Sunday, March 3, 2013

ಹುಡುಕಾಟ

ನಾನು ಈಗ ಬರೀತಾ ಇರೋ ವಿಷಯ ಬಹಳ ಜನರ ಜೀವನದಲ್ಲಿ ನಡೆದಿರುತ್ತೆ. ಬೆಂಗಳೂರಿಗೆ ಬಂದು ಕೆಲಸ ಹುಡುಕೋ ಕ್ರಿಯೆಯಲ್ಲಿ ತೊಡಗಿದ್ದ ದಿನಗಳವು. ಬೆಳಿಗ್ಗೆ ೭ ಗಂಟೆಗೆ ಸರಿಯಾಗಿ, ಒಳ್ಳೆ ಬಟ್ಟೆ ಧರಿಸಿ, ಕೈಲೊಂದು ಫೈಲ್ ಹಿಡಿದು, ಬಸ್ ಪಾಸ್ ಒಂದನ್ನು ತೆಗೆದುಕೊಂಡು, ಮನಸಲ್ಲಿ ಸ್ವಲ್ಪ ಉತ್ಸಾಹ ಹಾಗು ತಳಮಳ ಹೊತ್ತು, ಕಂಪನಿಯಿಂದ ಕಂಪನಿಗೆ ತಿರುಗಾಡುತ್ತಿದ್ದೆ. ನನ್ನ ಜೊತೆ ಇದ್ದದ್ದು ನನ್ನ ಇನ್ನೊಬ್ಬ ಮಿತ್ರ ರವಿ. ನಮ್ಮಿಬ್ಬರಿಗೂ ಕಂಪನಿಗಳಿಂದ ಕೇಳಿಬರುತ್ತಿದ್ದ ಮಾತು ಒಂದಿತ್ತು. ಅದು "ನೋ". ಮಾರ್ಕ್ಸ್ ಕಾರ್ಡಿನ ತುಂಬಾ ಮಾರ್ಕ್ಸ್ ಇತ್ತೇ ವಿನಃ ಹಣೆಯಲ್ಲಿ ಅದೃಷ್ಥ ರೇಖೆ ಇರಲಿಲ್ಲ. ದುಡೀತಿನಿ ಅನ್ನೋರಿಗೆ ಒಂದು ಕೆಲಸ ಕೊಡೋಕೆ ಆಗೋಲ್ವ? ಅನ್ನೋ ಅನೇಕ ವಿಷಾದನೀಯ ಪ್ರಶ್ನೆಗಳು ಮನಸ್ಸಿನಲ್ಲಿದ್ದವು. ಜೀವನ ಅನ್ನೋದು ಅಂದುಕೊಂಡರೆ ಸಿರಿಯಸ್ ಇಲ್ಲ ಅಂದ್ರೆ ಜಾಲಿ. ಅಂತಹ ಜಾಲಿಯಾದ ಒಂದು ಸನ್ನಿವೇಶ ಅಂತಹ ಕಷ್ಟದ ದಿನದಲ್ಲಿ ನಡೆದಿತ್ತು. 


ಕೆಲಸ ಹುಡುಕಿ ನಾನು ಹೋಗುತ್ತಿದ್ದ ಜಾಗಗಳೆಲ್ಲ ಅಲ್ಟ್ರ ಮಾಡರ್ನ್.  ಬಹು ಮಹಡಿಯ ಕಟ್ಟಡಗಳು, ವಿವಿಧ ಅಲಂಕಾರಿಕ ಉದ್ಯನವನಗಳು. ಗಾಜಿನಿಂದ ಮಾಡಿದ ಕಲಾಕೃತಿಗಳು. ಅದೊಂದು ವಿಸ್ಮಯ ಲೋಕ ಬಿಡಿ. ಇಂತಹ ವಿಸ್ಮಯ ಲೋಕದಲ್ಲೂ ಒಂದು ಕೊರತೆಯಿತ್ತು ಅಂದ್ರೆ ನಂಬ್ತೀರಾ? ಹೌದು ಇತ್ತು. ಅದು ಸುಲಭ ಶೌಚಲಯ. ಸಾರ್ವಜನಿಕರಿಗೆ ನೆರವಾಗಬಲ್ಲ ಒಂದೇ ಒಂದು ಪಬ್ಲಿಕ್ ಟಾಯ್ಲೆಟ್ ಅಲ್ಲಿರಲಿಲ್ಲ ಅನ್ನೋದೇ ಅಶ್ಚರ್ಯ. ಅಲ್ಲೇ ಏನು, ಬೆಂಗಳೂರಿನ ಎಷ್ಟೊ ಪ್ರದೇಶಗಳಲ್ಲಿ ಅದರ ಕೊರತೆ ಇದೆ. ಇನ್ನೂ ಕೆಲವೆಡೆ ಇದ್ರೂ ಅವಕ್ಕೆ ಬೇಗ ಜಡಿದು ಉಪಯೋಗಕ್ಕೆ ಬಾರದ ಹಾಗೆ ಇಟ್ಟಿರ್ತಾರೆ. ನನ್ನ ಕರ್ಮಕ್ಕೋ ಏನೋ ಆವತ್ತು ನನ್ನ ವೈರಿಯ ರೂಪದಲ್ಲಿ ನನಗೆ ನಿಸರ್ಗದ ಕರೆ ಬಂದಿತ್ತು (ಮಕ್ಕಳ ಭಾಷೇಲಿ ಸೂಸು). ಎಲ್ಲಿ ನೋಡಿದರೂ ಜನಜಂಗುಳಿ. ಸುಮಾರು ೧ ಕಿ. ಮೀ ನಡೆದರೂ ಒಂದೇ ಒಂದು ಶೌಚಾಲಯ ಸಿಗಲಿಲ್ಲ. ನನ್ನ ಮಿತ್ರನದೂ ಅದೇ ಕಥೆ. ಓಯಾಸಿಸ್ ನಲ್ಲಿ ನೀರು ಹುಡುಕೋದು ಎಷ್ಟು ಕಷ್ಟವೋ ಅಷ್ಟೇ ಕಷ್ಟ ನಮ್ಮದಾಗಿತ್ತು. ಕೊನೆಗೂ ಒಂದು ಯೋಚನೆ ತಲೆಗೆ ಹೊಳೀತು. ಕಣ್ಣ ಮುಂದೆ ಲೀಲಾ ಪ್ಯಾಲೇಸ್ ಕಂಡಿತ್ತು. ಅದ್ಯಾವಾಗಲೋ ಒಮ್ಮೆ ಒಳಗೆ ಹೋಗಿದ್ದ ನೆನಪಿತ್ತು. ಕ್ಲಬ್ ಮಹಿಂದ್ರ ಮಳಿಗೆಗೆ ೨ ವರ್ಷದ ಹಿಂದೆ ನಾನು ನನ್ನ ಅಣ್ಣನ ಜೊತೆ ಅಲ್ಲಿ ಹೋಗಿದ್ದೆ. ಇವತ್ತು ಒಳಗೆ ಹೋಗೋಕೆ ಯಾವ ಕಾರಣವು ಇರಲಿಲ್ಲ. ಆದ್ರೆ ಸಮಸ್ಯೆ ಮಾತ್ರ ಇತ್ತು. ನನ್ನ ಮಿತ್ರ ಬೇರೆ ನನ್ನನ್ನ ಹೆದರಿಸುತ್ತಿದ್ದ. "ಲೇ ಸಿಕ್ಕು ಬಿದ್ರೆ ಒದೆ ಗ್ಯಾರಂಟಿ". 'ಒಂದೆರಡು ಒದೆ ತಿಂದರು ಚಿಂತೆಯಿಲ್ಲ ಒಳಗೆ ಹೋಗಿ ಕಾರ್ಯಕ್ರಮ ಕೊಡಲೇಬೇಕು'  ಅನ್ನೋದು ನನ್ನ ವಾದವಾಗಿತ್ತು. ಕೊನೆಗೂ ಬೇಟೆಗಾರರ ಹಾಗೆ ಒಳಗೆ ನುಗ್ಗಿದ್ವಿ. ರಿಸೆಪ್ಶನ್ ಹತ್ರ ಹೊಗಿ, "ಕ್ಲಬ್ ಮಹಿಂದ್ರ ಆಫೀಸ್ ಎಲ್ಲಿದೆ?" ಅಂದೆ. ಬಳುಕುತ್ತ ಕೌಂಟರಿನಲ್ಲಿ ನಿಂತಿದ್ದ ಆ ಹುಡುಗಿ "ಸೆಕೆಂಡ್ ಫ್ಲೋರ್ ರೈಟ್ ಸೈಡ್ ನಲ್ಲಿ ಇದೆ. ಅಷ್ಟು ಕೇಳಿದ್ದೆ ತಡ, ನಾಗಾಲೋಟದಿಂದ ೨ನೇ ಮಹಡಿ ಹತ್ತಿ, ಅಲ್ಲೇ ಇದ್ದ ಐಶಾರಾಮಿ ಶೌಚಾಲಯದಲ್ಲಿ ದೀರ್ಘ ಉಸಿರು ಬಿಟ್ಟೆ. ಎಲ್ಲ ಮುಗಿಸಿ ಆಚೆ ಬರೋವಾಗ ನನ್ನ ಫ್ರೆಂಡ್ ಮತ್ತು ನಾನು ಸೇರಿ, ನಾನು ಮಾಡಿದ ಪರಾಕ್ರಮ ನೆನೆಸಿಕೊಂಡು ನಕ್ಕು ಮುಂದೆ ಸಾಗಿದ್ವಿ.


ಇದಾದ ನಂತರ ಬೆಂಗಳೂರಿನಲ್ಲಿ ಸುಲಭ ಶೌಚಾಲಯ ಇಲ್ಲದಿದ್ರು, ವಿಪರೀತ ಪರಿಸ್ಥಿಯಲ್ಲಿ ಹೇಗೆ ನಿಭಾಯಿಸಬೇಕು ಅನ್ನೋದು ಅರಿವಾಗಿತ್ತು. ಈಗ್ಲೂ ಅಷ್ಟೇ, ವಿಧಿ ಏನಾದ್ರೂ ಈ ಥರ ಪರೀಕ್ಷೆ ಇಟ್ರೆ, ಟಾಯ್ಲೆಟ್ ಬದಲು ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ಹುಡುಕೋದು ಕಷ್ಟಾನಾ?


ಹಾಗಂತ ಬರೀ ಪುಕಸಟ್ಟೆ ಪುರಾಣ ಕೇಳೋದು ಅನ್ತಲ್ಲ. ಕೆಲವೊಮ್ಮೆ ೧ ರೂಪಾಯಿಗೆ ಆಗಬೇಕಿರೋ ಕೆಲಸಕ್ಕೆ ೨೦-೩೦ ರೂಪಾಯಿ ಕೊಟ್ಟಿದ್ದೂ ಇದೆ. ಅದರಲ್ಲಿ ಕಾಫಿ ಡೇ ಸಮೋಸ ೨೦ ರೋಪಯಿ. ಅಡೆಯಾರ್ ಭವನ್ ದ ಭೇಲ್ - ೪೦ ರೋಪಯಿ. ಕೊನೆಗೆ ಶಾಂತಿಸಾಗರದ ಚಹಾ ೧ ರೂಪಾಯಿ. ದೇವರಾಣೆ ಇವೆಲ್ಲ ತಿನ್ನಬೇಕು ಅಂತ ಹೋಗಿ ತಿಂದಿದ್ದಲ್ಲ ರೀ..