Saturday, November 17, 2012

ಕಸ = ಕಸಿವಿಸಿ


ಅವತ್ತೊಂದು ದಿನ ಯಶವಂತಪುರ ರೇಲ್ವೆ ಸ್ಟೇಷನ್ ಗೆ ಯಾರೋ ನೆಂಟರನ್ನ ಕರೆದುಕೊಂಡು ಬರೋಕೆ ಹೋಗಿದ್ದೆ. ಸಿಕ್ಕಾಪಟ್ಟೆ ಚಳಿ, ಜೊತೆಗೆ ಒಂದಿಷ್ಟು ಜಿನುಗೋ ಮಳೆ ಹನಿ. ಅದ್ಭುತ ವಾತಾವರಣ. ಟ್ರೇನ್ ಬರೋಕೆ ಇನ್ನು 30 ನಿಮಿಷ ಇತ್ತು. ಒಂದು ಕಪ್ ಟೀ ಹೀರಿಬಿಡೋಣ ಅಂತ ಅಲ್ಲೇ ಪಕ್ಕದಲ್ಲಿದ್ದ ಟೀ ಸ್ಟಾಲ್ ಗೆ ಹೋದೆ. ಚಹಾ ಕುಡಿದ ಮೇಲೆ ಕಪ್ ಎಸೆಯೋಕೆ ಕಸದ ಬುಟ್ಟಿ  ಹುಡುಕಿದೆ. ಆದ್ರೆ ಬುಟ್ಟಿ ಅಲ್ಲಿರಲಿಲ್ಲ. ಅಂಗಡಿಯವನಿಗೆ ಕೇಳ್ದೆ 'ಕಸದ ಬುಟ್ಟಿ ಎಲ್ಲಪ್ಪ?'. ಅವನು ಕೊಟ್ಟ ಉತ್ತರ ಕೇಳಿ ಕೋಪ ನೆತ್ತಿಗೇರಿತು. 'ಅಲ್ಲೇ ಎಲ್ಲಾದರು ಹಾಕಿ, ಬೇರೆಯವರು ಅಲ್ಲೇ ಹಾಕಿದ್ದರೆ. ನಿಮಗೆ ಅಂತ ಕಸದ ಬುಟ್ಟಿ ತಂದು ಕೊಡಲೇನು?' ಈ ಬೇಜವಾಬ್ದಾರಿಯ ಮಾತಿಗೆ ಉತ್ತರಿಸೋ ತಾಳ್ಮೆ ನನಗಿರಲಿಲ್ಲ. 
30 ನಿಮಿಷದ ಹಿಂದೆ, ಅದೇ ಪ್ಲಾಟ್ಫಾರ್ಮ್ ಸ್ವಚ್ಛ ಮಾಡೋಕೆ ಅಂತ ಒಬ್ಬಳು ವೃದ್ಧೆ ಬಂದಿದ್ದಳು. ಮೈಮೇಲೆಲ್ಲ ನೆರಿಗೆಗಳು. ಆ ಚಳಿಯಲ್ಲಿ ಹರಿದು ಹೋದ ಒಂದು ಸ್ವೆಟರ್, ಕಿವಿಗೆ ಒಂದು ಬಟ್ಟೆ, ಕೈಯಲ್ಲಿ ಒಂದು ಪೊರಕೆ, ಕಾಲಲ್ಲಿ ಹಳೆ ಹವಾಯಿ ಸ್ಲಿಪ್ಪರ್ ಅದಕ್ಕೂ ದಾರದಿಂದ ಕಟ್ಟಿದ ಉಂಗುಷ್ಟ. ತೀರ ಚಿಂತಾಜನಕ ಸ್ಥಿತಿಯಲ್ಲಿ ಇದ್ದಳು ಆ ಅಜ್ಜಿ. ಟ್ರೇನ್ ಸ್ಟೇಶನ್ನಲ್ಲಿ ನಿಂತಾಗ ಶೌಚಾಲಯ ಉಪಯೋಗಿಸಬೇಡಿ ಅಂತ ಎಷ್ಟೇ ಬಡ್ಕೊಂಡ್ರು ನಮ್ಮ ಜನಕ್ಕೆ ಅರ್ಥ ಆಗೋಲ್ಲ. ಟ್ರೇನ್ ನಿಂತಾಗ ಮಾಡಿರೋ ಆ  ಪಾಪ ತೊಳೆಯೋಕೆ ಆ ಅಜ್ಜಿ ತನ್ನ ಕೈ ಉಪಯೋಗಿಸ್ತಾ ಇದ್ದಳು. ಅದೇನು ಅವಳ ಕರ್ಮವೋ ಅಥವಾ ಮಾಡಿದವನ ಪಾಪದ ಕೊಡ ತುಂಬೋಕೆ ಭಗವಂತ ಆಡಿಸಿದ ಆಟವೋ, ಒಂದೂ ಗೊತ್ತಿಲ್ಲ. ಆದರೂ ಮಾನವೀಯತೆ ದೃಷ್ಟಿಯಿಂದ ನೋಡಿದರೆ ಆಕೆ ಮೇಲೆ ಕನಿಕರ ಹುಟ್ಟೋದು ನಿಶ್ಚಿತ. ಅವಳು ಮಾಡೋ ಆ ಕೆಲಸಕ್ಕೆ ಅವಳಿಗೆ ಎಷ್ಟು ದುಡ್ಡು ಸಿಗುತ್ತೋ ಅದರ ನಾಲ್ಕು ಪಟ್ಟು ಪಾಪ ಅಲ್ಲಿ ಗಲೀಜು ಮಾಡಿದ ಪಾಪಿಗೆ ಸಿಗುತ್ತದೆ. ಈ ಪಾಪ ಪುಣ್ಯದ ಲೆಕ್ಕದಲ್ಲಿ ನಮ್ಮ ದೇಶದ ಸೌಂದರ್ಯ, ಅದರ ಪ್ರತಿಷ್ಠೆ ಎಲ್ಲ ಮೂಲೆಗುಂಪಾಗಿ, ಭಾರತೀಯರು ಅಂದ್ರೆ ಕೊಳಕರು, ಆ ದೇಶದ ಪರಿಸ್ತಿತಿ ಹೀಗೆ ಇರುತ್ತೆ ಅನ್ನೋದು ಹೊರದೇಶದವರ ವಾದವಾದರೆ. ಇನ್ನು ಭಾರತೆ ಮಾತೆಯ ಮೊಮ್ಮಕ್ಕಳಾದ ನಮ್ಮ ಯುವಕರು ಈ ದೇಶಕ್ಕೆ ಭವಿಷ್ಯ ಇಲ್ಲ ಅನ್ನೋದು ಇನ್ನೂ ನಾಚಿಕೆಗೇಡು ಪಡುವಂತಹ ವಿಷಯ.
ನಾನೊಬ್ಬನೇ ಏನು ತಾನೇ ಮಾಡೋಕೆ ಆಗುತ್ತೆ ಅನ್ನೋದು ಕೆಲವರ ಅಂಬೋಣ. ಇಲ್ಲಿ ಶಿವ್ ಖೇರಾ ಹೇಳಿರೋ ಒಂದು ಮಾತು ನೆನಪಾಗುತ್ತದೆ. 'if you are not part of the solution then you are part of the problem'. ದೇಶ ನನ್ನದು ಅದು ಶುದ್ಧವಾಗಿರಬೇಕು. ದಿನ ಬೆಳಿಗ್ಗೆ ಎದ್ದು ಪೊರಕೆ ಹಿಡಿದು ದೇಶ ಗುಡಿಸೋದು ಕಷ್ಟ, ಆದ್ರೆ ನಮ್ಮ ಕೈಲಾದಷ್ಟು ನಮ್ಮನ್ನು ನಾವು ತಿದ್ದಿಕೊಂದ್ರೆ ಅದೇ ದೊಡ್ಡ ಉಪಕಾರ.
ಮೊನ್ನೆ ದೀಪಾವಳಿ ಆಯಿತು. ಎಲ್ಲರೂ ತಂಡ ತಂಡವಾಗಿ ರೋಡಿಗಿಳಿದು ಪಟಾಕಿ ಹೊಡೆದರು. ಅದು ಸಂಭ್ರಮದ ಹಬ್ಬ. ರಾತ್ರಿ ಎಲ್ಲ ಪಟಾಕಿ ಹೊಡೆದ ಜನ ಎದ್ದಿದ್ದು ಬೆಳಿಗ್ಗೆ 7 ಗಂಟೆಗೆ. ಆದ್ರೆ ಅವರೆಲ್ಲ ಏಳೋ ಮೊದಲು, ಪೊರಕೆ ಹಿಡಿದ ಅದೆಷ್ಟೋ ಕೈಗಳು ಅವರನ್ನ ಬೈಕೊಂಡು ರೋಡು ಸ್ವಚ್ಛಗೊಳಿಸಿ ಮರೆಯಾದವು. ಪಟಾಕಿ ಹಾರಿಸೋ ಜನರಲ್ಲಿ ಒಬ್ಬರಾದರು ಆ ಅವಶೇಷಗಳ ಬಗ್ಗೆ ಯೋಚನೆ ಮಾಡಿದ್ರ? ಖಂಡಿತ ಇಲ್ಲ. ಗೋ ಗ್ರೀನ್ ಅಂತ ಬಟ್ಟೆ ಹಾಕಿಕೊಂಡು ಒಂದು ದಿನವಿಡೀ ಫೋಟೋ ತೆಗೆದು ಫೆಸಬುಕ್ ಗೆ ಹಾಕಿಕೊಳ್ಳೋ ಯುವಕರೇ ಜಾಸ್ತಿ. ಕ್ರಾಂತಿ ಅನ್ನೋದು ಒಂದು ದಿನ ಬಂದು ಹೊಗೊದಲ್ಲ, ಅದು ನಿರಂತರ. 
ಇದೆಲ್ಲ ನೋಡುತ್ತಿದ್ದರೆ, ಆ ಬ್ರಿಟಿಷರ ದಬ್ಬಾಳಿಕೆಯ ದಿನಗಳೇ ನಮ್ಮಲ್ಲಿ ದೇಶಭಕ್ತಿಯನ್ನು, ಒಗ್ಗಟ್ಟನ್ನು ಖಾಯಂಗೊಳಿಸಿದ್ದವು. ಜಲ, ವಾಯು, ಭೂಮಿ ಜೊತೆ ನಮ್ಮ ವೈಚಾರಿಕ ಪ್ರಜ್ಞೆ ಕೂಡ ಮಲಿನ ಆಗಿರೋದು ದುರದೃಷ್ಟಕರ. ಇನ್ನೊಮ್ಮೆ ಬೇಕಾಬಿಟ್ಟಿ ಕಸ ರೋಡಿನಲ್ಲಿ ಹಾಕೋವಾಗ ಮೇಲೆ ಹೇಳಿರೋ ಆ ಅಜ್ಜಿಯ ಮುಖ ಒಮ್ಮೆ ನೆನೆಪಿಸಿಕೊಳ್ಳಿ. 
ಚಿತ್ರಕೃಪೆ: ದಿ ಹಿಂದು ಪತ್ರಿಕೆ

Wednesday, November 14, 2012

ಪ್ರೀತಿ

ಪ್ರೀತಿ ಅನ್ನೋದು ಹೇಗಿರುತ್ತೆ ಅನ್ನೋದರ ಬಗ್ಗೆ ಕಲ್ಪನೆ ಇದ್ದದ್ದೇ ಬೇರೆ, ಆದರೆ ಪ್ರೀತಿಯ ಬಗ್ಗೆ ತಿಳಿದಾಗ ಆಧ ಅನುಭವವೇ ಬೇರೆ. ಪ್ರೀತಿ ಎನ್ನುವ ಆ ಮರಿಜಿಂಕೆ ನನ್ನ ಮನದಲ್ಲಿ ನಲಿದಾಡಿದ್ದು ನಾ ಕಂಡ ಕ್ಷಣ ನನ್ನಲ್ಲದ ಬದಲಾವಣೆ ಹೇಳತೀರದು. ನನ್ನದೇ ಲೋಕ ಸೃಷ್ಟಿಸಿ ಅಲ್ಲಿಗೆ ಯಾರೂ ಬರದ ಹಾಗೆ ಬದುಕು ನಡೆದಿತ್ತು. ಎದೆಯಾಳದ ಮೂಲೆಯೊಂದರಲ್ಲಿ ಇಟ್ಟಿದ್ದ ಚಿಕ್ಕದೊಂದು ಸಂದೂಕದೊಳಗೆ ಅಡಗಿಸಿದ್ದ ನನ್ನ ಹಲವಾರು ಕನಸುಗಳಿಗೆ ಬೀಗ ಹಾಕಿಟ್ಟಿದ್ದೆ. ನನ್ನ ಹೊರತು ಅದರ ಒಳಗಿನ ರಹಸ್ಯಗಳು ಬೇರ್ಯಾರಿಗೂ ಗೊತ್ತಿರಲಿಲ್ಲ. ಆ ಸಂದೂಕಕ್ಕೆ ಯಾರ ಕೈ ತಲುಪಬಾರದೆಂದು ಅದಕ್ಕೊಂದು ಬೀಗ ಹಾಕಿ, ಬೀಗದ ಕೈ ಮನಸ್ಸಿನ ಇನ್ನೊಂದು ಮೂಲೆಯಲ್ಲಿ ಬಚ್ಚಿಟ್ಟು ಮರೆತು ಹೋಗಿದ್ದೆ. ನನ್ನ ಕಣ್ಣಿಗೆ ಮಾತ್ರ ಕಾಣಿಸುವ ಆ ಕೀಲಿಯ ಕಿಂಡಿಯ ಒಳಗೆ ಇಣುಕಿ ನೋಡಿ, ಒಂದೊಂದೇ ಕನಸನ್ನು ಹೊರಗೆ ತೆಗೆದು, ಅದನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿದ್ದಾಗಲೇ ನೀನನಗೆ ಸಿಕ್ಕೆ. ಸುಪ್ತ ಮನಸ್ಸಿನಲ್ಲಿ ಅಡಗಿರೋ ಆ ಕನಸುಗಳ ಸಂದೂಕದ ಕೀಲಿ ಮುರಿದು ಚೂರಾಗಲು ನಿನ್ನ ಒಂದು ನಗು ಸಾಕಾಗಿತ್ತು. ತೆರೆದಿದ್ದ ಆ ಪೆಟ್ಟಿಗೆಗೆ ನನ್ನ ಅಪ್ಪಣೆ ಇಲ್ಲದೆ ನೀ ಕೈ ಹಾಕಿದೆ. ನಿನಗೆ ಇಷ್ಟವಾಗದ ಅನೇಕ ಕನಸುಗಳನ್ನು ನಾನು ಅದರಿಂದ ಆಚೆ ಹಾಕಿದೆ. ನಿನಗೆ ಇಷ್ಟವಾದ ಅದೆಷ್ಟೋ ಕನಸುಗಳನ್ನು ಅದಕ್ಕೆ ನೀ ತುಂಬಿದೆ. ಮೊದಲು ಇದ್ದ ಪೆಟ್ಟಿಗೆಗಿಂತ ಈಗಿನ ಪೆಟ್ಟಿಗೆಯ ಬಗ್ಗೆ ನನಗೆ ಒಲವು ಮೂಡಿತು. 
ಯಾವ ಕನಸು, ಯಾರ ಕನಸು ಅನ್ನೋದನ್ನ ವಿಂಗಡಿಸಲಾರದಷ್ಟು ಅವುಗಳು ಬೆರೆತು ಹೋದವು. ಈಗ ಅವೇನೇಯಿದ್ದರೂ ನಮ್ಮ ಕನಸುಗಳು. ನಿನ್ನ ಪ್ರೀತಿಯ ಬಲವೊಂದಿದ್ದರೆ ಎಲ್ಲ ಕನಸುಗಳಿಗೆ ಒಂದು ದಿನ ಸಾಕಾರ ರೂಪ ಕೊಡುವುದು ಖಂಡಿತ. ನನ್ನನ್ನು ಪ್ರತಿದಿನವೂ, ಪ್ರತಿಕ್ಷಣವೂ  ಹಿಂಬಾಲಿಸುತ್ತಿರುವ ಓ ನನ್ನ ಪ್ರೀತಿಯೇ ನಿನಗೆ ನಾನು ಚಿರಋಣಿ. ಓ ನನ್ನ ಒಲವೆ, ಓ ಜೀವವೇ ಐ ಲವ್ ಯು. ನೀನು ನಾನು ಬೇರೆಯೇ ?  


Tuesday, November 13, 2012

ಜೀವನ ಗೆದ್ದವರು

ಮೊನ್ನೆ ಗುರುವಾರ ಆಫೀಸನಲ್ಲಿ ಕುಳಿತಿದ್ದೆ. ನನಗೆ ಪರಿಚಯವಿಲ್ಲದ ಯಾರೋ ಒಬ್ಬ ಹುಡುಗ ಫೋನ್ ಮಡಿದ. "ವಿಷಯ ಏನು?" ಅಂದೆ. ಅವನ ಜೊತೆ ಮಾತಾಡಿದ ಮೇಲೆ ವಿಷಯ ತಿಳಿಯಿತು. ಭಾನುವಾರ ನಡೆಯಲಿರೋ ಒಂದು ಕಾರ್ಯಕ್ರಮಕ್ಕೆ ನನ್ನನ್ನು ನಿರ್ಣಾನಾಗಿ ಆಹ್ವಾನಿಸಿದರು. ಚಿಕ್ಕ ಮಕ್ಕಳು ಅಭಿನಯಿಸುವ ನಾಟಕದ ಸ್ಪರ್ಧೆ ಅದು. ಯಾರನ್ನೋ judge ಮಾಡುವ ಅರ್ಹತೆ ನಾನಿನ್ನು ಘಳಿಸಿಲ್ಲ. ಆದರೂ ನನಗೆ ತಿಳಿದ ಮಟ್ಟಿಗೆ ಒಬ್ಬ ನೋಡುಗನಾಗಿ ತೀರ್ಮಾನ ಮಾಡಲು ಹೊರಟೆ ಅಲ್ಲದೆ ಚಿಕ್ಕ ಮಕ್ಕಳ ಕಾರ್ಯಕ್ರಮ ಆಗಿದ್ದರಿಂದ ನನಗೆ ಅಲ್ಲಿಗೆ ಹೋಗೋ ತೀವ್ರ ಮನಸಾಯಿತು. ಕಾರಣವಿಷ್ಟೇ ಅವರು ಅನಾಥಾಶ್ರಮದ ಮಕ್ಕಳು.

ಭಾನುವಾರ ನನ್ನ ಇನ್ನೊಬ್ಬ ಮಿತ್ರನನ್ನ ಕರೆದುಕೊಂಡು ಆ ಕಾರ್ಯಕ್ರಮಕ್ಕೆ ಹೋದೆ. ಸುಮಾರು 500 ಹುಡುಗರು ನೆರೆದಿರೋ ಕಾರ್ಯಕ್ರಮ ಅದು. ನಾಟಕದ ಜೊತೆಗೆ ಇನ್ನೂ ಹಲವು ಸ್ಪರ್ಧೆಗಳು ಇದ್ದವು. ಫೇಸ್ ಪೇಂಟಿಂಗ್, ಸ್ಪೋರ್ಟ್ಸ್, ಪಾಟ್ ಮೇಕಿಂಗ್, ಡ್ರಾಯಿಂಗ್, ಪೇಂಟಿಂಗ್, ಒಂದೇ ಎರಡೇ. ನನಗೆ ಹೋದ ತಕ್ಷಣ ಒಂದು ರೂಮಿನಲ್ಲಿ ಕಾರ್ಯಕ್ರಮದ ಬಗ್ಗೆ ಒಬ್ಬ ಸ್ವಯಂ ಸೇವಕಿ ಹೇಳಿದಳು. ಹಾಗೆ ಅವರ ಹಿಂದಿನ ಹಾಗು ಅದರ ಹಿಂದಿನ ವರ್ಷದ ಫೋಟೋಗಳನ್ನು ತೋರಿಸಿದಳು. ನಾಟಕದ ಸ್ಪರ್ಧೆ ಶುರುವಾಗೋಕೆ ಇನ್ನು 1 ಗಂಟೆ ಇತ್ತು. ಆ ನಾಲ್ಕು ಗೋಡೆಗಳ ಮಧ್ಯ ಕೂಡೋ ಬದಲು ಅಕ್ಕ ಪಕ್ಕದಲಿ ನಡೆಯುತ್ತಿದ್ದ ಸ್ಪರ್ಧೆಗಳ ಮೇಲೆ ಕಣ್ಣು ಹಾಯಿಸೋ ಮನಸಾಯಿತು. ನಾನು ಮತ್ತು ನನ್ನ ಮಿತ್ರ ಎಲ್ಲ ಕೋಣೆಗಳಿಗೆ ಭೇಟಿ ಕೊಟ್ಟೆವು. ಒಂದೊಂದು ಕೋಣೆಯಲ್ಲೂ ನವ ಪ್ರತಿಭೆಗಳು, ನವ್ಯ ಯೋಚನೆಗಳು, ಅಭೂತಪೂರ್ವ ಕಲ್ಪನೆಗಳು. ಯಾವುದೋ ಸಾಗರದ ಮಧ್ಯ ನಿಂತ ಅನುಭವ. ಅವರಿಗೆಲ್ಲ ಇದ್ದ ಆ ಪ್ರತಿಭೆ ಅವರ ವಯಸ್ಸಿಗೆ ತಾಳೆಯಾಗುತ್ತಿರಲಿಲ್ಲ. ವಿಶ್ವ ಮಾನವ ಸಂದೇಶ ಸಾರುವ ಚಿತ್ರಗಳು. ಪಿಕ್ಸಾರ್ ಸಂಸ್ಥೆಯನ್ನೇ ಮೀರಿಸುವ ಕಲಾಕೃತಿಗಳು. ಕಣ್ಣು ಅನೇಕ ಬಣ್ಣಗಳಿಂದ ತುಂಬಿ ಹೋದವು.

ಇದೆಲ್ಲ ಮುಗಿಸುವಷ್ಟರಲ್ಲಿ ನಾಟಕದ ಸ್ಪರ್ಧೆ ಶುರುವಾಗಿದೆ ಅನ್ನೋ ಕರೆ ಬಂತು. ಸರಿ ಅಲ್ಲಿಗೆ ಹೊರಟೆ. ಒಟ್ಟು 8 ಚಿಕ್ಕ ನಾಟಕಗಳು. ಎಲ್ಲವೂ ಒಂದಕ್ಕಿಂತ ಒಂದು ಮೇಲು. ನನಗೆ ಅನುವು ಮಾಡಿದ್ದರೆ, ಎಲ್ಲರಿಗೂ ಮೊದಲ ಬಹುಮಾನ ಕೊಡುತ್ತಿದ್ದೆ. ಆದರೂ ಕೆಲವು ಸೂಕ್ಮಗಳನ್ನು ಗಮನಿಸಿ 1 ತಂಡಕ್ಕೆ ಮೊದಲ ಬಹುಮಾನ ಘೋಷಿಸಿದೆ. ಅನೇಕ ಯುತ್ ಫೆಸ್ಟ್ ಗಳಲ್ಲಿ, ಕಾಲೇಜ್ ಸ್ಪರ್ಧೆಗಳಲ್ಲಿ, ಗೆಲುವು ಸಿಗದೇ ಇದ್ದಾಗ ನಾನು ಕೂಡ ಮನಸ್ಸು ನೋಯಿಸಿಕೊಂಡಿದ್ದು ಇದೆ. ಆದ್ರೆ ಇವತ್ತಿನ ಆ ಮಕ್ಕಳನ್ನು ನೋಡಿದರೆ, ಗೆಲುವು ಸೋಲು ಎಲ್ಲವೂ ಒಂದೇ ತೆರನಾಗಿ ಸ್ವೀಕರಿಸುವ  ಮನೋಭಾವ.

ಯಾವುದಾದರು ಒಂದು ಮಗು ಮುಖ ಸಪ್ಪೆ ಮಾಡಿಕೊಂಡಿರುವ ದೃಶ್ಯ ಕಾಣಸಿಗಲಿಲ್ಲ. ನನ್ನ ಮಿತ್ರನಿಗೆ ಹೇಳಿದೆ 'ಈ ಮಕ್ಕಳನ್ನ ನೋಡ್ತಾ ಇದ್ರೆ, ಇವರು ಅನಾಥರು ಅಥವಾ ಇವರನ್ನು ಇವರ ಕಡೆಯವರು ದೂರಮಾಡಿರುವ ಬಗ್ಗೆ ಅಸಮಾಧಾನ ಯಾವುದು ಕಾಣುತ್ತಿಲ್ಲ. ಪರಿಸ್ಥಿತಿಯನ್ನು ಎದುರಿಸೋದು ಹೇಗೆ ಅನ್ನೋದು ಇವರನ್ನ ನೋಡಿ ಕಲೀಬೇಕು ಅನ್ನಿಸುತ್ತೆ' ಅಂದೆ.

'ನಿಜ' ಅಂದ ನನ್ನ ಮಿತ್ರ. ನೀವೇನಂತೀರಿ?

ವೀಕೆಂಡ್ ವರೈಟಿ

            ದೇವರು ಎಲ್ಲ ಕಡೆ ಇರೋಕೆ ಸಾಧ್ಯವಾಗಲ್ಲ ಅನ್ನೋ ಕಾರಣಕ್ಕೆ ತಾಯಿಯನ್ನ ಸೃಷ್ಟಿಸಿದ ಅನ್ನೋದು ನಮಗೆಲ್ಲ ಗೊತ್ತಿರೋ ಮಾತು. ಆದ್ರೆ ನನ್ನ ಪಾಲಿಗೆ ಆ ಅದೃಷ್ಟ ಡಬಲ್.  ತಂದೆ-ತಾಯಿ ಇಬ್ಬರೂ ನನ್ನ ಮೇಲಿಟ್ಟಿರೋ ಪ್ರೀತಿ ಅಂತಹದ್ದು. ಬರೀ ಕಣ್ಣು ನೋಡಿ ನನ್ನ ಮನಸ್ಥಿತಿ ಅರಿಯೋವಷ್ಟು ಮೇಧಾವಿಗಳು ಅವರು. ಕೆಲವೊಮ್ಮೆ ಬೇಜಾರು ಪಡುವಂತಹ ಸಂಗತಿಗಳು ನಡೆದರೂ ಅದ್ಯಾವುದು ಬಹಳ ಕಾಲ ನೆಲೆಯೂರಲ್ಲ. ನಾನೋ ಅಥವಾ ಅವರೋ, ಯಾರೋ ಒಬ್ಬರು ಆ ಬೇಜಾರಿಗೆ ಮರಣ ಬರೀತೀವಿ.
           ಇಡೀ ವಾರ ನನ್ನ ಮನೆಯಲ್ಲಿ ಏನು ನಡೆಯುತ್ತೆ ಅನ್ನೋದು ಬಹುಶಃ ನನಗೆ ಗೊತ್ತಿರೋದಿಲ್ಲ. ಮನೆ ಬೇಕಾಗೋ ಸಾಮಾನುಗಳಿಂದ ಹಿಡಿದು ನನ್ನ ಊಟ, ಬಟ್ಟೆ ಹೀಗೆ ಎಲ್ಲಾ ಭಾಗಗಳಲ್ಲೂ ಅವರು ತಮ್ಮ ಸಹಾಯ ತೋರುತ್ತಾರೆ. ಕೆಲವೊಮ್ಮೆ, ನಾನೆಲ್ಲಿ ತುಂಬಾ ಪರಾಧೀನನಾಗಿ ಬಿಡ್ತೇನೋ ಅನ್ನೋವಷ್ಟು ಅವರನ್ನು ಅವಲಂಬಿಸಿದ್ದೇನೆ. ಇನ್ನೂ ಕೆಲವೊಮ್ಮೆ ಕೋಪದಿಂದ 'ಇದೆಲ್ಲ ಮಾಡಬೇಡಿ ನೀವು, ನಾನೆಲ್ಲ ಮಾಡ್ಕೊತೀನಿ' ಅನ್ನೋ ಮಾತುಗಳೂ ಆಡಿದ್ದುಂಟು. ಅವರು ಮಾಡೋದು ಬಿಡೋಲ್ಲ, ನಾನು ಹೇಳೋದು ಬಿಡೋಲ್ಲ.
ಈ ವೀಕೆಂಡ್ ಬಂದ್ರೆ, ನನಗೆ ಮೂಡ ಇದ್ರೆ, ಅಡುಗೆ ಮನೆ ನಂದು. ಹೊಸರುಚಿ, ಅಭಿರುಚಿ ಅನ್ನೋ ಹೆಸರಲ್ಲಿ ಏನೇನೋ ಅಡುಗೆ ಮಾಡಿ ಅವರಿಗೆ ಊಟಕ್ಕೆ ಹಾಕೋದು ನನ್ನ ರೂಢಿ. ಬೆಳಿಗ್ಗೆ ತಿಂಡಿಯಿಂದ  ಹಿಡಿದು ರಾತ್ರಿ ಊಟದವರೆಗೂ ಏನಾದ್ರೂ ಹೊಸ ಪ್ರಾಯೋಗಿಕ ಅಡುಗೆ ಮಾಡಿ ಅವರನ್ನ ಕೂಡಿಸಿ ಊಟಕ್ಕೆ ಹಾಕೋದ್ರಲ್ಲಿ ಇರೋ ಸುಖ ಬೇರೆ ಯಾವುದರಲ್ಲಿ ಇಲ್ಲ. ನಾನು ಹುಟ್ಟಿದಾಗಿನಿಂದ ಇಲ್ಲಿವರೆಗೂ ನನ್ನ ಊಟ, ಉಡುಗೆ, ತಿಂಡಿ ಎಲ್ಲದರ ಬಗ್ಗೆ ಅಷ್ಟು ಕಾಳಜಿವಹಿಸುವ ಅವರಿಗೆ, ಒಂದು ದಿನ ಮಾಡಿ ಹಾಕೋದ್ರಿಂದ ಅವರಿಗೂ ರೆಸ್ಟ್ ಸಿಗುತ್ತೆ. ಜೊತೆಗೆ ಮಗ ನಮ್ಮನ್ನ ಕೂಡಿಸಿ ಮಾಡಿ ಹಾಕಿದ ಅನ್ನೋ ಆ ತೃಪ್ತಿ ಇದೆಯಲ್ಲ ಅದು ಕೋಟಿ ಕೊಟ್ಟರು ಬಾರದು.
               ಮೊನ್ನೆ ಹೀಗೆ ಬಜ್ಜಿ ತಿನ್ನೋ ಆಸೆ ಆಯಿತು, ಒಳಗೆ ಹೋಗಿ ಹಿಟ್ಟು ಕಲಿಸಿ ಬಜ್ಜಿ ಮಾಡೇ ಬಿಟ್ಟೆ. ಜೊತೆಗೊಂದಿಷ್ಟು ಈರುಳ್ಳಿ, ಕೊತ್ತಂಬರಿ, ಕ್ಯಾರೆಟ್ ಹಾಗು ನಿಂಬೆ ಹಣ್ಣಿನ ಕೋಸಂಬರಿ ಮಾಡಿ, ಬಿಸಿ ಬಿಸಿ ಬಜ್ಜಿ ಜೊತೆ ಆ ಕೋಸಂಬರಿ ತಿಂದರೆ, ಏನ್ ಕೇಳ್ತೀರಾ ಆ ರುಚಿ. ಇಷ್ಟೆಲ್ಲಾ ಆಗಬೇಕಾದರೆ, ಅಮ್ಮ ಅಡುಗೆ ಮನೆಗೆ ಬಂದು, 'ಬೆಳಿಗ್ಗೆ ನನಗೆ ಮಿರ್ಚಿ ತಿನ್ನೋ ಆಸೆ ಆಗಿತ್ತು. ಸಂಜೆ ಅನ್ನೋವಷ್ಟರಲ್ಲಿ ಅದನ್ನ ಮಾಡಿದ್ದೀಯಲ್ಲ. ಇದು ವಿಚಿತ್ರ' ಅಂದ್ರು. ಅದಕ್ಕೆ ಹೇಳೋದು ಭಾವನೆಗಳನ್ನು ಹೇಳೋಕೆ ಪದಗಳು ಬೇಕಾಗಲ್ಲ. ನಾಲಿಗೆ ಮಾತನಾಡೋದನ್ನ ನಿಲ್ಲಿಸಬಹುದು ಆದ್ರೆ ಕರಳು?

           ಒಂದೇ ಒಂದು ದಿನ ನಿಮ್ಮ ತಂದೆ ತಾಯಿಗೆ ಅಡುಗೆ ಮಾಡಿ ತಿನ್ನಿಸಿ ನೋಡಿ. ನಾನು ಅನುಭವಿಸಿರೋ ಆ ಸ್ವರ್ಗ ಸುಖ ಏನು ಅನ್ನೋದು ನಿಮಗೆ ಅರಿವಾಗುತ್ತೆ.

ಸೂಚನೆ: ಚಿತ್ರದಲ್ಲಿರೋ ನಳಪಾಕ ನಾನು ಮಾಡಿದ್ದು. ಗೂಗಲ್ ನಿಂದ ಕದ್ದ ಚಿತ್ರಗಳಲ್ಲ ಇವು. :)

Monday, November 12, 2012

ನನ್ನ ದೇಶ ಹೀಗಿರಬೇಕಾ ?


 ಕೆಲವು ವರ್ಷಗಳ ಹಿಂದೆ ನಾನು ಅಮೇರಿಕಕ್ಕೆ ಹೋದಾಗ ವಿಮಾನದಲ್ಲಿ ನಡೆದ ಘಟನೆಯಿದು. ಲಂಡನ್ನಿಂದ ಚಿಕಾಗೋಗೆ ಹೋಗಬೇಕಿದ್ದ ವಿಮಾನ ಅದು. ಅದು ನನ್ನ ಮೊದಲ ಪ್ರವಾಸ ಆಗಿದ್ದರಿಂದ ನನಗೆ ಬಹಳಷ್ಟು ಕಾತುರತೆ ಜೊತೆಗೆ ಒಂದಿಷ್ಟು ಭಯ. ನಾನು ಕೂತಿದ್ದ ಆಸನದ ಪಕ್ಕದಲ್ಲಿ ಸುಮಾರು 70 ವರ್ಷದ ಸುಂದರ ಹೆಂಗಸು (ಮುದುಕಿ ಅಂದ್ರೆ ತಪ್ಪಾಗಬಹುದು) ಕುಳಿತಿದ್ದಳು. ನನಗೆ ಮಾತನಾಡೋದು ತುಂಬಾ ಇಷ್ಟ ಆದ್ರೆ ಜೊತೆಗೆ ಯಾರದ್ರೂ ಇರಬೇಕಲ್ಲ. ಅಲ್ಲಿ ಇದ್ದದ್ದೇ 2 ಕೆಂಚು ಕೂದಲಿನ ಯುವತಿಯರು. ಜೊತೆಗೆ ಈ 70 ವರ್ಷದ ಯುವತಿ. ಆ ಇಬ್ಬರು ಮಹಿಳಾಮನಿಗಳೋ ಕಿವಿಯಲ್ಲಿ ಐಪ್ಯಾಡ್  ಸಿಗಿಸಿಕೊಂಡು, ಪ್ಲೇನ್ ಬಿದ್ರು ಕಣ್ಣು ಬಿಡೋ ಮೂಡ್ನಲ್ಲಿ ಇರಲಿಲ್ಲ. ಈ ಬ್ರಿಟಿಶ್ ಏರ್ವೇಸ್ ದು ಇಂಡಿವಿಜುಯಲ್ ಸ್ಕ್ರೀನ್ ಇದ್ದದ್ದರಿಂದ ನಾನು ಬಚಾವಾದೆ. ನನ್ನ ಹಳ್ಳಿಯಿಂದ ತಾಲ್ಲೂಕಿಗೆ ಹೋಗೋವಾಗ ಬಳಸುತ್ತಿದ್ದ ಡಕೋಟಾ ಬಸ್ ಪ್ರಯಾಣ ಎಸ್ಟೋ ಸುಖವಾಗಿತ್ತು ಸಂಬಂಧ ಇರಲಿ ಇಲ್ಲದಿರಲಿ, ಒಬ್ಬರಿಲ್ಲ ಒಬ್ಬರು ಮಾತು ಪ್ರಾರಂಭಿಸ್ತಾರೆ. ಹೇಗೆ ಈ ಗಾಡಿಗಳು ಐಶರಾಮಿ ಆಗುತ್ತಾ ಹೋಗುತ್ತವೋ ಮನುಷ್ಯನ ನಡುವಿನ ಅಂತರ ಜಾಸ್ತಿ ಆಗುತ್ತದೆ ಅನ್ನೋದು ನನ್ನ ಭಾವನೆ. ಚಿಕ್ಕವನಿದ್ದಾಗ ಎಸ್ಟೋ ಸಲ ಬಸ್ ಗಳಲ್ಲಿ ನಮ್ಮ ತಂದೆ ತಾಯಿಗೆ ಸೀಟ್ ಸಿಗದೇ ಇದ್ದಾಗ ನಾನು ಬೇರೆಯವರ ತೊಡೆಯ ಮೇಲೆ ಕುಳಿತು  ಪ್ರಯಾನಿಸಿದ್ದುಂಟು. ಅದೆಲ್ಲ ಹಳೆ ಕಥೆ ಬಿಡಿ. ಈ ಪುಷ್ಪಕ್ ವಿಮಾನ ಕಥೆ ಥರ ನನ್ನ ಕಥೆ ಆಗಿತ್ತು. ನನ್ನ ಜೀವನದಲ್ಲೇ ನಾನು ವಹಿಸಿದ ದೀರ್ಘ ಮೌನ ಅಂದ್ರೆ ಅದೇ ಇರಬೇಕು.


ನನ್ನ ಸುಕರ್ಮವೋ ಏನೋ ಎಂಬಂತೆ ಆ 70 ರ ಹೆಂಗಸು, ಕಿವಿಯಿಂದ ಹೆಡ್'ಫೋನ್ ತೆಗೆದು ನನ್ನ ನೋಡಿದಳು. ಇನ್ನೇನು ಅವಳು ನನ್ನ ಜೊತೆ ಮಾತನಾಡ್ತಾಳೆ ಅನ್ನೋ ಚಿಕ್ಕ ಸುಳಿವು ನನಗೆ ಸಿಕ್ತು. ಪಕ್ಕನೆ ನನ್ನ ಹೆಡ್'ಫೋನ್ ತೆಗೆದು ರೆಡಿ ಆದೆ. 'ಆರ್ ಯು ಫ್ರಾಂ ಇಂಡಿಯಾ'. 'ಹೌದಮ್ಮ ಮಹಾತಾಯಿ(ಎಸ್)' ನೀನು ಮಾತಾಡ್ಲಿ ಅಂತಾನೆ ಬಕಪಕ್ಷಿ ತಾರಾ ಕಾಯ್ತಾ ಇದ್ದೆ. ಶಬರಿ ಗೆ ಆ ರಾಮನ ದರ್ಶನ ಆದಾಗ ಆದ ಆನಂದ ನನಗಾಗಿತ್ತು. 'ಫಸ್ಟ್ ಟೈಮ್ ಟ್ರಾವೆಲ್?'. 'ಭಾರಿ ಇದ್ದೀಯಲ್ಲ ಮುದುಕಿ, ನಾನು ಮೊದಲ್ನೇ ಸಲ ಬರ್ತಾ ಇರೋದು ಅದೆಷ್ಟು  ಬೇಗ  ಕಂಡುಹಿಡಿದೆ' ಮನಸ್ಸಲ್ಲೇ ಅಂದುಕೊಂಡೆ. ಇದಾದ ಮೇಲೆ ಶುರು  ಆಯಿತು ನೋಡಿ, ಎಲ್ಲಿತ್ತೋ ಎಲ್ಲಿಲ್ಲವೋ ಆ 'ಸ್ಲಂ ಡಾಗ್' ಸಿನಿಮ ಮಾತು. 'ನಿಮ್ಮ ದೇಶದ ವಾಸ್ತು ಶಿಲ್ಪಿ ತುಂಬಾ ಚೆನ್ನಾಗಿದೆ. ಆ ತಾಜ್ಮಹಲ್ ನೋಡೋಕೆ ನಾವು ಒಂದು ಸಲ ಬರಲೇ ಬೇಕು. ಆ ಚಹಾ ಮಾಡುವ ಹುಡುಗ ಕೋಟಿ ಗೆಲ್ಲೋದು ತುಂಬಾ ಅಭೂತಪೂರ್ವ ಸಂಗತಿ. ಜಾಣ್ಮೆ ಅನ್ನೋದು ಯಾರಪ್ಪನ ಮನೆ ಸ್ವತ್ತಲ್ಲ ಅನ್ನೋದು ಚೆನ್ನಾಗಿ ಸೆರೆಹಿಡಿದಿದ್ದಾರೆ'. ಇದೆಲ್ಲ ಕೇಳಿದ ಮೇಲೆ ನಾನು ಸುಮ್ಮನಿರ್ತೀನೆ, ಅಯ್ಯೋ ನೀವು ನೋಡಿರೋದು ಬರೀ 1 ಪರ್ಸೆಂಟ್. ಭಾರತಕ್ಕೆ ಬಂದು ಬರೀ ಟೂರ್ ಮಾಡೋಕೆ ನಿಮಗೆ ವರ್ಷಗಳು ಬೇಕು. ಪ್ರಕೃತಿ ಸೌಂದರ್ಯ, ಶಿಲ್ಪಕಲೆ, ಕೋಟೆ ಕೊತ್ತಲಗಳು ಒಂದೇ ಎರಡೇ. ನೂರು ಕಣ್ಣು ಸಾಲಲ್ಲ, ನನ್ನ ಎದೆ ಗರ್ವದಿಂದ ಉಬ್ಬಿಹೋಯಿತು. ಇದಾದ ಮೇಲೆ ಬಂತು ನೋಡಿ ಸಂಕಟದ ಸಮಯ. ಅದು ನಮ್ಮ ದೇಶದ ಬಡತನ, ಅನಕ್ಷರತೆ, ಅನಾಗರೀಕತೆ ಹಾಗೂ ಮೋಸ. ಎಲ್ಲದರ ಮೇಲೂ ಒಂದೊಂದು ಪುಸ್ತಕ ಬರೆಯುವಷ್ಟು ಪ್ರಶ್ನೆಗಳು. ನಾನೇ ಇಲ್ಲಿನ ಪರಿಸ್ಥಿತಿಗಳ ಬಗ್ಗೆ ಯೋಚನೆ ಮಾಡದಿರುವಷ್ಟು ಯೋಚನೆಗಳು ಆ ಮುದುಕಿಯಲ್ಲಿ. ಕೇವಲ 3 ಗಂಟೆ ಸಿನಿಮಾ ನೋಡಿ ನಮ್ಮ ದೇಶವನ್ನ ಅಳೆದು ಬಿಟ್ಟಳಲ್ಲ. ಮನಸ್ಸಿಗೆ ತುಂಬಾ ಬೇಜಾರಾಯ್ತು. ನಮ್ಮ ಮನೆ ವಿಷಯ ಬೇರೆಯವರು ಹೀನಾಯವಾಗಿ ಮಾತಾಡಿದ್ರೆ ಮನಸ್ಸಿಗೆ ಸರಿ ಅನ್ನಿಸೋದಿಲ್ಲ. ಅದು ಸತ್ಯ ಆಗಿದ್ರು ಕೂಡ. ನಾನು ಹಾಗೋ ಹೀಗೋ ಅವಳಿಗೆ ತಿಳಿಹೇಳಿದೆ. ಎಲ್ಲೋ ಒಂದೆರಡು ಕಡೆ ಭಿಕ್ಷೆ ಬೇಡ್ತಾರೆ ಅಂತ ಭಾರತದ ತುಂಬಾ ಭಿಕ್ಶುಕರೆ ಇದ್ದಾರೆ ಅಂತಲ್ಲ. ನಿಧಾನಕ್ಕೆ  ಎಲ್ಲ ಸರಿ ಹೋಗುತ್ತೆ ಅನ್ನೋದು ನನ್ನ ಸ್ಪಷ್ಟನೆ ಆಗಿತ್ತು. ನನಗೋ ಬೇರೆ ವಿಷಯದ ಬಗ್ಗೆ ಮಾತಾಡೋಣ ಅನ್ನೋ ಬಯಕೆ ಆದ್ರೆ ಅ ಮುದುಕಿ ಮತ್ತೆ ಮಾತು ಬದಲಿಸಿ ಅದೇ ಜಾಗಕ್ಕೆ ಬರೋಳು. ಕೊನೆಗೆ ತಲೆ ಕೆಟ್ಟು ಅವಳ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡೋಣ ಅಂತ ಸಿದ್ದನಾದೆ ಅಷ್ಟರಲ್ಲಿ ಊಟಕ್ಕೆ ತಯಾರಿ ಮಾಡುತ್ತಿದ್ದ ಆ ಏರ್ ಹೋಸ್ಟೇಸ್ ಬಂದು ಆ ಮುದುಕಿಗೆ ತಟ್ಟೆ ಕೊಟ್ಟಳು. ನನ್ನ ತಲೆ ತಿಂದು ಹೊಟ್ಟೆ ತುಂಬಿರಬೇಕು ಅವಳಿಗೆ, ಆದರೂ ಆ ಊಟ ತೆಗೆದುಕೊಂಡಳು.
ನನ್ನ ಊಟ ಇನ್ನೂ ಬರಲಿಲ್ಲ. ಕೊನೆಗೆ ಕ್ರಿಸ್ಟಿನ್ ಅನ್ನೋ ಏರ್ ಹೋಸ್ಟೇಸ್ ಬಂದು ನನಗೂ ಊಟ ಕೊಟ್ಟಳು. ನೋಡಿದ್ರೆ ಅದು ಚಿಕನ್. 'ನಾನು ಹೇಳಿದ್ದು ವೆಜ್ ಊಟ ಕಣ್ರೀ' ಅಂದೇ. ಅದಕ್ಕವಳು, ಹೌದಾ ಅಂತ ಹುಬ್ಬೆರಿಸಿದ್ಲು ಆಗ್ಲೇ ಗೊತ್ತಾಗಿದ್ದು ವೆಜ್ ಊಟ ಖಾಲಿಯಾಗಿತ್ತು  ಅಂತ. ಊಟ ವಾಪಸ್ ಕೊಟ್ಟೆ. ಎಲರೂ ಬಕಾಸುರನ ಹಾಗೆ ತಿಂತಾ ಇದ್ರೆ ನಾನು ಮಾತ್ರ, ಜ್ಯೂಸ್ ಹೀರುತ್ತಾ ಕುಳಿತೆ. ಪಕ್ಕದಲ್ಲಿ ಕುಳಿತಿದ್ದ ಮುದುಕಿಗೆ ನನ್ನ ಪರಿಸ್ಥಿನಿ ನೋಡಿ ಮರುಕ ಹುಟ್ಟಿತು ಅನ್ನಿಸುತ್ತೆ. ತನಗೆ ಕೊಟ್ಟಿದ್ದ ಬ್ರೆಡ್ ನನಗೆ ಕೊಟ್ಟಳು, ಜೊತೆಗಿಷ್ಟು ಜಾಮ್.
ಊಟ ಆದಮೇಲೆ ಮತ್ತೆ ಸ್ಲಂ ಡಾಗ್  ಕಥೆ ಮುಂದುವರೀತು. ಅಲ್ಲಿವರೆಗೂ ಆ ಸಿನಿಮ ನಾನು ನೋಡಿರಲಿಲ್ಲ. ಅದು ಹೇಗೆ ಚಿತ್ರಿಸಿದ್ದರೋ ನೋಡೇ ಬಿಡೋಣ ಅನ್ಕೊಂಡೆ. ಆ ಮುದುಕಿ ಹೇಳಿದಳು, ನಾನು ಆ ಸಿನಿಮಾನ 5 ಸಲ ನೋಡಿದ್ದೀನಿ ಅಂದ್ಲು. ಸರಿ ನಾನು ನೋಡ್ಬೇಕು ಅಂದುಕೊಂಡಿದ್ದೆ, ಆದ್ರೆ ಆಗಿಲ್ಲ  ಅನ್ನೋ ನನ್ನ ಮಾತಿಗೆ ಅವಳು ಹೇಳಿದಳು. 'ಈ ಪ್ಲೇನ್ ನಲ್ಲಿರೋ ವೀಡಿಯೊ ಸಿಸ್ಟಮ್ ನಲ್ಲಿ ಅದು ಇದೆ. ರೀಜನಲ್ ಚಾನೆಲ್ ನೋಡಿ' ಅಂದ್ಲು. ಆಗಲೇ ಗೊತ್ತಾಗಿದ್ದು, ಈ ಘಾಟಿ ಮುದುಕಿ ಯಾಕೆ ನನ್ನ ಪ್ರಾಣ ಹಿಂಡಿದ್ದು ಅಂತ.

ಸಿನಿಮಾ ನೋಡಿದೆ. ಗೊತ್ತಿರೋ ಅನೇಕ ಕುಂದುಗಳಿಗೆ ನನ್ನ ಮನಸ್ಸಲ್ಲೇ ಅಷ್ಟು ಪ್ರಶ್ನೆಗಳು ಉದ್ಭವಿಸಬೇಕಾದ್ರೆ, ಭಾರತದ ಬಗ್ಗೆ ಏನೂ ಗೊತ್ತಿರದ ಆ ಮುದುಕಿಗೆ ಅಷ್ಟು ಪ್ರಶ್ನೆಗಳು ಗೋಚರಿಸಿದ್ದು ಆಶ್ಚರ್ಯವಲ್ಲ.

ಭಿಕ್ಷಾಟನೆ ಅನ್ನೋ ರೋಗಕ್ಕೆ ನನಗೊಂದು ಉಪಾಯ ಹೊಳೆಯಿತು. ಇಲ್ಲಿವರೆಗೂ ಭಿಕ್ಷೆ ಹಾಕೋರು ಇರ್ತಾರೋ, ಭಿಕ್ಷೆ ಬೇಡೋದು ನಿಲ್ಲೋಲ್ಲ. ನನ್ನ ಮಿತ್ರನೊಬ್ಬ ಮೊನ್ನೇ ಹೀಗೆ ಟೀ ಅಂಗಡಿ ಹತ್ರ ನಿಂತಿದ್ದಾಗ, ಒಬ್ಳು 50 ವರ್ಷದ ಹೆಂಗಸು ಬಂದು ಕೈಚಾಚಿದಳು. 'ಒಂದು ರೂಪಾಯಿ ಕೊಡಿ' ಅನ್ನೋದು ಅವಳ ಬೇಡಿಕೆ. ನನ್ನ ಮಿತ್ರ ಪಟ್ಟನೆ ಕಿಸೆಯಿಂದ 2 ರೂಪಾಯಿ  ತೆಗೆದು, ಆ ಟೀ ಅಂಗಡಿಯವನಿಗೆ ಕೊಟ್ಟು 'ಅವಳಿಗೆ ಒಂದು ಬನ್ ಕೊಡಿ' ಅಂದ. ಮಾನವೀಯತೆ ಅನ್ನೋದು ಇಷ್ಟರ ಮಟ್ಟಿಗೆ ಇದ್ರೆ ಸಾಕು.

ಭಿಕ್ಷೆ ಬೇಡಿಸೋಕೆ ಕೆಲವರನ್ನು ದಾಳವಾಗಿ ಇರಿಸಿಕೊಂಡಿರುವ ಅನಾಮಧೇಯ ಕೈಗಳಿಗೆ ದುಡ್ಡಿನ ಬದಲು ಬನ್ ಸಿಕ್ಕರೆ? ಆ ಕೆಲಸ ಮುಂದುವರೆಯಿಸ್ತಾರ? ಯೋಚನೆ ಮಾಡಿ.  


ನನ್ನ ದೇಶ ಹೇಗಿರಬೇಕು?


Sunday, November 4, 2012

ಶಪಥಗೈದ ಬಬ್ರುವಾಹನ

 ಮೊನ್ನೆ ನೆಂಟರೊಬ್ಬರ ಮನೆಗೆ ಹೋದಾಗ, 'ನೀನು ಸಣ್ಣ ಆಗಿದ್ದೀಯ ಕಣೋ' ಅಂದ್ರು. ಹೇ ಹಾಗೇನಿಲ್ಲ ಇರೋ ಹಾಗೆ ಇದ್ದೀನಿ ಅಂದೆ. ಆದರೂ ಸಣ್ಣ ಆಗಿರೋದು ಸ್ವಲ್ಪ ಮಟ್ಟಿಗೆ ನಿಜಾನೆ. ಮನೆಗೆ ಬಂದು, ಹಾಗೆ ನನ್ನ ಹಳೆಯ ಫೋಟೊಗಳನ್ನ ನೋಡ್ತಾ ಇದ್ದೆ.  ಈ 6 ವರ್ಷಗಳಲ್ಲಿ ಅದೆಂಥ ಬದಲಾವಣೆ ಅಂತೀರಿ, ಈಗಿರುವ ದೇಹಸ್ಥಿತಿಗೂ ಆಗಿನ  ಫೋಟೋಗೂ ಅಜಗಜಾಂತರ. ಕಾರಣ ಏನಿರಬಹುದು ಅನ್ನೋದು ಒಂದು ಸಲ ಯೋಚನೆ ಮಾಡಿದೆ. 1. ಯಾಂತ್ರಿಕ ಬದುಕು [ಯಾವುದೊ ಟೈಮ್ ನಲ್ಲಿ ತಿನ್ನೋದು, ಏನು ಸಿಗುತ್ತೋ ಅದನ್ನ್ನೆ ತಿನ್ನೋದು]. 2.  ಸೈಕ್ಲಿಂಗ್/ಜಾಗ್ಗಿಂಗ್ ಏನೇ ಇದ್ರೂ 15 ದಿನಕ್ಕಿಂತ ಜಾಸ್ತಿ ಮುಂದುವರಿಯೋದಿಲ್ಲ 3. ಫಾಸ್ಟ್ ಫುಡ್. ಕೆಲವೊಮ್ಮೆ ಮೇಲಿನ 1 ಮತ್ತು 2 ಕ್ಕೆ ಅನೇಕ ಬಾರಿ ಪ್ರಯತಿನಿಸಿ ಸುಸ್ತಾದೆ. ಆದ್ರೆ 3ನೇಯದರ ಬಗ್ಗೆ ಯಾವತ್ತೋ ಯೋಚನೆ ಮಾಡಲಿಲ್ಲ. ಈ ಗೋಬಿ ಮಂಚೂರಿ, ಬರ್ಗರ್, ಚಾಕಲೇಟ್, ಐಸ್ ಕ್ರೀಮ್ಸ್ ಒಂದೇ ಎರಡೇ. ಆರೋಗ್ಯ ಹಾಳಾಗುತ್ತೆ ಅಂತ ಗೊತ್ತಿದ್ದೂ ಬಾಯಿಚಪಲದ ಮುಂದೇ ದೇಹ ಗುಲಾಮನಾಗಲೇ ಬೇಕು 
ಇವತ್ತಿಂದ ಏನೇ ಆದರೂ ಈ ಫಾಸ್ಟ್ ಫುಡ್ ಬಿಟ್ಟು ಬಿಡೋಣ ಅಂತ ತೀರ್ಮಾನ ಮಾಡಿದೆ. ಮನೇಲಿ ಕರಿದ ತಿಂಡಿ ಮಾಡಿದ್ದರೂ , ಕಣ್ಣಿಗೆ ಬಟ್ಟೆ ಕಟ್ಟಿದವನ  ಹಾಗೆ ಅದು ಕಂಡರೂ ಕಾಣದ ಹಾಗೆ ಓಡಾಡಿದೆ. ಸಂಜೆ ವರೆಗೂ ಮೇಲೆ ಹೇಳಿದ ಯಾವುದೇ ಪದಾರ್ಥದ ಗಾಳಿ ಕೂಡ ಹತ್ತಿರ ಸುಳಿಯದ ಹಾಗೆ ನೋಡಿಕೊಂಡೆ. ಸಂಜೆ 7 ಆಯಿತು. ಕಾಲೇಜ್ನ ಹಳೇ  ಮಿತ್ರನೊಬ್ಬ ಸಿಕ್ಕ. 'ಲೇ  ಎಷ್ಟು ದಿನಾ ಆತಲೇ ಭೆಟ್ಟ್ಯಾಗಿ, ಬಾರೆಲೇ ಚಹಾ ಕುಡಿಯೋಣು'. ಒಂದು ವೇಳೆ ಅಮೃತ ಕೊಟ್ಟ್ರು ಬೇಡ ಅಂತ ಹೇಳ್ತೀನೇನೋ ಆದ್ರೆ ಚಹಾ ನೋ ಚಾನ್ಸ್. 'ಚಹದ ಜೊತೆ ಏನು ತಿಂತಿ?' ಅಂದ. 'ಏ ಏನು ಬ್ಯಾಡ' ಅಂದೆ. ಅಲ್ಲೇ ಪಕ್ಕದಲ್ಲಿ ಬಿಸಿ ಬಿಸಿ ಬಜ್ಜಿ ಕರೀತಾ ಇದ್ರೂ. 'ಮಿರ್ಚಿ ತಿಂತಿ?' ನನ್ನ ಮಿತ್ರ ಆಗಲೇ ನನ್ನ ನಾಲಿಗೆ ನೀರು ಬರುವಂತೆ ಮಿರ್ಚಿ ಬಜ್ಜಿ ಕೈಲಿ ಹಿಡಿದು ತೋರಿಸಿದ. ಮನಸ್ಸು ಹೇಳ್ತು 'ಆಗಿದ್ದಾಗ್ಲಿ ಅವನೌನ, ಹೇಳಲೇ ಒಂದು ಪ್ಲೇಟ್' ಅದೇ ನನ್ನ ಉತ್ತರವಾಗಿತ್ತು ಮಿತ್ರ ನಾನು ಬಜ್ಜಿ ಚಹಾ ಸವಿದೆವು ಆದ್ರೆ ನನ್ನ ಬಬ್ರುವಾಹನ ಪ್ರತಿಜ್ನ್ಯೆ ನಾಳೆಗೆ ಮುಂದುವರಿದಿತ್ತು   


Saturday, November 3, 2012

ಸಂಬಂಧ

 ಈ ಶನಿವಾರ, ಭಾನುವಾರ ಅನ್ನೋದು ಶುದ್ಧ ಮೋಸ ಕಣ್ರೀ 5 ದಿನ ಕಳೆಯೋಕೆ ಒಂದು ಯುಗ ತೊಗೊಂಡ್ರೆ, ಈ ವೀಕೆಂಡ್ ಮಾತ್ರ 1 ನಿಮಿಷದಲ್ಲಿ ಕರಗಿ ಹೋಗುತ್ತೆ ಇವತ್ತು ಅಂತಹದ್ದೇ ಒಂದು ಶನಿವಾರ ಬೆಳಿಗ್ಗೆ ಎದ್ದದ್ದು 5.30 ಗೆ. ಮೂರು ತಲೆಮಾರಿಗೆ ಆಗೋವಷ್ಟು ಕೆಲಸದಲ್ಲಿ ಆರಿಸಿ ತೂಗಿಸಿ ಆಯ್ಕೆ 3 ಮಾಡಿದ್ದು ಕೆಲಸಗಳು 1. ಸಾಹಿತಿ ವಿವೇಕ್ ಶಾನಭಾಗ ಅವರನ್ನ ಭೇಟಿ ಮಾಡೋದು 2.  modular ಕಿಚನ್ ಡಿಸೈನ್ ಸೆಲೆಕ್ಟ್ ಮಾಡೋದು 3. ಬಿಲ್ಡರ್ ಹತ್ರ ಹೋಗಿ ಮನೆ ಸ್ಟೇಟಸ್ ಬಗ್ಗೆ ಮಾತಾಡೋದು ಮೂರು ಕೆಲಸ ಮುಗಿಸೋವಷ್ಟರಲ್ಲಿ ಸಂಜೆ 7. ಶನಿವಾರ ಉಪವಾಸ ಮಾಡೋದು ರೂಢಿ ಇರೋದಕ್ಕೆ ಒಳ್ಳೆಯದಾಯ್ತು. ಇಲ್ಲದಿದ್ರೂ  ಉಪವಾಸ ಗ್ಯಾರಂಟೀ. 
ಇದೇನು ಮಾಡಿರೋ ನಾಲ್ಕಾಣಿ ಕೆಲಸಕ್ಕೆ ಇಷ್ಟೋಂದು ಬಿಲ್ದಪ್ ಅಂತೀರಾ? ಅಯ್ಯೋ ಹೇಳ್ತೀನಿ ತಾಳಿ. 

ಸಂಜೆ ಮನೆಗೆ ಬಂದಾಗ ಅಮ್ಮ ಹೇಳಿದ್ರು, ಪಕ್ಕದ ಮನೆ 'ಅಮೋಘ ಮತ್ತು ಅವನ ತಂದೆ ತಾಯಿ  ಬಂದಿದ್ರು'. 'ಒಹ್ ಏನ್ ವಿಷಯ?' ಅಂದೆ. ಅವನ ಹುಟ್ಟಿದಬ್ಬಕ್ಕೆ ಕರೆಯೋಕೆ ಬಂದಿದ್ದ ಅನ್ನೋದು ಗೊತ್ತಾಯ್ತು. ಈ ಆಮೋಘ ನಾನು ನನ್ನ ಈಗಿರುವ ಮನೆಗೆ ಬಂದಾಗ 5 ತಿಂಗಳಿನವನಿದ್ದ. ಇವತ್ತು ಅವನ 2ನೆ ವರ್ಷದ ಹುಟ್ಟುಹಬ್ಬ. ಕಾಲ ಅನ್ನೋದು ತುಂಬಾ ಫಾಸ್ಟ್. ಸರಿ ಬೆಳಿಗ್ಗೆಯಿಂದ ಅವನ ಮುಖ ನೋಡಿರಲಿಲ್ಲ. ಲೈಫಲ್ಲಿ ಏನೋ ಮಿಸ್ಸಿಂಗ್ ಇತ್ತು. ಸರಿ ನಾನವನನ್ನು ಭೇಟಿ ಮಾಡಿ ಬರ್ತೀನಿ ಅಂತ ಹೊರಟೆ. ಅಮ್ಮ ಕೂಗಿದ್ರು,ಅವನಿಗೆ ಜ್ವರ, ಮಲಗಿರಬಹುದು. ಮನಸ್ಸು ಆ ಸುದ್ದೀ ಕೇಳಿ ತಡೀಲಿಲ್ಲ. ಗೊತ್ತಿಲ್ಲದೇ ನನ್ನ ಕಾಲುಗಳು ಅವರ ಮನೆಗೆ ದೌಡಾಯಿಸಿದವು. ಬಾಗಿಲು ಬಡಿದೆ. ಅವರ ತಾಯಿ ಬಾಗಿಲು ತೆರೆದರು. 'ಎಲ್ಲಿ ಪಾರ್ಟಿ' ಅಂದೆ. 'ಇಲ್ಲೇ ಕೂತಿದಾನೆ ನೋಡಿ, ಕಂಪ್ಲೀಟ್ ಡಲ್' ಅಂದ್ರು. ಸೋಫಾದ ಎರಡು ಚೇರ್ ನ  ಮಧ್ಯ ಇರು ಹ್ಯಾಂಡಲ್ ಮೇಲೆ ಕೂತಿದ್ದ ನನ್ನ ಭೂಪ. 'ಹೇ ಸೋನ್ಯಾ' ಅಂದೆ. ಎಲ್ಲಿಲ್ಲದ ಮುಗುಳ್ನಗೆ ಬೀರಿದ. ನನ್ನ ಎರಡು ತೋಳುಗಳನ್ನು ಬಿಚ್ಚಿ, 'ಬಾರೋ' ಅಂದೆ. ಒಂದೇ ಕ್ಷಣದಲ್ಲಿ ಚೇರ್ ನಿಂದ ಇಳಿದು. ಓದಿ ಬಂದ. ಅವನ್ನ ಎತ್ತಿ ಒಂದಿಷ್ಟು ಮುದ್ದಾಡಿದೆ ಬೆಳಿಗ್ಗೆಯಿಂದ ಆಗಿದ್ದ ದಣಿವು ಒಂದೇ ನಿಮಿಷದಲ್ಲಿ ಮಾಯ!! ಅವನ ಮೈ ಸುಡುತ್ತಿತ್ತು ಥರ್ಮಾಮೀಟರ್ನಿಂದ ನೋಡಿದ್ರೆ ಬರೋಬರಿ 101 ಡಿಗ್ರಿ. ಇಂಥ ಜ್ವರದಲ್ಲೂ ನನ್ನ ಒಂದು ಕೂಗಿಗೆ ಅವನು ಪ್ರತಿಕ್ರಯಿಸಿದ ರೀತಿ ನನ್ನನ್ನು ಮೂಕವಿಸ್ಮಿತನನ್ನಾಗಿಸಿತು. ರಕ್ತಕ್ಕೂ ಮೀರಿದ ಸಂಬಂಧ ಮನಸ್ಸಿನದು ಅನ್ನೋದಕ್ಕೆ ಸಾಕ್ಷಿ ಯಾಗಿತ್ತು ಈ ಸಂಜೆ. ನಿಷ್ಕಲ್ಮಷ ಪ್ರೀತಿ ಅಂದ್ರೆ ಇದೆ ಅನ್ಸುತ್ತೆ.