಾಡಿ ನಿಲ್ಲಿಸಿದ ಜಾಗದಿಂದ ಸುಮಾರು ೧೦೦ ಮೀ 
ದೂರದಲ್ಲಿ ಇರುವ ತಿರುವು ಮುಟ್ಟುವಷ್ಟರಲ್ಲಿ, ಆ ರಸ್ತೆಯ ಇನ್ನೊಂದು ಬದಿಯಿಂದ 
ಬಂದ scorpio  ಗಾಡಿ ನನ್ನ ಮೈಮೇಲೆ ಏರಿ ಬಂತು. ಅವನು ಬಂದ ವೇಗವನ್ನು 
ಅರಿತ ನಾನು ನನ್ನ ಗಾಡಿಯನ್ನು ಪಕ್ಕಕ್ಕೆ ನಿಲ್ಲಿಸಿದ್ದರು ಕೂಡ, ನನ್ನ ಬಲ ಪಾದಕ್ಕೆ 
ತಾಕಿಸಿಕೊಂಡುಇನ್ನೇನು ಕಾಲು ಮುರಿಯಿತು ಅನ್ನೋ ಅಷ್ಟರಲ್ಲಿ ನನ್ನ ಹಿಂದೆ 
ಇದ್ದ ಮತ್ತೋರ್ವ ಬೈಕ್ ಸವಾರ ಅವನ ಮೇಲೆ ಕೂಗು ಹಾಕಿದ.ಜರುಗಬೇಕಿದ್ದ 
ಅಪಘಾತ ತಪ್ಪಿತ್ತು.


ಇವತ್ತೇನಾದ್ರು ಅಮ್ಮನ ಫೋನಿಗೆ ಉತ್ತರ ಕೊಡದೆ ಹೋಗಿದ್ದರೆ, ಎಂಥ ಅನಾಹುತ ಆಗಬಹುದಿತ್ತು. ಮನಸ್ಸಿನಲ್ಲಿ ಅಮ್ಮನನ್ನು ಅಭಿನಂದಿಸಿ ಮುನ್ನಡೆದೆ. ಅಮ್ಮನಿಗೆ 
ಈ ವಿಷಯ ಗೊತ್ತಿಲ್ಲ. ಗೊತ್ತಾದ್ರೆ ಏನಾಗುತ್ತೆ ಅಂತ ನಿಮಗೆಲ್ಲ ಗೊತ್ತು. ಅದಕ್ಕೆ ಹೇಳಿಲ್ಲ !!!!.  

Sunday, November 6, 2011

ಯಾರ ಸಂತೋಷ?

ಮನುಷ್ಯನ ಜೀವನದಲ್ಲಿ ನೋವು-ನಲಿವು, ಸುಖ-ದು:ಖ, ಪ್ರೀತಿ-ದ್ವೇಷ, ಸಿರಿತನ-ಬಡತನ ಎಲ್ಲವೂ ಒಂದಿಲ್ಲ ಒಂದು ಸಂದರ್ಭದಲ್ಲಿ ಬಂದು ಒದಗುವುದು ಸಹಜ. ದು:ಖ, ನೋವು ತರುವ ಮೊದಲ ರೋಗವೇ ಮಾನಸಿಕ ಖಿನ್ನತೆ. ಈ ರೀತಿಯ ಖಿನ್ನತೆಯನ್ನು ಮೀರಿ ನಿಂತ ಕೆಲವರು ತಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿಕೊಂಡು, ಅತ್ಯಂತ ಸಫಲ ಜೀವನವನ್ನು ನಡೆಸಿರುವ ಉದಾಹರಣೆಗಳು ಅನೇಕ. ಕೆಲವರು ಹೇಳುವ ಪ್ರಕಾರ, ಜೀವನದಲ್ಲಿ ನಾನು ಒಂಟಿಯಾಗಿ, ಏಕಾಂಗಿಯಾಗಿ ಬದುಕು ಸಾಗಿಸಿದೆ. "ನನಗೆ ನನ್ನವರು ಅಂತ ಯಾರು ಇಲ್ಲ. ಬರೀ ನೋವುಗಳನ್ನೇ ಅನುಭವಿಸಿದ ನನಗೆ ಜೀವನ ಬೇಸರವಾಗಿದೆ". ಇಂಥ ಮಾತುಗಳನ್ನು ಕೇಳಿದಾಗ ನನಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸಿದವು. ಕೇವಲ ನಮಗೆ ಒದಗಿ ಬಂದ ಸಂತೋಷಗಳೇ ನಮ್ಮವಾ? ಹಾದಿಯಲ್ಲಿ ಹೋಗಬೇಕಾದ್ರೆ ಮಕ್ಕಳಿಲ್ಲದ ದಂಪತಿಗಳು, ರಸ್ತೆ ಪಕ್ಕದಲ್ಲಿ ಆಡುತ್ತಿದ್ದ ಮಕ್ಕಳನ್ನು ಕಂಡು, ತಮಗೆ ಮಕ್ಕಳಿಲ್ಲ ಅನ್ನೋ ನೋವನ್ನು ಮರೆತು, ಆ ಮಕ್ಕಳ ಮುಗ್ಧ ಮುಖಗಳನ್ನು ನೋಡಿ ಸಂತೋಷಪದಬಾರದೇಕೆ. ಸಮಾಜದಲ್ಲಿ ನಮಗಿಂತ ನೋವಿನಲ್ಲಿರುವವರು ಇದ್ದಾರೆ, ಹಾಗಾದರೆ ಅವರೆಲ್ಲ ಜೀವನದಲ್ಲಿ ಬೇಸರ ಮಾಡಿಕೊಂಡು ಆತ್ಮಹತ್ತೆಗೆ ಪ್ರಯತ್ನಿಸಬೇಕಾ? ಸ್ವಲ್ಪ ಯೋಚನೆ ಮಾಡಿ. ಜಗತ್ತಿನಲ್ಲಿ ಎಲ್ಲ ಕಡೆ ಸಂತೋಷ ದು:ಖ ತುಂಬಿದೆ. ಬೇರೆಯವರ ಸಂತೋಷ ನೋಡಿ, ಅದರಲ್ಲಿ ಅಡಗಿರುವ ಆನಂದವನ್ನು ನಾವೂ ಅನುಭವಿಸಿ, ಕಣ್ಣೀರು ತುಂಬಿದ ಕಣ್ಣಲ್ಲಿ ಉಲ್ಲಾಸ ತುಂಬಿ, ಇಳಿ ಬಿದ್ದಿರುವ ಮುಖದಲ್ಲಿ ಒಂದಿಷ್ಟು ನಗು ಮೂಡಿಸಿ. ನಿಮ್ಮ ನೋವನ್ನು ನಗೆಯಲ್ಲಿ ಪರಿವರ್ತಿಸಿ ಬದುಕುವ ಪ್ರಯತ್ನ ಮಾಡಬಾರದೇಕೆ?

 

Naam Gum Jaayega...

One of my favorite song. "Naam Gum Jayega...."

Salute to Mother Nature


 
One of the greatest compilation in Hindi, sung by Mukesh Kumar. This song is dedicated to Mother Nature.

Tuesday, November 1, 2011

ಮರಣೋತ್ತರ ಪ್ರೀತಿ....

ಮೊನ್ನೆವರೆಗೂ ಮಿತ್ರನನ್ನೊಬ್ಬನನ್ನು ಬೈಕೊಂಡು ಓಡಾಡುತ್ತಿದ್ದ ಶಂಕರ್ ಇವತ್ತು 
ಅದೇ ವ್ಯಕ್ತಿ ಸತ್ತ ನಂತರ ಅವನ ಮನೆಗೆ ಹೋಗಿ ಸಾಂತ್ವನ ಹೇಳಿ, ಆ ವ್ಯಕ್ತಿಯ ಹಿರಿಮೆ ಮತ್ತು ದೊಡ್ದತನಗಳನ್ನು ಹೊಗಳಿದ.  ಈ ಸನ್ನಿವೇಶ ನೋಡಿ ನನ್ನಲ್ಲಿ 
ಉದ್ಭವಿಸಿದ ಕೆಲವು ಪ್ರಶ್ನೆಗಳಿಗೆ ಮತ್ತು ಯೋಚನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಸಾಮಾನ್ಯವಾಗಿ ಎಲ್ಲರೂ ಮಾಡುವುದೇ ಹೀಗೆ ಅನ್ನಿಸುತ್ತೆ. ಯಾವ ಮನುಷ್ಯ ಬದುಕಿರುವಾಗ ಅವನ ಜೊತೆ ದ್ವೇಷ, ಕೋಪ, ಹೊಡೆದಾಟ ಮತ್ತು ನೋವು ಕೊಡುವ ಹಲವು ಪ್ರಯತ್ನಗಳನ್ನು ಮಾಡುತ್ತೇವೋ, ಅದೇ ವ್ಯಕ್ತಿ ಸತ್ತಾದ ಮೇಲೆ ಅವನ ಬಗ್ಗೆ ಒಳ್ಳೆ ಮತುಗಳನನದುತ್ತೇವೆ. ಹೀಗೇಕೆ? ಇನ್ನು ಕೆಲವರು ಒಬ್ಬ ವ್ಯಕ್ತಿ ಸತ್ತ ಮೇಲು ಅವನ ಬಗ್ಗೆ ಕೆಟ್ಟ ಮಾತುಗಳನ್ನು ಆಡುತ್ತಾರೆ, ಅವರ ವಿಷಯ ಬಿಟ್ಟು ಬಿಡಿ. ನಾನು ಮಾತನಾಡುತ್ತಿರುವುದು ಮನಸ್ಸಿನ ಆಳದಲ್ಲಿ ಒಬ್ಬರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದರು ಕೂಡ, ಅಹಂ ಎಂಬ ಹುಚ್ಚು ಕುದುರೆಯನ್ನೇರಿ ಸ್ನೇಹ ಮತ್ತು ಸಂಬಂಧಗಳನ್ನು 
ಲೆಕ್ಕಿಸದೇ ಜೀವನ ಪೂರ್ತಿ ಛಲ, ಸಿಟ್ಟು ಮತ್ತು ಮಾತ್ಸರ್ಯಗಳಿಂದ ಇನ್ನೊಬ್ಬ ವ್ಯಕ್ತಿಗೆ ನೋವು ಕೊಡುವ ಪ್ರಯತ್ನಗಳು 
ನಡೆಯುತ್ತಿರುತ್ತವೆ. ಅದೇ ವ್ಯಕ್ತಿ ಸತ್ತ ತಕ್ಷಣ ಛಲ, ಸಿಟ್ಟು ಮತ್ತು ದ್ವೇಷ ಮಾಯವಾಗಿ ಸ್ನೇಹದ ಸೆಲೆ ಮತ್ತೆ ಜಿನುಗಲಾರ೦ಭಿಸುತ್ತದೆ. ಎಂತಹ ವಿಪರ್ಯಾಸ!!! ವ್ಯಕ್ತಿಯು ಸತ್ತ ಮೇಲೆ ಅವನಿಗೆ ತೋರಿಸುವ ಪ್ರೀತಿ, ಅವನು 
ಬದುಕಿದ್ದಾಗ ತೋರಿಸಿದ್ದಾರೆ ಈ ಜಗಳ ಹೊಡೆದಾಟ ತಾಪತ್ರಯಗಳು ಇರುತ್ತಿರಲಿಲ್ಲವೇನೋ. ಅದಕ್ಕೆ ಕವಿ ಹೇಳಿರಬಹುದು 


                                   "ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಂಮ್ಮಿನ ಕೋಟೆಯಲಿ, 
                                     ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನಗಳ ಬದುಕಿನಲಿ".
ಈಗ ನೀವೂ ಯೋಚಿಸಿ....

Wednesday, October 26, 2011

ಮದುವೆ ನಂತರ ಮೊದಲ ದೀಪಾವಳಿ

ಮದುವೆ ಆದ ಮೇಲೆ ಪ್ರತಿ ದಿನ ಕೂಡ ವಿಶೇಷವೆ. ಅದರಲ್ಲೂ ಮೊದಲ ದೀಪಾವಳಿ. ನನ್ನ ಕನಸಿನಲ್ಲೂ ಎಣಿಸಿರದ ಅದ್ಭುತ ಅನುಭವ. ಈ ದೀಪಾವಳಿ ಹಬ್ಬದ ಮೂಲಕವೇ, ಒಬ್ಬ ಅಳಿಯನಿಗೆ ಹಿಂದೂ ಸಂಪ್ರದಾಯದ ಪ್ರಕಾರ ಎಷ್ಟು ದೊಡ್ಡ ಗೌರವ ಇದೆ ಅನ್ನೋದರ ಅರಿವು ನನಗಾಯಿತು. ನಾನು ಮತ್ತು ನನ್ನ ಹೆಂಡತಿ, ನನ್ನ ಅತ್ತೆ ಜನುಮದಿನದಂದು ಅವರಿಗೆ cake ತೆಗೆದುಕೊಂಡು ಹೋಗಿ surprise ಕೊಟ್ಟಿದ್ದೆವು. ಅದನ್ನು ಇವತ್ತು ನೆನೆಸಿಕೊಂಡು ನನ್ನ ಅತ್ತೆ ಸಂತೋಷಪಟ್ಟರು. ಚಿಕ್ಕ ಅಳಿಯ ಅನ್ನೋ ಅತಿಯಾದ ಒಲುಮೆಯಿಂದ ನನ್ನ ಅತ್ತೆ ಮನೆಯವರು ನೀಡಿದ ಈ ರಾಜೋಪಚಾರಗಳಿಗೆ ನಾನು ಅವರಿಗೆ ಚಿರಋಣಿ.

Tuesday, October 25, 2011

ಸ್ವಪ್ನ ಮತ್ತು ಮನು

ಸ್ವಪ್ನ ನಮ್ಮ ಕಾಲೇಜ್'ನಲ್ಲೇ ಅತಿ ಸುಂದರ ಹುಡುಗಿ. ಇವಳ ಒಂದು ನೋಟಕ್ಕೆ, ನೂರು ಜನ ಹುಡುಗರು ಗುಲಾಬಿ ಹೂ, ಕಾರ್ಡು ಹಿಡಿದುಕೊಂಡ ಓಡಾಡಿದ ಪ್ರಸಂಗಗಳು ಅನೇಕ. ಆದ್ರೆ ಮನು ಅನ್ನೋ ನನ್ನ ಗೆಳೆಯನದು ಮಾತ್ರ ಅದೃಷ್ಟವೇ ಅದೃಷ್ಟ. ಹಾಗೋ ಹೀಗೋ ಮಾಡಿ ಸ್ವಪ್ನಳ  ಗೆಳೆತನ ಸಂಪಾದಿಸಿಬಿಟ್ಟ. ನೋಡೋಕೆ ಹೀರೋ ಥರ ಇಲ್ಲದೆ ಇದ್ರೂ ಒಂದು ಲೆವೆಲ್ಗೆ ಓಕೆ. ಮನು'ನ ಕಂಡ್ರೆ ಎಲ್ಲ ಹುಡುಗರಿಗೂ ಹೊಟ್ಟೆ ಉರಿ. ಕೆಲವರಿಗೆ ಸ್ವಪ್ನ ಅವರನ್ನು ತಿರಸ್ಕರಿಸ್ದಳು ಅನ್ನೋ ನೋವಿದ್ರೆ, ಇನ್ನು ಕೆಲವರಿಗೆ ನಾವು ಮನುಗಿಂತ ಮುಂಚೆ ಟ್ರೈ ಮಾಡಬೇಕಿತ್ತು ಅನ್ನೋ ನಿರಾಸೆ. ಅದೇನೇ ಇರಲಿ ಇವತ್ತು ಮನು ಮತ್ತು ಸ್ವಪ್ನ ಒಟ್ಟಿಗೆ ಸಿನಿಮಾ ನೋಡಲು ಹೊರಟಿದ್ದಾರೆ. ಎಲ್ಲ ಹುಡುಗರು ಥಿಯೇಟರನಲ್ಲಿ 
ಏನೇನು ನಡಿಯುತ್ತೋ ಅನ್ನೋ ವಿಷಯಾನ ನೆನಿಸಿಕೊಂಡು ನೋವಿನಲ್ಲಿದ್ದಾರೆ. ಮನು ಮತ್ತು ಸ್ವಪ್ನ ಅಕ್ಕಪಕ್ಕದ ಸೀಟ್ನಲ್ಲಿ ಕೈ ಮೇಲೆ ಕೈ ಹಾಕಿಕೊಂಡು ಕೂತಿದ್ದಾರೆ. ಮನುವಿನ ಮನಸ್ಸಲ್ಲಿ ಏನೇನೋ ಯೋಚನೆ, ಸ್ವಪ್ನ ಕೂಡ ಸ್ವಲ್ಪ ಭಯದಲ್ಲಿ ಇದ್ದಾಳೆ. ಇನ್ನೇನು ಅವಳನ್ನು ಕೇಳೇ ಬಿಡೋಣ ಅಂತ ಮನು ಕಣ್ಮುಚ್ಚಿ "ನೀನು ನನ್ನ ಮದುವೆ  ಆಗ್ತೀಯ?" ಅಂತ ಕೇಳೋದೇ ತಡ, ಕೈ ಬಿಡಿಸಿಕೊಂಡ ಸ್ವಪ್ನ ಮನು ಕೆನ್ನೆ ಮೇಲೆ ಬಾರಿಸಿದಳು. ಮನು ಕಣ್ಬಿಟ್ಟು ನೋಡಿದಾಗ ಪ್ರೊಫೆಸರ್ ಲಕ್ಷ್ಮೀಪತಿ ಮುಂದೆ ನಿಂತಿದ್ದಾರೆ. "ಕ್ಲಾಸ್ ರೂಂನಲ್ಲಿ  ನಿದ್ದೆ ಮಾಡ್ತೀಯ ಭಡವ". !!!!!!

ಬರೋಬರಿ ೩೦ ನಿಮಿಷದ ಕನಸಿಗೆ ತೆರೆ ಬಿದ್ದಿತ್ತು. ಕನಸಲ್ಲಾದರೂ ಅವಳನ್ನ ಪ್ರೊಪೋಸ್ ಮಾಡಿದ ತೃಪ್ತಿ ಸಿಕ್ತಲ್ಲ ಅಂತ ನಕ್ಕು ಮನು ಸುಮ್ಮನಾದ.

Saturday, October 22, 2011

ತಾಳಿಯ ಬೆಲೆ...

ಆವತ್ತು ಭೀಮನ ಅಮಾವಾಸ್ಯೆಯ ಹಿಂದಿನ ದಿನ. ಅಮ್ಮ ನನಗೆ ಫೋನ್ ಮಾಡಿ, ಮನೆಗೆ ವಾಪಸ್ ಬರೋವಾಗ ಪೂಜೆಗೆ ಹೂವು ಹಣ್ಣು ತರೋಕೆ ಹೇಳಿದ್ರು. ಆಫೀಸನಿಂದ ಹೊರಟಾಗ ಸುಮಾರು ೧೦ ಗಂಟೆ. ಇನ್ನೆಲ್ಲಿ ಹೂವು ಹಣ್ಣು ಸಿಗೋಕೆ ಸಾಧ್ಯ ಅಂದುಕೊಂಡು ಬನಶಂಕರಿ ದೇವಸ್ಥಾನದ ಹತ್ರ ಹೋದೆ. ಎಲ್ಲಿ ನೋಡಿದರು ಅಂಗಡಿ, ಮುಗ್ಗಟ್ಟುಗಳು ಮುಚ್ಚಿವೆ. ಕೊನೆಗೆ ಹಾಗೆ ಹೋದರಾಯಿತು ಅಂದುಕೊಂಡು ಸ್ವಲ್ಪ ಮುಂದೆ ಬಂದೆ. ನನ್ನ ಅದೃಷ್ಟಕ್ಕೆ ಒಬ್ಬ ಮಹಿಳೆ ತನ್ನ ಚಿಕ್ಕ ಕೈಗಾಡಿಯಲ್ಲಿ ಹೂವು, ಹಣ್ಣು ಮಾರಲು ಕುಳಿತಿದ್ದಳು. ಹೂವು, ಹಣ್ಣು ಅನ್ನೋದಕ್ಕಿಂತ ಅದು ನನ್ನ ಪಾಲಿಗೆ ಓಯಸಿಸ್ ನಂತೆ ಕಂಡು ಬಂತು. ಕೊನೆಗೂ ನನಗೆ ಬೇಕಾದ ಎಲ್ಲ ಪದಾರ್ಥಗಳನ್ನು ತೆಗೆದುಕೊಂಡು ದುಡ್ಡು ಕೊಟ್ಟೆ. ಆ ಹೆಣ್ಣುಮಗಳ ಕೈಯ್ಯಲ್ಲಿ ಹಸುಗೂಸೊಂದನ್ನು ನೋಡಿ, "ಏನಮ್ಮ, ಇಷ್ಟು ರಾತ್ರಿ ಒಬ್ಬಳೇ ಇಲ್ಲಿ ಕಷ್ಟ ಪಡುತ್ತ ಇದ್ದೀಯಲ್ಲ. ನಿನ್ನ ಗಂಡನನ್ನಾದರೂ ಸಹಾಯಕ್ಕೆ ಸೇರಿಸಿಕೊಲ್ಲಬಹುದಲ್ವ". ಅವಳ ಉತ್ತರ ಕೇಳಿದ ಮೇಲೆ ಕೊಂಚ ನೋವು ಮತ್ತು ಬೇಸರ ನನ್ನ ಕಾಡಿತು. ಅವಳು ಯಾವುದೇ ಮಾತುಗಳನ್ನು ಉಪಯೋಗಿಸಲಿಲ್ಲ, ಬದಲಿಗೆ ಕೈಮಾಡಿ ಪಕ್ಕದಲ್ಲೇ ಕುಡಿದು ಬಿದ್ದಿದ್ದ ಓರ್ವ ವ್ಯಕ್ತಿಯ ಕಡೆಗೆ ನೋಡಿದಳು. ನನ್ನ ಪ್ರಶ್ನೆಗೆ ಉತ್ತರ ಆಗಲೇ ಸಿಕ್ಕಿ ಆಗಿತ್ತು. ಅದು ಅವಳ ಗಂಡನೇ....

ಸಮಾಜದಲ್ಲಿ ಭೀಮನ ಅಮಾವಾಸ್ಯೆ ಮೂಲಕ ಗಂಡನು ಚೆನ್ನಾಗಿರಲಿ ಅಂತ ಹಾರೈಸಿ ಮಾಡುವ ಪೂಜೆ. ಆದ್ರೆ ಆ ತಾಯಿ ಯಾವುದೇ ಪೂಜೆ ಮಾಡದೇ, ಕೇವಲ ತನ್ನ ಕರ್ತವ್ಯದ ಮೂಲಕ ಭೀಮನ ಅಮಾವಾಸ್ಯೆಯನ್ನು ಆಚರಿಸಿದ್ದಳು. ಕೆಲವರಿಗೆ ಗಂಡನ ಮೇಲೆ ಕಿಂಚಿತ್ತು ಅಭಿಮಾನ ಇರುವುದಿಲ್ಲ, ಆದರೆ ಇಲ್ಲಿ ಕುಡುಕನಾದ್ರು, ಗಂಡನಿಗೆ ಆ ತಾಯಿ ತೋರಿಸಿದ ಗೌರವ ಕಂಡು, ಇಂತಹ 
ಎಷ್ಟೋ ಹೆಣ್ಣುಮಕ್ಕಳಿಗೆ ನಮಸ್ಕಾರ ಮಾಡುವ ಮನಸ್ಸಾಯಿತು. ನಾನು ಮನೆಯತ್ತ ಹೊರಟೆ...... 

Saturday, October 8, 2011

ಔಟ್ ಆಫ್ ಕವರೇಜ್ ಏರಿಯ....

ರಘು ಮತ್ತು ಪ್ರಭು ಬಾಲ್ಯ ಸ್ನೇಹಿತರು. ಯಾವುದೋ ಒಂದು ಕಹಿ ಘಳಿಗೆಯಲ್ಲಿ ಇಬ್ಬರ ನಡುವೆ ಮನಸ್ತಾಪ ಆಗಿದೆ. ೩ ವರ್ಷದ ನಂತರ ಕೂಡ ಅದು ಬಗೆಹರಿದಿಲ್ಲ. ಪ್ರಭು ಆಗಾಗ ಫೋನ್ ಮಾಡಲು ಪ್ರಯತ್ನಿಸಿ ನೋಡಿದ್ದಾನೆ. ರಘು ಮಾತ್ರ ಅವನ ಯಾವ ಕರೆಗಳಿಗೂ ಉತ್ತರ ಕೊಟ್ಟಿಲ್ಲ. ಪ್ರಭು ಮತ್ತೆ ಫೋನ್ ಮಾಡಿದ್ದಾನೆ, ಎಂದಿನಂತೆ ರಘು ಉತ್ತರಿಸಿಲ್ಲ. ಕೊನೆಗೆ ಒಂದು ದಿನ ಪ್ರಭು ಫೋನ್ ಬರುವುದು ನಿಂತು ಹೋಗಿದೆ. ಕಾಶಿ ರಘು ಮತ್ತು ಪ್ರಭು ಇವರ ಗೆಳೆಯ, ಅಮೆರಿಕದಿಂದ ಬಂದು ರಘು ಮನೆಗೆ ಹೋಗುತ್ತಾನೆ. ಸ್ನೇಹಿತನನ್ನು ಅಚಾನಕ್ಕಾಗಿ ನೋಡಿದ ರಘು
ರಘು : "ಏನಪ್ಪಾ ಈ ಧಿಡೀರ್ ದರ್ಶನ ?".
ಕಾಶಿ : ಪ್ರಭು ವಿಷಯ ತಿಳೀತು ಅದಕ್ಕೆ ಬಂದೆ.
ರಘು : ಏನು ವಿಷಯ ?
ಕಾಶಿ : ಪ್ರಭು ನಮ್ಮನ್ನ ಅಗಲಿ ೩ ದಿನ ಆಯಿತು.

ರಘು ಮನಸ್ಸಿಗೆ ತುಂಬಾ ಬೇಸರ. ನನ್ನ ಜೊತೆ ಮಾತಾಡಲು ಹಾತೊರೆಯುತ್ತಿದ್ದ ನನ್ನ ಸ್ನೇಹಿತನಿಗೆ ಅವನ ಕೊನೆಗಾಲದಲ್ಲೂ ಮಾತಾಡಿಸುವ ಸೌಜನ್ಯ ನಾನು ತೋರಲಿಲ್ಲ. ಇದಾದ ನಂತರ ಪ್ರಭು ಮೊಬೈಲ್ ಗೆ ದಿನಾಲು ರಘು ಫೋನ್ ಮಾಡ್ತಾನೆ, ಆದ್ರೆ ಪ್ರಭು ಉತ್ತರ ಮಾತ್ರ "ಔಟ್ ಆಫ್ ಕವರೇಜ್ ಏರಿಯ....".

ನನ್ನ ಮಗನ ಮದುವೆ

ಬೆಳಿಗ್ಗೆ ಎದ್ದು ನನ್ನ ಮುಂದೆ ನಿಂತ ನನ್ನ ೯ ವರ್ಷದ ಮಗ, "ಅಪ್ಪ ನನಗೆ ಶ್ರೇಯಾ ತುಂಬಾ ಇಷ್ಟ, ನಾನು ಮದುವೆ ಆದ್ರೆ ಅವಳನ್ನೇ. ಅವಳಿಗೂ ನನ್ನ ಕಂಡ್ರೆ ಇಷ್ಟ" ಅಂದ. ಅವನ ಮಾತು ಕೇಳಿ ಒಂದು ನಿಮಿಷ ನಕ್ಕು, ಸರಿ ಮದುವೆ ಮಾಡಿಸ್ತೀನಿ ಬಿಡು ಅಂತ ಉತ್ತರ ಕೊಟ್ಟೆ. ಒಂದು ಕ್ಷಣ ಯೋಚಿಸಿದೆ ಇದು ಕೇವಲ ಆಕರ್ಷಣೆ ಇರಬಹುದು ಸ್ವಲ್ಪ ದಿನ ಕಳೆದ ಮೇಲೆ ತಿಳುವಳಿಕೆ ಮೂಡಿ ತಾನೇ ಎಲ್ಲ ಸರಿ ಹೋಗುತ್ತೆ ಅಂದುಕೊಂಡೆ. ನನ್ನ ಮಗ ಕೂಡ ನನ್ನಂತೇ ತುಂಬಾ ಹಟವಾದಿ. ಕೊನೆಗೂ ನಾನು ಅಂದುಕೊಂಡಿದ್ದು ತಪ್ಪು ಅಂತ ನಿರೂಪಿಸಿಬಿಟ್ಟ. ಇವತ್ತು ನನ್ನ ಮಗನ ಮದುವೆ, ಹುಡುಗಿ ಯಾರು ಗೊತ್ತಾ, "ಶ್ರೇಯಾ"ನೇ. ಏನಿದು ನಾನು ಬಾಲ್ಯ ವಿವಾಹ ಮಾಡ್ತಿದ್ದೀನಿ ಅನ್ಕೊಂಡ್ರ ? ರೀ ನನ್ನ ಮಗನಿಗೆ ಈಗ ೨೫ ವರ್ಷ, ೧೬ ವರ್ಷದಿಂದ ಪ್ರೀತಿಸುತ್ತಿರೋ ಹುಡುಗಿ ಜೊತೆ :)

Thursday, October 6, 2011

ಶ್ರೀಪಾದರಾಯರ ಪತ್ನಿ

ಪಕ್ಕದ ಮನೆ ಶ್ರೀಪದರಾಯರದು ಮತ್ತು ಅವರ ಹೆಂಡತಿ ಸರೋಜಮ್ಮನವರದು ಅನ್ಯೋನ್ಯ ಸಂಸಾರ. ಹೆಂಡತಿ ಗಂಡನಿಗೆ ಊಟ ಹಾಕದೇ ತಾವು ತಿನ್ನುವುದಿಲ್ಲ , ಹಾಗೇನೆ ಶ್ರೀಪಾದರಾಯರು ಕೂಡ. 
ಹೆಂಡತಿಗೆ ತುತ್ತು ಹಾಕದೆ ತಾವು ಊಟ ಮಾಡುವುದಿಲ್ಲ. ಎಲ್ಲ ಯುವ ಪೀಳಿಗೆಗೂ ಇವರ ದಾಂಪತ್ಯ 
ಉದಾಹರಣೆ. ಇವರೂ ಕೂಡ ಆಗಾಗ್ಗೆ ಜಗಳವಾಡುತ್ತಾರೆ. ಆದರೆ ರಾಯರೇ ಕೊನೆಗೆ ಸೋಲು 
ಒಪ್ಪಿಕೊಳ್ಳುವುದು. ಎಂದಿನಂತೆ ಇವತ್ತು ಕೂಡ ರಾಯರೇ ಹೆಂಡತಿಗೆ ಊಟ ಮಾಡಿಸುತ್ತಿದ್ದಾರೆ. ಹಿಂದೆ ಬಂದು ನಿಂತ ರಾಮಣ್ಣ (ರಾಯರ ಮನೆ ಆಳು),  ಅಪ್ಪೋರೆ ಮನೆಗೆ ಹೋಗೋಣ ನಡಿಯಿರಿ". ರಾಯರ  ಕಣ್ಣಲ್ಲಿ ಹೆಂಡತಿಯನ್ನು ಬಿಟ್ಟು ಹೋಗಬೇಕಲ್ಲ ಅನ್ನೋ ಬೇಸರದ ಕಣ್ಣೀರು. "ಸರಿ, ನಾಳೆ ಮತ್ತೆ ಬರುತ್ತೇನೆ" ಎನ್ನುತ್ತಾ ಸ್ಮಶಾನದಿಂದ ಹೊರನಡೆದರು. ಹೌದು ಸರೋಜಮ್ಮ ತೀರಿಕೊಂಡು ೨೦ ವರ್ಷಗಳಾಗಿವೆ !!!!!!.

ಸುಖದ ಸಂಪತ್ತು.





ಮನು ಮತ್ತು ಕೀರ್ತಿ ನಡುವೆ ವಾಗ್ವಾದ ನಡೀತಾ ಇದೆ. ಇದೇನು ಹೊಸ ವಿಷಯ ಅಲ್ಲ. ಕೀರ್ತಿಗೆ ಒಳ್ಳೆ ಹೆಸರು, ದುಡ್ಡು ಮತ್ತು ಅಂತಸ್ತು ಗಳಿಸಬೇಕು ಅನ್ನೋ ಆಸೆ, ಅದಕ್ಕೆ ಮನು ಪೂರ್ತಿ ಸಮ್ಮತಿ ಸೂಚಿಸಿ ಆದಷ್ಟು ಅವಳಿಗೆ ಸಹಾಯ ಮಾಡುತ್ತಾನೆ. ಆದರೆ ಇವತ್ತಿನ ಜಗಳದ ವಿಷಯ ಸ್ವಲ್ಪ ಗಂಭೀರ. ಅವಳಿಗೆ ಕೇವಲ ತನ್ನ ವೃತ್ತಿ ಬದುಕಿನ ಕನಸುಗಳು ಮತ್ತು ಐಶಾರಮಿ ಮಾತ್ರ ಮುಖ್ಯ, ಅದಕ್ಕೋಸ್ಕರ ಚಿಕ್ಕಚಿಕ್ಕ ಆಸೆಗಳ ಮತ್ತು ಭಾವನೆಗಳ ಬಲಿ ಕೊಡಲು ಅವಳು ಸಿದ್ಧ. ಅವಳ ಇಚ್ಚೆಯಂತೆ ಮನುವನ್ನು ಬಿಟ್ಟು ದೆಹಲಿಗೆ ಹೋಗುವುದಾಗಿ ನಿರ್ಧರಿಸಿದಳು. ಹೋಗುವ ಮುನ್ನ ಮನುವನ್ನು ಕರೆದು "ನಾನು ಬಂದ ಮೇಲೆ ಮತ್ತೆ ನಮ್ಮ ಸುಖೀ ಜೀವನವನ್ನು ಮುಂದುವರೆಸೋಣ" ಅಂತ ಹೇಳಿ ಹೊರಟೆ ಹೋದಳು. ಮನನೊಂದ ಮನು ವಿಧಿಯಿಲ್ಲದೇ ಒಪ್ಪಿಕೊಂಡನು.......
...........೨ ವರ್ಷದ ನಂತರ .....................................
ಇವತ್ತು ಕೀರ್ತಿ ಮರಳಿ ಬರುವ ದಿನ. ಮನು ಸಡಗರದಿಂದ ಮನೆಯನ್ನೆಲ್ಲ ಸಿಂಗರಿಸಿದ್ದಾನೆ. ಅವಳಿಗೆ ಇಷ್ಟ ಅಂತ ಜಾಮೂನು ತರಲು ಅಂಗಡಿಗೆ ಹೋಗಿದ್ದಾನೆ. ಅಷ್ಟರಲ್ಲಿ ಕೀರ್ತಿ ಫೋನ್ ಬರುತ್ತೆ. ನಾನು ಮನೆಗೆ ಬಂದು ತಲುಪಿದ್ದೀನಿ. ಖುಷಿಗೊಂಡ ಮನು ಜಾಮೂನು ಕಾರಿನಲ್ಲಿ ಇಟ್ಟುಕೊಂಡು ಅವಸರದಿಂದ ಹೊರಡುತ್ತಾನೆ. ೧೦ ನಿಮಿಷದ ನಂತರ ಮನು ಮನೆ ಸೇರಿದ್ದು ಹೆಣವಾಗಿ ಕಾರಣ ರಸ್ತೆ ಅಪಘಾತ. ಕೀರ್ತಿಗೆ ಆಘಾತ.
ಅತೀ ಪ್ರೀತಿಯಿಂದ ನೋಡಿಕೊಂಡಿದ್ದ ಪತಿಯನ್ನು ಕಳೆದುಕೊಂಡ ಕೀರ್ತಿಗೆ ಇವತ್ತು ಜೀವನದಲ್ಲಿ ಎಲ್ಲ ಸೌಕರ್ಯಗಳು ಸಿಕ್ಕಿವೆ. ಈಗ ಮನು ಹೇಳಿದ ಮಾತುಗಳು ಮಾತ್ರ ಅವಳೊಂದಿಗಿವೆ. "ಜೀವನದಲ್ಲಿ ಸುಖ ಎಂಬುದು ಕೇವಲ ದುಡ್ಡು ಕಾಸಿನಲ್ಲಿ ಇಲ್ಲ. ನಾಳೆ ನಾವು ಚೆನ್ನಾಗಿ ಇರ್ತೀವಿ ಅನ್ನೋ ಕನಸು ಕಾಣೋದು ಒಳ್ಳೇದು. ಆದರೆ ಆ ಕನಸಿನ ಕಾಲಿನಿಂದ ಇವತ್ತಿನ ಸಂತೋಷಗಳನ್ನು ಹೊಸಕುವುದು ಸರಿಯಲ್ಲ"

Wednesday, October 5, 2011

ಸಾಂತ್ವನ ಯಾರಿಂದ?





ನನ್ನ ಎಲ್ಲ ನೋವು, ದು:ಖ ಬೇಸರಿಕೆಯನ್ನು ಮರೆಸುತ್ತಿದವಳು ನೀನು,
ಈಗ ನಿನ್ನ ಅಗಲಿಕೆಯಿಂದ ಆಗಿರುವ ನೋವಿಗೆ ಸಾಂತ್ವನ ಹೇಳುವವರು ಯಾರು?

ಇದೆಂಥಾ ಉಡುಗೊರೆ ??

ಅಂದು ಪ್ರತೀಕ್'ನ ಹುಟ್ಟುಹಬ್ಬ. ಪ್ರತೀಕ್ ಮತ್ತು ಅವನ ಇಡೀ ಕುಟುಂಬ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದರು. ಒಬ್ಬ ಸದಸ್ಯ ಮಾತ್ರ ಕಾಣಿಸಲಿಲ್ಲ, ಅದು ಅವನ  ಹೆಂಡತಿ. ಪ್ರತಿಕ್  ಹೆಂಡತಿ ಅವನ ಮೇಲೆ ಮುನಿಸಿಕೊಂಡು ಮನೆ ಬಿಟ್ಟು ಹೋಗಿ ೬ ತಿಂಗಳಾಗಿದೆ. 
ಆದರೂ ಅವಳ ದಾರಿ ಕಾಯುವುದೇ ಇವನ ಕೆಲಸವಾಗಿ ಬಿಟ್ಟಿದೆ. ಸಂಜೆ ಆಫೀಸ್ ಮುಗಿಸಿಕೊಂಡು ಬಂದ ಅವನಿಗೆ ಸೆಕ್ಯೂರಿಟಿ "ಸಾರ್ ನಿಮಗೊಂದು ಲೆಟರ್ ಇದೆ" ಅಂದ. ಕೈಯಲ್ಲಿ ತೊಗೆದುಕೊಂಡು ನೋಡಿದರೆ ಹೆಂಡತಿಯಿಂದ ಬಂದ ಪತ್ರ. ಅತ್ಯಂತ ಖುಷಿಯಿಂದ ಲಕೋಟೆ ಹರಿದು ನೋಡಿದ ಪ್ರತೀಕನಿಗೆ ನೋವು, ವೇದನೆ ಮತ್ತು ಬೇಸರ. ಅದು ಹೆಂಡತಿ ಕಳಿಸಿದ ವಿಚ್ಚೇದನ ಪತ್ರ. ಯಾವ ಹೆಂಡತಿಯೂ ಕೊಡಲಾರದ ಇಂಥ ಹುಟ್ಟುಹಬ್ಬದ ಉಡುಗೊರೆಯನ್ನು ಸ್ವೀಕರಿಸಿದ ಪ್ರತಿಕ್ ದೀರ್ಘವಾದ ಉಸಿರನ್ನು ಬಿಟ್ಟು, ಮನೆಯೊಳಗೇ ಹೋದ. .............................. ಮುಂದುವರೆಯುವುದು.

Monday, October 3, 2011

ತಿರುಗಿ ನೋಡಬಾರದೇ...

ಮರಳಿ ನೀ ಬಾರದ ದಾರಿಯ ನೋಡುತ,
ನೀ ಬಂದೇ ಬರುವಿ ಎಂಬ ಹುಸಿ ಕನಸನ್ನು ಕಟ್ಟಿರುವೆ, ನನ್ನ ಈ ಹುಚ್ಚುತನ ನೋಡಿ ನಗಲೆಂದು ನೀ ಬರಬಾರದೇ ?