Saturday, February 25, 2012

ಕಣ್ಣ ಕಾಂತಿ

ಚೀನಾಗೆ ಬ೦ದು ಆಗತಾನೆ ಒಂದು ವಾರ ಆಗಿತ್ತು. ಬೆಳಿಗ್ಗೆ ಎದ್ದು ಆಫೀಸ್'ಗೆ ಹೋಗುವುದರಿಂದ ಹಿಡಿದು ಸಂಜೆ ವಾಪಸ್ ಹೋಟೆಲಿಗೆ ಬರೋವರೆಗೂ ಎಲ್ಲಿ ನೋಡಿದರು ಬರೀ ಚಿಕ್ಕ ಚಿಕ್ಕ ಚೀನೀ ಕಣ್ಣುಗಳೇ ಕಾಣುತ್ತಿದ್ದವು. ಆವತ್ತೊಂದು ದಿನ ಆಫೀಸ್'ಗೆ ಹೋಗಿ ಇನ್ನೂ ೧೦ ನಿಮಿಷ ಕೂಡ ಆಗಿರಲಿಲ್ಲ. ನನ್ನ ಕಣ್ಣ ಎದುರಿಗೆ ಆಶ್ಚರ್ಯವೊಂದು ನಡೆದಿತ್ತು. ಬೊಗಸೆ ಕಣ್ಣಿನ ಒಬ್ಬ ಸುಂದರಿ ನನ್ನ ಕಣ್ಣ ಎದುರಿಗೆ ಬ೦ದು ನಿಂತಿದ್ಳು. ಈ ಕಣ್ಣು ಒಂದು ತರಹ ವಿಚಿತ್ರ ಕಣ್ರೀ. ಮನುಷ್ಯನ ಮನಸ್ಸಿಗೂ ಕಣ್ಣಿಗೂ ಡೈರೆಕ್ಟ್ ಲಿಂಕ್ ಇಟ್ಟುಬಿಟ್ಟಿದ್ದಾನೆ   ಕಿಲಾಡಿ ದೇವರು. ಬಾಯಿಯಿಂದ ಹೇಳಲಾಗದ ಅನೇಕ ವಿಷಯಗಳು, ಭಾವನೆಗಳು ಎಷ್ಟೋ ಸಲ ಬರಿ ಕಣ್ಣಿನಿಂದ ಮಾತ್ರ ಹೇಳಬಹುದು. ಒಬ್ಬರ ಮೇಲಿನ ಪ್ರೀತಿ, ಅಸೂಯೆ, ಅನುಕಂಪ, ಅಸಡ್ಡೆ ಎಲ್ಲವನ್ನೂ ಪ್ರತಿಫಲಿಸುವ ಗುಣ ಕಣ್ಣಿಗೆ ಮಾತ್ರವೇ. ಇರಲಿ ನಾನು ನೋಡಿದ ಕಣ್ಣಿನ ವಿಷಯಕ್ಕೆ ಬರೋಣ. ಅಷ್ಟು ಜನರ ಚಿಕ್ಕ ಕಣ್ಣುಗಳ ಮಧ್ಯ ಈ ಥರ ಎದ್ದು ಕಾಣುವ ಬೊಗಸೆ ಕಣ್ಣುಗಳು ಯಾರನ್ನಾದರೂ ಸೆರೆಹಿಡಿಯುವುದು ಸಾಮಾನ್ಯ. ನನಗೆ ಗೊತ್ತಿಲ್ಲದೇ, ಆ ಕಣ್ಣುಗಳ ಜೊತೆ ಮಾತನದಲಾರ೦ಭಿಸಿದ್ದವು  ನನ್ನ ಕಣ್ಣುಗಳು. ಇಂಥ ಕಣ್ಣುಗಳನ್ನ ಯಾವಾಗ್ಲೂ ನೋಡ್ತಾನೆ ಇರ್ಬೇಕು ಅನ್ನೋ ಆಸೆ ಆಯಿತು. ನನ್ನ ಈ ಅಕ್ಷಿ ವೀಕ್ಷಣೆ ನಡೆಯುತ್ತಿದ್ದಾಗ ಪಕ್ಕದ ಕಾಬಿನಿನಿಂದ ಬಂದ ನನ್ನ ಸಹೋದ್ಯೋಗಿ ನಾನು ಎವೆ ಇಕ್ಕದೆ ನೋಡುತ್ತಿದ್ದ ಹುಡುಗಿಯನ್ನು ನೋಡಿ "she is beautiful" ಅಂದ. ಸ್ವಲ್ಪ ನಕ್ಕು "Yes. She is my wife" ಅಂದೇ. ಹೌದು ಮೊಬೈಲ್ ನಲ್ಲಿ ನನ್ನ ಹೆಂಡತಿಯ ಭಾವಚಿತ್ರ ನೋಡ್ತಾ ಇದ್ದೆ ನಾನು !!!!

1 comment: