Sunday, January 22, 2012

ಅಕ್ಷತೆ ಮತ್ತು ಅನ್ನ

ಇದೊಂದು black and white ಕಾಲದ ಕಥೆ. ಇವತ್ತು ಕಥೆಯಾಗಿರುವ ಈ ವಸ್ತು, ನನ್ನ ತಾಯಿ 27 ವರ್ಷಗಳ ಹಿಂದೆ ಅನುಭವಿಸಿದ ವ್ಯಥೆ. ನಮ್ಮ ತಂದೆ ಪ್ರಾಥಮಿಕ ಶಾಲೆ ಶಿಕ್ಷಕ, ಶ್ರವಣಕುಮಾರನ ನಂತರ ಯಾರಾದ್ರೂ ಇದ್ರೆ ಅದು ಇವರೇ. ಹೇಗಂತೀರಾ? ತಂದೆತಾಯಿಗಳು ಎಷ್ಟೇ ಬೈದರು, ಶಪಿಸಿದರು ಅವರಿಗೆ ನೋವಾಗುತ್ತಿರಲಿಲ್ಲ. ಸಂಬಳ ಬಂದ ಮೇಲೆ ಮೊದಲು ಮಾಡುತ್ತಿದ್ದ ಕೆಲಸ ತಂದೆ ತಾಯಿಯರ ಕೈಗೆ ಅದನ್ನ ಕೊಡುವುದು. ಇವರ ಜೇಬಂತು ಯಾವಾಗ್ಲೂ ಖಾಲಿ. ದಾಡಿ (shave) ಮಾಡಿಸಿಕೊಲ್ಲೋಕು ನಾಲ್ಕಾಣಿಗೆ ಕೈಚಾಚುವ ಪ್ರಸಂಗಗಳು ಅನೇಕ. ಇಂಥ ಪರಿಸ್ಥಿತಿಯಲ್ಲಿ ಅಪ್ಪನಿಗೆ ವರ್ಗಾವಣೆ ಆಗಿದ್ದು ಒಂದು ಕುಗ್ರಾಮಕ್ಕೆ. ಅಲ್ಲಿಗೆ ಹೋದಮೇಲು ಇವರ ಧಾಟಿ ಬದಲಾಗಲಿಲ್ಲ. ದುಡಿದ ಎಲ್ಲ ಸಂಬಳವನ್ನು ಊರಿಗೆ ಒಯ್ದು ಇವರು ಕೊಡಬೇಕು. ಹಿಂತಿರುಗಿ ಬರುವಾಗ ನಮ್ಮ ಅಜ್ಜಿ ತಿಂಗಳಿಗೆ ಬೇಕಾಗುವ ಅಕ್ಕಿ-ಬೇಳೆ ಕಟ್ಟಿ ಕಳಿಸುತ್ತಿದ್ದರು. ಅವರು ಕಳಿಸುತ್ತಿದ್ದ ದಿನಸಿ 3 ವಾರಕ್ಕೆ ಮುಗಿಯುವಷ್ಟಿರುತ್ತಿತ್ತು. ತಿಂಗಳ ಕೊನೆಗೆ ಅಮ್ಮ ಅಪ್ಪನಿಗೆ ಹೊಟ್ಟೆಗೆ ನೀರು ಮಾತ್ರ ಗತಿ. ಆದ್ರೆ ೫ ವರ್ಷದ ನಮ್ಮಣ್ಣ, ೩ ವರ್ಷದ ನಮ್ಮಕ್ಕ ಹಾಗು ಒಂದು ವರ್ಷದ ನನಗೆ, ಊಟದ ಕೊರತೆಯಾಗಬಾರದು ಅನ್ನೋದು ನನ್ನ ತಂದೆ ತಾಯಿಯರ ಮಿಡಿತ. ಆದರೆ ಆ ಪರಿಸ್ಥಿತಿಯಲ್ಲಿ ನಮ್ಮ ತಂದೆ ತಾಯಿ ಒಬ್ಬರಿಗೊಬ್ಬರು ಸಾಂತ್ವನ ಹೇಳುವ ಸ್ಥಿತಿಯಲ್ಲಿಯೂ ಇರಲಿಲ್ಲ. ಕೇವಲ ಅವರ ಕಣ್ಣೀರು ಅವರಿಗೆ ಸಮಾಧಾನ ಮಾಡುತ್ತ ಇದ್ದವು.

ನಮ್ಮ ತಾಯಿ, ರಾಘವೇಂದ್ರ ಸ್ವಾಮಿಯ ಭಕ್ತರು. ಅವರಿಗೆ ಏನಾದ್ರು ನೋವಾದರೆ ಇವತ್ತಿಗೂ ಕೂಡ ರಾಘವೇಂದ್ರ ಸ್ವಾಮಿಯನ್ನ ನೆನೆಯುತ್ತಾರೆ. ಅದಿರಲಿ, ೪ ನೇ ವಾರದ ಊಟಕ್ಕೆ ಕೊರತೆ ಬಾರದಿರಲು ನಮ್ಮ ತಾಯಿ ಒಂದು ಉಪಾಯ ಮಾಡಿದರು. ಪರಮಪೂಜ್ಯ ಗುರುರಾಯರ ಮುಂದೆ ನಿಂತು, "ನಿಮಗೆ ಹಾಕುವ ಅಕ್ಷತೆ, ನನ್ನ ಮಕ್ಕಳಿಗೆ ೨ ದಿನದ ಊಟವಾಗಬಹುದು. ಅದಕ್ಕೆ ಇನ್ನು ಮೇಲಿಂದ ನಿಮಗೆ ಹಾಕುವ ಅಕ್ಷತೆಯನ್ನು ಈ ಬಟ್ಟಲಿಗೆ ಹಾಕುತ್ತೇನೆ". ಹಾಗೆ ಹೇಳಿ ರಾಯರ ಮುಂದೆ ಒಂದು ಬಟ್ಟಲು ಇಟ್ಟರು. ಅಮ್ಮ ಅಂದುಕೊಂಡ ಹಾಗೆ ೨-೩ ದಿನಕ್ಕೆ ನಮಗೆಲ್ಲ ಅನ್ನ-ಗಂಜಿ ದೊರಕಲಾರಂಭಿಸಿತು.

ಆವತ್ತು ಅಕ್ಷತೆ ನಮ್ಮ ಪಾಲಿಗೆ ಅನ್ನವಾಗಿ ಪರಿವರ್ತನೆಗೊಂಡಿತ್ತು. ಇವತ್ತು ಕೂಡ ದೇವರಿಗೆ ಅಕ್ಷತೆ ಹಾಕುವಾಗ ನನಗೆ ಈ ಸಂದರ್ಭ ನೆನಪಾಗುತ್ತೆ. ಯಾವುದೇ ದೇವಸ್ಥಾನಕ್ಕೆ ಹೋಗಲಿ, ಆರತಿ ತಟ್ಟೆಯಲ್ಲಿ ದುಡ್ಡು ಹಾಕ್ತೇನೋ, ಇಲ್ವೋ ಆದ್ರೆ ಅನ್ನದಾನಕ್ಕೆ ಮಾತ್ರ ನನ್ನ ಅಳಿಲು ಸೇವೆ ಒಪ್ಪಿಸುತ್ತೇನೆ.

ಕಥೆ ಬರೀತಾ ಬರೀತಾ ಕಣ್ಣಲ್ಲಿ ನೀರು ಬಂದಿದ್ದೆ ಗೊತ್ತಾಗಿಲ್ಲ. ಅಕ್ಷತೆಯನ್ನ ಅನ್ನ ಮಾಡಿದ ನಮ್ಮ ಅಮ್ಮನಿಗೆ ಒಂದು ಧನ್ಯವಾದಗಳನ್ನ ಹೇಳೋಕೆ ಪದಗಳು ಸಾಲವು.

ಮುಖ ತೊಳೆದುಕೊಂಡು ಬರ್ತೀನಿ....

1 comment: