Wednesday, February 29, 2012

ನಂಬಿಕೆ - ದೇವರು


ನನ್ನ ಬ್ಲಾಗ್ ಗಳನ್ನ ಓದಿದಾಗ ನೀವೆಲ್ಲ ಗಮನಿಸಿರಬೇಕು, ಬಹಳಷ್ಟು ಕಡೆ "ಆ ದೇವರು" ಅನ್ನೋ ಪದ ಉಪಯೋಗಿಸಿರ್ತೀನಿ. ಹಾಗಂತ ನಾನೊಬ್ಬ ಭಾರಿ ದೈವಭಕ್ತ ಅಂತೇನಲ್ಲ. ನಾನು ಸಂಧ್ಯಾವಂದನೆ ಮಾಡೋದೇ ವರ್ಷಕ್ಕೆ ೨ ಅಥವಾ ೩ ಸಲ. ಹಾಗಾದ್ರೆ ನಾನು ದೇವರು ಅಂತ ಯಾಕೆ ಬರೀತೀನಿ ? ದೇವರು ಅಂದ್ರೆ ಯಾರು?
ಮೊನ್ನೆ ಯಾರೋ ನನ್ನ ಬ್ಲಾಗ್ ಓದಿ "ದೇವರ ಮ್ಯಾಲೆ ಬಹಳ ನಂಬಿಕಿ ಅದ ಅನ್ನಸ್ತದ ನಿಮಗ" ಅಂದ್ರು. ಅದಕ್ಕ ನಾ ಹೇಳಿದ್ದು, "ಹಾಗೇನಿಲ್ಲ, ನಂಬಿಕಿನ ನನ್ನ ದೇವರು" ಅಂದಿದ್ದೆ. ಹಾಗಂತ ನಾನು ದೇವಸ್ಥಾನಕ್ಕೆ ಹೋಗೋಲ್ಲ ಅಂತ ಅಲ್ಲ. ದೇವಸ್ಥಾನಕ್ಕೆ ಹೋಗ್ತಿನಿ. ನನಗೆ ತಿಳುವಳಿಕೆ  ಬಂದಾಗಿಂದ ಇಲ್ಲಿವರೆಗೂ ನನ್ನ ಜೀವನದಲ್ಲಿ, ದೇವಸ್ಥಾನಕ್ಕೆ ಹೋಗಿ, "ದೇವರೇ ನನ್ನ ಪಾಸ್ ಮಾಡು, ಅಥವಾ ಒಳ್ಳೆ ಕೆಲಸ ಕೊಡಿಸು, ಅಂದ್ರ ನಾನು ನಿನಗ ತೆಂಗಿನಕಾಯಿ ಒಡಿತೀನಿ, ಸಹಸ್ರನಾಮ ಮಾಡಿಸ್ತೀನಿ ಇನ್ನು ಹೇಳ್ಬೇಕಂದ್ರ ಸರ್ವ ಸೇವಾ ಮಾಡಿಸ್ತೀನಿ"  ಅಂತ ಯಾವತ್ತು ಕೇಳಿಲ್ಲ. ನಾನು ದೇವರ ಹುಂಡಿಗೆ ಹಣ ಹಾಕೋದು ದೇವರಿಗೆ ಅಂತ ಅಲ್ಲ. ಅಲ್ಲಿ ಕೆಲಸ ಮಾಡೋ ಪೂಜಾರಿಗಳಿಗೆ ಒಂದು ಹೊತ್ತಿನ ಊಟ, ನಾನು ಹಾಕೋ ದಕ್ಷಿಣೆಯಿಂದ ಸಿಗಲಿ ಅಂತ. ನಮ್ಮ ಅಜ್ಜಿ ಯಾವಾಗ್ಲೂ ಹೇಳೋರು, ನಿನ್ನ ಮನೆಗೆ ಬಂದೋರಿಗೆ ಏನು ಕೊಡ್ತೀರೋ ಬಿಡ್ತೀರೋ, ಒಂದು ಒಳ್ಳೆ ಊಟ ಮಾತ್ರ ಹಾಕಿ ಕಳಿಸಿ" ಅಂತ. ಆಗಿನ ಕಾಲಕ್ಕೆ ನಮ್ಮ ತಾತ ಮುತ್ತಾತರಿಗೆ  ತಾಕತ್ತಿತ್ತು, ಅನ್ನದಾನ ಮಾಡೋಕೆ ಅಂತಾನೆ ಸತ್ಯನಾರಾಯಣ ಪೂಜಾ, ಅದು-ಇದು ಅಂತ ನೂರು ಕಾರ್ಯಕ್ರಮ ಮಾಡಿ ಊಟ ಹಾಕೋರು. ನಾನಿರೋ ಈ costly ಜಮಾನದಲ್ಲಿ, ಬೆಳಿಗ್ಗೆ ಮಾಡಿದ್ದನ್ನೇ microwave ಅಲ್ಲಿ ಇಟ್ಟುಕೊಂಡು ಸಂಜೆ ತಿನ್ನೋ ಪರಿಸ್ಥಿತಿ ಇರಬೇಕಾದ್ರೆ. ಸಾವಿರ ಮಂದಿ ಕರೆದು ಊಟಕ್ಕ ಹಾಕೋದು ಕನಸಿನ ಮಾತು. ಅದಕ್ಕೆ ದೇವಸ್ಥಾನಕ್ಕೆ ಹೋದಾಗ ಸ್ವಲ್ಪ ದಾನ ಮಾಡ್ತೀನಿ. ಕೆಲವರಂತೂ ಈ ದಾನ ಅನ್ನೋದಕ್ಕೆ ಶ್ರೀಮಂತಿಕೆ ಬಣ್ಣ ಕೊಟ್ಟು, ದೊಡ್ಡ ದೊಡ್ಡ ಕಾಣಿಕೆ ಕೊಡೋದನ್ನ ನೋಡಿದ್ದೀನಿ. ಪಾಪ ಅನಿಸ್ತದೆ ನೋಡಿ. ದೇವರು ಆದಿ ಅಂತ್ಯ, ಆಕರ ಇಲ್ಲದವನು, ನಿರ್ಗುಣ ಸ್ವರೂಪಿ ಅನ್ನೋ ಸತ್ಯ ಗೊತ್ತಿದ್ರು ಅವನಿಗೆ ಕಣ್ಣು, ಮೂಗು ಕೈ ಕಾಲು ಎಲ್ಲ ಬಂಗಾರದಿಂದ ಮಾಡಿಸಿ, ಸತೋಷ ಪಡ್ತಾರೆ. ಅದು ಬಿಡಿ ಅವರಿಗೆ ಬಿಟ್ಟಿದ್ದು. ನಾನು ಹೇಳೋದು ಇಷ್ಟೇ, ನನ್ನ ಕೈಯಲ್ಲಿ 10 ರೂಪಾಯಿ ಇದ್ದು, ಒಂದು ಪಕ್ಷ ಅದನ್ನು ದೇವರಿಗೆ ಹಾಕೋದಾ  ಅಥವಾ ಹಸಿದವರಿಗೆ ಕೊಡೊದಾ  ಅಂತ ತೀರ್ಮಾನಾ ಮಾಡೋ ಪ್ರಸಂಗ, ನಾನು ದುಡ್ಡು ಕೊಡೋದು ಹಸಿದವರಿಗೆ. ಹಾಗಂತ ದಷ್ಟಪುಷ್ಟ ಇರೋ, ಕೈ ಕಾಲು ನೆಟ್ಟಗಿರೋ ಭಿಕ್ಷುಕರಿಗೆಲ್ಲ ನಾನು ದುಡ್ಡು ಕೊಡೋಲ್ಲ. ಯಾಕೆ ಅಂದ್ರೆ ಅದು ಅವರ ಆಯ್ಕೆ, ಪರಿಸ್ಥಿತಿ ಅಲ್ಲ.
ಅದಕ್ಕೆ ನಾನು ಹೇಳಿದ್ದು ನಂಬಿಕೆ ನನ್ನ ದೇವರು ಅಂತ. ನಾನು ಮಾಡೋ ಕೆಲಸದಲ್ಲಿ ನನಗೆ ನಂಬಿಕೆ ಇದ್ದರೆ, ಫಲಿತಾಂಶ ಏನೇ ಇರಲಿ ಅದು ನನಗೆ ತೃಪ್ತಿ ಕೊಡುತ್ತೆ. ದೇವರ ಮುಂದೆ ನಿಂತಾಗ ಎಲ್ಲರು ಕಣ್ಣು ಮುಚ್ಚಿ ಬೇಡಿಕೊಳ್ಳುತ್ತಾರೆ. ನಾನೂ ಕಣ್ಣು ಮುಚ್ಚಿಕೊಳ್ಳುತೇನೆ, ಆದ್ರೆ ನನಗೆ ಮುಂದೆ ಕಾಣೋದು ನನ್ನ ಪ್ರತಿರೂಪವೇ. ಅದೇ ನನ್ನ ನಂಬಿಕೆ. ಎಷ್ಟೇ ಸಲ ಕನ್ನಡಿ ಮುಂದೆ ನಿಂತಾಗ್ಲು, "what an amazing person you are !!" ಅಂತೀನಿ. ಇದು ಸ್ವಪ್ರಶಂಸೆ ಅಲ್ಲ, ನನ್ನ ಮೇಲೆ ನನಗಿರುವ ಗೌರವ, ಪ್ರೀತಿ. ನನ್ನ ಮೇಲೆ ನನಗೆ ಗೌರವ ಇದ್ರೆ ಮಾತ್ರ  ಬೇರೆಯವರು ನನ್ನ ಗೌರವಿಸ್ತಾರೆ. 
ಇನ್ನೂ ಕೆಲವರು, ಆ ಪೂಜೆ ಈ ಪೂಜೆ ಮಾಡಿಸಿದರೆ ಆ ಯೋಗ ಈ ಯೋಗ ಪ್ರಾಪ್ತಿಯಾಗುತ್ತೆ ಅಂತ ಬುರುಡೆ ಶಾಸ್ತ್ರ ಬಿಡ್ತಾರೆ. ಅದು ಮಾಡಿಸದೆ ಇದ್ರೆ ಕಂಟಕ ಅಂತ ಕೂಡ ಹೇಳ್ತಾರೆ. ನನಗೆ ಅನ್ನಿಸೋದು, ಈ ಕಂಟಕ ಅನ್ನೋದು ದೇವರಿಂದ ಬರೋದ? ದೇವರು ಅಂದ್ರೆ ಕಾಯೋನು ತಾನೇ. ನನ್ನ ಕೆಲಸ ನಾನು ಸರಿಯಾಗಿ ಮಾಡಿದ್ರೆ ಕಂಟಕ ಯಾಕೆ ಬರುತ್ತೆ? ಅಕಸ್ಮಾತ್ ಬಂತು ಅಂತಾನೆ ಇಟ್ಟುಕೊಳ್ಳಿ, ಈ ತಾಯ್ತ, ದಾರ ತೋರಿಸಿದರೆ ಹೋಗಿ ಬಿಡುತ್ತ? ಅಲ್ಲೂ ಕೂಡ ಕೆಲಸ ಮಾಡ್ತಾ ಇರೋದು ನಂಬಿಕೇನೆ. ನನ್ನ ಜೀವನಕ್ಕೆ ನಾನೇ ಹೀರೋ, ಎಂಥದ್ದೇ ಪರಿಸ್ಥಿತಿ ಬಂದ್ರು, ಒಂದು ವೇಳೆ ನೆರಳು ಬಿಟ್ಟು ಹೋದರು ನಂಬಿಕೆ ಬಿಟ್ಟು ಹೋಗೋಲ್ಲ. ಇಂಥ ನಂಬಿಕೆ ಇದ್ದೋರಿಗೆ ಎಲ್ಲವನ್ನೂ ಎದುರಿಸೋ ಧೈರ್ಯ ಇರುತ್ತೆ. ಹಾಗಂತ ನನ್ನ ನಾಸ್ತಿಕ ಅಂತಲೂ ಕರೀಬೇಡಿ, ಯಾಕೆ ಅಂದ್ರೆ ನನ್ನ ಲೆಕ್ಕದಲ್ಲಿ ನಂಬಿಕೆ ಇಲ್ಲದವನು ನಾಸ್ತಿಕ.


ಮತ್ತೆ ಸಿಗ್ತೀನಿ....

1 comment:

  1. Naanu Agnostic aadre, nannolge vondu muddu jeeva ide adna naanu devru anta nambtini, adu kushi yagidre nannalli yellilada chetan mathe suthallu yelaranu preeti inda chenagi nodkotini ano nambike adu nondkondre nangu novvu...

    So sada nandu devaralli vonde bedide nanna jeeva na kushiyagidappa anta :D

    Pratiyobrigu avarade ada devru mathe prarthaneya pari...

    Sari mathe sigona :)

    ReplyDelete