Sunday, September 2, 2012

ಕ್ಷಮಾಪತ್ರ

         ಕೊನೆಗೂ ಈ ಪತ್ರ ಬರೆಯುವ ಸಮಯ ಈಗ ಕೂಡಿ ಬಂತು. ಇನ್ನು ಕೆಲವೇ ಕ್ಷಣಗಳಲ್ಲಿ ನನ್ನ ಅಸ್ತಿತ್ವ  ಕೆಲವರ ನೆನಪಾಗಿ ಉಳಿಯಲು ಹೊರಟಿದೆ. ನಾ ಕಂಡ ಅನೇಕ ಕನಸುಗಳ, ಆಸೆ ಆಕಾಂಕ್ಷೆಗಳ ಮಹಾಪೂರದಲ್ಲಿ ನನಸಾಗದೇ ಉಳಿದದ್ದು ನನ್ನ ಪ್ರೀತಿ (ನೀನು).
ಜೀವನದುದ್ದಕ್ಕೂ ನಾನು ನಿನ್ನನ್ನು ಪ್ರೀತಿಸುತ್ತೇನೆ ಎನ್ನುವುದನ್ನು ಸಾರಿ ಸಾರಿ ಹೇಳುವ ವ್ಯರ್ಥ ಪ್ರಯತ್ನ ಮಾಡಿದೆ. ಎದೆಯಾಳದ ಭಾವನೆಗಳನ್ನು, ಎದೆ ಹರಿದು ತೋರಿಸುವ ಶಕ್ತಿ ನನಗಿಲ್ಲದಿದ್ದರೂ, ನಿನ್ನ ಮೇಲಿನ ಪ್ರೀತಿಯನ್ನು ಒತ್ತಿ ಒತ್ತಿ ಹೇಳುವ ಪ್ರಯತ್ನ ಮಾಡಿದೆ.
ನೀನು ನನ್ನ ಪ್ರೀತಿಯನ್ನು ಯಾವ ಕಾರಣಕ್ಕೆ ತಿರಸ್ಕರಿಸಿದೆ ಎನ್ನುವುದು ಇನ್ನು ನನಗೆ ಪ್ರಶ್ನೆಯಾಗಿಯೇ ಉಳಿದಿದೆ. ಪ್ರಾಯಶಹ ಪ್ರಶ್ನೆಯಾಗಿಯೇ ಉಳಿಯುತ್ತದೆ ಮೊನಚಾದ ನಿನ್ನ ತಿರಸ್ಕಾರದ ಮಾತುಗಳು, ಅತೀ ನೋವು ಕೊಟ್ಟ ನಿನ್ನ ನಡುವಳಿಕೆಗಳು ನನ್ನ ಮನಸ್ಸನ್ನು ನೋಯಿಸಿದ್ರು, ನೋಯಿಸಿದವಳು ನನ್ನವಳೇ ತಾನೇ ಎನ್ನುವ ತೃಪ್ತ ಭಾವದಲ್ಲಿ ಅದನ್ಯಾವುದನ್ನು ನಾನು ಎಣಿಸಿಲ್ಲ.

          ನೀನು ನನ್ನನ್ನು ದೂರ ಮಾಡಿದ ಕ್ಷಣ ಮನಸಿಗೆ ಸಂಕಟವಾಯಿತು, ಮನ ನೊಂದಿತು. ಮತ್ತೊಮ್ಮೆ ನಿನ್ನನ್ನು ಕಂಡು ನನ್ನ ಪ್ರೇಮದಾಳದ ಬಗ್ಗೆ ನಿನಗೆ ಅರಿವು ಮೂಡಿಸುವ ಆಸೆಯಾಯಿತು. ಆದರೆ ಕೊನೆಗೊಂದು ನಿಮಿಷ ನನಗನ್ನಿಸಿದ್ದು, ಪ್ರೀತಿಯನ್ನು ವಿವರಿಸುವ ಪ್ರಸಂಗ ಬಂದರೆ ಅದೇ ಪ್ರೀತಿಗೆ ಸಿಗುವ ಅಕಾಲಿಕ ಸಾವು. ಅಂತಹ ಸಾವನ್ನು ನನ್ನ ಪ್ರೀತಿಗೆ ಕೊಡಲು ನನ್ನ ಮನ ಒಪ್ಪಲಿಲ್ಲ. 

           ನನ್ನ ಪ್ರಾಣ ಹಾರಿಹೋಗುವ ಈ ಕೊನೆಕ್ಷಣದಲ್ಲಿ ನಿನ್ನಲ್ಲಿ ಕ್ಷಮಾಪಣೆ ಕೇಳಬೇಕೆನಿಸುತ್ತಿದೆ. ನಾನು ನಿನ್ನನ್ನು ಅತಿಯಾಗಿ ಪ್ರೀತಿಸಿದ ಸಂದರ್ಭದಲ್ಲಿ ನಿನಗಾದ ಮುಜುಗರ ಮತ್ತು ಕಿರಿಕಿರಿ ಹಾಗೂ ನಿನಗೆ ಹೇಳದೆ ನಾನು ನಮ್ಮ ನಡುವೆ ನಡೆದ ಅನೇಕ ಸಿಹಿ ಘಟನೆಗಳನ್ನು ಕದ್ದೊಯ್ಯುತ್ತಿದ್ದೇನೆ. ಮರೆಯಲಾಗದ ಆ ಸುಂದರ ನೆನಪುಗಳ ಬುತ್ತಿ ಕಟ್ಟಿಕೊಂಡು ನನ್ನ ಸಾವಿನ ದಾರಿಯನ್ನು ಎದುರು ನೋಡುತ್ತಿದ್ದೇನೆ. ನಾನು ನಿನ್ನನ್ನು ಪ್ರೀತಿಸಿದ್ದು ಬಾಲಿಶತನವೋ ಅಥವಾ ನೀನು ನನ್ನನ್ನು ತಿರಸ್ಕರಿಸಿದ್ದು ನನ್ನ ಹಣೆಬರಹವೋ? ಗೊತ್ತಿಲ್ಲ !!! 

ಅದೇನೇ ಇರಲಿ, ಕ್ಷಮಿಸು ನನ್ನನ್ನು. . . . . . 

                                                                                                                                         ಇಂತಿ ನಿನ್ನ