Monday, January 30, 2012

ಡೇ ಕೇರ್... ವ್ಹೂ ಕೇರ್ಸ್?

ಮೊನ್ನೆ ದಿನಪತ್ರಿಕೆಯೊಂದನ್ನು ಓದುತ್ತಿದ್ದಾಗ, ಒಳಪುಟದಿಂದ ಜಾರಿದ ಜಾಹಿರಾತು ಚೀಟಿಯ ಮೇಲೆ ನನ್ನ ಕಣ್ಣು ಬಿತ್ತು. ಬರೆದದ್ದು ಇಷ್ಟೇ "5 ತಿಂಗಳಿಂದ 5 ವರ್ಷದ ಒಳಗಿನ ಎಲ್ಲ ಮಕ್ಕಳನ್ನು ನಾವು ನೋಡಿಕೊಳ್ಳುತ್ತೇವೆ. ಇಂದೇ ನಮ್ಮ ಡೇ ಕೇರ್ ಗೆ ಸಂಪರ್ಕಿಸಿ". ಜಗತ್ತಿಗೆ ಹೊಸ ವಿಷಯಗಳು, ತಾಂತ್ರಿಕತೆಯ ಆವಿಷ್ಕಾರ, ಮನುಷ್ಯನ ಬುದ್ಧಿಮತ್ತೆಯ ಅಭೂತಪೂರ್ವ ವಿಕಾಸ ಈ ಎಲ್ಲದರ ನಡುವೆ, ಚಿಕ್ಕ ಚಿಕ್ಕ ಸಂತೋಷಗಳನ್ನು ಅನುಭವಿಸುವ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಅಂತಹದೇ ಚಿಕ್ಕ ಚಿಕ್ಕ ಸಂತೋಷಗಳ ಮೂಟೆ ಹೊತ್ತು ಬರುವ ಅಪರೂಪದ ಉಡುಗೊರೆ ಮಗು. ಯಾವುದೋ ಸಂಬಂಧ ಇಲ್ಲದ ಒಂದು ಮಗುವನ್ನು ನೋಡಿದರೆ ಅದನ್ನ ಎತ್ತಿ ಮುದ್ದಾಡುವ, ಮಾತನಾಡಿಸುವ ಮನಸ್ಸಾಗುವ ನನಗೆ, ಮೇಲೆ ಹೇಳಿದ ಜಾಹಿರಾತು ಕೆಲ ನಿಮಿಷ ಯೋಚಿಸುವಂತೆ ಮಾಡಿತು. 

"ಮನೆಯೇ ಮೊದಲ ಪಾಠಶಾಲೆ ಹಾಗು ಅಮ್ಮನೇ ಮೊದಲ ಗುರು" ಹೀಗೆ ಎಲ್ಲೋ ಕೇಳಿದ ನೆನಪು. ಆದರೆ ಇವತ್ತಿನ ಮಟ್ಟಿಗೆ ಡೇ ಕೇರ್ ಮೊದಲ ಪಾಠಶಾಲೆ, ಮತ್ತು ಆಯಾಗಳು ಮೊದಲ ಗುರುವಾಗಿ ಹೋಗಿದ್ದಾರೆ. ಈ ಸಂಸ್ಕೃತಿ ಹೊಸದೇನಲ್ಲ, ಅನಾದಿಕಾಲದಿಂದಲೂ ಮಕ್ಕಳನ್ನು ಸೇವಕರು ನೋಡಿಕೊಳ್ಳುವ ರೂಢಿಯಿದೆ. ನನ್ನ ಪ್ರಶ್ನೆ ಯಾರು ಮಗುವನ್ನು ನೋಡಿಕೊಳ್ಳುತ್ತಾರೆ ಅನ್ನೋದಲ್ಲ. ಮಗುವಿನಿಂದ ಸಿಗುವ ಸಣ್ಣ ಪುಟ್ಟ ಸಂತೋಷಗಳನ್ನ ಅನುಭವಿಸುವಿದಕ್ಕಿಂತ ದೊಡ್ಡದು ಏನಾದ್ರೂ ಇದೆಯಾ? ಇವತ್ತು ಅಪ್ಪ ಅಮ್ಮನ ಹೆಸರು ಹೇಳೋ ಮೊದಲು dora ಮತ್ತು Donald Duck ಹೆಸರು ಹೇಳೋದನ್ನ ಕಲೀತಾರೆ.

ಮಕ್ಕಳಿಗಾಗಿ ಕಷ್ಟಪಟ್ಟು ದುಡಿದು ದುಡ್ಡಿನ ಗುಡ್ಡೆ ಹಾಕಿ, ನಾವು ಅನುಭವಿಸುವುದು ತುಂಬಾ ಕಮ್ಮಿ. ಜೊತೆಗೆ ಡೇ ಕೇರ್ ನವರು ಮಾಡೋದು ಕಮ್ಮಿ ದುಡ್ಡಿಗೆನಲ್ಲ, ಅವರು ಕೇಳೋದು ಸಾವಿರಗಟ್ಟಲೆ. ಹಲ ಸಾವಿರಗಳನ್ನ ಘಳಿಸಿ, ಅದರಲ್ಲಿ ಕೆಲ ಸಾವಿರಗಳನ್ನ ಸುರಿದು ಮಕ್ಕಳನ್ನ ಮನೆಯಿಂದ ದೂರ ಇಡುತ್ತಾರೆ. ಕಲವರಿಗೆ ಇದು ಅನಿವಾರ್ಯತೆಯಾದರೆ, ಇನ್ನು ಕೆಲವರಿಗೆ ಆಲಸ್ಯ. ಆದರೆ ಅದೇ ಮಕ್ಕಳ ಜೊತೆಗೆ ಕಾಲ ಕಳೆದು ಅವರ ತುಂಟಾಟಗಳು, ಕುಚೇಷ್ಟೆಗಳು ತರುವ, ಮನಸ್ಸನ್ನು ಉಲ್ಲಸಗೊಳಿಸುವ ಅನೇಕ ಸಿಹಿ ಸಂದರ್ಭಗಳನ್ನ ಅನುಭವಿಸಿದಾಗ, ಈ ಸಾವಿರಗಳು ಶೂನ್ಯವಾಗಿ ಕಾಣಬಹುದು. ಇದನ್ನು ಕಳೆದುಕೊಳ್ಳುತ್ತಿದ್ದೆವೆಯೇ? ಗೊತ್ತಿಲ್ಲ. ಉತ್ತರ ಹೇಳೋಕೆ ನಾನೂ ಅನುಭವಸ್ಥನಲ್ಲ!!! ಇವತ್ತು ಈ ಸಂಗತಿಗಳನ್ನು ಬರೆಯುತ್ತಿರುವ ನಾನೂ ನಾಳೆ ಇದೆ ಹಾದಿಯಲ್ಲಿ ನಡೆಯಬಹುದೇನೋ. ಹಾಗೆ ಆಗದೆ ಇರಲಿ ಅನ್ನೋದೇ ನನ್ನ ಬಯಕೆ.

ನಿಮ್ಮ ಅಭಿಪ್ರಾಯ ? 

Sunday, January 22, 2012

ಕಾಫಿ ಡೇ

ನನಗೆ ಇತ್ತೀಚಿಗೆ ಪರಿಚಯವಾದ ನನ್ನ friend ಒಬ್ಳು, ನನಗೆ ಹೇಳಿದ್ದು "ನಾನು ಯಾವತ್ತೂ ಕಾಫಿ ಡೇ ಗೆ ಹೋಗಿಲ್ಲ, ನಿನ್ನ ಜೊತೆ ಹೋಗಬೇಕು ಅಂತ ಆಸೆ, ಕರೆದುಕೊಂಡು ಹೋಗ್ತಿಯ?". ಹಾಗೆ ನೋಡಿದ್ರೆ ಕಾಫಿ ಡೇ ನನಗು ತವರುಮನೆ ಏನಲ್ಲ, ನಾನು ಕೂಡ ಅಲ್ಲಿ ಹೋಗಿದ್ದು 2-3 ಸಲ ಮಾತ್ರ.(ಅದೂ ಹುಡುಗರೊಂದಿಗೆ). ಸರಿ ಹೋಗೋಣ ನಡೆ ಅಂದೇ ಬಿಟ್ಟೆ. ಸಂಜೆ 7ರ ಸಮಯ. ತಂಪಾದ ಗಾಳಿ, ಮೋಡ ಮುಸುಕಿದ ವಾತಾವರಣ. ನನ್ನ friend ಗೆ ಫೋನ್ ಮಾಡಿದೆ. "ನಾನು ಹತ್ತು ನಿಮಿಷದಲ್ಲಿ ನಿನ್ನ ಪಿಕ್ ಮಾಡ್ತೀನಿ, ರೆಡಿ ಇರು". ಅವಳ ಉತ್ತರ "ಸರಿ".
ಹೇಳಿದ ಹಾಗೆ, ಅವರ ಮನೆಯ ಮೂಲೆ ಅಂಗಡಿ ಹತ್ರ ಕಾದು ನಿಂತೆ, ಅವಳು ನಡೆದುಕೊಂದು ಬರುತ್ತಿದ್ದನ್ನು ಕಂಡು ಮನಸ್ಸಿಗೆ ಸಕತ್ ಖುಷಿ. ನನ್ನ ಕಂಡೊಡನೆ ಓಡೋಡಿ ಬಂದು ನನ್ನ ಗಾಡಿ ಹತ್ತಿದಳು. "ಎಲ್ಲಿಗೆ ಹೋಗೋಣ?" ಅಂದೆ. "ಕಾಫಿ ಡೇ". ಆಮೇಲೆ ೧೫ ನಿಮಿಷ ಬೈಕ್ ಮೇಲೆ ಪ್ರಯಾಣ. ಮನಸ್ಸಿನಲ್ಲಿ ಬೈದುಕೊಂಡೆ, ಈ ದರಿದ್ರ ಕಾಫಿ ಡೇ ಯಾಕಿಷ್ಟು ಸಮೀಪದಲ್ಲಿದೆ ಅಂತ. ಇಳಿದು ಕಾಫಿ ಡೇ ಒಳಹೊಕ್ಕೆವು. ಆಮೇಲೆ ನಡೆದದ್ದು ಬರೀ ಮಾತೆ ಮಾತು. ಸುಮಾರು ೨ ಗಂಟೆ ಮಾತಾಡಿದೆವು. ಕೊನೆಗೆ ನನ್ನ ಹತ್ರ ಇದ್ದ ಒಂದು ಕವರಿನಿಂದ ಒಂದು ಕಾರ್ಡ್ ಹೊರತೆಗೆದೆ. ಅವಳ ಮುಖದಲ್ಲಿ ಸ್ವಲ್ಪ ಪ್ರಶ್ನೆಗಳಿದ್ದವು. ಪೆನ್ ತೆಗೆದುಕೊಂಡು ಅದರಲ್ಲಿ ಏನನ್ನೋ ಬರೆದೆ. ಅವಳ ಕೈಗೆ ಕಾರ್ಡು ಕೊಟ್ಟು "wish you happy birthday " ಅಂತ ಹೇಳಿದೆ. ನಕ್ಕು ಆ ಕಾರ್ಡನ್ನು ಅವಳು ಸ್ವೀಕರಿಸಿದಳು. ಮತ್ತೆ ಸ್ವಲ್ಪ ಮಾತಾಡಿ, ಮತ್ತೆ 15 ನಿಮಿಷಗಳ bike ride ಗೆ ಮುಂದಾದೆ. ಆಗ ಅವಳು ಹೇಳಿದ್ದು. "ನೇರ ರಸ್ತೆಯಲ್ಲಿ ಕರೆದುಕೊಂಡು ಹೋದ್ರೆ ಮನೆ ಬೇಗ ಬಂದು ಬಿಡುತ್ತೆ. ಸ್ವಲ್ಪ ದೂರದ ರಸ್ತೆಯ ಮೂಲಕ ಹೋಗೋಣ ?". "ಸರಿ" ಅಂದೆ.
ಹೋಗಬೇಕಾದ್ರೆ ೧೫ ನಿಮಿಷ ಆಗಿದ್ದ ಪ್ರಯಾಣ ಮರಳಿ ಬರುವಾಗ ೩೦ ನಿಮಿಷ ಆಗಿತ್ತು.
ಮಾರ್ಗ ಮಧ್ಯ ಅವಳು ನನ್ನನ್ನ ಕೇಳಿದಳು "ನಾನಂದ್ರೆ ಯಾಕೆ ಇಷ್ಟು ಇಷ್ಟ ನಿಮಗೆ?". ಅವಳಿಗೆ ನಾನು ಪ್ರೀತಿಯಿಂದ ಕೊಟ್ಟ ಉತ್ತರ "ನೀನು ಮಗು ಇದ್ದ ಹಾಗೆ ಇದ್ದೀಯ. ಆ ಮುಗ್ಧತೆ ನನಗೆ ಇಷ್ಟ ಅದಕ್ಕೇ". 
ಅವಳ ಮನೆಗೆ ಸಮೀಪವಿರುವ ಮೂಲೆಯಲ್ಲಿ ಗಾಡಿ ನಿಲ್ಲಿಸಿ "ಹೊರಡು" ಅಂದೆ. ಅವಳು ಮನೆಯೊಳಗೆ ಹೋಗೋವರೆಗೂ ಅಲ್ಲೇ ನೋಡ್ತಾ ನಿಂತಿದ್ದೆ. ತಿರುಗಿ ನೋಡಿ ಒಂದು ಚಿಕ್ಕ ನಗು ಬೀರಿದಳು. ಹಾಗೆ TA TA ಮಾಡಿದಳು. ಅವಳ ಮುಖದಲ್ಲಿ ಕಂಡ ನಗು, ನನ್ನ ಮನಸ್ಸನ್ನು ಖುಷಿಗೊಳಿಸಿತು. ಅಲ್ಲೇ ನಿಂತು ಫೋನ್ ಮಾಡಿದೆ "Thanks for the wonderful evening. Take care" ಇವು ನನ್ನ ಕೊನೆಯ ಮಾತುಗಳು. ಅಲ್ಲಿಂದ ಹೊರಟೆ.
ಆ ಕಾರ್ಡಿನಲ್ಲಿ ಏನು ಬರೆದೆ ಅನ್ನೋದು ನಿಮ್ಮ ಪ್ರಶ್ನೆ ಅಂತ ನನಗೆ ಗೊತ್ತು. ಬರೆದದ್ದು ಇಷ್ಟೇ. "Wish you many many happy returns of the day. Always keep smiling." - Your loving husband. :)

ಮತ್ತೆ ಸಿಗ್ತೀನಿ........
 

ಅಕ್ಷತೆ ಮತ್ತು ಅನ್ನ

ಇದೊಂದು black and white ಕಾಲದ ಕಥೆ. ಇವತ್ತು ಕಥೆಯಾಗಿರುವ ಈ ವಸ್ತು, ನನ್ನ ತಾಯಿ 27 ವರ್ಷಗಳ ಹಿಂದೆ ಅನುಭವಿಸಿದ ವ್ಯಥೆ. ನಮ್ಮ ತಂದೆ ಪ್ರಾಥಮಿಕ ಶಾಲೆ ಶಿಕ್ಷಕ, ಶ್ರವಣಕುಮಾರನ ನಂತರ ಯಾರಾದ್ರೂ ಇದ್ರೆ ಅದು ಇವರೇ. ಹೇಗಂತೀರಾ? ತಂದೆತಾಯಿಗಳು ಎಷ್ಟೇ ಬೈದರು, ಶಪಿಸಿದರು ಅವರಿಗೆ ನೋವಾಗುತ್ತಿರಲಿಲ್ಲ. ಸಂಬಳ ಬಂದ ಮೇಲೆ ಮೊದಲು ಮಾಡುತ್ತಿದ್ದ ಕೆಲಸ ತಂದೆ ತಾಯಿಯರ ಕೈಗೆ ಅದನ್ನ ಕೊಡುವುದು. ಇವರ ಜೇಬಂತು ಯಾವಾಗ್ಲೂ ಖಾಲಿ. ದಾಡಿ (shave) ಮಾಡಿಸಿಕೊಲ್ಲೋಕು ನಾಲ್ಕಾಣಿಗೆ ಕೈಚಾಚುವ ಪ್ರಸಂಗಗಳು ಅನೇಕ. ಇಂಥ ಪರಿಸ್ಥಿತಿಯಲ್ಲಿ ಅಪ್ಪನಿಗೆ ವರ್ಗಾವಣೆ ಆಗಿದ್ದು ಒಂದು ಕುಗ್ರಾಮಕ್ಕೆ. ಅಲ್ಲಿಗೆ ಹೋದಮೇಲು ಇವರ ಧಾಟಿ ಬದಲಾಗಲಿಲ್ಲ. ದುಡಿದ ಎಲ್ಲ ಸಂಬಳವನ್ನು ಊರಿಗೆ ಒಯ್ದು ಇವರು ಕೊಡಬೇಕು. ಹಿಂತಿರುಗಿ ಬರುವಾಗ ನಮ್ಮ ಅಜ್ಜಿ ತಿಂಗಳಿಗೆ ಬೇಕಾಗುವ ಅಕ್ಕಿ-ಬೇಳೆ ಕಟ್ಟಿ ಕಳಿಸುತ್ತಿದ್ದರು. ಅವರು ಕಳಿಸುತ್ತಿದ್ದ ದಿನಸಿ 3 ವಾರಕ್ಕೆ ಮುಗಿಯುವಷ್ಟಿರುತ್ತಿತ್ತು. ತಿಂಗಳ ಕೊನೆಗೆ ಅಮ್ಮ ಅಪ್ಪನಿಗೆ ಹೊಟ್ಟೆಗೆ ನೀರು ಮಾತ್ರ ಗತಿ. ಆದ್ರೆ ೫ ವರ್ಷದ ನಮ್ಮಣ್ಣ, ೩ ವರ್ಷದ ನಮ್ಮಕ್ಕ ಹಾಗು ಒಂದು ವರ್ಷದ ನನಗೆ, ಊಟದ ಕೊರತೆಯಾಗಬಾರದು ಅನ್ನೋದು ನನ್ನ ತಂದೆ ತಾಯಿಯರ ಮಿಡಿತ. ಆದರೆ ಆ ಪರಿಸ್ಥಿತಿಯಲ್ಲಿ ನಮ್ಮ ತಂದೆ ತಾಯಿ ಒಬ್ಬರಿಗೊಬ್ಬರು ಸಾಂತ್ವನ ಹೇಳುವ ಸ್ಥಿತಿಯಲ್ಲಿಯೂ ಇರಲಿಲ್ಲ. ಕೇವಲ ಅವರ ಕಣ್ಣೀರು ಅವರಿಗೆ ಸಮಾಧಾನ ಮಾಡುತ್ತ ಇದ್ದವು.

ನಮ್ಮ ತಾಯಿ, ರಾಘವೇಂದ್ರ ಸ್ವಾಮಿಯ ಭಕ್ತರು. ಅವರಿಗೆ ಏನಾದ್ರು ನೋವಾದರೆ ಇವತ್ತಿಗೂ ಕೂಡ ರಾಘವೇಂದ್ರ ಸ್ವಾಮಿಯನ್ನ ನೆನೆಯುತ್ತಾರೆ. ಅದಿರಲಿ, ೪ ನೇ ವಾರದ ಊಟಕ್ಕೆ ಕೊರತೆ ಬಾರದಿರಲು ನಮ್ಮ ತಾಯಿ ಒಂದು ಉಪಾಯ ಮಾಡಿದರು. ಪರಮಪೂಜ್ಯ ಗುರುರಾಯರ ಮುಂದೆ ನಿಂತು, "ನಿಮಗೆ ಹಾಕುವ ಅಕ್ಷತೆ, ನನ್ನ ಮಕ್ಕಳಿಗೆ ೨ ದಿನದ ಊಟವಾಗಬಹುದು. ಅದಕ್ಕೆ ಇನ್ನು ಮೇಲಿಂದ ನಿಮಗೆ ಹಾಕುವ ಅಕ್ಷತೆಯನ್ನು ಈ ಬಟ್ಟಲಿಗೆ ಹಾಕುತ್ತೇನೆ". ಹಾಗೆ ಹೇಳಿ ರಾಯರ ಮುಂದೆ ಒಂದು ಬಟ್ಟಲು ಇಟ್ಟರು. ಅಮ್ಮ ಅಂದುಕೊಂಡ ಹಾಗೆ ೨-೩ ದಿನಕ್ಕೆ ನಮಗೆಲ್ಲ ಅನ್ನ-ಗಂಜಿ ದೊರಕಲಾರಂಭಿಸಿತು.

ಆವತ್ತು ಅಕ್ಷತೆ ನಮ್ಮ ಪಾಲಿಗೆ ಅನ್ನವಾಗಿ ಪರಿವರ್ತನೆಗೊಂಡಿತ್ತು. ಇವತ್ತು ಕೂಡ ದೇವರಿಗೆ ಅಕ್ಷತೆ ಹಾಕುವಾಗ ನನಗೆ ಈ ಸಂದರ್ಭ ನೆನಪಾಗುತ್ತೆ. ಯಾವುದೇ ದೇವಸ್ಥಾನಕ್ಕೆ ಹೋಗಲಿ, ಆರತಿ ತಟ್ಟೆಯಲ್ಲಿ ದುಡ್ಡು ಹಾಕ್ತೇನೋ, ಇಲ್ವೋ ಆದ್ರೆ ಅನ್ನದಾನಕ್ಕೆ ಮಾತ್ರ ನನ್ನ ಅಳಿಲು ಸೇವೆ ಒಪ್ಪಿಸುತ್ತೇನೆ.

ಕಥೆ ಬರೀತಾ ಬರೀತಾ ಕಣ್ಣಲ್ಲಿ ನೀರು ಬಂದಿದ್ದೆ ಗೊತ್ತಾಗಿಲ್ಲ. ಅಕ್ಷತೆಯನ್ನ ಅನ್ನ ಮಾಡಿದ ನಮ್ಮ ಅಮ್ಮನಿಗೆ ಒಂದು ಧನ್ಯವಾದಗಳನ್ನ ಹೇಳೋಕೆ ಪದಗಳು ಸಾಲವು.

ಮುಖ ತೊಳೆದುಕೊಂಡು ಬರ್ತೀನಿ....

ಅನುಕೂಲಕರ ವಲಯ (comfort zone)

ಈ comfort zone ಅನ್ನೋದು ಮನುಷ್ಯನ್ನ ವರ್ತಮಾನದಲ್ಲಿ ಎಷ್ಟು  ಆರಾಮವಾಗಿ ಇಡುತ್ತೋ, ಅಷ್ಟೇ ಅವನನ್ನ ಹೇಡಿಯನ್ನಾಗಿ, ಆತ್ಮವಿಶ್ವಾಸರಹಿತನನ್ನಾಗಿ ಮಾಡಿ ಬಿಡುತ್ತದೆ. ನಮಗಿರುವ ಸವಲತ್ತು, ಸೌಕರ್ಯಗಳಿಗೆ ಒಗ್ಗಿ ಹೋಗಿರುವ ನಮ್ಮ ಬದುಕು ಹೊಸದನ್ನು ಪ್ರಯತ್ನಿಸುವ ಮನೋಭಾವವನ್ನು ಕಳೆದುಕೊಳ್ಳುತ್ತದೆ. ಈ ಮನೋಭಾವದ ಅಂತ್ಯವೇ, ಮನುಷ್ಯನ ವಿಕಾಸದ ಹಾದಿಗೆ ಮುಳ್ಳಾಗಿ ಪರಿಣಮಿಸುತ್ತದೆ.

ಹಾಗಾದರೆ, ಇರುವುದರಲ್ಲಿ ಸುಖ ಕಾಣಿರಿ, ಹಾಸಿಗೆ ಇದ್ದಷ್ಟು ಕಾಲು ಚಾಚು, ಇವೆಲ್ಲ ಸರಿಯಾದ ಮಾತುಗಳಲ್ಲ ಅಂತಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನೋದು ಮನುಷ್ಯನ ಈಗಿನ ಸ್ಥಿತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಸರಿಯಾಗಿ ಖರ್ಚು ನಿರ್ವಹಿಸಿ ಅಂತ ಹೇಳುತ್ತದೆ ವಿನಃ ಹೊಸದನ್ನ ಪ್ರಯತ್ನಿಸಬೇಡ ಅಂತ ಹೇಳೋದಿಲ್ಲ.
ಹೀಗ್ಯಾಕೆ, ಆರಾಮಾಗಿರೋರು ಅನುಕೂಲಕರ ವಲಯ ಬಿಟ್ಟು ಹೊಸದಕ್ಕೆ ಕೈ ಹಾಕಬೇಕು ಅಂತ ಹೇಳ್ತಾ ಇದ್ದೀನಿ ಅನ್ಕೊಂಡ್ರ? ಈ ಅನುಕೂಲಕರ ವಲಯ ಅನ್ನೋದು ಕ್ಷಣಿಕ. ಯಾವುದೋ ಕಾರಣಕ್ಕೆ ಅದು ಸ್ವಲ್ಪ ಬದಲಾದಾಗ ಮನುಷ್ಯನಿಗೆ ದಿಗಿಲು ಬಡಿದಂತಾಗುತ್ತದೆ. ಎಲ್ಲ ದಾರಿಗಳು ಕೊನೆಯಾದವು ಅನ್ನೋ ಹತಾಶೆ ಕಾಡುತ್ತವೆ. ಮನಸ್ಸು ಆ ಪರಿಸ್ಥಿತಿಗೆ ಸ್ಪಂದಿಸುವ ಶಕ್ತಿ ಕಳೆದುಕೊಂಡು ಬಿಡುತ್ತದೆ. ಏನೋ ಗಾಬರಿ ಮನಸ್ಸನ್ನ ಆವರಿಸಿಕೊಳ್ಳುತ್ತದೆ. ಇಂಥ ಸಮಯದಲ್ಲೇ ಮಾಡಿದ ಎಲ್ಲ ನಿರ್ಧಾರಗಳು ಪ್ರಾಯಶ: ತಪ್ಪಾಗಿರುತ್ತವೆ.


ಹಾಗಾದರೆ ಈ ತರಹದ ಪರಿಸ್ಥಿತಿಗಳಿಗೆ ಪರಿಹಾರ? ಇದೆ. ಖಂಡಿತ ಇದೆ. ಅದಕ್ಕೆ ಸ್ವಲ್ಪ ಮನಸ್ಸಿನ ಹತೋಟಿ, ಧೃಡ ನಿರ್ಧಾರ, ಸಂಕಲ್ಪ ಎಲ್ಲವು ಬೇಕು. "life is an experiment". ಹೊಸ ವಿಷಯಗಳನ್ನ, ಜೀವನಕ್ಕೆ ಹೊಸ ಆಯಾಮಗಳನ್ನ ಹುಡುಕುವ ಪ್ರಯತ್ನ ಮಾಡಬೇಕು. ಕೆಲವೊಮ್ಮೆ ಹೊಸದನ್ನ ಮಾಡಬೇಕಾದರೆ ಸೋಲು ನಮ್ಮ ಹತ್ತಿರ ಸುಳಿಯೋದು ಸಹಜ. ಆದರೆ ಅದನ್ನ ಮೀರಿ ನಿಂತ ಗೆಲುವು ನಮ್ಮಲ್ಲಿ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸ ತುಂಬುತ್ತದೆ. ನಮಗೆ ನಾವು ನಿರ್ಮಿಸಿಕೊಂಡಿರುವ ಬೇಲಿಯನ್ನು ಕಿತ್ತೆಸೆದು, ಹೊಸ ದಿಗಂತದ ಕಡೆಗೆ ಹೆಜ್ಜೆ ಹಾಕುವುದೇ ಜೀವನ.

ಇಂತಹದೇ ಒಂದು ಸಂದೇಶವನ್ನು ಸಾರಿದ್ದು ತೋಮಸ್ ಅಲ್ವಾ ಎಡಿಸನ್ "I have not failed. I've just found 10,000 ways that won't work.".

ಮತ್ತೆ ಸಿಗೋಣ......
     

Saturday, January 21, 2012

ಟ್ರೈನ್ ಪುರಾಣ

ಈ IT ಮತ್ತು BT ಜನಕ್ಕೆ ಶುಕ್ರವಾರ ಬಂತೆಂದರೆ ಸಾಕು ಊರಿಗೆ ಓಡುವ ಕಾಯಕ. ನಾನು ಮಾತಾಡುತ್ತಿರುವುದು ಬೇರೆ ಊರಿನಿಂದ ಕೆಲಸದ ನಿಮಿತ್ಯ ಬೆಂಗಳೂರಿಗೆ ಬಂದ ಜನರ ಬಗ್ಗೆ. ನಾನು ಆ ಗುಂಪಿಗೆ ಸೇರಿದವನು. ಊರಿಗೆ ಹೋಗುವ ಆತುರ, ಆಸೆ ಎಷ್ಟಿರುತ್ತೋ ಅಷ್ಟೇ ಆಸೆ ದುಡ್ಡು ಉಳಿಸುವುದರಲ್ಲಿ ಕೂಡ ಇರುತ್ತೆ. ಬಸ್ಸಿಗೆ ಹೋದ್ರೆ ನಾನು ಕೊಡಬೇಕಾದದ್ದು 400 
  ರೂಗಳು. ಅದೇ ಟ್ರೈನ್ ಗೆ ಹೋದರೆ ಕೇವಲ 216 ರೂಗಳು. ಅದಲ್ಲದೆ ಉದ್ದ ಕಾಲು ಇರುವ ನನ್ನಂಥವರಿಗೆ ಬಸ್ ಪ್ರಯಾಣ ನಿಷಿದ್ಧ. ಯಾಕೆಂದ್ರೆ ನಾನು ಕಾಲು ಚಾಚಿ ಕುಳಿತರೆ, ನನಗೆ ತಿಳಿಯದ ಹಾಗೆ ಮುಂದಿನ ಸೀಟ್ ನ ಅರ್ಧ ಜಾಗವನ್ನು ಆಕ್ರಮಿಸಿಕೊಂಡು ಬಿಡುತ್ತೇನೆ. ಹಾಗಾಗಿ 99 ಪ್ರತಿಶತ: ನಾನು ಓಡಾಡುದುವುದು ಟ್ರೈನ್ ನಲ್ಲೆ. 

ಶುಕ್ರವಾರ ಸಂಜೆ 6.00, ಆಫೀಸ್ ನಿಂದ ಹೊರಟು 9 .15 ಕ್ಕೆ ರಾಣಿ ಚೆನ್ನಮ್ಮ ಎಕ್ಷ್ಪ್ರೆಸ್ಸಗೆ ನಾನು ಪ್ರಯಾಣ ಮಾಡಬೇಕಿತ್ತು. ಆವತ್ತಿನ ವಿಶೇಷ ಅಂದ್ರೆ ನಾನು ಮತ್ತು ನನ್ನ ಇನ್ನೋರ್ವ ಗೆಳೆಯನ ಟಿಕೆಟ್ confirm ಆಗಿರಲಿಲ್ಲ. ರೈಲ್ವೆ ಸ್ಟೇಷನ್ ಗೆ ಹೋದಾಗ ನಮಗೆ RAC ಸಿಕ್ಕಿತ್ತು. ಅಂತು ಇಂತೂ ಟ್ರೈನ್ ಏರಿದ ನಾವು ನಮಗೆ ಕೊಟ್ಟ ಸೀಟಿನಲ್ಲಿ ಕುಳಿತುಕೊಂಡೆವು. ಬಹಳ ಸಲ RAC ಇಂದ ಬರ್ತ್ ಮಾಡಿಸಿಕೊಂಡ ಅನುಭವವಿದ್ದ ನನಗೆ, ಇವತ್ತು ಹಾಗೆ ಮಾಡೋಣ ಅನ್ನೋ ಮೊಂಡು ಧೈರ್ಯ.

TC ಬಂದು ನಮ್ಮ ಟಿಕೆಟ್ ನೋಡಿ, sign ಮಾಡಿದ, ನಾನು ಅವನಿಗೆ ವಿನಮ್ರತೆಯಿಂದ ಕೇಳಿದೆ "ಸಾರ್, ಬರ್ತ್ ಏನಾದ್ರೂ ಕೊಡೋಕೆ ಆಗುತ್ತ?" ಎರಡು ನಿಮಿಷ ನನ್ನ ನುಂಗೋ ಥರ ನೋಡಿದ ಆತ "ಇಲ್ಲಿ ಆಗಲ್ಲ ಸರ್, ಎಲ್ಲ ಅಲ್ಲೊಟ್ ಆಗಿದೆ. ನಿಮಗೆ ಬರ್ತ್ ಬೇಕು ಅಂದ್ರೆ S9 ಬೋಗಿಗೆ ಹೋಗಿ" ಅಂದ. ಅಸ್ಟು ಹೇಳಿದ್ದೆ ತಡ, ತುಮಕೂರು ಸ್ಟೇಷನ್ ಬಂದ ತಕ್ಷಣ ಬ್ಯಾಗ್ ಎತ್ತಿಕೊಂಡು S9 ಬೋಗಿಗೆ ದೌಡಾಸಿದೆವು. ಬೋಗಿ ಒಳಗೆ ಹೋಗಿ ನೋಡಿದರೆ ಒಳ್ಳೆ ಅಶೋಕ ಫಿಲಂನ climax ಥರ ಇತ್ತು. ಎಲ್ಲರು ಗಾಢ ನಿದ್ರೆಯಲ್ಲಿದ್ದಾರೆ. ಯಾವುದೇ ಬರ್ತ್ ಖಾಲಿ ಇರುವ ಸುಳಿವು ಕೂಡ ಅಲ್ಲಿರಲಿಲ್ಲ.
ಛೇ.. ಎಂಥ ಕೆಲಸ ಆಯಿತು.. ಸರಿ ನಮ್ಮ ಬೋಗಿಗೆ ವಾಪಸ್ ಹೋಗೋಣ ಅಂದ ನನ್ನ ಫ್ರೆಂಡ್. ವಾಪಸ್ ಬಂದೆವು. ಅಲ್ಲಿ ನೋಡಿದ್ರೆ ನಮ್ಮ RAC ಸೀಟ್'ಗಳು ಯಾರಿಗೋ ಬರ್ತ್ ಆಗಿ ಹೋಗಿವೆ. ಒಳಹೊಕ್ಕು ಕೇಳಿದ್ರೆ, TC ಆ ಸೀಟ್'ನ ಅವರಿಗೆ ಕೊಟ್ಟಾಗಿದೆ.ಇನ್ನುಅವರ ಜೊತೆ ಜಗಳವಾಡಿ ಪ್ರಯೋಜನ ಇಲ್ಲ ಅಂತ ತಿಳಿದು. TC ಹತ್ರ ಬಂದೆವು (ಮತ್ತೆ S9!!!!). ಅವನ ಹತ್ರ ಸಿಕ್ಕ ಉತ್ತರ ಕೇಳಿ ಸಂತಾಪವಾಯಿತು. "S1 - S5 ಬೇರೆ tc ದು, ಅವರನ್ನೇ ಕೇಳಿ". ಆಗ ಘಂಟೆ ರಾತ್ರಿ 11 .30. ಈ ಹೊತ್ತಿನಲ್ಲಿ tc ನಮಗೆ ಸಿಗ್ತಾನೆ ಅನ್ನೋ ನಂಬಿಕೆ ನನಗಿರಲಿಲ್ಲ. ಸರಿ S8ಗೆ ಹೋಗಿ ನೋಡೋಣ ಅಂತ ಅಲ್ಲಿ ಹೋದ್ರೆ ಒಂದು ಆಶ್ಚರ್ಯ ಕಾಡಿತ್ತು. ಬೋಗಿಯ ಶೌಚಾಲಯದ ಪಕ್ಕದ ಲಾಬಿಯಲ್ಲಿ ೩ ಜನ ಯುವಕರು ಪೇಪರ್ ಹಾಸಿಕೊಂಡು ಕೂತಿದ್ದಾರೆ. ಅವರಲ್ಲೊಬ್ಬ ನಮ್ಮನ್ನ ನೋಡಿ ನಕ್ಕು "S9 ನಲ್ಲಿ ಬರ್ತ್ ಸಿಗುತ್ತೆ ಅಂತ ಕಳಿಸಿದ್ನಾ tc" ಅಂತ ಕೇಳಿದ. ಆಗಲೇ ನನಗೆ ಅರಿವಾಗಿದ್ದು, ನಮ್ಮ ಹಾಗೆ ಅವರು ಕೂಡ ಮೋಸ ಹೋಗಿದ್ದರು :). ಅವರ ಹತ್ರ ಇದ್ದ ಪೇಪರ್ ತೆಗೆದುಕೊಂಡು ನಾವು ಅಲ್ಲೇ ಕೂರುವುದಾಗಿ ನಿರ್ಧರಿಸಿದೆವು. 

ಮೊದಲೇ ಮಾತು, ಜನ ಅಂದ್ರೆ ಸಾಕು. ನನಗೆ ನಿದ್ರೆ ನೀರಡಿಕೆಗಳ ಅರಿವೇ ಇರುವುದಿಲ್ಲ. ಏನೇನೋ ಹರಟೆ, ಜೋಕ್ಸು, ಕಥೆಗಳು, ಅನುಭವಗಳು, ಆಗ ತಾನೆ ಮೋಸಹೋಗಿದ್ದ ಪರಿ ಎಲ್ಲದರ ಬಗ್ಗೆ ಮಾತಾಡುತ್ತ ನಗುತ್ತ ಕೂತು ಬಿಟ್ಟೆವು. ನಮ್ಮ ಮಾತುಗಳು ಮಲಗಿರುವವರಿಗೆ ತೊಂದರೆ ಮಾಡಬಹುದು ಅನ್ನೋದರ ಅರಿವು ಕಿಂಚಿತ್ತಾಗಿ ನಮಗೆ ಬರಲಿಲ್ಲ. ಹೀಗೆ ನಮ್ಮ ಮಾತುಗಳು ಮುಂದುವರಿದಾಗ ಪಕ್ಕದ ಬರ್ತ್ ನಲ್ಲಿ ಮಲಗಿದ್ದ ಡುಮ್ಮ ಒಬ್ಬ "kyon, sona nahi hai kya" ಅಂತ ಕೇಳಿದ್ದ.  ಅದಕ್ಕೆ ಒಕ್ಕೊರಲಿನಿಂದ ನಾವು ಉತ್ತರಿಸಿದ್ದು "ನಹಿ". ನಮ್ಮ ಒಕ್ಕಟ್ಟಿನ ದನಿ ಕೇಳಿ ಮತ್ತೆ ಮುಸುಕು ಹೊದ್ದಿಕೊಂಡು ಆತ ಮಲಗಿದ್ದ. ನಮ್ಮ ಉತ್ತರ ತಕ್ಕ ಮಟ್ಟಿಗೆ ನಿಷ್ಠೂರವೆನಿಸಿದರೂ, ಆ ಪರಿಸ್ಥಿತಿಯಲ್ಲಿ ಅದು ಸರಿ ಎನ್ನಿಸಿತು. 

ಆಮೇಲೆ ಬೆಳಿಗ್ಗೆ ೨ ಗಂಟೆವರೆಗೆ, ಯಾರನ್ನೂ ಆ ಶೌಚಾಲಯದ ಹತ್ರ ಹೋಗೋಕೆ ಬಿಡಲಿಲ್ಲ. ಕಾರಣ ಗೊತ್ತಲ್ಲ.

ಕೊನೆಗೂ ಪ್ರಯಾಸಪೂರ್ಣ ಪ್ರಯಾಣಕ್ಕೆ ಅಂತ್ಯ ಸಿಕ್ಕಿತ್ತು. ಆದ್ರೆ ನನ್ನ ಮಸ್ತಿಷ್ಕದಲ್ಲಿ ಪ್ರಯಾಣದ ನೆನಪು ಉಳಿದುಕೊಂಡಿತ್ತು. 

ಇನ್ನೊಂದು ನೆನಪಿನೊಂದಿಗೆ ಮತ್ತೆ ಸಿಗ್ತೇನೆ. 


Thursday, January 19, 2012

ಪ್ರತಿಕ್ರಿಯೆ = ಫಲಿತಾಂಶ

ಪ್ರತಿಕ್ರಿಯೆ ಮತ್ತು ಅದರ ಪ್ರತಿಫಲ ಎರಡೂ 
ಸಮಾನಾರ್ಥಕ ಪದಗಳು ಅನ್ನೋದು ನನ್ನ ಭಾವನೆ. ವ್ಯಾಕರಣ ಗೊತ್ತಿರುವವರು ಇದೇನು 
ಹುಚ್ಚುತನ ಅನ್ನಬಹುದು. ಕೆಲ ದಿನಗಳ ಹಿಂದೆ 
ನಡೆದ ಒಂದು ಘಟನೆ ನನ್ನ ಈ ಸಮೀಕರಣವನ್ನು 
ನಿಜ  ಎಂದು ಧ್ರುಡೀಕರಿಸಿತು. ಮೊದಲು ನನ್ನ ಅನುಭವವನ್ನು ಓದಿ ಆಮೇಲೆ 
ಅದು ತಪ್ಪೋ, ಸರಿಯೋ ನೀವೇ ಯೋಚನೆ ಮಾಡಿ.
 ಜೆ.ಪಿ. ನಗರದ ಮೂಲಕ ಬರುವಾಗ ನನ್ನ ಮುಂದೆ ಹೋಗುತ್ತಿದ್ದ ಸರಕು ಸಾಗಣೆ 
ಮಾಡುವ rickshaw 'ದವನು ಧಿಡೀರನೆ ಬ್ರೇಕ್ ಹಾಕಿದ. ಆಗ ನನ್ನ ಬೈಕ್ ಅವನ 
ಗಾಡಿಗೆ ಕೇವಲ ೨ ಇಂಚು ಅಂತರದಲ್ಲಿ ನಿಂತಿತು. ಅರೆಕ್ಷಣ ತಡವಾಗಿದ್ದರೂ ನಾನು
ಮತ್ತು ನನ್ನ ಬೈಕ್ ಅವನ ಗಾಡಿಗೆ ಡಿಕ್ಕಿ ಹೊಡೀತ ಇದ್ವು. ಸ್ವಲ್ಪ ಕೋಪ ಬಂತು 
ನನಗೆ. ಆದರೆ ಏನು ಅಚಾತುರ್ಯ ಆಗಿರಲಿಲ್ಲವಲ್ಲ, ಹಾಗಾಗಿ ಸುಮ್ಮನಾದೆ. 
ಗಾಡಿ ಸಿಗ್ನಲ್ ನಲ್ಲಿ ಬಂದು ನಿಂತ ಕ್ಷಣ, ಡ್ರೈವರ್ ಸೀಟ್ ನಲ್ಲಿ ಕೂತಿದ್ದ
ಮಹಾನುಭಾವನಿಗೆ ನಾನಂದೆ "ಅಣ್ಣ, ಇನ್ನೊಂದು ಸೆಕೆಂಡ್ ತಡವಾಗಿದ್ದ್ರು ನಿಮ್ 
ಗಾಡಿಗೆ ಗುದ್ದಿ ಬಿಡ್ತಿದ್ದೆ, ಸ್ವಲ್ಪದರಲ್ಲೇ ಮಿಸ್ ಆಯ್ತು" ಮುಖದಲ್ಲಿ ನಗೆ ತುಂಬಿಕೊಂಡ 
ಅವನು "ಸಾರಿ ಬ್ರದರ್, ಆವಮ್ಮ ಇದ್ದಕ್ಕಿದ್ದ ಹಾಗೆ ಅಡ್ಡ ಬಂದಳು" ಅಂದ. ಇಬ್ರೂ
ನಕ್ಕು ನಮ್ಮ ನಮ್ಮ ದಾರಿ ಹಿಡಿದೆವು.


ಇಲ್ಲಿ ನಾನು ಗಮನಿಸಿದ ಅಂಶ, ನಾನೇನಾದರು ಕೋಪ ಬಂದ ತಕ್ಷಣ "ಏನೋ 
ಮಗನೆ, ಬ್ರೇಕ್ ನೋಡ್ಕೊಂಡು ಹಾಕೋಕೆ ಆಗಲ್ವ" ಅಂತ ಗದರಿಸಿದ್ದರೆ? 
ಅವನ ಪ್ರತಿಕ್ರಿಯೆ ಬೇರೇನೆ ಇರುತ್ತಿತ್ತು. ನನಗೆ ಆಗ ಅರ್ಥವಾಗಿದ್ದು ನಮ್ಮ 
ಪ್ರತಿಕ್ರಿಯೆಗಳೇ ಫಲಿತಾಂಶಕ್ಕೆ ಮೂಲ.


ಈಗ ಹೇಳಿ ಪ್ರತಿಕ್ರಿಯೆ = ಫಲಿತಾಂಶ ಅಲ್ವ?


ನಗ ನಗ್ತಾ ಇರಿ.....    

ನಿಮ್ ಹತ್ರ ಉತ್ತರ ಇದೆಯಾ ?

ನನ್ನ ಪ್ರಿಯ ಮಿತ್ರನೊಬ್ಬನ ಪುಟಾಣಿ ಮಗಳೋಬ್ಬಲಿದ್ದಾಳೆ. ಅವಳಿಗೆ ನನಗೆ ಮುಖಾ-ಮುಖಿ ಪರಿಚಯ ಅಷ್ಟಿಲ್ಲ. ಆದರೆ ಅವಳ ಫೋಟೊಗಳನ್ನ, ಅವಳ ಕೀಟಲೆಗಳನ್ನ ನನ್ನ ಮಿತ್ರನ ಬಾಯಿಂದ ಕೇಳ್ತಾ ಇರ್ತೀನಿ. ಅವಳ ವಿಚಿತ್ರ ಆಟಗಳ ಬಗ್ಗೆ ಕೇಳೋಕೆ ಒಂಥರಾ ಖುಷಿ ನನಗೆ. ಅವಳ ಮೇಲೆ ಪ್ರೀತಿ ಹೆಚ್ಚಾಗಿ ಈ ನಡುವೆ ನನ್ನ ಮಿತ್ರನ್ನನ್ನು "ಮಾವನವರೆ" ಅಂತ ಕೂಡ ಸಂಬೋಧಿಸಿದ್ದುಂಟು.(ತಮಾಷೆ ರೀ...). ಅದಿರಲಿ ಅವಳದೇ ಒಂದು ಚಿಕ್ಕ ಪ್ರಶ್ನೆ ಈ ಲೇಖನಕ್ಕೆ ಸ್ಪೂರ್ತಿ.

ನಡೆದದ್ದಿಷ್ಟೇ, ಮೊನ್ನೆ ಅವಳನ್ನ ನನ್ನ ಮಿತ್ರ ಬಟ್ಟೆ ಖರೀದಿಗೆ೦ದು ಅಂಗಡಿಗೆ ಕರೆದೊಯ್ದಿದಿದ್ದಾರೆ. ಬಟ್ಟೆ ಬದಲಾಯಿಸುವ ಕೋಣೆಯೊಳಗೆ ತುಂಡು ಬಟ್ಟೆ ಧರಿಸಿದ್ದ ದೈತ್ಯಾಕಾರದ ಒಂದು ಚಿತ್ರ ನೋಡಿ, ಅವಳು ಕೇಳಿದ ಮುಗ್ಧ ಪ್ರಶ್ನೆಗೆ ಉತ್ತರ ಸಿಕ್ತೋ, ಇಲ್ವೋ ನನಗಂತೂ ಗೊತ್ತಿಲ್ಲ. ಆದರೆ ನನಗೆ ಆ ಪ್ರಶ್ನೆಯಿಂದ ಅನೇಕ ವಿಚಾರಗಳು ಸಿಕ್ಕವು. ಅವಳು ಕೇಳಿದ್ದಿಷ್ಟೆ, "ಅಪ್ಪ ಇವಳಿಗೆ ಇವರಪ್ಪ ಬಟ್ಟೆ ಕೊಡಿಸಿಲ್ವೆ?".

ಇಂತಹ ಜಾಹಿರಾತುಗಳ ಅಗತ್ಯ ನಿಜವಾಗಲು ಇದೆಯಾ? ಯೋಚಿಸಿ... ನಾಳೆ ನಿಮ್ಮ ಮಕ್ಕಳು ಈ ಪ್ರಶ್ನೆ ಕೇಳುವ ಮೊದಲು ಉತ್ತರ ready ಇಟ್ಟುಕೊಳ್ಳಿ. ಈಗಾಗಲೇ ಈ ತರಹದ ಪ್ರಶ್ನೆಗೆ ನೀವು ಉತ್ತರಿಸಿದ್ದರೆ, ಉತ್ತರ ನೀಡಿದ ಬಗೆಯನ್ನು ತಿಳಿಸಿ.

ಮತ್ತೆ ಸಿಗ್ತೀನಿ......

 

ಆಸೆಯ ಚಿಟ್ಟೆ vs ದುರಾಸೆಯ ಚಿಟ್ಟೆ

ಇವತ್ತು ಸಂಜೆ ಆಫೀಸನಿಂದ ಬರುವಾಗ ಸಿಗ್ನಲ್ ನಲ್ಲಿ ಒಂದು ವಿಚಿತ್ರ ಸನ್ನಿವೇಶ ನಡೆಯಿತು. ಸಿಗ್ನಲ್ ಪಕ್ಕದಲ್ಲೇ ಇದ್ದ ಅತಿದೊಡ್ಡ ಜಾಹಿರಾತು ಫಲಕವೊಂದರ ಫೋಕಸ್ ಲೈಟ್'ನಿಂದ ಹೊಗೆ ಬರ್ತಾ ಇತ್ತು. ಎಲೆಕ್ಟ್ರಿಕ್ ಶಾರ್ಟ್ ಸರ್ಕಿಟ್ ಆಗಿರಬಹುದು ಅನ್ಕೊಂಡೆ. ಆದ್ರೆ ವಾಸ್ತವದಲ್ಲಿ ಅಲ್ಲಿ ನಡೆಯುತ್ತಿದ್ದುದು ಬೇರೆ. ಆ ಲೈಟ್ ತುಂಬಾ ಹೊತ್ತಿನಿಂದ ಉರಿಯುತ್ತಿದ್ದ ಕಾರಣ ತುಂಬಾ ಬಿಸಿಯಾಗಿದ್ದಿರಬೇಕು. ಅದರ ಮೇಲೆ ಹಾರಾಡುತ್ತ ಬಂದ ಚಿಟ್ಟೆಗಳು, ಆ ಗಾಜಿಗೆ ತಗುಲಿದ ಕೂಡಲೇ ಸುಟ್ಟು ಹೋಗಿ ಹೊಗೆಯಾಡುತ್ತಿದ್ದವು. 
ಈ ಪ್ರಕ್ರಿಯೆಯನ್ನು ತುಂಬಾ ಹೊತ್ತು ಗಮನಿಸಿದ ನನ್ನ ಮನಸ್ಸಿನಲ್ಲಿ ಒಂದೆರಡು ಯೋಚನೆಗಳು ಮೂಡಿದವು. ಜೀವನ ಅನ್ನೋದು ಕೂಡ ಆ ಚಿಟ್ಟೆ ಥರ. ಅದಕ್ಕೆ ಬೇಕಾಗುವಷ್ಟು ಬೆಳಕು ಇದ್ದರೂ ಕೂಡ ದುರಾಸೆಯಿಂದಲೋ, ಮೂರ್ಖತನದಿಂದಲೋ ಅತೀ ಹೆಚ್ಚು ಕಾದಿರುವ ಆ ಗಾಜಿನ ಕಡೆಗೆ ಸಾಗುವುದು. ಆ ಭಗವಂತನ ಸೃಷ್ಟಿ ಕೂಡ ವಿಚಿತ್ರ. ಆಸೆಗೂ ಮತ್ತು ದುರಾಸೆಗೂ ಕೇವಲ ಕೂದಲಿನ ಎಳೆಯಷ್ಟು ಅಂತರ ಇಟ್ಟಿದ್ದಾನೆ. ನಾವು ಬೆಳೆಯಬೇಕು ಅನ್ನೋ ಆಸೆ ಜೊತೆಗೆ ಅದು ಧನತ್ಮಕವಾಗಿದೆಯೇ ಅನ್ನೋದರ ಬಗ್ಗೆ ಅರಿವೇ ಇರುವುದಿಲ್ಲ. ಯಾವಾಗ ಬೆಳವಣಿಗೆ ಹೀಗೆ ಧನಾತ್ಮಕತೆಯಿಂದ ದೂರ ಸರಿಯುವುದೋ ಆಗಲೇ ಅದು ದುರಾಸೆಯಾಗಿ ಬದಲಾಗುವುದು. ಇಂತಹ ಬೆಳವಣಿಗೆ ಬೆಂಕಿ ಹತ್ತಿರ ಹೋಗಲು ಪ್ರಚೋದಿಸುವುದು. ಕೊನೆಗೆ ಫಲಿತಾಂಶ ಕಂಡುಕೊಂಡಾಗ ಉಳಿದುಕೊಳ್ಳುವುದು ಮಾತ್ರ ಪಶ್ಚಾತ್ತಾಪದ ಹೊಗೆ.

ಅದಕ್ಕೆ ದುರಾಸೆ ಪಟ್ಟು ಬೆಂಕಿಯಲ್ಲಿ ಬೀಳೋ ಬದಲು ಆಸೆ ಪಟ್ಟು ಬೆಳಕಿನಲ್ಲಿ ಇರಬಹುದಲ್ಲ?

Tuesday, January 17, 2012

ಬೈಕ್ ಸಂಬಂಧ

ಮೊನ್ನೆ ಸಾಯಂಕಾಲ ನನ್ನ ಮಿತ್ರನೊಬ್ಬನ ಬೈಕ್ ರಸ್ತೆ ಮಧ್ಯ ಕೈ ಕೊಟ್ಟಿತು. ಒಟ್ಟಿಗೆ ಹೋಗಿ ಅದನ್ನ ರಿಪೇರಿ ಮಾಡಿಸಿದ್ವು.  ಮೆಕಾನಿಕ್ ಅದನ್ನ ಸರಿ ಮಾಡುವಂಥ ಸಮಯದಲ್ಲಿ ನನ್ನ ತಲೆಗೊಂದು ಯೋಚನೆ ಬಂತು. ಬೈಕ್ ಕೈ ಕೊಟ್ಟ ಮರುಕ್ಷಣವೇ ಯಾರಾದ್ರೂ ಸರಿ, ಮೊದಲು ಮಾಡುವ ಕೆಲಸ ಅದನ್ನ ಬೈಯ್ಯೋದು. ಆಮೇಲೆ ಮೆಕಾನಿಕ್ ಹತ್ರ ಕರೆದುಕೊಂಡು ಹೋಗಿ ಸರಿ ಮಾಡಿಸಿಕೊಂಡು ಮತ್ತೆ ಓಡಿಸೋದು. ಸೂಕ್ಷ್ಮವಾಗಿ ಗಮನಿಸಿದರೆ ಇದು ನಮ್ಮ ಜೀವನಕ್ಕೂ ಅನ್ವಯವಾಗುತ್ತೆ ಅಲ್ವ? ಹೇಗೆ ಅಂತೀರಾ?

ಬೈಕ್ ನಮಗೆ ಅತೀ ಪ್ರೀತಿಯ ವಸ್ತು, ಇನ್ನು ಕೆಲವರಿಗೆ ಅದು ಪ್ರಾಣ. ಅದರ ಮೇಲೆ ತುಂಬಾ ಪ್ರೀತಿ ಇಟ್ಟುಕೊಂಡಿರುವ ನಾವು ಪರಿಸ್ಥಿತಿಯ ಕೈಗೊಂಬೆಯಾಗಿ ಅದನ್ನು ಬೈಯ್ಯುತ್ತೇವೆ. ಆದ್ರೆ ಮುಂದೆ ಸಾಗಬೇಕು ಅಂದ್ರೆ ಮತ್ತದರ ಜೊತೆ ಬೇಕೇ ಬೇಕು. ಅದನ್ನ ಅರ್ಥೈಸಿಕೊಂಡು, ಅದೇ ಬೈಕನ್ನ ಸರಿ ಮಾಡಿಸಿಕೊಂಡು ಮುಂದೆ ಸಾಗ್ತೀವಿ ವಿನಃ ಕೈ ಕೊಟ್ಟ ಸನ್ನಿವೇಶವನ್ನು ನೆನೆಸಿಕೊಂಡು ಬೈಕನ್ನು ಗುಜರಿಗೆ ಹಾಕೋದಿಲ್ಲ.

ಈಗ  ಜೀವನಕ್ಕೆ ಬರೋಣ. ಪ್ರೀತಿಯಿಂದ ಇಟ್ಟುಕೊಂಡಿರುವ ಬೈಕ್ ಮನುಷ್ಯನ ಸಂಬಂಧಗಳ ಹಾಗೆ. ಸಂಬಂಧಗಳಲ್ಲಿ ಇರಿಸು ಮುರಿಸು ಬರೋದು ಸಹಜ. ಆದ್ರೆ ಭಿನ್ನಭಿಪ್ರಾಯಗಳನ್ನೇ ದೊಡ್ಡದಾಗಿಸಿ ಸಂಬಂಧದ ಅಂದ ಕೆಡಿಸುವುದೇ? ಬಂದಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಜೀವನವೆನ್ನೋ ಈ ಯಾತ್ರೆಯನ್ನು ಮುಂದುವರಿಸಬಹುದಲ್ಲ.


ಈಗ ನೀವು ಯೋಚನೆ ಮಾಡಿ....


ಮತ್ತೆ ಸಿಗ್ತೀನಿ.

Monday, January 16, 2012

ಒನ್ ಕಪ್ ಟೀ...

ಹೊಸ ವರ್ಷದ ಸಂಕಲ್ಪ(resolution) ಏನಪ್ಪಾ ಅಂದ್ರೆ, ನಾನು ನನಗೆ ಅತಿ ಪ್ರಿಯವಾದ ಚಹಾ ಸೇವನೆ ನಿಲ್ಲಿಸಿದೆ. ಈ ಚಹಾ'ದ ಬಗ್ಗೆ ಉತ್ತರ ಕರ್ನಾಟಕದವರನ್ನ ಕೇಳಿ. ಅಲ್ಲಿ ಮನೆಗೆ ಬಂದವರಿಗೆ ಅದ್ಧೂರಿ ಊಟ ಕೊಡದಿದ್ದರೂ ಓಕೆ, ಆದರೆ ಚಹಾ ಕೊಡದೆ ಇದ್ದರೆ ನಡೆಯೋದಿಲ್ಲ. ಎಲ್ಲರಿಗೂ ಚಹದ ಮೇಲಿನ ವ್ಯಾಮೋಹ ಮತ್ತು ನಂಟು ಅಂತಹದು. ಸರಿ, ಹೊತ್ತಿಲ್ಲದ ಹೊತ್ತಿನಲ್ಲಿ ಚಹದ ಬಗ್ಗೆ ಏಕೆ ಮಾತಾಡ್ತಾ ಇದ್ದೀನಿ ಅಂತೀರ? ಕಾರಣ ಇದೆ.
ಕೊನೆಯ ಸೆಮಿಸ್ಟರ್'ನ ಪ್ರಾಜೆಕ್ಟ್  ಮಾಡಲು, ನಾನು ಬೆಂಗಳೂರಿಗೆ ಬಂದ ಮೊದಲ ದಿನಗಳವು. ನಮ್ಮ ತಂದೆ ಪ್ರಾಥಮಿಕ ಶಾಲೆಯ ಶಿಕ್ಷಕ. ಅವರಿಗೆ ನಾನು ಭಾರವಾಗಬರದು ಅನ್ನೋ ಭಾವನೆ ಆಗಲೇ ನನ್ನಲ್ಲಿ ಬೆಳೆದಾಗಿತ್ತು. ಬೆಂಗಳೂರಿನಲ್ಲಿ ಇರಲಿಕ್ಕೆ ಯಾವುದೇ ಸೌಕರ್ಯಗಳಿರಲಿಲ್ಲ. ಕೆಲವು ಸಂಬಂಧಿಗಳ ಮನೆಗಳಿದ್ದವು, ಆದರೆ ಅವರ ಮನೆಯಲ್ಲಿ ಕೂಡ ಇರುವುದಕ್ಕೆ ನನ್ನ ಸ್ವಾಭಿಮಾನ ಅಡ್ಡಿ ಬರುತ್ತಿತ್ತು. ಆಗ ನನ್ನ ಪಾಲಿಗೆ ಪಂಚಮ್ರುತವಾಗಿ ಕಂಡಿದ್ದು ABVPಯ ಆಫೀಸ್. ಬಂದ ಮಾರನೇ ದಿನವೇ ನನಗಾದ ಒಂದು ಅನುಭವ ಅದ್ಭುತವಾದುದು. ಬೆಳಿಗ್ಗೆ ಎದ್ದು ಹಲ್ಲುಜ್ಜಿ, ಅಲ್ಲೇ ಪಕ್ಕದಲ್ಲಿದ್ದ ಕಿಚನ್ ಒಳಗಡೆಯಿಂದ ಚಹಾ ವಾಸನೆ ಬಂತು. ಅತ್ಯಂತ ಆಸೆಯಿಂದ ಒಂದು ಗ್ಲಾಸ್ ಚಹವನ್ನು ಎತ್ತಿಕೊಂಡು ಇನ್ನೇನು ಕುಡಿಯಬೇಕು ಅನ್ನೋ ಅಷ್ಟರಲ್ಲಿ, ಅಲ್ಲಿದ್ದ ಒಬ್ಬ ಆಫೀಸ್ ಬಾಯ್ ನನಗೆ ಹೇಳಿದ ಮಾತು "ಟೀ ಪುಗಸೆಟ್ಟೆ ಸಿಗಲ್ಲಮ್ಮ... ಅದಕ್ಕೆ ಕೆಲಸ ಮಾಡ್ಬೇಕು." ಆಶ್ಚರ್ಯದಿಂದ ನಾನು ಕೇಳಿದೆ "ಏನು ಕೆಲಸ ?" ಅದಕ್ಕವನ ಉತ್ತರ "ಏನಿಲ್ಲ, ನೆಲ ಗುಡಿಸಿ, ಒರೆಸಿ ಸ್ವಚ್ಛಗೊಳಿಸಿದರೆ ಸಾಕು." ಜೀವನದಲ್ಲಿ ಯಾವುದೇ ಕೆಲಸವನ್ನು ನಾನು ಚಿಕ್ಕದ್ದು, ಅಥವಾ ಘನತೆಯನ್ನು ಕುಂದಿಸುವಂಥದ್ದು ಅಂದುಕೊಂಡಿದ್ದಿಲ್ಲ. ಹಾಗಾಗಿ ಅವನ ಮಾತು ನನಗೆ ಒಪ್ಪಿಗೆ ಆಯಿತು. ಇದಾದ ನಂತರ ನಾನು ಎಲ್ಲಿಯವರೆಗೆ ಅಲ್ಲಿದ್ದೇನೋ, ಪ್ರತಿದಿನವೂ ಟೀ ಕುಡಿಯುತ್ತಲೇ ಇದ್ದೆ. :)
ಇವತ್ತಿಗೆ ಆ ದಿನಗಳು ಕಳೆದು ೪ ವರ್ಷಗಳಾಗಿವೆ, ಆದರೂ "ಟೀ ಪುಗಸೆಟ್ಟೆ ಸಿಗಲ್ಲಮ್ಮ" ಅನ್ನೋ ಮಾತು ಮಾತ್ರ ನೆನಪಲ್ಲೇ ಉಳಿದಿದೆ. ನಾನು ಬೆಳೆಯಬೇಕು ಅನ್ನೋ ಹಂಬಲದ ಜೊತೆಗೆ ಇಂಥ ಅನೇಕ ಕಥೆಗಳು ನನ್ನ ಜೀವನಕ್ಕೆ ಅಂಟಿಕೊಂಡಿವೆ. ಅದಕ್ಕೆ ಹೇಳೋದಲ್ವ "Life  is  a  best  teacher " ಅಂತ!!!  

Wednesday, January 11, 2012

ಮನಸ್ಸು ಮತ್ತು ತಲೆಗಳ ಗುದ್ದಾಟ


ಇದೊಂಥರ ವಿಚಿತ್ರ ಸಂಗತಿ. ಭಗವಂತನ ಸೃಷ್ಟಿಯಲ್ಲಿ ಇನ್ನೊಂದು ಮರ್ಮ. ಮನುಷ್ಯನಿಗೆ ಮಾತ್ರ ಮನಸ್ಸು ಮತ್ತು ತಲೆ ಎರಡನ್ನು ಕೊಟ್ಟಿದ್ದಾನೆ. ಒಮ್ಮೊಮ್ಮೆ ನನಗೆ ಅನ್ನಿಸುವ ಪ್ರಕಾರ ಅವನು ಮಾಡಿದ ವಿಸ್ಮಯಕರ ಸೃಷ್ಟಿಯಲ್ಲಿ ಇದು ಒಂದು. ನಾವು ಯಾವುದಾದರು ನಿರ್ಧಾರ ಮಾಡಬೇಕಾದರೆ ತಲೆ ಅಥವಾ ಮನಸ್ಸಿನ ಉಪಯೋಗ ಮಾಡಲೇಬೇಕು. ನಾವು ಮಾಡುವ ನಿರ್ಧಾರದ ಫಲಿತಾಂಶ, ಸಂದರ್ಭಕ್ಕೆ ಸರಿಯಾಗಿ ಯಾವುದನ್ನು ಉಪಯೋಗಿಸಬೇಕೋ ಅದರ ಮೇಲೆ ಅವಲಂಬಿತವಾಗಿರುತ್ತದೆ. ತಲೆ ಅನ್ನೋದು ತುಂಬಾ calculative ಅದೇ ಮನಸ್ಸು emotional. ತಲೆ ಲಾಭ, ನಷ್ಟ,
ವ್ಯಕ್ತಿ ಕೊಟ್ಟ ನೋವು, ಮಾಡಿದ ಅವಮಾನ ಎಲ್ಲವನ್ನು ಲೆಕ್ಕ ಹಾಕುತ್ತದೆ. ಆದ್ರೆ ಮನಸ್ಸು ಗಣಿತದಲ್ಲಿ ತುಂಬಾ weak. ಅದಕ್ಕೆ ಭಾವನೆಯೇ ಭಾಗಾಕಾರ,
ಗುಣವಂತಿಕೆಯೇ ಗುಣಾಕಾರ, ಪ್ರೀತಿಸಿರುವರ ಸಂತೋಷವೆ ಸಂಕಲನ, ತಲೆಯಲ್ಲಿ ಕೂತಿರುವ ಹಲವು ಸಮಸ್ಯೆಗೆಳಿಗೆ ವ್ಯವಕಲನ.

             ಕೆಲವೊಮ್ಮೆ ನಾವು ಭಾವುಕರಾದಾಗ ನಮ್ಮ ಮಿತ್ರರು "be practical" ಅಂತ ಹೇಳಿರೋದನ್ನ ಕೆಳೀರ್ತಿರಿ. ಇನ್ನು ಕೆಲವು ಸಂದರ್ಭಗಳಲ್ಲಿ 
"think from heart not from brain" ಅಂತಾನು ಕೇಳಿರ್ತೀರಿ. ಹಾಗಾದ್ರೆ ಯಾವುದು ಸರಿ? ಇದಕ್ಕೆ ಉತ್ತರ ಆ ದೇವರಿಗೂ, ದೇವರಾಣೆ ಗೊತ್ತಿರೋಲ್ಲ. ಈ ತಲೆ ಮತ್ತು ಮನಸ್ಸು ಇವೆರಡರ ಗುದ್ದಾಟ ನಾವು ಜನಿಸಿದ ಮರುಕ್ಷಣದಿಂದ ಸಾಯುವ ಕೊನೆಕ್ಷಣದವರೆಗು ನಡಿತಾನೆ ಇರುತ್ತೆ. ಯಾವ ಮನುಷ್ಯ ತುಂಬಾ
ಸಂತೊಷವಾಗಿದ್ದನೋ, ಅವನು ಸಂದರ್ಭಕ್ಕೆ ಯೋಗ್ಯವಾಗಿ ತಲೆಯ ಅಥವಾ ಮನಸಿನ ಮಾತನ್ನು ಕೇಳಿರ್ತಾನೆ. ಇನ್ನು ದು:ಖ ಅನುಭವಿಸೋನು ತಲೆ ಜಾಗಕ್ಕೆ
ಮನಸನ್ನೋ ಅಥವಾ ಮನಸಿನ ಜಾಗಕ್ಕೆ ತಲೆಯನ್ನೋ ಉಪಯೋಗಿಸಿರ್ತಾನೆ.
ಈ ಹಗ್ಗ ಜಗ್ಗಾಟದಲ್ಲಿ ಲಾಭ ನಷ್ಟ ಮಾತ್ರ ನಿರ್ಧಾರ ಮಾಡಿದ ವ್ಯಕ್ತಿಗೆ ಮಾತ್ರ.... ವಿಚಿತ್ರ ಅಲ್ವ?

ಈ ತರಹದ ಅನುಭವ ನಿಮಗಾಗಿದ್ದರೆ ವಿಮರ್ಶಿಸಿ... ಈಗ ನನ್ನ ತಲೆ ಹೇಳ್ತಾ ಇದೆ 
"ನಿದ್ದೆ ಮಾಡೋ ಮಗನೆ" ...

ಮತ್ತೇ ಸಿಗ್ತ್ಹಿನಿ.....