Saturday, February 1, 2014

ಸುಮ್ನಿರೋಕೆ ಏನು ನಿನಗೆ?

ಬಹಳ ವಿಚಿತ್ರ ಅಂದ್ರೆ, ಕೆಲವೊಮ್ಮೆ ನಾನು ಮಾಡೋ ಕೆಲ್ಸ ನನ್ನನ್ನೇ ಪೇಚಿಗೀಡುಮಾಡಿಬಿಡುತ್ತೆ. ಮೊನ್ನೆ ಸಂಜೆ ಕೂಡ ಇಂಥದ್ದೊಂದು ಘಟನೆ ನಡೀತು. ಜಯದೇವ ಇಂದ ಬನಶಂಕರಿ ಗೆ ಹೊರಟ BMTC ಬಸ್ ಏರಿದೆ. ಬಸ್ಸಿನ ತುಂಬಾ ಜನ. ಭಾರತದ ಜನಸಂಖ್ಯಾ ಸ್ಫೋಟದ ನಿತ್ಯದರ್ಶನ ಇರುವಂತಿತ್ತು. ಹಾಗೂ ಹೀಗೂ ತಳ್ಳಿಕೊಂಡು ಬಸ್ಸಿನ ಕೊನೆಯ ಮೂಲೆಯಲ್ಲಿ ಬಂದು ನಿಂತೆ. ಅಷ್ಟು ಜನರ ಮಧ್ಯ ನನ್ನ ಕಣ್ಣಿಗೆ ಅದ್ಭುತವಾಗಿ ಕಂಡಿದ್ದು ಒಂದು ೬ ವರ್ಷದ ಮಗು ಅದರ ಪಕ್ಕದಲ್ಲಿ ನಿದ್ದೆ ಮಾಡುತ್ತ ಕುಳಿತಿದ್ದ ಒಬ್ಬ ಇಳಿವಯಸ್ಸಿನ ಯುವಕ ಅಥವಾ ಮುದಿವಯಸ್ಸಿನ ಯುವಕ ಅನ್ನಬಹುದು. ಯಾಕೆಂದ್ರೆ  ವ್ಯಕ್ತಿಯನ್ನ ಗಮನಿಸಿದರೆ ಅವನು ಆ ಮಗುವಿಗೆ ತಂದೆ ಅನ್ನೋವಷ್ಟು ಯುವಕ ಅಲ್ಲ, ಹಾಗೆ ತಾತ ಅನ್ನೋವಷ್ಟು ಮುದುಕ ಕೂಡ ಅಲ್ಲ. ಕುಂಭಕರ್ಣನ ಅಪರಾವತಾರನಂತೆ ನಿದ್ದ್ರಿಸುತ್ತಿದ ಆ ವ್ಯಕ್ತಿ. ನಾನು ಆ ವ್ಯಕ್ತಿಯನ್ನು ದಿಟ್ಟಿಸಿ ನೋಡಿದ್ದನ್ನ ಅರಿತ ಮಗು ಸಣ್ಣದೊಂದು ಕಿರುನಗೆಬೀರಿತು. ಮಕ್ಕಳ ನಗುವೇ ಹಾಗೆ ಎಂಥವರನ್ನೂ ಮೂಕವಿಸ್ಮಿತರನ್ನಾಗಿ ಮಾಡಿಬಿಡುತ್ತದೆ. ಆ ಮಗುವಿನ ನಗುವಿಗೆ ನನ್ನ ನಗು ಪ್ರತ್ರಿಕ್ರಿಯ ಆಗಿತ್ತು. ಜನಜಂಗುಳಿ, ವಾಹನಗಳ ಆಕ್ರಂದನ, ಅಂಗಡಿ ಮುಂಗಟ್ಟುಗಳು, ವ್ಯಾಪಾರ ವಹಿವಾಟುಗಳು ಎಷ್ಟೆಷ್ಟೋ ವಿಷಯಗಳನ್ನು  ಒಟ್ಟಾರೆ ಅನುಭವಿಸುತ್ತಿದ್ದವು ಆ ಮಗುವಿನ ಕಣ್ಣುಗಳು. ತಾನೇನೆಲ್ಲ ನೋಡ್ತಾ ಇದ್ದೇನೆ ಅನ್ನೋ ಮಹದಾನಂದ ಆ ಮಗುವಿನ ಮುಖದಲ್ಲಿ. ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿತ್ತು ಆ ಸನ್ನಿವೇಷ. ಯಾಕೆಂದ್ರೆ ಅದೇ ತರಹದ ಅನುಭವಗಳನ್ನು ನಾನು ೬ ವಯಸ್ಸಿನವನಿದ್ದಾಗ ಬೆಳಗಾವಿಯಿಂದ ಬಾದಾಮಿಗೆ ಹೋಗುವ ಮಾರ್ಗದಲ್ಲಿ ಸವಿದಿದ್ದೆ. ಆಗ ನಾನೊಬ್ಬನೇ ಒಂಟಿಯಾಗಿ ಪ್ರಯಾಣಿಸುವ ಅನಿವಾರ್ಯತೆ ಇತ್ತು. ಇವತ್ತು ಈ ಮಗುವಿನ ಹತ್ತಿರ ಹೇಳಿಕೊಳ್ಳೋಕೆ ಅಂತ ಪಕ್ಕದಲ್ಲಿ ಒಬ್ಬ ವ್ಯಕ್ತಿ ಇದ್ದರೂ ಇಲ್ಲದ ಹಾಗೆ ಇದ್ದ.

ಕಣ್ಣಿನ ಭಾಷೆ ಅತ್ಯಂತ ಪ್ರಭಾವಿಯಾಗಿರುತ್ತದೆ. ಮಗು ನೋಡಿದ ಒಂದೊಂದು ವಿಷಯವನ್ನು ನನ್ನ ಹತ್ತಿರ ಹಂಚಿಕೊಳ್ಳುತ್ತಿದ್ದುದು ಆ ಕಣ್ಣಿನ ಮುಖೇನವೇ. ಮತ್ತೊಂದು ನಗು, ಇನ್ನೊಂದು ವಿಷಯ, ಮತ್ತೊಂದು ನಗು, ಹೊಸದೊಂದು ಕಥೆ, ಹೀಗೆ  ಸರಣಿ ಮುಂದುವರಿಯಿತು. ಕಿಟಕಿಯಲ್ಲಿ ಏನೋ ನೋಡುತ್ತಾ, ಒಮ್ಮೆಲೇ ಕತ್ತನ್ನು ಆಚೆ ಹಾಕಿದ ಮಗುವನ್ನು ನೋಡಿ ನಾನು ಗಾಬರಿಯಾದೆ. "ಏಯ್" ಅನ್ನೋ ನನ್ನ ಉದ್ಗಾರಕ್ಕೆ ಗೊರಕೆ ಹೊಡೆಯುತ್ತ ಮಗು ಪಕ್ಕ ಕೂತಿದ್ದ ಕುಂಭಕರ್ಣ ಎದ್ದುಬಿಟ್ಟ. ದಯೆ ದಾಕ್ಷಿಣ್ಯ ಇಲ್ಲದೆ ಮಗುವನ್ನ ಬಾಯಿಗೆ ಬಂದ ಹಾಗೆ ಬೈದ. ಅವನ ಬೈಗುಳಗಳ ಕೋಟಾ ಮುಗಿದ ನಂತರ ಮತ್ತೆ ನಿದ್ದೆ ಹೋದ. ಮಗು ಮುಖದಲ್ಲಿ ಬಂದ ಭಾವನೆ ಕೋಪವೋ, ದುಃಖವೋ ನನಗೆ ಗೊತ್ತಾಗಲಿಲ್ಲ. ಸುಮಾರು ಅರ್ಧಗಂಟೆಗಳ ಕಾಲ ನಡೆಸಿದ ಆ ಕಣ್ಣಿನ ಮಾತುಗಳು ನಿಂತು ಹೋಗಿದ್ದವು. ಮನಸ್ಸಿನೊಳಗೆ ನನಗೆ ನಾನೇ ಬೈದುಕೊಂಡೆ "ಸುಮ್ನಿರೋಕೆ ಏನು ನಿನಗೆ?'

ಮತ್ತೆ ಸಿಗ್ತೇನಿ... 
      

Wednesday, October 9, 2013

ಲವ್ ಪ್ರಾಬ್ಲಂ

ತುಂಬಾ ದಿನಾ ಆಯ್ತು ಬ್ಲಾಗಿನ ಬಾಗಿಲು ತೆರೆದು. ಸಿಕ್ಕಾಪಟ್ಟೆ ಕೆಲಸ, ಜೊತೆಗೆ   ಹೊಸ ನಾಟಕಗಳನ್ನು ಬರೆಯೋದರಲ್ಲಿ ಬಿಜಿಯಾಗಿದ್ದೆ. ತೊಂದ್ರೆ ಇಲ್ಲ ಮುಂದುವರಿಸೋಣ.   

ಮೊನ್ನೆ ನನ್ನ ಮಿತ್ರನ ಮಿತ್ರನೊಬ್ಬ ತನ್ನ ಲವ್ ಪ್ರಾಬ್ಲ್ಂ ನನ್ನ ಹತ್ರ ಹೇಳ್ಕೊಂಡ. "ಲವ್ ಪ್ರಾಬ್ಲಂ" ನೋಡಿ ಜಂಟಿ ಪದದ ಥರ ಕಾಣುತ್ತೆ. ಲವ್ ಗೆ ಪ್ರಾಬ್ಲಂ ಇರಬೇಕಾ? ಅನ್ನೋ ಪ್ರಶ್ನೆಗೆ ಉತ್ತರ ಹುಡುಕಲು ಹೊರಟಾಗ, ನನ್ನ ಮನಸ್ಸಿಗೆ ಅನ್ನಿಸಿದ ಕೆಲವು ವಿಷಯಗಳನ್ನು ಹಂಚಿಕೊಳ್ತೀನಿ. 

ಒಂದು ಹುಡುಗ, ಒಂದು ಹುಡುಗಿ, ವರ್ಷಗಳ ಪರಿಚಯ, ಸ್ನೇಹ, ನಂಬಿಕೆ, ಇನ್ನೂ ಅನೇಕ ಹೇಳಲಾಗದ ಭಾವನೆಗಳ ಸುಂದರ ಹೂಗುಚ್ಛ ಈ ಲವ್. ದೇಶ, ಭಾಷೆ, ವಯಸ್ಸು, ಅಂತಸ್ತು ಈ ಎಲ್ಲವನ್ನೂ ಮೀರಿ ನಿಂತ ಸುಂದರ ಅನುಭವ ಈ ಲವ್. ಇಷ್ಟೆಲ್ಲ ಸುಂದರತೆ  ಜೊತೆಗೆ ಒಂದೇನಾದ್ರು ಕೊಂಕು ಇರಲೇಬೇಕಲ್ಲ. ಚಂದ್ರನಿಗೆ ಕಪ್ಪು ಕಲೆ, ಗುಲಾಬಿಯ ಹೂವಿಗೆ ಮುಳ್ಳು, ಹೀಗೆ ಲವ್ ಗೆ ಕೂಡ ಒಂದು ಕೊಂಕು ಇದ್ದೇ ಇದೆ. ತಮ್ಮ ಲವ್ ನ ಯಶಸ್ವಿಗೊಳಿಸಬೇಕು ಅನ್ನೋ ಆಸೆ ಹೊತ್ತ ಮನಸುಗಳಿಗೆ ತಣ್ಣೀರು ಎರಚೋ ಸಮಾಜ, ತಂದೆ-ತಾಯಿ, ಮತ್ತಿನ್ನ್ಯಾರೋ. ಇವರೆಲ್ಲ ಪ್ರೀತಿಗೆ ಬರುವ ಎಡರು ತೊಡರುಗಳು. ಯಾಕೆ ಈ ಪ್ರೀತಿಗೆ ಇಷ್ಟು ಅಡ್ದಿ ?

ಪಾಯಿಂಟ್ ೧ : ಹುಡುಗನ/ ಹುಡುಗಿಯ ಜಾತಿ, ಊರು-ಕೇರಿ, ಆಚಾರ-ವಿಚಾರ, ಇವೆಲ್ಲ ಇಬ್ಬರ ಮನೆಯ ಹಿರಿಯರಿಗೆ ಸರಿ ಹೋಗೋದಿಲ್ಲ. 

ನನ್ನ ನಿಲುವು : ಅಲ್ಲ ಸ್ವಾಮೀ... ಜಾತಿ ಅನ್ನೋದು ಮನುಷ್ಯ ಮಾಡಿಕೊಂಡಿದ್ದು ಅಲ್ಲವೇ? ಜಾತಿಯ ಮೂಲಕ ಮನುಷ್ಯನ ವ್ಯಕ್ತಿತ್ವ ಅಳೆಯಲು ಸಾಧ್ಯವೇ? ೨೧ನೇ ಶತಮಾನದಲ್ಲಿ ಬದುಕು ಸಾಗಿಸುತ್ತಿರೋ ನಾವು, ಜಾತಿ ಅನ್ನೋ ಬೇಲಿ ಹಾಕಿಕೊಳ್ಳಬೇಕ? "ಕುಲ ಕುಲ ಕುಲವೆಂದು ಹೊಡೆದಾಡದಿರಿ", "ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ?", "ಮನುಜ ಮತ ವಿಶ್ವ ಪಥ" ಈ ಎಲ್ಲ ಸಾಲುಗಳು ಕೇವಲ ಕೇಳಿ ಮರೆತು ಹೋಗೋದಕ್ಕ?

ಪಾಯಿಂಟ್ ೨ :  ಹುಡುಗನ/ಹುಡುಗಿಯ ಆರ್ಥಿಕ ಸ್ಥಿತಿಗತಿ. 
ನನ್ನ ನಿಲುವು:  ಅಲ್ಲ ಸ್ವಾಮೀ... ಹುಡುಗ, ಹುಡುಗಿ ಇಷ್ಟ ಪಟ್ಟ ಮೇಲೆ ದುಡ್ಡು ಕಾಸು ಯಾವ ಲೆಕ್ಕ? ದುಡ್ಡಿರೋ ಎಷ್ಟೋ ಜನ, ಕ್ಷಣ ಮಾತ್ರದಲ್ಲಿ ಬೀದಿಗೆ ಬಂದಿಲ್ಲವೇ? ಅದೇ ರೀತಿ ಕಡುಬಡವ ಶ್ರೀಮಂತನಾಗಿ ಬೆಳೆದಿಲ್ಲವೇ? ದುಡ್ಡು, ಅಂತಸ್ತು ಕ್ಷಣಿಕ, ಆದ್ರೆ ಪ್ರೀತಿ ಅನಂತ, ಅವಿರತ. 

ಪಾಯಿಂಟ್ ೩ : ತಂದೆ ತಾಯಿಯರ ಆಸೆ (ಹಠ) 
ನನ್ನ ನಿಲುವು :  ಹುಟ್ಟಿದ ಮರುಕ್ಷಣದಿಂದ ಹಾಕಿಕೊಳ್ಳುವ ಡೈಪರ್ ನಿಂದ ಹಿಡಿದು, ಓಡಿಸೋ ಗಾಡಿ, ಶರ್ಟು, ಪ್ಯಾ೦ಟ, ಹೇರ್ ಸ್ಟೈಲ್ ಎಲ್ಲವನ್ನೂ ತಮ್ಮ ಇಷ್ಟದಂತೆ ಕೊಡಿಸುತ್ತ ಬಂದವರಿಗೆ, ತಮ್ಮ ಅಳಿಯ/ ಸೊಸೆಯನ್ನೂ ತಾವೇ ಹುಡುಕಿ, ಆರಿಸಬೇಕು ಅನ್ನೋ ಆಸೆ. ಆಸೆ ಮಿತಿಯಲ್ಲಿ ಇದ್ದರೆ ಓಕೆ, ಆದ್ರೆ ಮಿತಿ ಮೀರಿದರೆ ಆ ಆಸೆ ಹಠ ಆಗಿಬಿಡುತ್ತದೆ. ಈ ಹಠ ತಮ್ಮ ಸ್ವಂತ ಮಕ್ಕಳ ಸಂತೋಷಕ್ಕೆ ಅಡ್ಡಿ ಆಗಲಿದೆ ಅನ್ನೋ ಚಿಕ್ಕ ವಿವೇಚನೆ ದೊಡ್ಡವರಿಗೆ ಬರೋದಿಲ್ಲ ಯಾಕೆ?

ಒಟ್ಟಾರೆ ಹೇಳ್ಬೇಕು ಅಂದ್ರೆ, ಮೇಲಿನ ಮೂರು ಅಂಶಗಳನ್ನು ಮೀರಿ ಯೋಚನೆ ಮಾಡಿದ್ದಲ್ಲಿ ಮಾತ್ರ ನಿಜವಾದ ಪ್ರೀತಿಗೆ ಯಶಸ್ಸು ಸಿಗೋದು ಸಾಧ್ಯ. ಹುಡುಗ, ಹುಡುಗಿ ಪ್ರೀತಿಸಿ ತಮ್ಮ ಬಾಳು ತಾವು ಕಟ್ಟಿಕೊಳ್ಳುತ್ತಾರೆ ಅನ್ನೋ ಭರವಸೆ ಇದ್ರೆ ಯಾಕೆ ಅಡ್ಡಿ ಪಡಿಸಬೇಕು? ತಾವು ಆಯ್ಕೆ ಮಾಡಿಕೊಂಡ ಜೀವನದ ಬಗ್ಗೆ ಅವರಿಗೆ ಒಲವು ಇರುತ್ತದೆ, ಅದನ್ನು ಸರಿಯಾದ ರೀತಿಯಲ್ಲಿ ಸಾಕಾರಗೊಳಿಸುವ ಬಗ್ಗೆ ಪ್ರಯತ್ನ ಇರುತ್ತದೆ. ಜೀವನ ಹೇಗೋ ನಡೆದು ಹೋಗುತ್ತದೆ ಅನ್ನೋದರ ಬದಲು, ಜೀವನ ಹೀಗೆ ಇರಬೇಕು ಅನ್ನೋ ಗುರಿ ಹುಟ್ಟುತ್ತದೆ. 

ಇವೆಲ್ಲವುಗಳನ್ನು ಮೀರಿ ಪ್ರೇಮಿಗಳನ್ನು ದೂರಮಾಡುವ ಪ್ರಯತ್ನಗಳು ನಡೆಯುತ್ತವೆ. ಸಮಾಜ, ತಂದೆ-ತಾಯಿಯರನ್ನ ಎದುರಿಸಿ/ ವಿರೋಧ ಕಟ್ಟಿಕೊಂಡು ಬಾಳು ನಡೆಸಬೇಕು ಅನ್ನೋರು ಮನೆ ಬಿಟ್ಟು ಹೋಗ್ತಾರೆ. ಧೈರ್ಯ ಇಲ್ಲದವರು ಪ್ರೀತಿಯನ್ನು ಸಾಯಿಸಿ, ಬೇರೆ ಬೇರೆ ಜೀವನ ನಡೆಸುತ್ತಾರೆ. ಆದ್ರೆ ಪ್ರೀತಿ ಸಾಯಿಸಿದ ಕೊರಗಿನಲ್ಲಿ, ಅವರೂ ದಿನನಿತ್ಯವೂ ಸಾಯುತ್ತಾರೆ. ಇವೆರೆಡು ಮಾಡಲು ಆಗದವರು ಕೆರೆ, ಬಾವಿ, ಮರ ಟ್ರೈನ್, ವಿಷ ಇನ್ನೂ ಏನೇನೊ ಮಾರ್ಗ ಹುಡುಕಿ ಸತ್ತು ಹೋಗ್ತಾರೆ. 

ಒಟ್ಟಿನಲ್ಲಿ ಸಂತೋಷವಾಗಿ ಇರಬೇಕಾದ  ಜೀವಗಳು ಕೊರಗುತ್ತವೆ ಇಲ್ಲ ಕೊನೆಯಾಗುತ್ತವೆ. ದಾರಿ ಯಾವುದೇ ಇರಲಿ, ಸಂತೋಷ ಅನ್ನೋದು ಮರೀಚಿಕೆಯಾಗಿಬಿಡುತ್ತದೆ. ಕ್ಷುಲ್ಲಕ ಕಾರಣಗಳಿಗೆ ಹೀಗೆಲ್ಲ ಆಗೋದು ಸರಿಯೇ? 

ಎಲ್ಲ ಮುಗಿದ ಮೇಲೆ, "ಮಕ್ಕಳು ಚೆನ್ನಾಗಿರಲಿ ಅಂತ ತಾನೇ ನಾವೆಲ್ಲಾ ಹೀಗೆ ಮಾಡಿದ್ದು" ಅನ್ನೋ ಎಷ್ಟೋ ಪಾಲಕರಿಗೆ ನನ್ನ ಈ ಪ್ರಶ್ನೆ ಅನ್ವಯಿಸುತ್ತದೆ. 

ಸೂಚನೆ  : ನಾನು ಹಿರಿಯರನ್ನು  ದ್ವೇಷಿಸೋನು ಅಲ್ಲ. ಆದ್ರೆ ಪ್ರೀತಿಯನ್ನು ಪ್ರೀತ್ಸೋನು


Sunday, March 3, 2013

ಹುಡುಕಾಟ

ನಾನು ಈಗ ಬರೀತಾ ಇರೋ ವಿಷಯ ಬಹಳ ಜನರ ಜೀವನದಲ್ಲಿ ನಡೆದಿರುತ್ತೆ. ಬೆಂಗಳೂರಿಗೆ ಬಂದು ಕೆಲಸ ಹುಡುಕೋ ಕ್ರಿಯೆಯಲ್ಲಿ ತೊಡಗಿದ್ದ ದಿನಗಳವು. ಬೆಳಿಗ್ಗೆ ೭ ಗಂಟೆಗೆ ಸರಿಯಾಗಿ, ಒಳ್ಳೆ ಬಟ್ಟೆ ಧರಿಸಿ, ಕೈಲೊಂದು ಫೈಲ್ ಹಿಡಿದು, ಬಸ್ ಪಾಸ್ ಒಂದನ್ನು ತೆಗೆದುಕೊಂಡು, ಮನಸಲ್ಲಿ ಸ್ವಲ್ಪ ಉತ್ಸಾಹ ಹಾಗು ತಳಮಳ ಹೊತ್ತು, ಕಂಪನಿಯಿಂದ ಕಂಪನಿಗೆ ತಿರುಗಾಡುತ್ತಿದ್ದೆ. ನನ್ನ ಜೊತೆ ಇದ್ದದ್ದು ನನ್ನ ಇನ್ನೊಬ್ಬ ಮಿತ್ರ ರವಿ. ನಮ್ಮಿಬ್ಬರಿಗೂ ಕಂಪನಿಗಳಿಂದ ಕೇಳಿಬರುತ್ತಿದ್ದ ಮಾತು ಒಂದಿತ್ತು. ಅದು "ನೋ". ಮಾರ್ಕ್ಸ್ ಕಾರ್ಡಿನ ತುಂಬಾ ಮಾರ್ಕ್ಸ್ ಇತ್ತೇ ವಿನಃ ಹಣೆಯಲ್ಲಿ ಅದೃಷ್ಥ ರೇಖೆ ಇರಲಿಲ್ಲ. ದುಡೀತಿನಿ ಅನ್ನೋರಿಗೆ ಒಂದು ಕೆಲಸ ಕೊಡೋಕೆ ಆಗೋಲ್ವ? ಅನ್ನೋ ಅನೇಕ ವಿಷಾದನೀಯ ಪ್ರಶ್ನೆಗಳು ಮನಸ್ಸಿನಲ್ಲಿದ್ದವು. ಜೀವನ ಅನ್ನೋದು ಅಂದುಕೊಂಡರೆ ಸಿರಿಯಸ್ ಇಲ್ಲ ಅಂದ್ರೆ ಜಾಲಿ. ಅಂತಹ ಜಾಲಿಯಾದ ಒಂದು ಸನ್ನಿವೇಶ ಅಂತಹ ಕಷ್ಟದ ದಿನದಲ್ಲಿ ನಡೆದಿತ್ತು. 


ಕೆಲಸ ಹುಡುಕಿ ನಾನು ಹೋಗುತ್ತಿದ್ದ ಜಾಗಗಳೆಲ್ಲ ಅಲ್ಟ್ರ ಮಾಡರ್ನ್.  ಬಹು ಮಹಡಿಯ ಕಟ್ಟಡಗಳು, ವಿವಿಧ ಅಲಂಕಾರಿಕ ಉದ್ಯನವನಗಳು. ಗಾಜಿನಿಂದ ಮಾಡಿದ ಕಲಾಕೃತಿಗಳು. ಅದೊಂದು ವಿಸ್ಮಯ ಲೋಕ ಬಿಡಿ. ಇಂತಹ ವಿಸ್ಮಯ ಲೋಕದಲ್ಲೂ ಒಂದು ಕೊರತೆಯಿತ್ತು ಅಂದ್ರೆ ನಂಬ್ತೀರಾ? ಹೌದು ಇತ್ತು. ಅದು ಸುಲಭ ಶೌಚಲಯ. ಸಾರ್ವಜನಿಕರಿಗೆ ನೆರವಾಗಬಲ್ಲ ಒಂದೇ ಒಂದು ಪಬ್ಲಿಕ್ ಟಾಯ್ಲೆಟ್ ಅಲ್ಲಿರಲಿಲ್ಲ ಅನ್ನೋದೇ ಅಶ್ಚರ್ಯ. ಅಲ್ಲೇ ಏನು, ಬೆಂಗಳೂರಿನ ಎಷ್ಟೊ ಪ್ರದೇಶಗಳಲ್ಲಿ ಅದರ ಕೊರತೆ ಇದೆ. ಇನ್ನೂ ಕೆಲವೆಡೆ ಇದ್ರೂ ಅವಕ್ಕೆ ಬೇಗ ಜಡಿದು ಉಪಯೋಗಕ್ಕೆ ಬಾರದ ಹಾಗೆ ಇಟ್ಟಿರ್ತಾರೆ. ನನ್ನ ಕರ್ಮಕ್ಕೋ ಏನೋ ಆವತ್ತು ನನ್ನ ವೈರಿಯ ರೂಪದಲ್ಲಿ ನನಗೆ ನಿಸರ್ಗದ ಕರೆ ಬಂದಿತ್ತು (ಮಕ್ಕಳ ಭಾಷೇಲಿ ಸೂಸು). ಎಲ್ಲಿ ನೋಡಿದರೂ ಜನಜಂಗುಳಿ. ಸುಮಾರು ೧ ಕಿ. ಮೀ ನಡೆದರೂ ಒಂದೇ ಒಂದು ಶೌಚಾಲಯ ಸಿಗಲಿಲ್ಲ. ನನ್ನ ಮಿತ್ರನದೂ ಅದೇ ಕಥೆ. ಓಯಾಸಿಸ್ ನಲ್ಲಿ ನೀರು ಹುಡುಕೋದು ಎಷ್ಟು ಕಷ್ಟವೋ ಅಷ್ಟೇ ಕಷ್ಟ ನಮ್ಮದಾಗಿತ್ತು. ಕೊನೆಗೂ ಒಂದು ಯೋಚನೆ ತಲೆಗೆ ಹೊಳೀತು. ಕಣ್ಣ ಮುಂದೆ ಲೀಲಾ ಪ್ಯಾಲೇಸ್ ಕಂಡಿತ್ತು. ಅದ್ಯಾವಾಗಲೋ ಒಮ್ಮೆ ಒಳಗೆ ಹೋಗಿದ್ದ ನೆನಪಿತ್ತು. ಕ್ಲಬ್ ಮಹಿಂದ್ರ ಮಳಿಗೆಗೆ ೨ ವರ್ಷದ ಹಿಂದೆ ನಾನು ನನ್ನ ಅಣ್ಣನ ಜೊತೆ ಅಲ್ಲಿ ಹೋಗಿದ್ದೆ. ಇವತ್ತು ಒಳಗೆ ಹೋಗೋಕೆ ಯಾವ ಕಾರಣವು ಇರಲಿಲ್ಲ. ಆದ್ರೆ ಸಮಸ್ಯೆ ಮಾತ್ರ ಇತ್ತು. ನನ್ನ ಮಿತ್ರ ಬೇರೆ ನನ್ನನ್ನ ಹೆದರಿಸುತ್ತಿದ್ದ. "ಲೇ ಸಿಕ್ಕು ಬಿದ್ರೆ ಒದೆ ಗ್ಯಾರಂಟಿ". 'ಒಂದೆರಡು ಒದೆ ತಿಂದರು ಚಿಂತೆಯಿಲ್ಲ ಒಳಗೆ ಹೋಗಿ ಕಾರ್ಯಕ್ರಮ ಕೊಡಲೇಬೇಕು'  ಅನ್ನೋದು ನನ್ನ ವಾದವಾಗಿತ್ತು. ಕೊನೆಗೂ ಬೇಟೆಗಾರರ ಹಾಗೆ ಒಳಗೆ ನುಗ್ಗಿದ್ವಿ. ರಿಸೆಪ್ಶನ್ ಹತ್ರ ಹೊಗಿ, "ಕ್ಲಬ್ ಮಹಿಂದ್ರ ಆಫೀಸ್ ಎಲ್ಲಿದೆ?" ಅಂದೆ. ಬಳುಕುತ್ತ ಕೌಂಟರಿನಲ್ಲಿ ನಿಂತಿದ್ದ ಆ ಹುಡುಗಿ "ಸೆಕೆಂಡ್ ಫ್ಲೋರ್ ರೈಟ್ ಸೈಡ್ ನಲ್ಲಿ ಇದೆ. ಅಷ್ಟು ಕೇಳಿದ್ದೆ ತಡ, ನಾಗಾಲೋಟದಿಂದ ೨ನೇ ಮಹಡಿ ಹತ್ತಿ, ಅಲ್ಲೇ ಇದ್ದ ಐಶಾರಾಮಿ ಶೌಚಾಲಯದಲ್ಲಿ ದೀರ್ಘ ಉಸಿರು ಬಿಟ್ಟೆ. ಎಲ್ಲ ಮುಗಿಸಿ ಆಚೆ ಬರೋವಾಗ ನನ್ನ ಫ್ರೆಂಡ್ ಮತ್ತು ನಾನು ಸೇರಿ, ನಾನು ಮಾಡಿದ ಪರಾಕ್ರಮ ನೆನೆಸಿಕೊಂಡು ನಕ್ಕು ಮುಂದೆ ಸಾಗಿದ್ವಿ.


ಇದಾದ ನಂತರ ಬೆಂಗಳೂರಿನಲ್ಲಿ ಸುಲಭ ಶೌಚಾಲಯ ಇಲ್ಲದಿದ್ರು, ವಿಪರೀತ ಪರಿಸ್ಥಿಯಲ್ಲಿ ಹೇಗೆ ನಿಭಾಯಿಸಬೇಕು ಅನ್ನೋದು ಅರಿವಾಗಿತ್ತು. ಈಗ್ಲೂ ಅಷ್ಟೇ, ವಿಧಿ ಏನಾದ್ರೂ ಈ ಥರ ಪರೀಕ್ಷೆ ಇಟ್ರೆ, ಟಾಯ್ಲೆಟ್ ಬದಲು ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ಹುಡುಕೋದು ಕಷ್ಟಾನಾ?


ಹಾಗಂತ ಬರೀ ಪುಕಸಟ್ಟೆ ಪುರಾಣ ಕೇಳೋದು ಅನ್ತಲ್ಲ. ಕೆಲವೊಮ್ಮೆ ೧ ರೂಪಾಯಿಗೆ ಆಗಬೇಕಿರೋ ಕೆಲಸಕ್ಕೆ ೨೦-೩೦ ರೂಪಾಯಿ ಕೊಟ್ಟಿದ್ದೂ ಇದೆ. ಅದರಲ್ಲಿ ಕಾಫಿ ಡೇ ಸಮೋಸ ೨೦ ರೋಪಯಿ. ಅಡೆಯಾರ್ ಭವನ್ ದ ಭೇಲ್ - ೪೦ ರೋಪಯಿ. ಕೊನೆಗೆ ಶಾಂತಿಸಾಗರದ ಚಹಾ ೧ ರೂಪಾಯಿ. ದೇವರಾಣೆ ಇವೆಲ್ಲ ತಿನ್ನಬೇಕು ಅಂತ ಹೋಗಿ ತಿಂದಿದ್ದಲ್ಲ ರೀ..



Wednesday, February 13, 2013

ಪ್ರೀತಿ ಅನಂತ

                ಮೀಸೆ ಆಗತಾನೆ ಚಿಗುರಿದ್ದ ದಿನಗಳವು. ಕನಸು ಕಟ್ಟಿಕೊಂಡು ಅದರಲ್ಲಿ ಮೆರೆಯೋದೆ ಆಗಿದ್ದ ಮುಖ್ಯ ಕೆಲಸ. ಕಂಡ ಎಸ್ಟೋ ಕನಸುಗಳಲ್ಲಿ 'ಗರ್ಲ್ ಫ್ರೆಂಡ್ ' ಕೂಡ ಒಂದು. ಬಾಲ್ಯದಲ್ಲಿ ಓದಿದ್ದು ಕನ್ನಡ ಗಂಡು ಮಕ್ಕಳ ಮಾದರಿ ಶಾಲೆ ನಂ ೧. ಹೆಸರು ನೋಡೇ ನೀವು ಊಹೆ ಮಾಡಬಹುದು ಅಲ್ಲಿ ಬರೀ ಗಂಡು ಹುಡುಗರದ್ದೆ ದರ್ಬಾರು. ಚಿಕ್ಕ ನಾಟಕದಿಂದ ಹಿಡಿದು ಗ್ರೂಪ್ ಡಾನ್ಸ್ ವರೆಗೂ ಎಲ್ಲ ಐಟಂನಲ್ಲೂ ಕೂಡ ಹುಡುಗಿಯರ ರೂಪದಲ್ಲಿ ಹುಡುಗರು ಇರುತ್ತಿದ್ದರು. ಹೈಸ್ಕೂಲ್ ಬರೋ ವೇಳೆಗೆ ಕೋ-ಎಜುಕೇಶನ್ ಭಾಗ್ಯ ಸಿಕ್ಕಿತ್ತು. ನಾವೋ ಸಿಕ್ಕಾಪಟ್ಟೆ ಕ್ರಿಯೇಟಿವ್, ನಮ್ಮ ಕ್ರಿಯಾಶೀಲತೆಯಿಂದ ಕೆಲವು ಹುಡುಗಿಯರನ್ನ ಇಂಪ್ರೆಸ್ ಮಾಡಿದ್ವಿ. ಸುಂದರವಾಗಿರೊ ಹುಡುಗಿ ಜೊತೆ ೧೦ ನಿಮಿಷ ಮಾತಾಡಿದ್ರೂ ಸಾಕು ಅದೊಂದು ದೊಡ್ಡ ಸಾಧನೆ 'ಆ ಕಾಲಕ್ಕೆ'. small town mentality ಅನ್ನಿ. ಕಾಲೇಜ್ ಸೇರೋ ಹೊತ್ತಿಗೆ ಸ್ವಲ್ಪ ಮಾತು, ನಡೆ, ನುಡಿ ಎಲ್ಲ ಕಲಿತಾಗಿತ್ತು. ಮೀಸೆ ಸ್ವಲ್ಪ ಕಾಣೋ ಲೆವೆಲ್ಲಿಗೆ ಬೆಳೆದಾಗ ಇನ್ನಷ್ಟು ವಿಚಿತ್ರ ಅನುಭವಗಳು. ಸುಂದರವಾಗಿರೋ ಹುಡುಗಿ ನೋಡಿದ ತಕ್ಷಣ, ಮಾಡುವೆ ಎಲಿಜಿಬಿಲಿಟಿ ಗೆ ಇನ್ನೆಷ್ಟು ದಿನಗಳು ಬಾಕಿ ಇವೆ ಅನ್ನೋ ಲೆಕ್ಕಾಚಾರ.

          ಕೆಲವು ಫ್ರೆಂಡ್ಸ್ ಗೆ ಗರ್ಲ್ ಫ್ರೆಂಡ್ ಇದ್ರು. ಇನ್ನೂ ಕೆಲವರು ಹುಡುಕಾಟದಲ್ಲಿ ಇದ್ದರು. ಒಂದು ಜೀನ್ಸ್ ಪ್ಯಾಂಟ್, ಜೀನ್ಸ್ ಜಾಕೆಟ್, ಒಂದು ಬೈಕ್, ಹಾಗು ಒಂದಿಷ್ಟು ಲುಕ್ಸ್, ಇದೆಲ್ಲ ಇದ್ದವರಿಗೆ ಹುಡುಗಿ ಸಿಗೋದು ಕಷ್ಟಾನಾ? ಅನ್ನೋದು ಗರ್ಲ್ ಫ್ರೆಂಡ್ ಇಲ್ಲದವರ ಗೋಳು. ಇಷ್ಟೆಲ್ಲಾ ಇದ್ದು ಗರ್ಲ್ ಫ್ರೆಂಡ್ ಇಲ್ಲದೋರು ವೆಸ್ಟ್ ಬಾಡಿಗಳು ಅನ್ನೋದು ಕೂಡ ಅವರ ವೇದಾಂತ. ನನಗಿದ್ದದ್ದು ಒಂದು ಸೈಕಲ್, ಓವರ್ ಸೈಜ್ ಶರ್ಟ್, ಫಾರ್ಮಲ್ ಪ್ಯಾಂಟ್, ದೃಷ್ಟಿ ಬೋಟ್ಟಿನ ಥರ ಸ್ಪೋರ್ಟ್ ಶೂಸ್. ಸೈಕಲ್ ಮೇಲೆ ಬಂದು ಅಂಬರೀಷಣ್ಣ ಕರೆದರೆನೇ(ಯಾಕೆ ಬುಲ್ಬುಲ್ ಮಾತಡಕಿಲ್ವ ?) ಮಾತಾಡದೇ ಇರೋರು ನಮ್ ಜೊತೆ ಹೇಗೆ ಮಾತಾಡ್ಯಾರು?.

           ಒಂದು ಹುಡುಗೀನ ನೋಡಿದಾಗ love at first site ಆಗೋದು. ಆದ್ರೆ ಧೈರ್ಯ ಸಾಲದೇನೋ ಅಥವಾ ಅದು ಆಲ್ರೆಡಿ ರೆಸೆರ್ವಡ್ ಸೀಟ್ ಅಂತಲೋ ಹಿಂದೆ ಸರಿದು, ಅದು ಲವ್ವೇ ಅಲ್ಲ ಅನ್ನೋ ನಿರ್ಧಾರಕ್ಕೆ ಬರೋದು. ಆದ್ರೆ ನಿಜವಾದ ಪ್ರೀತಿ ಅನ್ನೋದು ಶುರು ಆಗೋದು ಗೊತ್ತೇ ಆಗೋಲ್ಲ. ಯೋಚನೆ ಮಾಡೋಕೂ ಸಮಯ ಕೊಡದೇ ಇರೋವಷ್ಟು ಫಾಸ್ಟ್ ಅದು. ಪ್ರೀತಿ ಮಾಡೋಕೆ ಕಾರಣ ಇರಲ್ಲ. ನನಗೂ ಒಂದು ಸಲ ಈ ತರಹದ true love ೨ ವರ್ಷದ ಹಿಂದೆ ಆಯಿತು. ಒಂದೇ ನೋಟಕ್ಕೆ ಕ್ಲೀನ್ ಬೋಲ್ಡ್ ಆಗಿ ಹೋಗಿದ್ದೆ ನಾನು. ಹೊಸ ಕಲ್ಪನೆ, ಹೊಸ ದಾರಿ, ಹೊಸ ದಿಗಂತಕ್ಕೆ ಮನಸು ಲಗ್ಗೆ ಹಾಕಿದ ಕ್ಷಣ ಅದು. "ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ, ನಿನ್ನೊಳಿದೆ ನನ್ನ ಮನಸು" ನನಗೆ ಗೊತ್ತಿಲ್ಲದೇ ನನ್ನ ಮನಸಿನ ಟೇಪ್ ರೆಕಾರ್ಡರ್ ನಲ್ಲಿ ಈ ಹಾಡು ಪುನ: ಪುನ: ಕೇಳಿ ಬಂತು. ಜೀವನ ಮುಗಿದು ಹೋಗೊವಷ್ಟರಲ್ಲಿ ಇನ್ನಷ್ಟು ಮಧುರ ನೆನಪುಗಳ ಮೂಟೆ ಕಟ್ಟಿಕೊಳ್ಳೋ ಮನಸಾಯಿತು. ಕಣ್ಣು ಮುಚ್ಚಿದರೂ, ಬಿಚ್ಚಿದರೂ ಕಾಣುವ ಅವಳ ನೆನಪೇ ನನ್ನ ಪ್ರೀತಿಗೆ ಸ್ಫೂರ್ತಿ. ನನ್ನ ನೆನಪಿನ ಬಾಂದಳದ ಬಿದಿಗೆ ಚಂದ್ರಮ, ನನ್ನ ಜೀವನದ ಖಾಲಿ ಹಾಳೆಯ ಮೇಲೆ ಬರೆದ ಸುಂದರ ಪದ್ಯ, ನನ್ನ ಯೋಚನೆಗಳ ಸೂತ್ರಧಾರಿ.. ನಿನಗೆ ನಾ ಅಭಾರಿ... ನನ್ನ ಪ್ರೀತಿ ಅನಂತ...

          ನನ್ನ ಪ್ರೀತಿಯ ಮಡದಿ - "ಪ್ರೇಮಿಗಳ ದಿನದ ಶುಭಾಶಯಗಳು"...

               

Sunday, December 23, 2012

ಆಯ್ದ ಕವನಗಳು



ಕಲ್ಪನೆಯ ದಾರಿ


ದೇಹಕ್ಕೊಂದು ಮನಸು... ಮನಸಿಗೆ ಹಲವು ಕನಸು...

ಕನಸಿಗೊಂದು ಕಲ್ಪನೆ.... ಕಲ್ಪನೆಗೊಂದು ದಾರಿ....

ಆ ದಾರಿಯ ಪಯಣಿಗ ನಾ...

ನನ್ನ ಕಲ್ಪನೆಗೆ ಕೊನೆಯಿಲ್ಲ... ಕನಸಿಗೆ, ಅಂತ್ಯವಿಲ್ಲ.

                        

ನೆನಪು ಸತ್ತಾಗ
                                                           
ಮನುಷ್ಯ ಸತ್ತಾಗ... ನೆನಪಾಗಿ ಉಳಿಯುತ್ತಾನೆ.

ಅದೇ ನೆನಪು ಸತ್ತಾಗ?

ತುಂಬಾ ಯೋಚಿಸಬೇಡಿ, ನೆನಪು ಸಾಯೋದಿಲ್ಲ...







ಆಸೆಗಳು

ಆಸೆಗಳ ಗಂಟನ್ನು ಹೊತ್ತು ಮಾರುತ್ತಿರುವ ವರ್ತಕ ನಾನು

ಅದೇ ಆಸೆಗಳ ಗಂಟಲ್ಲಿ ಒಂದನ್ನೂ ನಾ ಕೊಳ್ಳಲಾರೆ.

ಮಾರುವುದರಲ್ಲಿ ಇರೋ ಲಾಭ ಕೊಳ್ಳೋದ್ರಲ್ಲಿ ಇದೆಯಾ?

                        


                                                                 

ನಾನ್ಯಾರು?
                   
ನಾನ್ಯಾರು ಎಂಬ ಪ್ರಶ್ನೆಗಿನ್ನೂ ಉತ್ತರ ಸಿಕ್ಕಿಲ್ಲ.

ನಾನೇನು ಎನ್ನುವುದು ನನಗಿನ್ನೂ ತಿಳಿದಿಲ್ಲ.

ಜೀವನ ಪಯಣ ನಡೆಯುತಿದೆ ಈ ಎರಡು ಉತ್ತರಗಳ ಹುಡುಕಾಟದಲಿ.

Saturday, November 17, 2012

ಕಸ = ಕಸಿವಿಸಿ


ಅವತ್ತೊಂದು ದಿನ ಯಶವಂತಪುರ ರೇಲ್ವೆ ಸ್ಟೇಷನ್ ಗೆ ಯಾರೋ ನೆಂಟರನ್ನ ಕರೆದುಕೊಂಡು ಬರೋಕೆ ಹೋಗಿದ್ದೆ. ಸಿಕ್ಕಾಪಟ್ಟೆ ಚಳಿ, ಜೊತೆಗೆ ಒಂದಿಷ್ಟು ಜಿನುಗೋ ಮಳೆ ಹನಿ. ಅದ್ಭುತ ವಾತಾವರಣ. ಟ್ರೇನ್ ಬರೋಕೆ ಇನ್ನು 30 ನಿಮಿಷ ಇತ್ತು. ಒಂದು ಕಪ್ ಟೀ ಹೀರಿಬಿಡೋಣ ಅಂತ ಅಲ್ಲೇ ಪಕ್ಕದಲ್ಲಿದ್ದ ಟೀ ಸ್ಟಾಲ್ ಗೆ ಹೋದೆ. ಚಹಾ ಕುಡಿದ ಮೇಲೆ ಕಪ್ ಎಸೆಯೋಕೆ ಕಸದ ಬುಟ್ಟಿ  ಹುಡುಕಿದೆ. ಆದ್ರೆ ಬುಟ್ಟಿ ಅಲ್ಲಿರಲಿಲ್ಲ. ಅಂಗಡಿಯವನಿಗೆ ಕೇಳ್ದೆ 'ಕಸದ ಬುಟ್ಟಿ ಎಲ್ಲಪ್ಪ?'. ಅವನು ಕೊಟ್ಟ ಉತ್ತರ ಕೇಳಿ ಕೋಪ ನೆತ್ತಿಗೇರಿತು. 'ಅಲ್ಲೇ ಎಲ್ಲಾದರು ಹಾಕಿ, ಬೇರೆಯವರು ಅಲ್ಲೇ ಹಾಕಿದ್ದರೆ. ನಿಮಗೆ ಅಂತ ಕಸದ ಬುಟ್ಟಿ ತಂದು ಕೊಡಲೇನು?' ಈ ಬೇಜವಾಬ್ದಾರಿಯ ಮಾತಿಗೆ ಉತ್ತರಿಸೋ ತಾಳ್ಮೆ ನನಗಿರಲಿಲ್ಲ. 
30 ನಿಮಿಷದ ಹಿಂದೆ, ಅದೇ ಪ್ಲಾಟ್ಫಾರ್ಮ್ ಸ್ವಚ್ಛ ಮಾಡೋಕೆ ಅಂತ ಒಬ್ಬಳು ವೃದ್ಧೆ ಬಂದಿದ್ದಳು. ಮೈಮೇಲೆಲ್ಲ ನೆರಿಗೆಗಳು. ಆ ಚಳಿಯಲ್ಲಿ ಹರಿದು ಹೋದ ಒಂದು ಸ್ವೆಟರ್, ಕಿವಿಗೆ ಒಂದು ಬಟ್ಟೆ, ಕೈಯಲ್ಲಿ ಒಂದು ಪೊರಕೆ, ಕಾಲಲ್ಲಿ ಹಳೆ ಹವಾಯಿ ಸ್ಲಿಪ್ಪರ್ ಅದಕ್ಕೂ ದಾರದಿಂದ ಕಟ್ಟಿದ ಉಂಗುಷ್ಟ. ತೀರ ಚಿಂತಾಜನಕ ಸ್ಥಿತಿಯಲ್ಲಿ ಇದ್ದಳು ಆ ಅಜ್ಜಿ. ಟ್ರೇನ್ ಸ್ಟೇಶನ್ನಲ್ಲಿ ನಿಂತಾಗ ಶೌಚಾಲಯ ಉಪಯೋಗಿಸಬೇಡಿ ಅಂತ ಎಷ್ಟೇ ಬಡ್ಕೊಂಡ್ರು ನಮ್ಮ ಜನಕ್ಕೆ ಅರ್ಥ ಆಗೋಲ್ಲ. ಟ್ರೇನ್ ನಿಂತಾಗ ಮಾಡಿರೋ ಆ  ಪಾಪ ತೊಳೆಯೋಕೆ ಆ ಅಜ್ಜಿ ತನ್ನ ಕೈ ಉಪಯೋಗಿಸ್ತಾ ಇದ್ದಳು. ಅದೇನು ಅವಳ ಕರ್ಮವೋ ಅಥವಾ ಮಾಡಿದವನ ಪಾಪದ ಕೊಡ ತುಂಬೋಕೆ ಭಗವಂತ ಆಡಿಸಿದ ಆಟವೋ, ಒಂದೂ ಗೊತ್ತಿಲ್ಲ. ಆದರೂ ಮಾನವೀಯತೆ ದೃಷ್ಟಿಯಿಂದ ನೋಡಿದರೆ ಆಕೆ ಮೇಲೆ ಕನಿಕರ ಹುಟ್ಟೋದು ನಿಶ್ಚಿತ. ಅವಳು ಮಾಡೋ ಆ ಕೆಲಸಕ್ಕೆ ಅವಳಿಗೆ ಎಷ್ಟು ದುಡ್ಡು ಸಿಗುತ್ತೋ ಅದರ ನಾಲ್ಕು ಪಟ್ಟು ಪಾಪ ಅಲ್ಲಿ ಗಲೀಜು ಮಾಡಿದ ಪಾಪಿಗೆ ಸಿಗುತ್ತದೆ. ಈ ಪಾಪ ಪುಣ್ಯದ ಲೆಕ್ಕದಲ್ಲಿ ನಮ್ಮ ದೇಶದ ಸೌಂದರ್ಯ, ಅದರ ಪ್ರತಿಷ್ಠೆ ಎಲ್ಲ ಮೂಲೆಗುಂಪಾಗಿ, ಭಾರತೀಯರು ಅಂದ್ರೆ ಕೊಳಕರು, ಆ ದೇಶದ ಪರಿಸ್ತಿತಿ ಹೀಗೆ ಇರುತ್ತೆ ಅನ್ನೋದು ಹೊರದೇಶದವರ ವಾದವಾದರೆ. ಇನ್ನು ಭಾರತೆ ಮಾತೆಯ ಮೊಮ್ಮಕ್ಕಳಾದ ನಮ್ಮ ಯುವಕರು ಈ ದೇಶಕ್ಕೆ ಭವಿಷ್ಯ ಇಲ್ಲ ಅನ್ನೋದು ಇನ್ನೂ ನಾಚಿಕೆಗೇಡು ಪಡುವಂತಹ ವಿಷಯ.
ನಾನೊಬ್ಬನೇ ಏನು ತಾನೇ ಮಾಡೋಕೆ ಆಗುತ್ತೆ ಅನ್ನೋದು ಕೆಲವರ ಅಂಬೋಣ. ಇಲ್ಲಿ ಶಿವ್ ಖೇರಾ ಹೇಳಿರೋ ಒಂದು ಮಾತು ನೆನಪಾಗುತ್ತದೆ. 'if you are not part of the solution then you are part of the problem'. ದೇಶ ನನ್ನದು ಅದು ಶುದ್ಧವಾಗಿರಬೇಕು. ದಿನ ಬೆಳಿಗ್ಗೆ ಎದ್ದು ಪೊರಕೆ ಹಿಡಿದು ದೇಶ ಗುಡಿಸೋದು ಕಷ್ಟ, ಆದ್ರೆ ನಮ್ಮ ಕೈಲಾದಷ್ಟು ನಮ್ಮನ್ನು ನಾವು ತಿದ್ದಿಕೊಂದ್ರೆ ಅದೇ ದೊಡ್ಡ ಉಪಕಾರ.
ಮೊನ್ನೆ ದೀಪಾವಳಿ ಆಯಿತು. ಎಲ್ಲರೂ ತಂಡ ತಂಡವಾಗಿ ರೋಡಿಗಿಳಿದು ಪಟಾಕಿ ಹೊಡೆದರು. ಅದು ಸಂಭ್ರಮದ ಹಬ್ಬ. ರಾತ್ರಿ ಎಲ್ಲ ಪಟಾಕಿ ಹೊಡೆದ ಜನ ಎದ್ದಿದ್ದು ಬೆಳಿಗ್ಗೆ 7 ಗಂಟೆಗೆ. ಆದ್ರೆ ಅವರೆಲ್ಲ ಏಳೋ ಮೊದಲು, ಪೊರಕೆ ಹಿಡಿದ ಅದೆಷ್ಟೋ ಕೈಗಳು ಅವರನ್ನ ಬೈಕೊಂಡು ರೋಡು ಸ್ವಚ್ಛಗೊಳಿಸಿ ಮರೆಯಾದವು. ಪಟಾಕಿ ಹಾರಿಸೋ ಜನರಲ್ಲಿ ಒಬ್ಬರಾದರು ಆ ಅವಶೇಷಗಳ ಬಗ್ಗೆ ಯೋಚನೆ ಮಾಡಿದ್ರ? ಖಂಡಿತ ಇಲ್ಲ. ಗೋ ಗ್ರೀನ್ ಅಂತ ಬಟ್ಟೆ ಹಾಕಿಕೊಂಡು ಒಂದು ದಿನವಿಡೀ ಫೋಟೋ ತೆಗೆದು ಫೆಸಬುಕ್ ಗೆ ಹಾಕಿಕೊಳ್ಳೋ ಯುವಕರೇ ಜಾಸ್ತಿ. ಕ್ರಾಂತಿ ಅನ್ನೋದು ಒಂದು ದಿನ ಬಂದು ಹೊಗೊದಲ್ಲ, ಅದು ನಿರಂತರ. 
ಇದೆಲ್ಲ ನೋಡುತ್ತಿದ್ದರೆ, ಆ ಬ್ರಿಟಿಷರ ದಬ್ಬಾಳಿಕೆಯ ದಿನಗಳೇ ನಮ್ಮಲ್ಲಿ ದೇಶಭಕ್ತಿಯನ್ನು, ಒಗ್ಗಟ್ಟನ್ನು ಖಾಯಂಗೊಳಿಸಿದ್ದವು. ಜಲ, ವಾಯು, ಭೂಮಿ ಜೊತೆ ನಮ್ಮ ವೈಚಾರಿಕ ಪ್ರಜ್ಞೆ ಕೂಡ ಮಲಿನ ಆಗಿರೋದು ದುರದೃಷ್ಟಕರ. ಇನ್ನೊಮ್ಮೆ ಬೇಕಾಬಿಟ್ಟಿ ಕಸ ರೋಡಿನಲ್ಲಿ ಹಾಕೋವಾಗ ಮೇಲೆ ಹೇಳಿರೋ ಆ ಅಜ್ಜಿಯ ಮುಖ ಒಮ್ಮೆ ನೆನೆಪಿಸಿಕೊಳ್ಳಿ. 
ಚಿತ್ರಕೃಪೆ: ದಿ ಹಿಂದು ಪತ್ರಿಕೆ

Wednesday, November 14, 2012

ಪ್ರೀತಿ

ಪ್ರೀತಿ ಅನ್ನೋದು ಹೇಗಿರುತ್ತೆ ಅನ್ನೋದರ ಬಗ್ಗೆ ಕಲ್ಪನೆ ಇದ್ದದ್ದೇ ಬೇರೆ, ಆದರೆ ಪ್ರೀತಿಯ ಬಗ್ಗೆ ತಿಳಿದಾಗ ಆಧ ಅನುಭವವೇ ಬೇರೆ. ಪ್ರೀತಿ ಎನ್ನುವ ಆ ಮರಿಜಿಂಕೆ ನನ್ನ ಮನದಲ್ಲಿ ನಲಿದಾಡಿದ್ದು ನಾ ಕಂಡ ಕ್ಷಣ ನನ್ನಲ್ಲದ ಬದಲಾವಣೆ ಹೇಳತೀರದು. ನನ್ನದೇ ಲೋಕ ಸೃಷ್ಟಿಸಿ ಅಲ್ಲಿಗೆ ಯಾರೂ ಬರದ ಹಾಗೆ ಬದುಕು ನಡೆದಿತ್ತು. ಎದೆಯಾಳದ ಮೂಲೆಯೊಂದರಲ್ಲಿ ಇಟ್ಟಿದ್ದ ಚಿಕ್ಕದೊಂದು ಸಂದೂಕದೊಳಗೆ ಅಡಗಿಸಿದ್ದ ನನ್ನ ಹಲವಾರು ಕನಸುಗಳಿಗೆ ಬೀಗ ಹಾಕಿಟ್ಟಿದ್ದೆ. ನನ್ನ ಹೊರತು ಅದರ ಒಳಗಿನ ರಹಸ್ಯಗಳು ಬೇರ್ಯಾರಿಗೂ ಗೊತ್ತಿರಲಿಲ್ಲ. ಆ ಸಂದೂಕಕ್ಕೆ ಯಾರ ಕೈ ತಲುಪಬಾರದೆಂದು ಅದಕ್ಕೊಂದು ಬೀಗ ಹಾಕಿ, ಬೀಗದ ಕೈ ಮನಸ್ಸಿನ ಇನ್ನೊಂದು ಮೂಲೆಯಲ್ಲಿ ಬಚ್ಚಿಟ್ಟು ಮರೆತು ಹೋಗಿದ್ದೆ. ನನ್ನ ಕಣ್ಣಿಗೆ ಮಾತ್ರ ಕಾಣಿಸುವ ಆ ಕೀಲಿಯ ಕಿಂಡಿಯ ಒಳಗೆ ಇಣುಕಿ ನೋಡಿ, ಒಂದೊಂದೇ ಕನಸನ್ನು ಹೊರಗೆ ತೆಗೆದು, ಅದನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿದ್ದಾಗಲೇ ನೀನನಗೆ ಸಿಕ್ಕೆ. ಸುಪ್ತ ಮನಸ್ಸಿನಲ್ಲಿ ಅಡಗಿರೋ ಆ ಕನಸುಗಳ ಸಂದೂಕದ ಕೀಲಿ ಮುರಿದು ಚೂರಾಗಲು ನಿನ್ನ ಒಂದು ನಗು ಸಾಕಾಗಿತ್ತು. ತೆರೆದಿದ್ದ ಆ ಪೆಟ್ಟಿಗೆಗೆ ನನ್ನ ಅಪ್ಪಣೆ ಇಲ್ಲದೆ ನೀ ಕೈ ಹಾಕಿದೆ. ನಿನಗೆ ಇಷ್ಟವಾಗದ ಅನೇಕ ಕನಸುಗಳನ್ನು ನಾನು ಅದರಿಂದ ಆಚೆ ಹಾಕಿದೆ. ನಿನಗೆ ಇಷ್ಟವಾದ ಅದೆಷ್ಟೋ ಕನಸುಗಳನ್ನು ಅದಕ್ಕೆ ನೀ ತುಂಬಿದೆ. ಮೊದಲು ಇದ್ದ ಪೆಟ್ಟಿಗೆಗಿಂತ ಈಗಿನ ಪೆಟ್ಟಿಗೆಯ ಬಗ್ಗೆ ನನಗೆ ಒಲವು ಮೂಡಿತು. 
ಯಾವ ಕನಸು, ಯಾರ ಕನಸು ಅನ್ನೋದನ್ನ ವಿಂಗಡಿಸಲಾರದಷ್ಟು ಅವುಗಳು ಬೆರೆತು ಹೋದವು. ಈಗ ಅವೇನೇಯಿದ್ದರೂ ನಮ್ಮ ಕನಸುಗಳು. ನಿನ್ನ ಪ್ರೀತಿಯ ಬಲವೊಂದಿದ್ದರೆ ಎಲ್ಲ ಕನಸುಗಳಿಗೆ ಒಂದು ದಿನ ಸಾಕಾರ ರೂಪ ಕೊಡುವುದು ಖಂಡಿತ. ನನ್ನನ್ನು ಪ್ರತಿದಿನವೂ, ಪ್ರತಿಕ್ಷಣವೂ  ಹಿಂಬಾಲಿಸುತ್ತಿರುವ ಓ ನನ್ನ ಪ್ರೀತಿಯೇ ನಿನಗೆ ನಾನು ಚಿರಋಣಿ. ಓ ನನ್ನ ಒಲವೆ, ಓ ಜೀವವೇ ಐ ಲವ್ ಯು. ನೀನು ನಾನು ಬೇರೆಯೇ ?