ಮೊನ್ನೆ ದಿನಪತ್ರಿಕೆಯೊಂದನ್ನು ಓದುತ್ತಿದ್ದಾಗ, ಒಳಪುಟದಿಂದ ಜಾರಿದ ಜಾಹಿರಾತು ಚೀಟಿಯ ಮೇಲೆ ನನ್ನ ಕಣ್ಣು ಬಿತ್ತು. ಬರೆದದ್ದು ಇಷ್ಟೇ "5 ತಿಂಗಳಿಂದ 5 ವರ್ಷದ ಒಳಗಿನ ಎಲ್ಲ ಮಕ್ಕಳನ್ನು ನಾವು ನೋಡಿಕೊಳ್ಳುತ್ತೇವೆ. ಇಂದೇ ನಮ್ಮ ಡೇ ಕೇರ್ ಗೆ ಸಂಪರ್ಕಿಸಿ". ಜಗತ್ತಿಗೆ ಹೊಸ ವಿಷಯಗಳು, ತಾಂತ್ರಿಕತೆಯ ಆವಿಷ್ಕಾರ, ಮನುಷ್ಯನ ಬುದ್ಧಿಮತ್ತೆಯ ಅಭೂತಪೂರ್ವ ವಿಕಾಸ ಈ ಎಲ್ಲದರ ನಡುವೆ, ಚಿಕ್ಕ ಚಿಕ್ಕ ಸಂತೋಷಗಳನ್ನು ಅನುಭವಿಸುವ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಅಂತಹದೇ ಚಿಕ್ಕ ಚಿಕ್ಕ ಸಂತೋಷಗಳ ಮೂಟೆ ಹೊತ್ತು ಬರುವ ಅಪರೂಪದ ಉಡುಗೊರೆ ಮಗು. ಯಾವುದೋ ಸಂಬಂಧ ಇಲ್ಲದ ಒಂದು ಮಗುವನ್ನು ನೋಡಿದರೆ ಅದನ್ನ ಎತ್ತಿ ಮುದ್ದಾಡುವ, ಮಾತನಾಡಿಸುವ ಮನಸ್ಸಾಗುವ ನನಗೆ, ಮೇಲೆ ಹೇಳಿದ ಜಾಹಿರಾತು ಕೆಲ ನಿಮಿಷ ಯೋಚಿಸುವಂತೆ ಮಾಡಿತು.
"ಮನೆಯೇ ಮೊದಲ ಪಾಠಶಾಲೆ ಹಾಗು ಅಮ್ಮನೇ ಮೊದಲ ಗುರು" ಹೀಗೆ ಎಲ್ಲೋ ಕೇಳಿದ ನೆನಪು. ಆದರೆ ಇವತ್ತಿನ ಮಟ್ಟಿಗೆ ಡೇ ಕೇರ್ ಮೊದಲ ಪಾಠಶಾಲೆ, ಮತ್ತು ಆಯಾಗಳು ಮೊದಲ ಗುರುವಾಗಿ ಹೋಗಿದ್ದಾರೆ. ಈ ಸಂಸ್ಕೃತಿ ಹೊಸದೇನಲ್ಲ, ಅನಾದಿಕಾಲದಿಂದಲೂ ಮಕ್ಕಳನ್ನು ಸೇವಕರು ನೋಡಿಕೊಳ್ಳುವ ರೂಢಿಯಿದೆ. ನನ್ನ ಪ್ರಶ್ನೆ ಯಾರು ಮಗುವನ್ನು ನೋಡಿಕೊಳ್ಳುತ್ತಾರೆ ಅನ್ನೋದಲ್ಲ. ಮಗುವಿನಿಂದ ಸಿಗುವ ಸಣ್ಣ ಪುಟ್ಟ ಸಂತೋಷಗಳನ್ನ ಅನುಭವಿಸುವಿದಕ್ಕಿಂತ ದೊಡ್ಡದು ಏನಾದ್ರೂ ಇದೆಯಾ? ಇವತ್ತು ಅಪ್ಪ ಅಮ್ಮನ ಹೆಸರು ಹೇಳೋ ಮೊದಲು dora ಮತ್ತು Donald Duck ಹೆಸರು ಹೇಳೋದನ್ನ ಕಲೀತಾರೆ.
ಮಕ್ಕಳಿಗಾಗಿ ಕಷ್ಟಪಟ್ಟು ದುಡಿದು ದುಡ್ಡಿನ ಗುಡ್ಡೆ ಹಾಕಿ, ನಾವು ಅನುಭವಿಸುವುದು ತುಂಬಾ ಕಮ್ಮಿ. ಜೊತೆಗೆ ಡೇ ಕೇರ್ ನವರು ಮಾಡೋದು ಕಮ್ಮಿ ದುಡ್ಡಿಗೆನಲ್ಲ, ಅವರು ಕೇಳೋದು ಸಾವಿರಗಟ್ಟಲೆ. ಹಲ ಸಾವಿರಗಳನ್ನ ಘಳಿಸಿ, ಅದರಲ್ಲಿ ಕೆಲ ಸಾವಿರಗಳನ್ನ ಸುರಿದು ಮಕ್ಕಳನ್ನ ಮನೆಯಿಂದ ದೂರ ಇಡುತ್ತಾರೆ. ಕಲವರಿಗೆ ಇದು ಅನಿವಾರ್ಯತೆಯಾದರೆ, ಇನ್ನು ಕೆಲವರಿಗೆ ಆಲಸ್ಯ. ಆದರೆ ಅದೇ ಮಕ್ಕಳ ಜೊತೆಗೆ ಕಾಲ ಕಳೆದು ಅವರ ತುಂಟಾಟಗಳು, ಕುಚೇಷ್ಟೆಗಳು ತರುವ, ಮನಸ್ಸನ್ನು ಉಲ್ಲಸಗೊಳಿಸುವ ಅನೇಕ ಸಿಹಿ ಸಂದರ್ಭಗಳನ್ನ ಅನುಭವಿಸಿದಾಗ, ಈ ಸಾವಿರಗಳು ಶೂನ್ಯವಾಗಿ ಕಾಣಬಹುದು. ಇದನ್ನು ಕಳೆದುಕೊಳ್ಳುತ್ತಿದ್ದೆವೆಯೇ? ಗೊತ್ತಿಲ್ಲ. ಉತ್ತರ ಹೇಳೋಕೆ ನಾನೂ ಅನುಭವಸ್ಥನಲ್ಲ!!! ಇವತ್ತು ಈ ಸಂಗತಿಗಳನ್ನು ಬರೆಯುತ್ತಿರುವ ನಾನೂ ನಾಳೆ ಇದೆ ಹಾದಿಯಲ್ಲಿ ನಡೆಯಬಹುದೇನೋ. ಹಾಗೆ ಆಗದೆ ಇರಲಿ ಅನ್ನೋದೇ ನನ್ನ ಬಯಕೆ.
ನಿಮ್ಮ ಅಭಿಪ್ರಾಯ ?